Shimoga News: ಶಿವಮೊಗ್ಗದಲ್ಲಿ ಮೋದಿ ಅಬ್ಬರ, ಕುಟುಂಬ ರಾಜಕಾರಣದ ಸೊಲ್ಲೆತ್ತದ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗದಲ್ಲಿ ಲೋಕಸಭೆ ಚುನಾವಣೆ ಪ್ರಚಾರ ಭಾಷಣ ನಡೆಸಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು. ಅವರು ಕರ್ನಾಟಕದಲ್ಲಿನ ಕುಟುಂಬ ರಾಜಕಾರಣದ ಕುರಿತು ಪ್ರಸ್ತಾಪ ಮಾಡಲಿಲ್ಲ.

ಶಿವಮೊಗ್ಗ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಎಲ್ಲಾ 28 ಕ್ಷೇತ್ರಗಳನ್ನು ಗೆಲ್ಲಿಸಿಕೊಡಬೇಕು. ದೇಶದಲ್ಲಿ ಈ ಬಾರಿ 400 ಸ್ಥಾನ ಬಿಜೆಪಿ ಗಳಿಸಲೇಬೇಕು. ಇದಕ್ಕಾಗಿಯೇ ನಮ್ಮ ಪ್ರಯತ್ನ ಗಟ್ಟಿಯಾಗಿದ್ದು. ಈ ಚುನಾವಣೆ ಮೂಲಕ ಭಾರತದಲ್ಲಿ ಕಾಂಗ್ರೆಸ್ ಮುಕ್ತ ವಾತಾವರಣ ನಿರ್ಮಿಸಬೇಕು ಎಂದು ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಶಿವಮೊಗ್ಗದಲ್ಲಿ ಕುಟುಂಬ ರಾಜಕಾರಣದ ಕುರಿತು ಒಂದು ಮಾತನ್ನೂ ಆಡಲಿಲ್ಲ. ಅದರಲ್ಲೂ ಶಿವಮೊಗ್ಗ ಕ್ಷೇತ್ರದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ತಿರುಗಿ ಬಿದ್ದಿರುವುದರಿಂದ ಪ್ರಧಾನಿ ಕುಟುಂಬ ರಾಜಕಾರಣದ ಕುರಿತು ಉಲ್ಲೇಖ ಮಾಡಲಿಲ್ಲ.
ಮಧ್ಯಾಹ್ನ 3ಕ್ಕೂ ಮುಂಚೆಯೇ ಶಿವಮೊಗ್ಗಕ್ಕೆ ತೆಲಂಗಾಣದಿಂದ ಬಂದಿಳಿದ ಪ್ರಧಾನಿ ಮೋದಿ ನೇರವಾಗಿ ಕಾರ್ಯಕ್ರಮ ಆಯೋಜಿಸಿದ್ದ ಅಲ್ಲಮಪ್ರಭು ಸಭಾಂಗಣಕ್ಕೆ ಆಗಮಿಸಿದರು. ಸುಮಾರು 45 ನಿಮಿಷ ಆರು ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಮತ ಯಾಚನೆ ಮಾಡಿದರು.
ನರೇಂದ್ರ ಮೋದಿ ಅವರು ಕಾಂಗ್ರೆಸ್ ಇಲ್ಲವೇ ದೇಶದ ಇತರೆ ಪ್ರಾದೇಶಿಕ ಪಕ್ಷಗಳ ಕುಟುಂಬ ರಾಜಕಾರಣದ ಬಗ್ಗೆ ಪ್ರಸ್ತಾಪಿಸಬಹುದು ಎನ್ನುವ ಕುತೂಹಲವಿತ್ತು. ಏಕೆಂದರೆ ತೆಲಂಗಾಣದಲ್ಲಿ ಬಿಆರ್‌ಎಸ್ ಪಕ್ಷದ ಕುಟುಂಬ ರಾಜಕಾರಣದ ವಿರುದ್ದವೇ ಮೋದಿ ಗುಡುಗಿದ್ದರು. ಶಿವಮೊಗ್ಗ ಹಾಗೂ ದಾವಣಗೆರೆಯಲ್ಲಿ ಟಿಕೆಟ್ ವಿಚಾರವಾಗಿ ಬಿಜೆಪಿಯಲ್ಲಿ ಕುಟುಂಬ ರಾಜಕಾರಣದ ಚರ್ಚೆಯೇ ಜೋರಾಗಿದೆ. ಹೀಗಿದ್ದರೂ ಎಲ್ಲಿಯೂ ಮೋದಿ ಅವರು ಕುಟುಂಬದ ರಾಜಕಾರಣದ ಪ್ರಸ್ತಾಪ ಮಾಡಲಿಲ್ಲ. ಭಾಷಣದುದ್ದಕ್ಕೂ ಕಾಂಗ್ರೆಸ್ ವಿರುದ್ದ ಆರೋಪ ಪಟ್ಟಿ ಹೊರಿಸಿದ ಜತೆಗೆ ಬಿಜೆಪಿ ಕೈಗೊಂಡ ಅಭಿವೃದ್ದಿ ಯೋಜನೆಗಳ ಪಟ್ಟಿಯನ್ನು ಮಾಡಿದರು.
