Exit Poll: ಒಡಿಶಾ ವಿಧಾನಸಭೆ ಚುನಾವಣೆ; ಮತ್ತೆ ಸಿಎಂ ಆಗ್ತಾರಾ ಪಟ್ನಾಯಕ್‌, ಬಿಜೆಪಿಗೆ ಮಣೆ ಹಾಕ್ತಾರಾ ಮತದಾರರು, ಗೆಲುವು ಯಾರಿಗೆ?
ಕನ್ನಡ ಸುದ್ದಿ  /  ಚುನಾವಣೆಗಳು  /  Exit Poll: ಒಡಿಶಾ ವಿಧಾನಸಭೆ ಚುನಾವಣೆ; ಮತ್ತೆ ಸಿಎಂ ಆಗ್ತಾರಾ ಪಟ್ನಾಯಕ್‌, ಬಿಜೆಪಿಗೆ ಮಣೆ ಹಾಕ್ತಾರಾ ಮತದಾರರು, ಗೆಲುವು ಯಾರಿಗೆ?

Exit Poll: ಒಡಿಶಾ ವಿಧಾನಸಭೆ ಚುನಾವಣೆ; ಮತ್ತೆ ಸಿಎಂ ಆಗ್ತಾರಾ ಪಟ್ನಾಯಕ್‌, ಬಿಜೆಪಿಗೆ ಮಣೆ ಹಾಕ್ತಾರಾ ಮತದಾರರು, ಗೆಲುವು ಯಾರಿಗೆ?

Odisha Election Exit Poll: ಒಡಿಶಾದಲ್ಲಿ ಲೋಕಸಭಾ ಚುನಾವಣೆ ಜೊತೆಗೆ ವಿಧಾನಸಭಾ ಚುನಾವಣೆ ಕೂಡ ನಡೆಯುತ್ತಿದೆ. ಇಲ್ಲಿ ಬಿಜೆಡಿ ಪ್ರಾಬಲ್ಯದಲ್ಲಿದ್ದು ಮತ್ತೆ ಆಡಳಿತ ಚುಕ್ಕಾಣಿ ಹಿಡಿಯುತ್ತಾರಾ ಸಿಎಂ ನವೀನ್‌ ಪಟ್ನಾಯಕ್‌, ಪಾಂಡಿಯನ್‌ಗೆ ಒಲಿಯುತ್ತಾ ಸಿಎಂ ಪಟ್ಟ? ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಿರುವ ಬಿಜೆಪಿಗೆ ಮತದಾರರು ಮಣೆ ಹಾಕ್ತಾರಾ? ಎಂಬ ಕುತೂಹಲ ಹೆಚ್ಚಾಗಿದೆ.

ಒಡಿಶಾ ವಿಧಾನಸಭಾ ಚುನಾವಣೆ; ಮತ್ತೆ ಸಿಎಂ ಆಗ್ತಾರಾ ನವೀನ್‌ ಪಟ್ನಾಯಕ್‌, ಬಿಜೆಗೆ ಮಣೆ ಹಾಕ್ತಾರಾ ಮತದಾರರು?
ಒಡಿಶಾ ವಿಧಾನಸಭಾ ಚುನಾವಣೆ; ಮತ್ತೆ ಸಿಎಂ ಆಗ್ತಾರಾ ನವೀನ್‌ ಪಟ್ನಾಯಕ್‌, ಬಿಜೆಗೆ ಮಣೆ ಹಾಕ್ತಾರಾ ಮತದಾರರು?

