ʻಕುಲದಲ್ಲಿ ಕೀಳ್ಯಾವುದೋʼ ಚಿತ್ರದಿಂದ ಬರುವ ಲಾಭದಲ್ಲಿ ಶೇ 30ರಷ್ಟು ಹಣ ಸೈನಿಕರ ನಿಧಿಗೆ; ಚಿತ್ರತಂಡದಿಂದ ಘೋಷಣೆ
ಮಡೆನೂರು ಮನು ನಾಯಕನಾಗಿ ನಟಿಸಿರುವ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರ ಇದೇ ಮೇ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ನಡುವೆಯೇ ಈ ಚಿತ್ರದಿಂದ ಬರುವ ಲಾಭದಲ್ಲಿ ಶೇ 30ರಷ್ಟು ಹಣವನ್ನು ಸೈನಿಕರ ನಿಧಿಗೆ ನೀಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ.

ʻಕಾಮಿಡಿ ಕಿಲಾಡಿಗಳುʼ ಖ್ಯಾತಿಯ ಮಡೆನೂರು ಮನು ನಾಯಕನಾಗಿ ನಟಿಸಿರುವ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರ ಮೇ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅಬ್ಬರದ ಪ್ರಚಾರ ಕಾರ್ಯದಲ್ಲಿಯೂ ಚಿತ್ರತಂಡ ತೊಡಗಿಸಿಕೊಂಡಿದೆ. ಈ ನಡುವೆ ಈ ಚಿತ್ರದಲ್ಲಿ ಬರುವ ಲಾಭದಲ್ಲಿ ಶೇ. 30ರಷ್ಟು ಹಣವನ್ನು ಸೈನಿಕರ ನಿಧಿಗೆ ಕೊಡುವುದಾಗಿ ನಿರ್ಮಾಪಕ ಸಂತೋಷ್ ಹೇಳಿಕೊಂಡಿದ್ದಾರೆ. ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಟ್ರೇಲರ್ ಶನಿವಾರ ಬಿಡುಗಡೆಯಾಗಿದೆ. ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದವರು ಯೋಧರು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಸಂತೋಷ್ ಕುಮಾರ್, ʻಈ ಉದ್ವಿಗ್ನ ಪರಿಸ್ಥಿತಿಯಲ್ಲಿ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ. ಕದನ ವಿರಾಮ ಇದ್ದರೂ, ಯಾವ ಕ್ಷಣದಲ್ಲಿ ಏನಾಗುತ್ತದೆ ಎಂದು ಗೊತ್ತಿಲ್ಲ. ಈ ಪರಿಸ್ಥಿತಿಯಲ್ಲಿ ಚಿತ್ರ ಬಿಡುಗಡೆ ಮಾಡಬೇಕಾ? ಎಂದು ಸಾಕಷ್ಟು ಜನರನ್ನು ಕೇಳಿದ್ದೇವೆ. ಇದರಿಂದ ಏನೂ ಆಗುವುದಿಲ್ಲ, ಇದು ಎಲ್ಲರಿಗೂ ಕನೆಕ್ಟ್ ಆಗುವ ಸಿನಿಮಾ, ಒಳ್ಳೆಯ ಸಂದೇಶವಿರುವುದರಿಂದ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಎಲ್ಲರೂ ಧೈರ್ಯ ಕೊಟ್ಟ ಮೇಲೆ ಚಿತ್ರ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದೇವೆʼ ಎಂದಿದ್ದಾರೆ.
