ಅತ್ಯಾಚಾರ ಆರೋಪ ಪ್ರಕರಣ; ಕೋರ್ಟ್‌ನಿಂದ ಹಾಸ್ಯ ಕಲಾವಿದ ಮಡೆನೂರು ಮನುಗೆ 14 ದಿನ ನ್ಯಾಯಾಂಗ ಬಂಧನದ ಆದೇಶ
ಅತ್ಯಾಚಾರ ಮತ್ತು ಬಲವಂತದ ಗರ್ಭಪಾತದ ಆರೋಪದಡಿಯಲ್ಲಿ ಬಂಧಿನದಲ್ಲಿರುವ ಹಾಸ್ಯ ನಟ ಮಡೆನೂರು ಮನುಗೆ 14 ದಿನಗಳ ನ್ಯಾಯಾಂಗ ಬಂಧನದ ಆದೇಶ ಹೊರಡಿಸಿ ಕೋರ್ಟ್ ಆದೇಶಿಸಿದೆ.

ಕಾಮಿಡಿ ಕಿಲಾಡಿಗಳು ಶೋ ಮೂಲಕ ನಾಡಿನಾದ್ಯಂತ ಗುರುತಿಸಿಕೊಂಡಿದ್ದ ನಟ ಮಡೆನೂರು ಮನು, ಇದೀಗ ಅತ್ಯಾಚಾರ ಮತ್ತು ಬಲವಂತದ ಗರ್ಭಪಾತದ ಆರೋಪದಡಿಯಲ್ಲಿ ಜೈಲು ಸೇರಿದ್ದಾರೆ. ಸೋಮವಾರ ವಿಚಾರಣೆಗೆಂದು 3ನೇ ಎಸಿಜೆಎಂ ಕೋರ್ಟ್‌ಗೆ ಹಾಜರಾದ ಮಡೆನೂರು ಮನುಗೆ, ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನದ ಆದೇಶ ನೀಡಿದೆ.
2022ರಲ್ಲಿ ಹಾಸ್ಯ ಕಾರ್ಯಕ್ರಮದ ನಿಮಿತ್ತ ಶಿವಮೊಗ್ಗದ ಶಿಕಾರಿಪುರಕ್ಕೆ ತೆರಳಿದ್ದಾಗ, ಮಡೆನೂರು ಮನು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅದಾದ ಬಳಿಕ ಹಲವು ಸಲ ಬಲಾತ್ಕಾರ ಮಾಡಿ, ಗರ್ಭಪಾತವನ್ನೂ ಮಾಡಿಸಿದ್ದಾನೆ ಎಂದು ಸಂತ್ರಸ್ತೆ ನೀಡಿದ್ದ ದೂರಿನ ಮೇಲೆ ಮನು ಅವರ ಬಂಧನವಾಗಿದೆ.
ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ದೂರಿನ ಆಧಾರದ ಮೇಲೆ, ಮೇ 22ರಂದು ಮಡೆನೂರು ಮನುರನ್ನು ಬಂಧಿಸಿದ್ದರು. ಇದೀಗ ಮಗದೊಮ್ಮೆ ವಿಚಾರಣೆಗೆ ಹಾಜರಾದ ವೇಳೆ ಆರೋಪಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಎಸಿಜೆಎಂ ಕೋರ್ಟ್ ಆದೇಶಿಸಿದೆ.
ಇನ್ನು ಮಡೆನೂರು ಮನು ವಿರುದ್ಧ ಹಲವು ಆರೋಪ ಮಾಡಿದ್ದ ಸಂತ್ರಸ್ತೆ, ಅತ್ಯಾಚಾರದ ವಿಡಿಯೋವನ್ನು ಅವನ ಫೋನ್‌ನಲ್ಲಿ ಸೆರೆ ಹಿಡಿದಿದ್ದಾನೆ ಎಂದು ಹೇಳಿಕೊಂಡಿದ್ದರು. ಅದರ ಬಗ್ಗೆಯೂ ತನಿಖೆ ನಡೆಸಿದ ಪೊಲೀಸರು, ಮನು ಫೋನ್‌ನಲ್ಲಿ ಆ ಥರದ ಯಾವ ವಿಡಿಯೋಗಳು ಕಂಡಿಲ್ಲ ಎಂಬುದು ತಿಳಿದು ಬಂದಿದೆ.
ಪರೋಕ್ಷವಾಗಿ ಟಾಂಗ್ ಕೊಟ್ಟ ಜಗ್ಗೇಶ್..
ಸ್ಯಾಂಡಲ್‌ವುಡ್ ನಟರ ಬಗ್ಗೆ ಹಗುರವಾಗಿ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಮಡೆನೂರು ಮನು ಆಡಿಯೋ ವೈರಲ್ ಆದ ಬೆನ್ನಲ್ಲೇ, ನಟ ಜಗ್ಗೇಶ್ ಚಾಟಿ ಬೀಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಎರಡು ಪೋಸ್ಟ್ ಹಂಚಿಕೊಂಡಿರುವ ನಟ ಜಗ್ಗೇಶ್ ಪರೋಕ್ಷವಾಗಿ ಗುನ್ನ ಕೊಟ್ಟಿದ್ದಾರೆ.
"ಒಂದು ಗಾದೆ ಮಾತು ನೆನಪಾಯಿತು! ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿದಂಗೆ. ಗುರುಹಿರಿಯರ ಮೇಲೆ ಗೌರವ ತೋರದವನು ಗೆದ್ದ ಇತಿಹಾಸ ಇಲ್ಲಾ! ಇಂದು ಇದ್ದದ್ದು ನಾಳೆ ಇರದು. ಅಹಂಕಾರ ಬಿಡಿ ಅಂಬೆಗಾಲು ಇಡುತ್ತಿರುವ ಕೂಸುಗಳೆ! ಆಯುಷ್ಯ ಬರೆಯೋದು ಬ್ರಹ್ಮ. ಚಿಲ್ಲರೆ ಮನುಷ್ಯರಲ್ಲಾ! ಇಂದಿನ ಚಿತ್ರರಂಗದ ಅಸಹ್ಯ ಕಂಡು ದುಃಖವಾಯಿತು!!" ಎಂದಿದ್ದಾರೆ.
"ಶಿವರಾಜಕುಮಾರ ಚಿತ್ರರಂಗದ ಕಿರೀಟ ಇದ್ದಂತೆ.. ಎಲ್ಲರನ್ನು ಪ್ರೀತಿಸುವ ಜೀವ. ಅಂಥವರ ಸಾವು ಬಯಸಿದವರಿಗೆ ಕೇಡುಗಾಲ ಕಾದಿದೆ. ನೊಂದುಕೊಳ್ಳದಿರಿ ಶಿವಣ್ಣ ನೀವು ಹಿಮಾಲಯ. ನಿಮಗೆ ದೀರ್ಘಾಯುಷ್ಯ ಪ್ರಾಪ್ತಿ ಇದೆ. ನಿಮ್ಮ ಹೆತ್ತವರು ಕನ್ನಡಿಗರ ಆಶೀರ್ವಾದ ಇದೆ! We love you" ಎಂದಿದ್ದಾರೆ.