ಅಮೀರ್, ಸಲ್ಮಾನ್ ಮತ್ತು ಶಾರುಖ್ ಖಾನ್ ಒಟ್ಟಿಗೆ ನಟಿಸುವ ಸಾಧ್ಯತೆ; ಅಭಿಮಾನಿಗಳ ಆಸೆ ಪೂರೈಸಲು ಮುಂದಾದ ನಟರು
ಅಮೀರ್ ಖಾನ್ ಮತ್ತು ಸಲ್ಮಾನ್ ಖಾನ್ ಒಟ್ಟಿಗೆ ನಟಿಸಲು ನಿರ್ಧಾರ ಮಾಡಿದ್ದಾರೆ. ಅಭಿಮಾನಿಗಳೂ ಸಹ ಈ ಮೂವರನ್ನೂ ಒಟ್ಟಿಗೆ ಕಾಣುವ ಆಸೆ ಹೊಂದಿದ್ದಾರೆ. ಅಭಿಮಾನಿಗಳ ಆಸೆ ನಿರಾಸೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಇನ್ನೂ ಸಿನಿಮಾ ಕಥೆ ನಿರ್ಧಾರವಾಗಿಲ್ಲ.
ಅಮೀರ್ ಖಾನ್ ಮತ್ತು ಸಲ್ಮಾನ್ ಖಾನ್ ಒಟ್ಟಿಗೆ ನಟಿಸಿದ್ದಾರೆ. ಶಾರುಖ್ ಖಾನ್ ಮತ್ತು ಸಲ್ಮಾನ್ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ಅಮೀರ್ ಮತ್ತು ಶಾರುಖ್ ಖಾನ್ ಒಟ್ಟಿಗೆ ನಟಿಸುವುದಕ್ಕೆ ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ, ಮೂರು ಖಾನ್‍ಗಳನ್ನು ಒಟ್ಟಿಗೆ ನೋಡಬೇಕು ಎಂಬುದು ಅಭಿಮಾನಿಗಳ ಆಸೆಯಾದರೆ, ಮೂವರನ್ನೂ ಒಟ್ಟಿಗೆ ತೆರೆಯ ಮೇಲೆ ತರಬೇಕು ಎಂಬುದು ಹಲವು ನಿರ್ಮಾಪಕರು ಮತ್ತು ನಿರ್ದೇಶಕರ ಆಸೆ. ಆ ಆಸೆ ಈಗ ಕೈಗೂಡುವ ಸಾಧ್ಯತೆ ಇದೆ.
ಹೌದು, ಅಮೀರ್ ಖಾನ್, ಸಲ್ಮಾನ್ ಖಾನ್ ಮತ್ತು ಶಾರೂಖ್ ಖಾನ್ ಸದ್ಯದಲ್ಲೇ ನಟಿಸುವ ಸಾಧ್ಯತೆ ಇದೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿರುವ ರೆಡ್ ಸೀ ಫಿಲ್ಮ್ ಫೆಸ್ಟಿವಲ್‍ನಲ್ಲಿ ಭಾಗವಹಿಸಿ ಮಾತನಾಡಿರುವ ಅಮೀರ್, ಖಾನ್‍ತ್ರಯರು ಒಂದೇ ಚಿತ್ರದಲ್ಲಿ ಒಟ್ಟಿಗೆ ನಟಿಸುವ ಸಾಧ್ಯತೆ ಇದೆ ಎಂದು ಹೇಳಿಕೊಂಡಿದ್ದಾರೆ.
ಕಥೆ ಹುಡುಕಾಟ ನಡೆಯುತ್ತಿದೆ
ಈ ಕುರಿತು ಮಾತನಾಡಿರುವ ಅಮೀರ್, ‘ಸುಮಾರು ಆರು ತಿಂಗಳ ಹಿಂದೆ ನಾವು ಮೂವರು, ಅನಂತ್ ಅಂಬಾನಿ ಮದುವೆಯಲ್ಲಿ ಒಟ್ಟಿಗೆ ಭೇಟಿಯಾಗಿದ್ದೆವು. ಈ ಸಂದರ್ಭದಲ್ಲಿ ಒಟ್ಟಿಗೆ ನಟಿಸುವ ಕುರಿತು ಮಾತಾಯಿತು. ನಿಜ ಹೇಳಬೇಕೆಂದರೆ, ಈ ವಿಷಯವನ್ನು ಮೊದಲು ಪ್ರಸ್ತಾಪಸಿದ್ದೇ ನಾನು. ನಾವು ಮೂವರು ಒಟ್ಟಿಗೆ ಚಿತ್ರ ಮಾಡದಿದ್ದರೆ ಅಭಿಮಾನಿಗಳಿ ಮೋಸ ಮಾಡಿದಂತಾಗುತ್ತದೆ. ಹಾಗಾಗಿ, ಒಟ್ಟಿಗೆ ನಟಿಸಿದರೆ ಹೇಗೆ ಎಂದು ಕೇಳಿದಾಗ, ಅವರಿಬ್ಬರೂ ಒಪ್ಪಿದರು. ಒಟ್ಟಿಗೆ ಕೆಲಸ ಮಾಡೋಣ ಎಂದು ಆಶ್ವಾಸನೆ ನೀಡಿದರು. ನಾವು ನಟಿಸಬಹುದು ಎಂಬ ನಂಬಿಕೆ ನನಗಂತೂ ಇದೆ. ಆದರೆ, ಅದಕ್ಕೊಂದು ಸೂಕ್ತವಾದ ಕಥೆ ಬೇಕು. ಅಂತಹ ಕಥೆಯ ಹುಡುಕಾಟದಲ್ಲಿ ನಾವಿದ್ದೇವೆ’ ಎಂದು ಆಮೀರ್ ಹೇಳಿದರು.
