ಕನ್ನಡ ಸುದ್ದಿ  /  Elections  /  Mysore News Mysore Royal Family Pramodadevi Wadiyar Wanted Rajya Sabha Seat Bjp Proposed Infosys Sudha Murthy Kub

Lok Sabha Elections2024: ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಬೇಡಿಕೆಗೆ ಒಪ್ಪದ ಬಿಜೆಪಿ ಹೈಕಮಾಂಡ್‌, ಅವರು ಬಯಸಿದ್ದೇನು?

Mysore politics ಮೈಸೂರು ಲೋಕಸಭಾ ಕ್ಷೇತ್ರಕ್ಕೂ ಸುಧಾಮೂರ್ತಿ ಅವರನ್ನು ರಾಜ್ಯಸಭಾ ಸ್ಥಾನಕ್ಕೆ ನೇಮಕ ಮಾಡಿದ್ದಕ್ಕೂ ಸಂಬಂಧವಿದೆಯೇ. ಈ ವರದಿಯನ್ನು ಓದಿ..

ಮೈಸೂರು ಲೋಕಸಭಾ ಸ್ಥಾನದ ವಿಚಾರದಲ್ಲಿ ಸುಧಾಮೂರ್ತಿ, ಯದುವೀರ್‌ ಒಡೆಯರ್‌, ಪ್ರಮೋದಾದೇವಿ ಒಡೆಯರ್‌ ಅವರ ನಂಟು ಇದೆ.
ಮೈಸೂರು ಲೋಕಸಭಾ ಸ್ಥಾನದ ವಿಚಾರದಲ್ಲಿ ಸುಧಾಮೂರ್ತಿ, ಯದುವೀರ್‌ ಒಡೆಯರ್‌, ಪ್ರಮೋದಾದೇವಿ ಒಡೆಯರ್‌ ಅವರ ನಂಟು ಇದೆ.

ಮೈಸೂರು: ಈ ಬಾರಿ ಲೋಕಸಭೆ ಚುನಾವಣೆಗೂ ಮುನ್ನಾ ಬಿಜೆಪಿ ಹಲವು ರಾಜ್ಯಗಳಲ್ಲಿ ಬದಲಾವಣೆ ಪ್ರಕ್ರಿಯೆ, ಹೊಸಬರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಚಟುವಟಿಕೆ ನಡಸುತ್ತಲೇ ಇದೆ. ಇದರ ಭಾಗವಾಗಿಯೇ ಮೈಸೂರು ರಾಜವಂಶಸ್ಥರನ್ನು ಏನಾದರೂ ಮಾಡಿ ಬಿಜೆಪಿ ತೆಕ್ಕೆಗೆ ಎರಡನೇ ಬಾರಿಗೆ ಸೇರಿಸಿಕೊಳ್ಳಬೇಕು ಎನ್ನುವ ಪ್ರಯತ್ನ ನಡೆಯುತ್ತಲೇ ಇದೆ. ಆದರೆ ಅಧಿಕಾರದ ವಿಚಾರದಲ್ಲಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌ ಹಾಗೂ ಅವರ ದತ್ತು ಪುತ್ರ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಲ್ಲಿ ಯಾರಿಗೆ ಯಾವ ಹುದ್ದೆ ನೀಡಬೇಕು ಎನ್ನುವ ಗೊಂದಲ ಬಗೆಹರಿದಂತೆ ಕಾಣುತ್ತಿಲ್ಲ.

ಅಧಿಕಾರ ಪಡೆಯುವ ವಿಚಾರದಲ್ಲಿ ಪ್ರಮೋದಾದೇವಿ ಒಡೆಯರ್‌ ಅವರು ಒಂದು ಬೇಡಿಕೆ ಇಟ್ಟರೆ, ಬಿಜೆಪಿ ವರಿಷ್ಠರು ಇದನ್ನು ಬಿಟ್ಟು ಇನ್ನೊಂದು ಬೇಡಿಕೆ ಈಡೇರಿಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮಾತುಕತೆಗಳು ಅಂತಿಮವಾಗದೇ ಹಾಗೆಯೇ ಗೊಂದಲ ಮುಂದುವರಿದಿದೆ.

