ಜೂನ್ 4ಕ್ಕೆ ಷೇರುಪೇಟೆ ದಾಖಲೆ ಬರೆಯಲಿದೆ ನೋಡಿ; ಎನ್‌ಡಿಟಿವಿ ವಿಶೇಷ ಸಂದರ್ಶನದಲ್ಲಿ ಪ್ರಧಾನಿ ಮೋದಿ ಮಾತು- 10 ಮುಖ್ಯ ಅಂಶಗಳು
ಲೋಕಸಭೆ ಚುನಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇಂದು 5ನೇ ಹಂತದ ಮತದಾನ ನಡೆದಿದ್ದು, ಕಳೆದ ಎರಡು ವಾರಗಳ ಷೇರುಪೇಟೆ ಟ್ರೆಂಡ್ ಎಲ್ಲರ ಗಮನಸೆಳೆದಿದೆ. ಈ ವಿಚಾರವಾಗಿ, “ಜೂನ್ 4ಕ್ಕೆ ಷೇರುಪೇಟೆ ದಾಖಲೆ ಬರೆಯಲಿದೆ ನೋಡಿ” ಎಂದು ಎನ್‌ಡಿಟಿವಿ ವಿಶೇಷ ಸಂದರ್ಶನದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ಅವರ ಮಾತಿನ 10 ಮುಖ್ಯ ಅಂಶಗಳು ಹೀಗಿವೆ.

ನವದೆಹಲಿ/ಬೆಂಗಳೂರು: ಲೋಕಸಭಾ ಚುನಾವಣೆ ಹೊತ್ತು, ಬಹುತೇಕ ಹೂಡಿಕೆದಾರರ ಎಲ್ಲರ ಗಮನ ಷೇರುಪೇಟೆ ಮೇಲೆ ಇರುತ್ತದೆ. ಷೇರುಪೇಟೆ ಸೂಚ್ಯಂಕ ಚುನಾವಣೆಯ ಟ್ರೆಂಡ್‌ಗೆ ಅನುಗುಣವಾಗಿ ಏರಿಳಿತ ದಾಖಲಿಸುತ್ತ ಸಾಗುವುದು ವಾಡಿಕೆ. ಈ ಸಲ ಮೇ 17ಕ್ಕೆ ಕೊನೆಗೊಂಡ ವಾರದಲ್ಲಿ ನಿಫ್ಟಿ50 ಸೂಚ್ಯಂಕವು ಹಿಂದಿನ ವಾರದ ಕುಸಿತ ಪ್ರಮಾಣ ಶೇಕಡ 1.87 ರಿಂದ ಚೇತರಿಸಿಕೊಂಡಿದೆ. ಅಂದರೆ ಶೇಕಡ 1.86 ಏರಿಕೆ ಕಂಡಿದೆ. ಅಂದರೆ ಈ ಹಿಂದಿನ ಚುನಾವಣೆಯ ಸಂದರ್ಭದಂತೆ ನಿಯತ ಏರಿಕೆಯನ್ನು ದಾಖಲಿಸಿಲ್ಲ. ಇದು ಕೂಡ ಚುನಾವಣೆ ಟ್ರೆಂಡ್‌ನ ಸೂಚನೆ.
ಈ ಟ್ರೆಂಡ್‌ಗೆ ಸಂಬಂಧಿಸಿ ಎನ್‌ಡಿಟಿವಿಯ ಮುಖ್ಯ ಸಂಪಾದಕ ಸಂಜಯ್ ಪುಗಲಿಯಾ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಸರ್ಕಾರದ ಟ್ರ್ಯಾಕ್ ರೆಕಾರ್ಡ್ ಅನ್ನು ಅಂದರೆ ಸಾಧನೆಯ ಹಾದಿಯನ್ನು, ಸಾಧನಾ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದಾರೆ. ಅವುಗಳ ಫಲಿತಾಂಶಗಳ ಪರಿಣಾಮವನ್ನೂ ಉಲ್ಲೇಖಿಸಿದ್ದಾರೆ.
