ಮಾರ್ಚ್ 1ರಿಂದ 8ರವರೆಗೆ ಬೆಂಗಳೂರಿನಲ್ಲಿ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಥೀಮ್ ‘ಸರ್ವ ಜನಾಂಗದ ಶಾಂತಿಯ ತೋಟ’
ಕನ್ನಡ ಸುದ್ದಿ  /  ಮನರಂಜನೆ  /  ಮಾರ್ಚ್ 1ರಿಂದ 8ರವರೆಗೆ ಬೆಂಗಳೂರಿನಲ್ಲಿ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಥೀಮ್ ‘ಸರ್ವ ಜನಾಂಗದ ಶಾಂತಿಯ ತೋಟ’

ಮಾರ್ಚ್ 1ರಿಂದ 8ರವರೆಗೆ ಬೆಂಗಳೂರಿನಲ್ಲಿ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಥೀಮ್ ‘ಸರ್ವ ಜನಾಂಗದ ಶಾಂತಿಯ ತೋಟ’

ಮಾರ್ಚ್ 1ರಿಂದ 8ರವರೆಗೆ ಬೆಂಗಳೂರಿನಲ್ಲಿ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಈ ವರ್ಷ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಥೀಮ್ ಆಧರಿಸಿ ಚಲನಚಿತ್ರೋತ್ಸವ ನಡೆಯುತ್ತದೆ.

ಮಾರ್ಚ್ 1ರಿಂದ 8ರವರೆಗೆ ಬೆಂಗಳೂರಿನಲ್ಲಿ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
ಮಾರ್ಚ್ 1ರಿಂದ 8ರವರೆಗೆ ಬೆಂಗಳೂರಿನಲ್ಲಿ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಬೆಂಗಳೂರು: 2025 ನೇ ಸಾಲಿನ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 1 ರಿಂದ 8ರವರೆಗೆ ನಡೆಯಲಿದೆ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕುರಿತು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷಾದಲ್ಲಿ ಸಭೆ ನಡೆಯಿತು. 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಚರಣೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಚಲನಚಿತ್ರ ಅಕಾಡೆಮಿ ಹಾಗೂ ಚಲನ ಚಿತ್ರೋದ್ಯಮಿಗಳ ಸಭೆ ನಡೆಯಿತು. ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ಮಾರ್ಚ್ 1 ರಿಂದ 8ರವರೆಗೆ ಚಲನಚಿತ್ರೋತ್ಸವ ನಡೆಯಲಿದೆ. 13 ಚಿತ್ರಮಂದಿರಗಳಲ್ಲಿ 400 ಚಲನ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಚಲನಚಿತ್ರೋತ್ಸವಕ್ಕೆ 9 ಕೋಟಿ ರೂ ನೀಡಲಾಗಿದೆ. ಸಮಾರೋಪ ಸಮಾರಂಭದಲ್ಲಿ ರಾಜ್ಯಪಾಲ ಗೆಹ್ಲೋಟ್ ಅವರು ಭಾಗವಹಿಸಲಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಉದ್ಘಾಟಿಸಲಿದ್ದಾರೆ

ಈ ಬಾರಿಯ ಚಲನಚಿತ್ರೋತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಉದ್ಘಾಟಿಸಲಿದ್ದಾರೆ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2006ರಲ್ಲಿ ಪ್ರಾರಂಭವಾಗಿದೆ. ರಾಯಭಾರಿ, ಮುಖ್ಯ ಅತಿಥಿಗಳು ಮೊದಲಾದ ವಿಷಯಗಳನ್ನು ಸಮಿತಿಯೇ ತೀರ್ಮಾನಿಸಲಿದೆ.

ಚಲನಚಿತ್ರೋತ್ಸವದ ಥೀಮ್‌

ಈ ವರ್ಷದ ಚಲನಚಿತ್ರೋತ್ಸವದ ಥೀಮ್‌ ಅನ್ನು ʻಸರ್ವ ಜನಾಂಗದ ಶಾಂತಿಯ ತೋಟʼ ಆಯ್ಕೆ ಮಾಡಲಾಗಿದೆ. ಕಳೆದ ವರ್ಷ ʻಸಾಮಾಜಿಕ ನ್ಯಾಯʼ ಥೀಮ್‌ ನಲ್ಲಿ ಚಲನಚಿತ್ರೋತ್ಸವ ಆಯೋಜಿಸಲಾಗಿತ್ತು. 2006ರಲ್ಲಿ ಆರಂಭವಾದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇದೀಗ 16ನೇ ಆವೃತ್ತಿಗೆ ಪ್ರವೇಶಿಸುತ್ತಿದೆ. 9ಕೋಟಿ ವೆಚ್ಚದಲ್ಲಿ ಚಲನಚಿತ್ರೋತ್ಸವನ್ನು ಆಯೋಜಿಸಲಾಗುತ್ತಿದೆ.