ಕಾಂಗ್ರೆಸ್ ವಿರುದ್ದ ಟೀಕಾ ಪ್ರಹಾರ ನಡೆಸಿದ ಮೋದಿ, ಕಾಂಗ್ರೆಸ್‌ನದ್ದು ಮೂರು ಅಜೆಂಡಾ. ಅದು ಮೊದಲು ಸುಳ್ಳು ಹೇಳುವುದು. ಸುಳ್ಳನ್ನು ಸಮರ್ಥಿಸಿಕೊಳ್ಳಲು ಮತ್ತೊಂದು ಸುಳ್ಳನ್ನು ಹೇಳುವುದು. ತಾವು ಹೇಳುವ ಸುಳ್ಳನ್ನು ಮತ್ತೊಬ್ಬರ ತಲೆಗೆ ಕಟ್ಟುವುದು ಕಾಂಗ್ರೆಸ್‌ನ ಅಜೆಂಡಾವಾಗಿ ಮಾರ್ಪಟ್ಟಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಇನ್ನೂ ಹೆಚ್ಚಿದೆ. ಕಾಂಗ್ರೆಸ್‌ನವರು ಇನ್ನೂ ಬ್ರಿಟೀಷರ ನೀತಿಯಿಂದ ಹೊರ ಬಂದಿಲ್ಲ. ಜನರನ್ನು ಒಡೆದು ಆಳುವುದನ್ನು ನಿಲ್ಲಿಸಿಲ್ಲ ಎಂದು ಆಪಾದಿಸಿದರು.
ಕರ್ನಾಟಕದ ಕಾಂಗ್ರೆಸ್ ನ ಸಂಸದರೊಬ್ಬರು ಕೆಲ ದಿನಗಳ ಹಿಂದೆ ದೇಶ ಒಡೆಯುವ ಮಾತನಾಡಿದರು.ಅವರನ್ನು ಕಾಂಗ್ರೆಸ್ ಮೊದಲು ಪಕ್ಷದಿಂದ ಹೊರ ಹಾಕಬೇಕಿತ್ತು. ಅದನ್ನು ಮಾಡಲಿಲ್ಲ. ಬದಲಿಗೆ ಅವರ ಹೇಳಿಕೆಯನ್ನೇ ಸಮರ್ಥಿಸಿಕೊಂಡರು ಎಂದು ಪ್ರಧಾನಿ ಆರೋಪಿಸಿದರು.
ಕರ್ನಾಟಕದಲ್ಲೂ ಕಾಂಗ್ರೆಸ್ ಸರ್ಕಾರವಿದೆ. ಇಲ್ಲಿ ಇರುವುದು ಒಬ್ಬ ಮುಖ್ಯಮಂತ್ರಿಯಾದರೂ ಛಾಯಾ ಮುಖ್ಯಮಂತ್ರಿ ಇಬ್ಬರು ಇದ್ಧಾರೆ. ಇನ್ನೊಬ್ಬರು ಸೂಪರ್ ಸಿಎಂ ಇದ್ದಾರೆ. ದೆಹಲಿಯಿಂದ ಒಬ್ಬರು ಬಂದು ನಿರಂತರವಾಗಿ ಹಣ ವಸೂಲಿ ಮಾಡಿಕೊಂಡು ಹೋಗುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಯತೀಂದ್ರ ಸಿದ್ದರಾಮಯ್ಯ ಅವರ ಹೆಸರು ಉಲ್ಲೇಖಿಸದೇ ಮೋದಿ ಟೀಕಿಸಿದರು.
ಮುಂಬೈನಲ್ಲಿ ನಡೆದ ಇಂಡಿಯಾ ಬ್ಲಾಕ್‌ನ ಸಭೆಯಲ್ಲಿ ಹಿಂದೂ ವಿರೋಧಿ ನಿರ್ಣಯವನ್ನು ಕೈಗೊಳ್ಳಲಾಗಿದೆ. ಹಿಂದೂಗಳ ಏಳಿಗೆಯನ್ನು ಕಾಂಗ್ರೆಸ್ ಸಹಿಸದು. ಇಂತಹ ಹೇಳಿಕೆಯನ್ನು ಬಾಳಾ ಠಾಕ್ರೆ ಕೇಳಿಸಿಕೊಂಡಿದ್ದರೆ ತಕ್ಕ ಉತ್ತರ ನೀಡುತ್ತಿದ್ದರು ಎಂದು ಮೋದಿ ಹೇಳಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡ ಮಾತನಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಅಭ್ಯರ್ಥಿಗಳಾದ ಕೋಟಾ ಶ್ರೀನಿವಾಸಪೂಜಾರಿ, ಬಿ.ವೈ.ರಾಘವೇಂದ್ರ, ಗಾಯತ್ರಿ ಸಿದ್ದೇಶ್ವರ, ಡಾ.ಸಿ.ಎನ್.ಮಂಜುನಾಥ್, ಬ್ರಿಜೇಶ್ ಚೌಟಾ ಮತ್ತಿತರರು ಹಾಜರಿದ್ದರು.
