ನಾಲ್ಕೂವರೆ ತಿಂಗಳಲ್ಲಿ ಶತಕ ಬಾರಿಸಿದ ಚಂದನವನ; ಒಂದೇ ಒಂದು ಗೆಲುವಿಲ್ಲದೆ ಬಿಕೋ ಎನ್ನುತ್ತಿದೆ ಸ್ಯಾಂಡಲ್‌ವುಡ್
ಸ್ಯಾಂಡಲ್‌ವುಡ್‌ನಲ್ಲಿ ನಾಲ್ಕೂವರೆ ತಿಂಗಳಲ್ಲಿ 100ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆ ಆಗಿವೆ. ವಿಶೇಷವೆಂದರೆ, ಕಳೆದ ವರ್ಷ ಸಹ ಇದೇ ಸಮಯದಲ್ಲಿ 100 ಚಿತ್ರಗಳು ಬಿಡುಗಡೆಯಾಗಿದ್ದವು. ಕಳೆದ ವರ್ಷ ಮೇ 17ರಂದು ಕನ್ನಡ ಚಿತ್ರರಂಗ ಈ ಗಡಿ ದಾಟಿತ್ತು. ಈ ವರ್ಷ ಒಂದು ದಿನ ಮೊದಲೇ 100ರ ಗಡಿ ದಾಟಿದೆ.

ಇಂದು ಕನ್ನಡದ ಏಳು ಚಿತ್ರಗಳು ಬಿಡುಗಡೆಯಾಗುತ್ತಿವೆ. ‘ಟೆಕಿಲಾ’, ‘ದಿ’ ‘ರಿದಮ್’, ‘ಬಂಡೆ ಸಾಹೇಬ’, ‘ಲವ್ ಯೂ’, ‘ಅರಿಂದಮಮ್’ ಮತ್ತು ‘ಉದಯ ಸೂರ್ಯ’ ಎಂಬ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಪೈಕಿ ಧರ್ಮ ಕೀರ್ತಿರಾಜ್ ಅಭಿನಯದ ‘ಟೆಕಿಲಾ’ ಚಿತ್ರ ಬಿಟ್ಟರೆ ಮಿಕ್ಕೆಲ್ಲಾ ಚಿತ್ರಗಳು ಹೊಸಬರದ್ದು ಎನ್ನುವುದು ವಿಶೇಷ.
ಈ ಏಳು ಚಿತ್ರಗಳು ಬಿಡುಗಡೆಯಾಗುವುದರೊಂದಿಗೆ, ಕನ್ನಡ ಚಿತ್ರರಂಗ ಸೆಂಚುರಿ ಬಾರಿಸಿದೆ. ನಾಲ್ಕೂವರೆ ತಿಂಗಳಲ್ಲಿ ಬಿಡುಗಡೆಯಾಗಿರುವ ಚಿತ್ರಗಳ ಸಂಖ್ಯೆ ನೂರನ್ನು ದಾಟಿದೆ. ಈ ಪೈಕಿ ಬರೀ ಕನ್ನಡ ಚಿತ್ರಗಳು ಮಾತ್ರ ಸೇರಿವೆ. ಡಬ್ಬಿಂಗ್ ಅಥವಾ ಪ್ರಾದೇಶಿಕ ಚಿತ್ರಗಳು ಸೇರಿಲ್ಲ. ಅವೆಲ್ಲಾ ಸೇರಿದರೆ ಸಂಖ್ಯೆ 110 ದಾಟಲಿವೆ.
ನೂರರ ಗಡಿ ದಾಟಿದ ಕನ್ನಡ ಸಿನಿಮಾಗಳು
ಈ ವರ್ಷ ಜನವರಿ 03ರಂದು ಮೂರು ಚಿತ್ರಗಳು ಬಿಡುಗಡೆಯಾಗುವ ಮೂಲಕ ಈ ವರ್ಷದ ಖಾತೆ ಪ್ರಾರಂಭವಾಗಿತ್ತು. ನಾಲ್ಕೂವರೆ ತಿಂಗಳಲ್ಲಿ 100ಕ್ಕೂ ಹೆಚ್ಚು ಚಿತ್ರಗಳಾಗಿವೆ. ವಿಶೇಷವೆಂದರೆ, ಕಳೆದ ವರ್ಷ ಸಹ ಇದೇ ಸಮಯದಲ್ಲಿ 100 ಚಿತ್ರಗಳು ಬಿಡುಗಡೆಯಾಗಿದ್ದವು. ಕಳೆದ ವರ್ಷ ಮೇ 17ರಂದು ಕನ್ನಡ ಚಿತ್ರರಂಗ ಈ ಗಡಿ ದಾಟಿತ್ತು. ಈ ವರ್ಷ ಒಂದು ದಿನ ಮೊದಲೇ 100ರ ಗಡಿ ದಾಟಿದೆ.