400 ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದ್ದು, ಬೆಂಗಳೂರು ಭಾರತೀಯ ಮತ್ತು ಅಂತಾರಾಷ್ಟ್ರೀಯ ಸಿನಿಮಾ ಸಂಸ್ಕೃತಿಯ ಮುಖ್ಯಕೇಂದ್ರವಾಗಿ ಬೆಳೆದಿದೆ. ಚಲನಚಿತ್ರೋತ್ಸವದಲ್ಲಿ ಪ್ರತಿ ವರ್ಷ 60ಕ್ಕೂ ದೇಶಗಳಿಂದ ಬಂದ ಸುಮಾರು 200ಕ್ಕೂ ಅಧಿಕ ಚಲನಚಿತ್ರಗಳನ್ನು, 13 ಚಿತ್ರಮಂದಿರಗಳಲ್ಲಿ, ಸುಮಾರು 400 ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ. ಪ್ರತಿ ಆವೃತ್ತಿಯಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಕಳೆದ ವರ್ಷದ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಫೆಬ್ರವರಿ 29ರಿಂದ ಮಾರ್ಚ್‌ 7ವರೆಗೆ ನಡೆದಿತ್ತು.

ಚಿತ್ರೋತ್ಸವಕ್ಕೆ ವಿಧಾನಸೌಧದ ಮುಂಭಾಗ ಅದ್ದೂರಿ ಚಾಲನೆ ನೀಡಲಾಗುತ್ತದೆ. ಬ್ಯಾಂಕ್ವೆಟ್ ಹಾಲ್ನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಚಲನಚಿತ್ರ ಸಂಘಟನೆಗಳ ಅಂತಾರಾಷ್ಟ್ರೀಯ ಮಹಾ ಒಕ್ಕೂಟದಿಂದ (FIAPF) ಬೆಂಗಳೂರು ಚಲನಚಿತ್ರೋತ್ಸವ ಮಾನ್ಯತೆ ಪಡೆದಿದೆ. ಚಿತ್ರೋತ್ಸವವದಲ್ಲಿ ವಿವಿಧ ಭಾಷೆಗಳ ನಿರ್ಮಾಪಕರು, ರಾಷ್ಟ್ರೀಯ ಚಲನಚಿತ್ರ ಪ್ರತಿನಿಧಿಗಳು, ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಭಾಗಿಯಾಗಲಿದ್ದಾರೆ. ಸಿನಿಮಾ ಮಾಧ್ಯಮ ಮತ್ತು ಉದ್ಯಮಕ್ಕೆ ಸಂಬಂಧಿಸಿದಂತೆ ತಜ್ಞರಿಂದ ಸಂವಾದ, ಉಪನ್ಯಾಸ ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತದೆ. ರಾಜಾಜಿನಗರದ ಒರಿಯಾನ್ ಮಾಲ್ನ ‘ಪಿವಿಆರ್ ಸಿನಿಮಾ’ದ ಪರದೆಗಳು, ಚಾಮರಾಜಪೇಟೆಯ ಕಲಾವಿದರ ಸಂಘದ ಕಟ್ಟಡದಲ್ಲಿ ಇರುವ ಡಾ. ರಾಜ್ಕುಮಾರ್ ಭವನ ಮತ್ತು ಬನಶಂಕರಿ 2ನೇ ಹಂತದ ‘ಸುಚಿತ್ರಾ ಫಿಲ್ಮ್ ಸೊಸೈಟಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಿತ್ರಗಳು ಪ್ರದರ್ಶನಗೊಳ್ಳಲಿದೆ. ಕಳೆದ ವರ್ಷ 50ಕ್ಕೂ ಹೆಚ್ಚು ದೇಶಗಳ 200ಕ್ಕೂ ಅಧಿಕ ಸಿನಿಮಾಗಳು ಬೇರೆ ಬೇರೆ ವಿಭಾಗಗಳಲ್ಲಿ ಪ್ರದರ್ಶನಗೊಂಡಿದ್ದವು.

Whats_app_banner