2019ರಲ್ಲಿ ನಿಜವಾಗಿತ್ತು ಒಡಿಶಾ ಚುನಾವಣೆಯ ಎಕ್ಸಿಟ್ ಪೋಲ್ ಭವಿಷ್ಯ; ಈ ಬಾರಿಯೂ ಮೇಲುಗೈ ಸಾಧಿಸುತ್ತಾ ಬಿಜೆಡಿ?
ಒಡಿಶಾದಲ್ಲಿ ಇಂದು (ಜೂನ್ 1) 2024ರ ಲೋಕಸಭೆ ಹಾಗೂ ವಿಧಾನಸಭೆಗೆ ಕೊನೆಯ ಹಂತದ ಮತದಾನ ನಡೆದಿದ್ದು, ಸಂಜೆ ಹೊತ್ತಿಗೆ ಎಕ್ಸಿಟ್ ಪೋಲ್ ಫಲಿತಾಂಶ ಹೊರ ಬೀಳಲಿದೆ. 2019ರ ಚುನಾವಣೆಯಲ್ಲಿ ಎಕ್ಸಿಟ್ ಪೋಲ್ ಫಲಿತಾಂಶ ನಿಜವಾಗಿ ಬಿಜೆಡಿ 5ನೇ ಬಾರಿಗೆ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡಿತ್ತು. ಹಾಗಾದರೆ ಈ ಬಾರಿ ಬಿಜೆಡಿ ಹಾಗೂ ಬಿಜೆಪಿ ಎಷ್ಟು ಸ್ಥಾನ ಗಳಿಸಬಹುದು?
ಭುವನೇಶ್ವರ: 2024ರ ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಇಂದು ನಡೆಯುತ್ತಿದೆ. ಇದರೊಂದಿಗೆ ಒಡಿಶಾ ವಿಧಾನಸಭೆಯ ಕೊನೆಯ ಹಂತದ ಚುನಾವಣೆ ಕೂಡ ಇಂದೇ ಇದೆ. ಇಂದು ಸಂಜೆ ಈ ಎರಡೂ ಚುನಾವಣೆಯ ಎಕ್ಸಿಲ್ ಪೋಲ್ ಫಲಿತಾಂಶವೂ ಹೊರ ಬೀಳಲಿದೆ. ಈ ನಡುವೆ ಕಳೆದ ಅಂದರೆ 2019ರ ಚುನಾವಣೆಯಲ್ಲಿ ಎಕ್ಸಿಟ್ ಪೋಲ್ ಫಲಿತಾಂಶ ಹೇಗಿತ್ತು, ಎಕ್ಸಿಟ್ ಪೋಲ್ ಫಲಿತಾಂಶವು ನಿಜವಾಗಿತ್ತಾ, ಎಕ್ಸಿಟ್ ಪೋಲ್‌ನಲ್ಲಿ ಬಹುಮತ ಗಳಿಸಿದ ಪಕ್ಷವೇ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿತ್ತಾ? ಎಂಬಿತ್ಯಾದಿ ಪ್ರಶ್ನೆಗಳು ಮೂಡುತ್ತಿದ್ದರೆ, ಒಮ್ಮೆ ಹಿನ್ನೋಟಕ್ಕೆ ಹೊರಳಿ ನೋಡಬಹುದು.
2019ರ ಎಕ್ಸಿಟ್ ಪೋಲ್ ಫಲಿತಾಂಶ
ಕಳೆದ ಬಾರಿ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್‌ನಲ್ಲಿ ಅತಿ ಕಡಿಮೆ ಅಂತರದಲ್ಲಿ ಬಿಜೆಡಿ ಪಕ್ಷ ಅಧಿಕಾರಕ್ಕೆ ಬರುತ್ತದೆ ಹಾಗೂ ಬಿಜೆಪಿ ಪ್ರಾದೇಶಿಕ ಆಡಳಿತ ಪಕ್ಷಕ್ಕಿಂತ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತದೆ ಎಂಬ ಭವಿಷ್ಯವಾಣಿ ಸಿಕ್ಕಿತ್ತು.