ಭುವನೇಶ್ವರ: ಒಡಿಶಾ ರಾಜ್ಯದಲ್ಲಿ ಇಂದು (ಜೂನ್‌ 1) ಲೋಕಸಭೆ ಹಾಗೂ ವಿಧಾನಸಭೆಗೆ ನಾಲ್ಕನೇ ಹಾಗೂ ಅಂತಿಮ ಸುತ್ತಿನ ಮತದಾನ ನಡೆಯುತ್ತಿದೆ. ಈ ಬಾರಿ ಕಣದಲ್ಲಿ ಆಡಳಿತರೂಢ ಬಿಜೆಡಿ (ಬಿಜು ಜನತಾ ದಳ), ಬಿಜೆಪಿ ಹಾಗೂ ಕಾಂಗ್ರೆಸ್‌ ಮೂರು ಪಕ್ಷಗಳ ಪೈಪೋಟಿಯಂತೆ ಭಾಸವಾದರೂ, ಬಿಜೆಡಿ ಹಾಗೂ ಬಿಜೆಪಿ ನಡುವೆ ತೀವ್ರ ಹಣಾಹಣಿ ಇದೆ. ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಈಗಾಗಲೇ 24 ವರ್ಷ ಒಡಿಶಾವನ್ನು ಆಳಿದ್ದಾರೆ. ಈ ಬಾರಿಯೂ ಅವರು ಮುಖ್ಯಮಂತ್ರಿಯಾದರೆ ಸಿಕ್ಕಿಂನ ಮಾಜಿ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ ಅವರ ದಾಖಲೆಯನ್ನು ಮುರಿದು ಭಾರತದ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ.

ಒಡಿಶಾದ ವಿಧಾನಸಭಾ ಚುನಾವಣೆಯ ಕಣದಲ್ಲಿ ಬಿಜೆಡಿಯಿಂದ ನವೀನ್‌ ಪಟ್ನಾಯಕ್‌, ಬಿಜೆಪಿಯಿಂದ ಮನಮೋಹನ್‌ ಸಮಲ್‌ ಹಾಗೂ ಕಾಂಗ್ರೆಸ್‌ನಿಂದ ಶರತ್‌ ಪಟ್ನಾಯಕ್‌ ಪ್ರಮುಖರಾಗಿದ್ದಾರೆ. ಮೇ 13ರಿಂದ ಜೂನ್‌ 1ರವರೆಗೆ 4 ಹಂತಗಳಲ್ಲಿ ಮತದಾನ ನಡೆದಿದೆ. ಒಟ್ಟು 147 ಸದಸ್ಯ ಬಲದ ವಿಧಾನಸಭೆಗೆ ಆಯ್ಕೆಯಾಗಲಿದ್ದಾರೆ. ಜೂನ್‌ 4 ರಂದು ಲೋಕಸಭೆಯ ಜೊತೆಗೆ ಒಡಿಶಾ ವಿಧಾನಸಭಾ ಚುನಾವಣೆಯ ಫಲಿತಾಂಶವೂ ಹೊರ ಬೀಳಲಿದೆ. ಬಿಜೆಡಿ, ಬಿಜೆಪಿ, ಕಾಂಗ್ರೆಸ್‌ ಅಲ್ಲದೇ ಕಮ್ಯೂನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ, ಬಹುಜನ ಸಮಾಜ ಪಾರ್ಟಿ, ಆಮ್‌ ಆದಿ ಪಾರ್ಟಿ ಕೂಡ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