ಬಂದ ಲಾಭದಲ್ಲಿ ಸೈನಿಕರ ಕಲ್ಯಾಣ ನಿಧಿಗೆ
ʻಒಬ್ಬ ನಿರ್ಮಾಪಕನಾಗಿ ನಾನು ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಚಿತ್ರದ ಲಾಭದಲ್ಲಿ ಶೇ. 30ರಷ್ಟು ಹಣವನ್ನು ಸೈನಿಕರ ಕಲ್ಯಾಣ ನಿಧಿಗೆ ಕೊಡುವುದಕ್ಕೆ ತೀರ್ಮಾನಿಸಿದ್ದೇನೆ. ಈ ಪರಿಸ್ಥಿತಿಯಲ್ಲಿ ಸೈನಿಕರು ಸಾಕಷ್ಟು ಕಷ್ಟಪಡುತ್ತಿದ್ದಾರೆ. ನಾವು ಅವರ ಪರವಾಗಿ ಹೋಗಿ ಯುದ್ಧ ಮಾಡುವುದಕ್ಕೆ ಸಾಧ್ಯವಿಲ್ಲ. ಇದು ಬಿಟ್ಟು ಇನ್ನೇನನ್ನೂ ಮಾಡುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ, ಇಂಥದ್ದೊಂದು ನಿರ್ಧಾರಕ್ಕೆ ಬಂದಿದ್ದೇನೆ. ಏನು ಮಾತು ಕೊಟ್ಟಿದ್ದೇನೋ, ಅದಕ್ಕೆ ಬದ್ಧನಾಗಿರುತ್ತೇನೆ’ ಎಂದು ಹೇಳಿದರು.
ಚಿತ್ರದಲ್ಲಿ ಒಂದೊಳ್ಳೆ ಉದ್ದೇಶವಿದೆ..
ಈ ಚಿತ್ರದಲ್ಲೊಂದು ಒಳ್ಳೆಯ ಸಂದೇಶವಿದೆ ಎನ್ನುವ ನಿರ್ದೇಶಕ ರಾಮನಾರಾಯಣ್, ‘ಯುದ್ಧ ಶುರುವಾಗುತ್ತಿದ್ದಂತೆಯೇ ನಮ್ಮಲ್ಲೂ ಒಂದು ಆತಂಕ ಶುರುವಾಗುತ್ತದೆ. ಆದರೆ, ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿರುವುದರಿಂದ, ಚಿತ್ರವನ್ನು ಅಂದುಕೊಂಡಂತೆಯೇ ಬಿಡುಗಡೆ ಮಾಡುತ್ತಿದ್ದೇವೆ. ಕದನ ವಿರಾಮ ಘೋಷಣೆಯಾಗಿರುವುದು ಖುಷಿಯ ವಿಚಾರ. ಮನರಂಜನೆ ಒಂದೇ ಉದ್ದೇಶವಲ್ಲ, ಚಿತ್ರದಲ್ಲಿ ಹಲವು ಸಂದೇಶಗಳಿವೆ. ಸಿನಿಮಾ ನೋಡಿ ಪಾಠ ಕಲಿತ ಹಲವು ಉದಾಹರಣೆಗಳಿವೆ. ನಮ್ಮ ಚಿತ್ರದಲ್ಲೂ ಒಳ್ಳೆಯ ಉದ್ದೇಶವಿದೆ. ಚಿತ್ರ ಚೆನ್ನಾಗಿ ಬಂದಿದೆ’ ಎಂದರು.
ಮೇ 23ರಂದು ತೆರೆಗೆ
ಮೇ 23ರಂದು ತೆರೆಕಾಣಲಿರುವ ಈ ಚಿತ್ರಕ್ಕಾಗಿ ಮಡೆನೂರು ಮನು ಕಾಲೇಜು, ಸ್ಕೂಲ್, ಬಾರ್, ಅಂಗಡಿ, ಹೋಟೆಲ್, ಬಸ್ ಸ್ಟಾಂಡ್ ಎಲ್ಲಾ ಕಡೆ ಹೋಗಿ ಪ್ರಚಾರ ಮಾಡಿದ್ದಾರಂತೆ. ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದಲ್ಲಿ ಮಡೆನೂರು ಮನು, ಮೌನ ಗುಡ್ಡೆಮನೆ, ಶರತ್ ಲೋಹಿತಾಶ್ವ, ತಬಲ ನಾಣಿ, ಸೋನಾಲ್ ಮೊಂತೆರೊ, ಕರಿಸುಬ್ಬು, ಡ್ಯಾಗನ್ ಮಂಜು, ಸೀನ ಮುಂತಾದವರು ನಟಿಸಿದ್ದಾರೆ. ಯೋಗರಾಜ್ ಸಿನಿಮಾಸ್ ಅರ್ಪಿಸುತ್ತಿರುವ ಈ ಚಿತ್ರವನ್ನು ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಂತೋಷ್ ಹಾಗೂ ವಿದ್ಯಾ ದಂಪತಿ ನಿರ್ಮಾಣ ಮಾಡುತ್ತಿದ್ದಾರೆ.