ಈ ನಾಲ್ಕೂವರೆ ತಿಂಗಳಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿ ‘ಛೂ ಮಂತರ್’, ‘ಸಂಜು ವೆಡ್ಸ್ ಗೀತಾ 2’, ‘ಫಾರೆಸ್ಟ್’, ‘ಗಣ’, ‘ನೋಡಿದವರು ಏನಂತಾರೆ’, ‘ಸಿದ್ಲಿಂಗು 2’, ‘ಭುವನಂ ಗಗನಂ’, ‘ರಾಜು ಜೇಮ್ಸ್ ಬಾಂಡ್’, ‘ತಲ್ವಾರ್’, ‘FIR 6 To 6’, ‘ರಾಕ್ಷಸ’ ‘ಸೂರಿ ಲವ್ಸ್ ಸಂಧ್ಯಾ’, ‘ವಾಮನ’, ‘ವಿದ್ಯಾಪತಿ’, ‘ಯುದ್ಧಕಾಂಡ’, ‘ದಾಸರಹಳ್ಳಿ’, ‘ಟೆಕಿಲಾ’ ಮುಂತಾದ ಚಿತ್ರಗಳನ್ನು ಹೊರತುಪಡಿಸಿದರೆ, ಮಿಕ್ಕಂತೆ ಬಿಡುಗಡೆಯಾದ ಶೇ 80ರಷ್ಟು ಚಿತ್ರಗಳು ಹೊಸಬರದ್ದು.
ʻ45ʼ, ʻಕಾಂತಾರ ಚಾಪ್ಟರ್ 1ʼ ಮೇಲೆ ಎಲ್ಲರ ಕಣ್ಣು
ಶ್ರೀನಗರ ಕಿಟ್ಟಿ, ಪ್ರಜ್ವಲ್ ದೇವರಾಜ್, ಯೋಗಿ, ಧರ್ಮ ಕೀರ್ತಿರಾಜ್, ಶರಣ್, ಅಜೇಯ್ ರಾವ್, ಧನ್ವೀರ್ ಗೌಡ, ಅಭಿಮನ್ಯು ಕಾಶಿನಾಥ್, ರಾಜವರ್ಧನ್, ನವೀನ್ ಶಂಕರ್ ಮುಂತಾದವರ ಚಿತ್ರಗಳು ಬಿಡುಗಡೆಯಾಗಿದ್ದು ಬಿಟ್ಟರೆ. ದೊಡ್ಡ ಸ್ಟಾರ್ ನಟರ ಯಾವುದೇ ಚಿತ್ರಗಳು ಬಿಡುಗಡೆಯಾಗಲಿಲ್ಲ. ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಇನ್ನೂ ಮೂರು ತಿಂಗಳು ಕಾಯಬೇಕು. ಆಗಸ್ಟ್ 15ರಂದು ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್ ಶೆಟ್ಟಿ ಅಭಿನಯದ ‘45’ ಚಿತ್ರ ಬಿಡುಗಡೆಯಾಗುತ್ತಿದೆ. ಅಕ್ಟೋಬರ್ 02ಕ್ಕೆ ರಿಷಬ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ – ಅಧ್ಯಾಯ 1’ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಎರಡು ಚಿತ್ರಗಳನ್ನು ಹೊರತುಪಡಿಸಿದರೆ, ಮಿಕ್ಕಂತೆ ಯಾವುದೇ ಸ್ಟಾರ್ ಚಿತ್ರದ ಬಿಡುಗಡೆ ಘೋಷಣೆಯಾಗಿಲ್ಲ.