77 ವರ್ಷದ ಪಟ್ನಾಯಕ್‌ ಅವರು ಈ ಬಾರಿ 2024ರ ಚುನಾವಣೆಯಲ್ಲಿ ಕಠಿಣ ಹೋರಾಟವನ್ನು ಎದುರಿಸಲಿದ್ದಾರೆ. ಒಡಿಶಾದಲ್ಲಿ ಕನಿಷ್ಠ 7 ಲೋಕಸಭಾ ಕ್ಷೇತ್ರಗಳಲ್ಲಿ ಸಂಚಾರ ಮಾಡಿರುವ ಪಟ್ನಾಯಕ್‌ ಅವರಿಗೆ ಮೂರು ಪಕ್ಷದಲ್ಲಿ ಆಂತರಿಕ ಘರ್ಷಣೆಗಳಿರುವುದು ಗಮನಕ್ಕೆ ಬಂದಿದೆ. ಮಾತ್ರವಲ್ಲ, ಪಕ್ಷದೊಳಗಿನ ಈ ಆಂತರಿಕ ವೈಮನಸ್ಸು ಈ ಬಾರಿಯ ಲೋಕಸಭೆ ಹಾಗೂ ವಿಧಾನಸಭಾ ಚುನಾವಣಾ ಫಲಿತಾಂಶ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗುತ್ತಿದೆ. ಈ ನಡುವೆ ಒಡಿಶಾದಲ್ಲಿ ನವೀನ್‌ ಪಟ್ನಾಯಕ್‌ ಅವರ ಉತ್ತರಾಧಿಕಾರಿಯಾಗಿ ವಿಕೆ ಪಾಂಡಿಯನ್‌ ಆಯ್ಕೆಯಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಒಂದು ವೇಳೆ ಬಿಜೆಡಿ ಮತ್ತೆ ಅಧಿಕಾರಕ್ಕೆ ಬಂದಿದ್ದೇ ಆದರೆ ನವೀನ್‌ ಪಟ್ನಾಯಕ್‌ ಮುಖ್ಯಮಂತ್ರಿ ಸ್ಥಾನವನ್ನು ಪಾಂಡಿಯನ್‌ಗೆ ಬಿಟ್ಟು ಕೊಡುತ್ತಾರಾ ಎಂಬ ಚರ್ಚೆ ಕೂಡ ರಾಜಕೀಯ ಚಾವಡಿಯಲ್ಲಿ ನಡೆಯುತ್ತಿದೆ.

ಒಡಿಶಾದಲ್ಲಿ ಬಿಜೆಡಿಯದ್ದೇ ಪ್ರಾಬಲ್ಯ

ಒಡಿಶಾದಲ್ಲಿ ಬಿಜೆಡಿ ಪ್ರಬಲವಾಗಲು ಹಲವು ಕಾರಣಗಳಿವೆ. ಈ ರಾಜ್ಯದಲ್ಲಿ ಪಟ್ನಾಯಕ್‌ ಸರ್ಕಾರ ಜಾರಿಗೆ ತಂದ ಹಲವು ಯೋಜನೆಗಳ ಜೊತೆಗೆ ಮಹಿಳಾ ಮತದಾರರ ಒಲವು ಬಿಜೆಡಿ ಪರವಾಗಿ ಇದೆ. ಇದೇ ಕಾರಣಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಗೆಲುವಿಗಾಗಿ ಹರ ಸಾಹಸಪಟ್ಟರೂ ಬಿಜೆಡಿಯ ಹತ್ತಿರಕ್ಕೂ ಸುಳಿಯಲಾಗುತ್ತಿಲ್ಲ. ಬಿಜೆಪಿ ಆಸುಪಾಸಿನಲ್ಲಿದ್ದರೂ ಬಿಜೆಡಿಯ ಗೆಲುವಿಗೆ ಅದು ಮುಳ್ಳಾಗುತ್ತಿಲ್ಲ ಎನ್ನುವುದು ವಾಸ್ತವ. ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ತಮ್ಮ ಸ್ವಂತ ಬಲದ ಮೇಲೆ ಚುನಾವಣೆಯನ್ನು ಗೆಲ್ಲಬೇಕಿದೆ.