ವಿರೋಧ ಪಕ್ಷಗಳಿಂದ ಟೀಕೆಗಳನ್ನು ತಳ್ಳಿಹಾಕಿದ ನರೇಂದ್ರ ಮೋದಿ ಅವರು ಉದ್ಯೋಗಗಳನ್ನು ಸೃಷ್ಟಿಸುವ ತಮ್ಮ ಸರ್ಕಾರದ ದಾಖಲೆಯನ್ನು ಸಮರ್ಥಿಸಿಕೊಂಡರು. ಇದಲ್ಲದೆ, ಹೆಚ್ಚಿನ ಸಂಖ್ಯೆಯ ಯುವಜನರು ಷೇರು ಮಾರುಕಟ್ಟೆ ಹೂಡಿಕೆಯನ್ನು ಪರಿಗಣಿಸುತ್ತಿದ್ದಾರೆ ಎಂಬುದನ್ನು ಅವರು ಉಲ್ಲೇಖಿಸಿದರು.
ತಮ್ಮ ಸರ್ಕಾರವು ಕಳೆದ 10 ವರ್ಷಗಳಿಂದ ನಿರಂತರ ಆರ್ಥಿಕ ಸುಧಾರಣೆಗಳನ್ನು ತಂದಿದೆ. ಪ್ರಸ್ತುತ ನಡೆಯುತ್ತಿರುವ ಏಳು ಹಂತದ ಲೋಕಸಭೆ ಚುನಾವಣೆಗೆ ಜೂನ್ 4ರ ಎಣಿಕೆಯ ದಿನದ ನಂತರ ಷೇರು ಮಾರುಕಟ್ಟೆ ಹೊಸ ದಾಖಲೆಗಳನ್ನು ನಿರ್ಮಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಎನ್‌ಡಿಟಿವಿ ವಿಶೇಷ ಸಂದರ್ಶನದಲ್ಲಿ ಪ್ರಧಾನಿ ಮೋದಿ ಮಾತು; 10 ಮುಖ್ಯ ಅಂಶಗಳು
1) ಭಾರತದ ಷೇರುಪೇಟೆ ಸೂಚ್ಯಂಕ (ನಿಫ್ಟಿ ಮತ್ತು ಸೆನ್ಸೆಕ್ಸ್) ಜೂನ್ 4 ರ ಬಳಿಕ ಹೊಸ ದಾಖಲೆಗಳನ್ನು ನಿರ್ಮಿಸಲಿದೆ.
2) ಷೇರುಪೇಟೆಯಲ್ಲಿ ಯುವಜನರು ಹೂಡಿಕೆ ಮಾಡುವುದನ್ನು ಮುಂದುವರಿಸಿದ್ದು, ರಿಸ್ಕ್ ತೆಗೆದುಕೊಳ್ಳುವ ಅವರ ಸಾಮರ್ಥ್ಯ ಇನ್ನಷ್ಟು ಹೆಚ್ಚಾಗಬೇಕು.
3) ಪ್ರತಿಯೊಬ್ಬ ನಾಗರಿಕನು ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸಬೇಕು. ಅದಕ್ಕೆ ಸಿದ್ಧರಾಗಿರಬೇಕು.
4) ಹೆಚ್ಚಿನ ಸಂಖ್ಯೆಯ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಲು ರಾಜ್ಯಗಳು ಸಹಕಾರಿ ಮತ್ತು ಸ್ಪರ್ಧಾತ್ಮಕ ಫೆಡರಲಿಸಂ ಎರಡನ್ನೂ ಅಭ್ಯಾಸ ಮಾಡಬೇಕು.
