‘ಕರುನಾಡ ಕಣ್ಮಣಿ’ ಚಿತ್ರದ ಮೂಲಕ ಚಂದನವನದ ಬಾಗಿಲು ತಟ್ಟಿದ ನಟ ಚರಣ್ ರಾಜ್ ದ್ವಿತೀಯ ಪುತ್ರ ದೇವ್ ಚರಣ್
ಬಹುಭಾಷಾ ನಟ ಚರಣ್ ರಾಜ್, ಇದೀಗ ತಮ್ಮ ಎರಡನೇ ಮಗ ದೇವ್ ಚರಣ್ ಅವರನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಲು ಸಿದ್ಧತೆ ನಡೆಸಿದ್ದಾರೆ. ಆ ಚಿತ್ರಕ್ಕೆ ಕರುನಾಡ ಕಣ್ಮಣೆ ಶೀರ್ಷಿಕೆ ಇಡಲಾಗಿದ್ದು, ಕನ್ನಡದ ಜತೆಗೆ ತೆಲುಗು ಮತ್ತು ತಮಿಳಿನಲ್ಲಿಯೂ ಈ ಸಿನಿಮಾ ಸಿದ್ಧವಾಗಲಿದೆ.

Charan Raj Son Dev Charan Movie: ಬಹುಭಾಷಾ ನಟ ಚರಣ್ ರಾಜ್, ಒಂದೇ ಭಾಷೆಯ ಸಿನಿಮಾಗಳಿಗೆ ಸೀಮಿತವಾಗಿ ಉಳಿದಿಲ್ಲ. ಸೌತ್‌ನ ನಾಲ್ಕೂ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಾಣಿಸಿಕೊಳ್ಳದಿದ್ದರೂ, ತೆರೆಮರೆಯಲ್ಲಿ ಸಿನಿಮಾ ಸಂಬಂಧಿ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಇದೀಗ ತಮ್ಮ ಎರಡನೇ ಮಗನನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಲು ಸಿದ್ಧತೆ ನಡೆಸಿದ್ದಾರೆ ಚರಣ್ ರಾಜ್. ಆ ಚಿತ್ರಕ್ಕೆ ಕರುನಾಡ ಕಣ್ಮಣಿ ಶೀರ್ಷಿಕೆ ಇಡಲಾಗಿದ್ದು, ದೇವ್ ಚರಣ್ ಈ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಆಗಮಿಸಲಿದ್ದಾರೆ.
ಮೂರು ಭಾಷೆಗಳಲ್ಲಿ ಶುರು
ಕನ್ನಡದ ಜತೆಗೆ ತೆಲುಗು ತಮಿಳಿನಲ್ಲಿಯೂ ಈ ಸಿನಿಮಾ ನಿರ್ಮಾಣವಾಗಲಿದ್ದು, ಸ್ವತಃ ಚರಣ್ ರಾಜ್ ಅವರೇ ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಮಾರ್ಚ್ ಅಂತ್ಯದಲ್ಲಿ ಕರುನಾಡ ಕಣ್ಮಣಿ ಸಿನಿಮಾ ಸೆಟ್ಟೇರಲಿದೆ. ಅಂದಹಾಗೆ, ಎಬಿಸಿಆರ್ ಫಿಲಂ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಅಶ್ವಥ್ ಬಳಗೆರೆ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ಮರ್ಡರ್ ಮಿಸ್ಟರಿ ಕಥೆ
ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಈ ಚಿತ್ರದ ಮೂಲಕ ದೇವ್ ಚರಣ್ ರಾಜ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಬಹುಭಾಷಾ ನಟ ಕಿಶೋರ್ ಸಹ ಚಿತ್ರದಲ್ಲಿ ನಟಿಸಲಿದ್ದು, ಸಾಗರ್ ಗುರುರಾಜ್ ಸಂಗೀತ ನಿರ್ದೇಶನ ಹಾಗೂ ಪೃಥ್ವಿ ಛಾಯಾಗ್ರಹಣ ಮಾಡಲಿದ್ದಾರೆ. ಇನ್ನುಳಿದಂತೆ ಚಿತ್ರದ ತಾರಾಬಳಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಈ ಸಿನಿಮಾ ಬಗ್ಗೆ ಮಾಹಿತಿ ನೀಡುವ ಚರಣ್ ರಾಜ್, ಕೊಲೆ ಹಿನ್ನೆಲೆಯ ಥ್ರಿಲ್ಲರ್ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ.
ಮಗನ ಚಿತ್ರಕ್ಕೆ ಚರಣ್ ರಾಜ್ ನಿರ್ದೇಶನ
"ನಾನೇ ಚಿತ್ರಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದೇನೆ. ಈ ಚಿತ್ರದ ಬಹುತೇಕ ಚಿತ್ರೀಕರಣ ಕಾಲೇಜ್‌ನಲ್ಲಿ ನಡೆಯಲಿದೆ. ಕಾಲೇಜ್ ರಜಾ ಶುರುವಾದ ತಕ್ಷಣ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಕನ್ನಡದ ಚಿತ್ರೀಕರಣ ಬೆಂಗಳೂರಿನಲ್ಲಿ, ತಮಿಳಿನ ಚಿತ್ರೀಕರಣ ಪಾಂಡಿಚೇರಿ ಮತ್ತು ಕಡಲೂರಿನಲ್ಲಿ ನಡೆಯಲಿದೆ. ಅದೇ ರೀತಿ ತೆಲುಗು ಭಾಷೆಯ ಚಿತ್ರೀಕರಣ ಹೊಂಗನೂರು ಸೇರಿ ಮುಂತಾದ ಕಡೆ ನಡೆಯಲಿದೆ, ನನಗೆ ನೀಡಿದ ಪ್ರೀತಿ, ಪ್ರೋತ್ಸಾಹ ನನ್ನ ಎರಡನೇ ಮಗನ ಮೇಲೆಯೂ ಇರಲಿದೆ" ಎನ್ನುತ್ತಾರೆ ಚರಣ್ ರಾಜ್.