ಹೆಚ್ಚುತ್ತಿದೆ ಬಿಜೆಪಿ ಪ್ರಭಾವ

ಒಡಿಶಾದಲ್ಲಿ ಬಿಜೆಪಿ ಪಕ್ಷವು ಇತ್ತೀಚಿನ ದಿನಗಳಲ್ಲಿ ಪ್ರಬಲವಾಗಿ ಬೆಳೆಯುತ್ತಿದೆ. ಬಿಜೆಪಿಯು 2000 ಮತ್ತು 2009 ರ ನಡುವೆ ಬಿಜೆಡಿಯೊಂದಿಗೆ ಅಧಿಕಾರವನ್ನು ಹಂಚಿಕೊಂಡಿತ್ತು. ಆಗ ಈ ಎರಡೂ ಪಕ್ಷಗಳು ಮೈತ್ರಿ ಸರ್ಕಾರ ನಡೆಸಿದ್ದವು. 2009ರ ಚುನಾವಣೆಗೂ ಮೊದಲು ಮೈತ್ರಿ ಮುರಿದು ಬಿದ್ದ ಕಾರಣ ಬಿಜೆಪಿ ರಾಜ್ಯದಲ್ಲಿ ಮೂರನೇ ಪ್ರಮುಖ ರಾಜಕೀಯ ಶಕ್ತಿಯಾಗಿ ಬೆಳೆಯಿತು. ಆ ಸಮಯದಲ್ಲಿ ಒಡಿಶಾದಲ್ಲಿ ಬಿಜೆಡಿ ಹಾಗೂ ಕಾಂಗ್ರೆಸ್‌ ನಡುವೆ ಪ್ರಬಲ ಪೈಪೋಟಿ ಇತ್ತು.

ಆದರೆ 2019ರಲ್ಲಿ ಪ್ರಧಾನಿ ಮೋದಿ ಅವರ ಜನಪ್ರಿಯತೆ, ಪುಲ್ವಾಮಾ-ಬಾಲಾಕೋಟ್ ಘಟನೆಯಿಂದ ಒದಗಿ ಬಂದ ಬೆಂಬಲದ ಕಾರಣ ಬಿಜೆಪಿ, ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದ ಕಾಂಗ್ರೆಸ್‌ ಅನ್ನು ಮೂರನೇ ಸ್ಥಾನಕ್ಕೆ ತಳ್ಳಿತು. ಅಲ್ಲದೇ ಪ್ರಮುಖ ವಿರೋಧ ಪಕ್ಷವಾಗಿ ಬೆಳೆಯಿತು. 2014ರ ಚುನಾವಣೆಯಲ್ಲಿ ಬಿಜೆಪಿ 8 ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದರೆ, ಹಾಗೂ 23 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಡಿಯು 113 ವಿಧಾನಸಭಾ ಕ್ಷೇತ್ರಗಳನ್ನು ಗೆದ್ದಿದ್ದರೆ, 2014ರಲ್ಲಿ 20 ಲೋಕಸಭಾ ಸೀಟುಗಳನ್ನು ಗೆದ್ದಿದ್ದ ಬಿಜೆಪಿ 12 ಸ್ಥಾನಗಳಿಗೆ ಸೀಮಿತಗೊಂಡಿತ್ತು.

ಯುವ ಜನರು ಒಲವು ಬಿಜೆಪಿಯತ್ತ: ಒಡಿಶಾದಲ್ಲಿ ಇತ್ತೀಚಿನ ಯುವಜನತೆ ಹಾಗೂ ಮಧ್ಯಮವರ್ಗದವರು ಬಿಜೆಪಿ ಮೇಲೆ ಒಲವು ತೋರುತ್ತಿದ್ದಾರೆ. ಪಟ್ನಾಯಕ್‌ ಅವರ 24 ವರ್ಷಗಳ ಆಳ್ವಿಕೆಯಲ್ಲಿ ಯುವ ಮತದಾರರು ಬದಲಾಗುತ್ತಿದ್ದಾರೆ. ಸಾಮಾಜಿಕ ಮಾಧ್ಯಮವನ್ನು ಅವಲಂಬಿಸಿರುವ ಹೊಸ ಮತದಾರರು ಪಟ್ನಾಯಕ್ ಅವರೊಂದಿಗೆ ಭಾವನಾತ್ಮಕವಾಗಿ ಅಷ್ಟೊಂದು ಹತ್ತಿರವಾಗಿಲ್ಲ ಎಂದೆನ್ನಿಸುತ್ತಿದೆ.