5) ಹಿಂದೂಸ್ತಾನ್ ಏರೋನಾಟಿಕ್ಸ್‌ನ ಅದ್ಭುತ ಬೆಳವಣಿಗೆಯೊಂದಿಗೆ ಸಾರ್ವಜನಿಕ ಸ್ವಾಮ್ಯದ ಕಂಪನಿಗಳ ಷೇರುಮೌಲ್ಯ ಏರಿಕೆಯಾಗುತ್ತಲೇ ಇದೆ.
6) ಮೂಲಸೌಕರ್ಯ ವೃದ್ಧಿಗೆ ಕೌಶಲ, ವೇಗ, ಗಾತ್ರ ಮತ್ತು ವ್ಯಾಪ್ತಿ ಇವೇ ನಾಲ್ಕು ಆಧಾರ ಸ್ತಂಭಗಳು.
7) ಭಾರತದ ಸಾಮಾಜಿಕ ಮೂಲಸೌಕರ್ಯದ ಪ್ರಮುಖ ಅಂಶವೇ ಕಲ್ಯಾಣ ಯೋಜನೆಗಳು.
8) ಹಸಿರು ತಂತ್ರಜ್ಞಾನವು ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ.
9) ಹಣಕಾಸಿನ ಶಿಸ್ತಿನ ಪ್ರಬಲ ಪ್ರತಿಪಾದಕರಾಗಬೇಕು. ವಿತ್ತೀಯ ಕೊರತೆ ನಿಯಂತ್ರಣ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಮುಖ್ಯ.
10) ಹಾಲಿ ಸರ್ಕಾರವು ಹೆಚ್ಚಿನ ಪ್ರಮಾಣದ ಆರ್ಥಿಕ ಬದಲಾವಣೆಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಉದ್ಯಮಶೀಲತೆಯ ಪರ ನೀತಿಗಳನ್ನು ಉತ್ತೇಜಿಸಿದೆ.
ಭಾರತದ ಬೆಳವಣಿಗೆಯ ಅವಕಾಶ ಕೈ ತಪ್ಪಿ ಹೋಗಲು ಬಿಡಲ್ಲ; ಪ್ರಧಾನಿ ಮೋದಿ
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ 2014ರಲ್ಲಿ ಅಧಿಕಾರ ಸ್ವೀಕರಿಸಿದಾಗ ಷೇರುಪೇಟೆ ಸೂಚ್ಯಂಕ 25,000 ದಲ್ಲಿತ್ತು. ಇಂದು ಅದು 75,000ದಲ್ಲಿದೆ. ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು, ಅವುಗಳ ಷೇರುಪೇಟೆ ಬಂಡವಾಳವೂ ಹೆಚ್ಚುತ್ತಿದೆ. ಷೇರುಪೇಟೆ ನಿರ್ವಹಿಸುವ ಪ್ರೋಗ್ರಾಮರ್‌ಗಳು ಜೂನ್ 4 ರಂದು ಷೇರುಪೇಟೆಯ ದಾಖಲೆ ನೋಡಿ ಸುಸ್ತಾಗಲಿದ್ದಾರೆ ನೋಡಿ ಎಂದು ಪ್ರಧಾನಿ ಮೋದಿ ಎನ್‌ಡಿಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ.
ಮೂರನೇ ಅವಧಿಯಲ್ಲಿ ಮೊದಲ 125 ದಿನಗಳಲ್ಲಿ ಯುವ ಜನರ ಆಶೋತ್ತರಗಳನ್ನು ಈಡೇರಿಸುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈ ವಿದ್ಯಮಾನಗಳ ಮೂಲಕ ಮುಂದಿನ ಸಹಸ್ರಮಾನಕ್ಕಾಗಿ ಕೆಲಸ ಮಾಡುವವರು ಅವರು. ಇದು ಭಾರತದ ಯುಗ. ಈ ಅವಕಾಶ ಕೈತಪ್ಪಿ ಹೋಗಲು ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಇದೇ ವೇಳೆ ಹೇಳಿದರು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.