ಸೋತ ಸಿನಿಮಾಗಳೇ ಹೆಚ್ಚು
ಇನ್ನು, ಬಿಡುಗಡೆಯಾದ ಇಷ್ಟು ಚಿತ್ರಗಳ ಪೈಕಿ ಯಾವ ಚಿತ್ರ ದುಡ್ಡು ಮಾಡಿದೆ ಎಂದು ಕೇಳಿದರೆ ಉತ್ತರಿಸುವುದು ಕಷ್ಟ. ಒಂದೆರಡು ಚಿತ್ರಗಳು ಹಾಕಿದ ಬಂಡವಾಳವನ್ನು ವಾಪಸ್ಸು ಪಡೆದಿರಬಹುದು. ಆದರೆ, ಚಿತ್ರಮಂದಿರವೊಂದರಿಂದಲೇ ಅದು ಸಾಧ್ಯವಾಗಿಲ್ಲ. ಹಾಗೆ ನೋಡಿದರೆ, ಬಾಕ್ಸ್ ಆಫೀಸ್‍ನಲ್ಲೇ ದುಡ್ಡು ಮಾಡಿದ ಚಿತ್ರ ಸಿಗುವುದು ಕಷ್ಟವೇ. ಲಾಭವಿರಲಿ, ಕನಿಷ್ಠ ಹಾಕಿದ ಬಂಡವಾಳವನ್ನೂ ವಾಪಸ್ಸು ಪಡೆಯುವುದಕ್ಕೆ ಹಲವು ಚಿತ್ರಗಳು ಸೋತಿವೆ ಎನ್ನುತ್ತಾರೆ ಚಿತ್ರರಂಗದವರು. ಬೆರಳಣಿಕೆಯಷ್ಟು ಚಿತ್ರಗಳು ಮಾತ್ರ ಬಾಕ್ಸ್ ಆಫೀಸ್ ಮತ್ತು ಇತರೆ ಹಕ್ಕುಗಳಿಂದ ಹಾಕಿದ ಬಂಡವಾಳವನ್ನು ವಾಪಸ್ಸು ಪಡೆಯುವಲ್ಲಿ ಯಶಸ್ವಿಯಾಗಿವೆ. ಮಿಕ್ಕಂತೆ ಎಲ್ಲಾ ಚಿತ್ರಗಳು ಸೋತಿವೆ.
ಬಿಡುಗಡೆಯಾದ ಚಿತ್ರಗಳ ಪೈಕಿ 10 ಲಕ್ಷ ಬಜೆಟ್‍ನಿಂದ (AI ಮೂಲಕ ಸೃಷ್ಟಿಯಾಗಿರುವ ‘ಲವ್ ಯು’) ಪ್ರಾರಂಭವಾಗಿ, 10 ಕೋಟಿಗೂ ಹೆಚ್ಚು ಬಜೆಟ್‍ನಲ್ಲಿ ನಿರ್ಮಾಣವಾಗಿರುವ ‘ಛೂ ಮಂತರ್’ವರೆಗೂ ಬೇರೆ ಬೇರೆ ಬಜೆಟ್‍ನಲ್ಲಿ ನಿರ್ಮಾಣವಾದ ಚಿತ್ರಗಳಿವೆ. ಚಿತ್ರಗಳು ಸೋತಿದ್ದರಿಂದ 150 ಕೋಟಿ ರೂ.ವರೆಗೂ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ, ಸಂಖ್ಯೆಯ ದೃಷ್ಟಿಯಿಂದ ಕನ್ನಡ ಚಿತ್ರರಂಗ ಸೆಂಚುರಿ ಬಾರಿಸಿದೆಯಾದರೂ, ಯಶಸ್ಸು, ಗುಣಮಟ್ಟದ ವಿಷಯದಲ್ಲಿ ಹಿಂದೆ ಬಿದ್ದಿದೆ. ಮುಂದಿನ ದಿನಗಳಲ್ಲಾದರೂ ಸ್ಯಾಂಡಲ್‌ವುಡ್ ಒಂದಿಷ್ಟು ಯಶಸ್ಸುಗಳನ್ನು ನೋಡುತ್ತದಾ ಎಂಬುದನ್ನು ಕಾದು ನೋಡಬೇಕು.
ಬರಹ: ಚೇತನ್ ನಾಡಿಗೇರ್