ಮಹಿಳಾ ಮತದಾರರೇ ಬಿಜೆಡಿ ಗೆಲುವಿಗೆ ಸಾರಥಿಗಳು

ಮಹಿಳೆಯರು ಪಟ್ನಾಯಕ್ ಅವರ ಹಿಂದೆ ಬಲವಾಗಿ ನಿಂತಿದ್ದಾರೆ. ಅವರು ಒಡಿಶಾದಲ್ಲಿ ಅಧಿಕಾರಕ್ಕೆ ಬಂದ ನಂತರ, ಮಹಿಳೆಯರ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ಸಂಬಂಧಿಸಿದ ಹಲವಾರು ಉಪಕ್ರಮಗಳನ್ನು ಪ್ರಾರಂಭಿಸಿದ್ದರು. ಈ ಕ್ರಮಗಳು ಬಿಜೆಡಿಗೆ ಮಹಿಳಾ ಮತಬ್ಯಾಂಕ್ ಅನ್ನು ಕ್ರೋಢೀಕರಿಸಲು ಸಹಾಯ ಮಾಡಿದೆ.

2019ರ ಚುನಾವಣೆಯಲ್ಲಿ, ರಣೋತ್ಸಾಹದ ಬಿಜೆಪಿಯ ಪ್ರಚಾರವು ಬಿಜೆಡಿ ಸರ್ಕಾರವನ್ನು ಸಂಪೂರ್ಣವಾಗಿ ಉರುಳಿಸುತ್ತದೆ ಮತ್ತು ʼನವೀನ್ ಯುಗʼ ವನ್ನು ಕೊನೆಗೊಳಿಸುತ್ತದೆ ಎಂದೇ ಹಲವರು ನಂಬಿದ್ದರು. ಆದಾಗ್ಯೂ, ಇದು ಸಂಭವಿಸಲಿಲ್ಲ. ಪಟ್ನಾಯಕ್‌ಗೆ ಮಹಿಳೆಯರ ಮೌನ ಬೆಂಬಲವು ಬಿಜೆಡಿಯ ಪ್ರಬಲ ವಿಜಯದ ಹಿಂದಿನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.

ಪಟ್ನಾಯಕ್ ಇನ್ನೂ ಒಡಿಶಾದಲ್ಲಿ ಅತ್ಯಂತ ಜನಪ್ರಿಯ ನಾಯಕರಾಗಿ ಉಳಿದಿದ್ದಾರೆ. ಅವರ ಕ್ಲೀನ್ ಇಮೇಜನ್ನು ಕಮ್ಮಿ ಮಾಡಲು ವಿರೋಧ ಪಕ್ಷಗಳಿಗೆ ಸಾಧ್ಯವಾಗಿಲ್ಲ. 24 ವರ್ಷಗಳ ಕಾಲ ಒಡಿಶಾವನ್ನು ಆಳಿದ ವ್ಯಕ್ತಿಯ ಬಗ್ಗೆ ಹೆಚ್ಚಿನ ಸಾಮಾನ್ಯ ಜನರಿಗೆ ಯಾವುದೇ ಅಸಮಾಧಾನವಿಲ್ಲ. ಒಂದು ವೇಳೆ ಪಟ್ನಾಯಕ್‌ ಬದಲು ಮುಖ್ಯಮಂತ್ರಿಯಾದರೆ ಅದು ವಿಕೆ ಪಾಂಡಿಯನ್‌. ಆದರೆ ಪಾಂಡಿಯನ್‌ ಕೂಡ ಪಟ್ನಾಯಕ್‌ ಅವರಿಗೆ 12 ವರ್ಷಗಳ ಕಾಲ ವೈಯಕ್ತಿಕ ಕಾರ್ಯದರ್ಶಿ ಆಗಿದ್ದವರು ಎಂಬುದನ್ನು ಈ ವೇಳೆ ಗಮನಿಸಬಹುದು. ಈ ಇಬ್ಬರನ್ನು ಹೊರತು ಪಡಿಸಿ ಬಿಜೆಡಿಯಲ್ಲಿ ಬೇರೆಯವರ ಹೆಸರು ಕೂಡ ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿ ಬರುತ್ತಿಲ್ಲ.