ರಾಜ್ಯದ 21 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿಗೆ 6 ರಿಂದ 19 ಮತ್ತು ಬಿಜೆಡಿಗೆ 2 ರಿಂದ 15 ಸ್ಥಾನಗಳು ಸಿಗಬಹುದು ಎಂದು ಸೀ ವೋಟರ್ ಸಮೀಕ್ಷೆಗಳು ತಿಳಿಸಿದ್ದವು.
ಸಂಬಾದ್-ಕನಕ್ ನ್ಯೂಸ್ ಬಿಜೆಪಿ 8 ರಿಂದ 12 ಸ್ಥಾನಗಳಲ್ಲಿ ಮತ್ತು ಬಿಜೆಡಿ 6 ರಿಂದ 9 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿತ್ತು. ಕಾಂಗ್ರೆಸ್‌ಗೆ ಒಂದೂ ಸ್ಥಾನವಿಲ್ಲ ಎಂದು ಅದು ತಿಳಿಸಿತ್ತು. ಟೈಮ್ಸ್ ನೌ-ವಿಎಂಆರ್ ಸಮೀಕ್ಷೆಯು ಬಿಜೆಡಿಗೆ ಎಂಟು, ಬಿಜೆಪಿಗೆ 12 ಮತ್ತು ಕಾಂಗ್ರೆಸ್‌ಗೆ ಒಂದು ಸ್ಥಾನವನ್ನು ಭವಿಷ್ಯ ನುಡಿದಿದೆ.
147 ಸದಸ್ಯ ಬಲದ ವಿಧಾನಸಭೆಯಲ್ಲಿ ಸಂಬಾದ್-ಕನಕ್ ನ್ಯೂಸ್ 85-95 ಸ್ಥಾನಗಳೊಂದಿಗೆ ಬಿಜೆಡಿಗೆ ಸ್ಪಷ್ಟ ಬಹುಮತ ನೀಡಿತ್ತು. ಬಿಜೆಪಿಗೆ 25-34 ಮತ್ತು ಕಾಂಗ್ರೆಸ್‌ಗೆ 12-15 ಸ್ಥಾನಗಳನ್ನು ಸಿಗಬಹುದು ಎಂದು ಭವಿಷ್ಯ ನುಡಿದಿತ್ತು. 2014ರಲ್ಲಿ ಬಿಜೆಡಿ 117, ಕಾಂಗ್ರೆಸ್ 16 ಮತ್ತು ಬಿಜೆಪಿ 10 ಸ್ಥಾನಗಳನ್ನು ಗೆದ್ದಿತ್ತು.
ಆದರೆ ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಡಿ ಹಾಗೂ ಬಿಜೆಪಿ ಎರಡೂ ಗೆಲುವಿನ ನಿರೀಕ್ಷೆ ಇರಿಸಿಕೊಂಡಿದ್ದವು. ಆದರೂ ಬಿಜೆಡಿ ಪಕ್ಷ ಬಹುಮತ ಪಡೆದು 5ನೇ ಬಾರಿಗೆ ನವೀನ್ ಪಟ್ನಾಯಕ್ ಒಡಿಶಾದ ಸಿಎಂ ಆಗುತ್ತಾರೆ.
ಈ ಬಾರಿಯೂ ಬಿಜೆಡಿ ಬಹುಮತ ಸಾಧಿಸುವ ಅಂದಾಜಿದ್ದರೂ ಬಿಜೆಪಿ ಪ್ರಬಲ ಪೈಪೋಟಿ ನೀಡಬಹುದು ಎನ್ನಲಾಗುತ್ತಿದೆ. ಬಿಜೆಡಿ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ಇರುವ ಒಡಿಶಾದಲ್ಲಿ ಈ ಬಾರಿ ಯಾರು ಅಧಿಕಾರಕ್ಕೆ ಬರಬಹುದು, ಇನ್ನೇನು ಕೆಲವೇ ಕ್ಷಣಗಳಲ್ಲಿ ನಡೆಯುವ ಎಕ್ಸಿಟ್ ಪೋಲ್ ಸಮೀಕ್ಷೆ ಏನು ಹೇಳುತ್ತದೆ ಕಾದು ನೋಡೋಣ.