ಪ್ರಮೋದಾ ಬೇಡಿಕೆಯೇನು

ಎರಡು ವರ್ಷದಿಂದಲೂ ಮೈಸೂರು ರಾಜವಂಶಸ್ಥರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಪ್ರಯತ್ನಗಳು ನಡೆದಿವೆ. ಮೊದಲಿನಿಂದಲೂ ಮೈಸೂರು ರಾಜವಂಶಸ್ಥರಿಗೂ ಹಾಲಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜಕೀಯದಲ್ಲಿ ಅಂತಹ ಹೇಳಿಕೊಳ್ಳುವ ಸಂಬಂಧವೇನೂ ಇಲ್ಲ. ಹಿಂದೆ ಮೈಸೂರು ಹಾಗೂ ಬೆಂಗಳೂರು ಅರಮನೆ ಸ್ವಾಧೀನ ಅಧಿಸೂಚನೆ ಜಾರಿಗೊಳಿಸಿದ್ದರ ಹಿಂದೆ ಸಿದ್ದರಾಮಯ್ಯ ಅವರ ಪಾತ್ರವಿದೆ ಎನ್ನುವುದು ಮೈಸೂರು ರಾಜವಂಶಸ್ಥರಿಗೆ ಇರುವ ಬೇಸರ. ಈ ವಿಚಾರ ನ್ಯಾಯಾಲಯದಲ್ಲಿದೆ. ಈ ಕಾರಣದಿಂದ ಒಡೆಯರ್‌ ಕುಟುಂಬವನ್ನು ರಾಜಕೀಯಕ್ಕೆ ಕರೆತಂದು ಕಾಂಗ್ರೆಸ್‌ ವಿರುದ್ದ ಅಖಾಡ ಗಟ್ಟಿಗೊಳಿಸಬೇಕು. ಮೈಸೂರು ಭಾಗದಲ್ಲಿ ರಾಜವಂಶದ ಬಗ್ಗೆ ಈಗಲೂ ಗೌರವ ಇರುವುದರಿಂದ ಇದು ಭವಿಷ್ಯದಲ್ಲೂ ಬಿಜೆಪಿಗೆ ಸಹಕಾರಿ ಎನ್ನುವ ಲೆಕ್ಕಾಚಾರವನ್ನು ಆ ಪಕ್ಷ ವರಿಷ್ಠರು ಇಟ್ಟುಕೊಂಡಿದ್ದಾರೆ. ಇದೇ ಉದ್ದೇಶದಿಂದಲೇ ಒಂದೂವರೆ ವರ್ಷದ ಹಿಂದೆ ಪ್ರಧಾನಿ ಮೋದಿ ಕೂಡ ಅರಮನೆಗೆ ಆಗಮಿಸಿ ಆತಿಥ್ಯ ಸ್ವೀಕರಿಸಿ ಹೋಗಿದ್ದರು.

ಆಗಲೇ ನಿಮ್ಮ ಮಗನನ್ನು ಬಿಜೆಪಿಗೆ ಸೇರಿಸಿ. ಮುಂದೆ ಸಂಸದರನ್ನು ಮಾಡೋಣ. ಕೇಂದ್ರದಲ್ಲಿ ಸಚಿವ ಸ್ಥಾನವನ್ನೂ ನೀಡಬಹುದು ಎನ್ನುವುದನ್ನು ಸೂಚ್ಯವಾಗಿಯೇ ಹೇಳಿಹೋಗಿದ್ದರು. ಈಗ ಲೋಕಸಭೆ ಚುನಾವಣೆ ಬಂದಿರುವುದರಿಂದ ಆ ಪ್ರಯತ್ನ ಬಿರುಸಾಗಿಯೇ ನಡೆದಿದೆ.