ಆದರೆ ತಮಿಳು ಮೂಲದ ಪಾಂಡಿಯನ್‌ ಅವರ ಬಗ್ಗೆ ಒಡಿಶಾದಲ್ಲಿ ರಾಜಕೀಯ ನಾಯಕರಿಗೂ ಅಸಮಾಧಾನವಿದೆ. ಇದಕ್ಕೆ ಪುಷ್ಠಿ ಎಂಬಂತೆ ಈ ಬಾರಿ ಚುನಾವಣಾ ಪ್ರಚಾರಗಳಲ್ಲಿ ಪ್ರಧಾನಿ ಮೋದಿ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಪಾಂಡಿಯನ್‌ ಅವರನ್ನು ಟಾರ್ಗೆಟ್‌ ಮಾಡಿದ್ದನ್ನು ಈ ಹೊತ್ತಿನಲ್ಲಿ ಗಮನಿಸಬಹುದು.

ಬಿಜೆಡಿ ಮತ್ತೆ ಅಧಿಕಾರಕ್ಕೆ ಬರೋದು ಅನುಮಾನವೇ?

ಒಡಿಶಾದಲ್ಲಿ ಈ ಬಾರಿ ಚುನಾವಣಾ ಫಲಿತಾಂಶವು ಬಹುತೇಕ 2019ರ ರೀತಿಯಲ್ಲೇ ಇರಲಿದೆ ಎಂದು ಅಂದಾಜಿಸಲಾಗುತ್ತಿದೆ. ಬಿಜೆಡಿ ಹಾಗೂ ಬಿಜೆಪಿಯು ಲೋಕಸಭೆಯಲ್ಲಿ ಒಂದು ಅಥವಾ ಎರಡು ಹೆಚ್ಚು ಸ್ಥಾನಗಳಿಸಬಹುದು ಅಥವಾ ಕಳೆದುಕೊಳ್ಳಬಹುದು. ಬಿಜೆಪಿ ಮತಗಳಿಕೆಯನ್ನು ಹೆಚ್ಚಿಸಿಕೊಳ್ಳಬಹುದು ಹಾಗೂ ವಿಧಾನಸಭಾ ಸ್ಥಾನಗಳನ್ನು ಹೆಚ್ಚಿಸಬಹುದು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಕಾಂಗ್ರೆಸ್ ಕೂಡ ತನ್ನ ವಿಧಾನಸಭಾ ಸ್ಥಾನವನ್ನು ಎರಡಂಕಿಗೆ ಹೆಚ್ಚಿಸಬಹುದು ಎಂದು ಹಲವರು ಭಾವಿಸಿದ್ದಾರೆ. ಒಂದೇ ಲೋಕಸಭಾ ಸ್ಥಾನವನ್ನೂ ಉಳಿಸಿಕೊಳ್ಳಬಹುದು ಎಂಬುದು ರಾಜಕೀಯ ವಿಶ್ಲೇಷಕರ ಮಾತು.

ಈ ಎಲ್ಲದರ ನಡುವೆ ಕೆಲವೊಮ್ಮೆ ರಾಜಕೀಯ ವಿಶ್ಲೇಷಕರು, ಸಮೀಕ್ಷೆದಾರರು, ರಾಜಕಾರಣಿಗಳು ಊಹಿಸದ ರೀತಿಯಲ್ಲಿ ಫಲಿತಾಂಶ ಬರಬಹುದು. ದೀರ್ಘ ವರ್ಷಗಳ ಕಾಲ ಒಂದೇ ಪಕ್ಷದ ಆಡಳಿತ ನೋಡಿದ್ದ ಮತದಾರರು ಬಿಜೆಪಿಗೆ ಮಣೆ ಹಾಕುತ್ತಾರಾ ಅಥವಾ ಪಟ್ನಾಯಕ್‌ ಅವರನ್ನೇ ಮುಂದಿನ ಮುಖ್ಯಮಂತ್ರಿಯಾಗಿ ನೋಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Whats_app_banner