ಅಂದ ಹಾಗೆ, ಅಮೀರ್ ಖಾನ್, ಸಲ್ಮಾನ್ ಖಾನ್ ಮತ್ತು ಶಾರೂಖ್ ಖಾನ್ ಮೂವರೂ ಅನಂತ್ ಅಂಬಾನಿ ಮದುವೆಯಲ್ಲಿ ‘ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ್ದರು. ಮೂವರು ಒಟ್ಟಿಗೆ ಹೆಜ್ಜೆ ಹಾಕುವುದನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದರು. ಇನ್ನು, ಮೂವರು ಒಟ್ಟಿಗೆ ನಟಿಸುವುದರ ಮೂಲಕ ಅಭಿಮಾನಿಗಳನ್ನು ಖುಷಿಪಡಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಅಭಿಮಾನಿಗಳ ಆಸೆಗೆ ಒತ್ತು
ಮೂವರು ಖಾನ್‍ಗಳನ್ನು ಒಟ್ಟಿಗೆ ತೆರೆಯ ಮೇಲೆ ತರುವ ಪ್ರಯತ್ನ ಈ ಹಿಂದೆ ಆಗಿದೆ. ಈ ಹಿಂದೆ ಅನುಪಂ ಖೇರ್, ‘ಓಂ ಜಯ್ ಜಗದೀಶ್’ ಎಂಬ ಚಿತ್ರ ನಿರ್ದೇಶನ ಮಾಡಿದ್ದರು. ಆ ಚಿತ್ರದಲ್ಲಿ ಮೂವರೂ ಖಾನ್‍ಗಳು ಒಟ್ಟಿಗೆ ನಟಿಸಬೇಕಿತ್ತು. ಕಥೆ ಕೇಳಿ ಯಶರಾಜ್ ಫಿಲಂಸ್ ಸಂಸ್ಥೆ ಚಿತ್ರ ನಿರ್ಮಿಸುವುದಕ್ಕೆ ಮುಂದೆ ಬಂದಿತ್ತು. ಮೂವರು ಖಾನ್‍ಗಳ ಎದರು ರಾಣಿ ಮುಖರ್ಜಿ, ಕಾಜೋಲ್ ಮತ್ತು ಪ್ರೀತಿ ಜಿಂಟಾ ನಾಯಕಿಯರಾಗಿ ನಟಿಸುವ ಸಾಧ್ಯತೆಯೂ ಇತ್ತು. ಆದರೆ, ಡೇಟ್ ಹೊಂದಾಣಿಕೆಯ ಕಾರಣದಿಂದ ಮೂವರು ಒಟ್ಟಿಗೆ ನಟಿಸುವುದಕ್ಕೆ ಸಾಧ್ಯವಾಗಲಿಲ್ಲ. ಆ ನಂತರ ಅದೇ ಚಿತ್ರದಲ್ಲಿ ಅನಿಲ್ ಕಪೂರ್, ಅಭಿಷೇಕ್ ಬಚ್ಚನ್ ಮತ್ತು ಫರ್ದೀನ್ ಖಾನ್ ನಟಿಸಿದ್ದರು. ವಾಸ ಭಗ್ನಾನಿ ಚಿತ್ರ ನಿರ್ಮಿಸಿದ್ದರು. ಚಿತ್ರ ನಿರೀಕ್ಷಿತ ಯಶಸ್ಸು ಕಾಣಲಿಲ್ಲ.
ವರದಿ: ಚೇತನ್ ನಾಡಿಗೇರ್
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ಸುನಾಮಿ ಎಬ್ಬಿಸಿದ ಪುಷ್ಪ 2! ಹೊಸ ಇತಿಹಾಸ ಬರೆದ ಅಲ್ಲು ಅರ್ಜುನ್, ಎರಡನೇ ದಿನವೂ ತಗ್ಗದ ಆರ್ಭಟ