ಇದರ ನಡುವೆ ಕರ್ನಾಟಕದಿಂದ ಒಬ್ಬ ಮಹಿಳೆಗೆ ರಾಜ್ಯಸಭಾ ಸದಸ್ಯ ಸ್ಥಾನ ನೀಡಬೇಕು ಎನ್ನುವ ತೀರ್ಮಾನವನ್ನು ಮೋದಿ ಮಾಡಿದ್ದರು. ಇದರಲ್ಲಿ ಇನ್ಫೋಸಿಸ್‌ನ ಸುಧಾಮೂರ್ತಿ ಹಾಗೂ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಹೆಸರು ಕೂಡ ಇತ್ತು. ನನಗೆ ರಾಜ್ಯಸಭಾ ಸದಸ್ಯ ಸ್ಥಾನ ನೀಡಿ ಎಂದು ಪ್ರಮೋದಾದೇವಿ ಒಡೆಯರ್‌ ಅವರು ಕೂಡ ಬೇಡಿಕೆ ಇಟ್ಟಿದ್ದರು. ಆದರೆ ಪಕ್ಷ ಸುಧಾಮೂರ್ತಿ ಅವರ ಹೆಸರನ್ನು ಪ್ರಕಟಿಸಿತು.

ಪ್ರತಾಪ್‌ಗೆ ಪರ್ಯಾಯ

ಬಿಜೆಪಿ ಮೊದಲಿನಿಂದಲೂ ಪ್ರಮೋದಾದೇವಿ ಒಡೆಯರ್‌ ಅವರಿಗಿಂತ ಯದುವೀರ್‌ ಅವರನ್ನು ಸೆಳೆಯುವ ಮಹದಾಸೆ ಹೊಂದಿದೆ. ಒಂದು ರಾಜವಂಶಸ್ಥ, ಯೂತ್‌ ಐಕಾನ್‌, ಒಳ್ಳೆಯ ನಡವಳಿಕೆ ಇಟ್ಟುಕೊಂಡಿರುವಂತಹವರು ಎನ್ನುವುದು ಕಾರಣ. ಯದುವೀರ್‌ ಪತ್ನಿ ತ್ರಿಷಿಕಾಕುಮಾರಿ ಕುಟುಂಬಸ್ಥರು ರಾಜಸ್ಥಾನದಲ್ಲಿ ಬಿಜೆಪಿಯೊಂದಿಗೆ ನಂಟು ಹೊಂದಿದ್ದಾರೆ. ಇದನ್ನು ಕರ್ನಾಟಕಕ್ಕೂ ವಿಸ್ತರಿಸಬಹುದು ಎನ್ನುವುದು ವರಿಷ್ಠರ ಲೆಕ್ಕಾಚಾರ.

ಮತ್ತೊಂದು ಕಡೆ ಹಾಲಿ ಸಂಸದ ಪ್ರತಾಪಸಿಂಹ ಚೆನ್ನಾಗಿ ಕೆಲಸ ಮಾಡಿದ್ದರೂ ಸ್ಥಳೀಯ ಮುಖಂಡರು, ಕಾರ್ಯಕರ್ತರೊಂದಿಗೆ ಉತ್ತಮ ಒಡನಾಟ ಹೊಂದಿಲ್ಲ. ಹಲವಾರು ವಿವಾದಗಳನ್ನೂ ಮೈಮೇಲೆ ಎಳೆದುಕೊಂಡಿದ್ದಾರೆ. ಅವರನ್ನು ರಾಜ್ಯ ರಾಜಕಾರಣಕ್ಕೆ ಕಳುಹಿಸುವುದು. ಮುಂದಿನ ವಿಧಾನಸಭೆ ಚುನಾವಣೆವರೆಗೂ ಪಕ್ಷ ಸಂಘಟನೆಗೆ ಅವಕಾಶ ಮಾಡಿಕೊಡುವ ಇರಾದೆ ಪಕ್ಷದ ನಾಯಕರಲ್ಲಿ ಇದ್ದಂತಿದೆ. ಈ ಕಾರಣದಿಂದಲೇ ಯದುವೀರ್‌ ಅವರನ್ನು ಮೈಸೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಪ್ರಯತ್ನವನ್ನು ಬಿಜೆಪಿ ನಾಯಕರು ಇನ್ನೂ ಬಿಟ್ಟಿಲ್ಲ. ಸದ್ಯವೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುವುದರಿಂದ ಯಾರು ಅಭ್ಯರ್ಥಿಯಾಗುವರು ಎನ್ನುವುದು ಗೊತ್ತಾಗಲಿದೆ.