Chetan on Rahul Gandhi: ಲೋಕಸಭೆಯಿಂದ ರಾಹುಲ್ ಗಾಂಧಿ ಅನರ್ಹ; ‘ನಿಜಕ್ಕೂ ಇದು ಅತಿರೇಕ..’ ಎಂದ ಚೇತನ್ ಅಹಿಂಸಾ
ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ಮತ್ತು ಜೈಲು ಶಿಕ್ಷೆ ಪ್ರಕಟವಾದ ಬಳಿಕ ಇದು ನಿಜಕ್ಕೂ ಅತಿರೇಕ ಎಂದು ಚೇತನ್ ಅಹಿಂಸಾ ಪ್ರಶ್ನೆ ಮಾಡಿದ್ದಾರೆ.
Chetan on Rahul Gandhi: ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಹಿಂದೂ ಧರ್ಮದ ಬಗ್ಗೆ ನೀಡಿದ್ದ ಹೇಳಿಕೆ ಕೋರ್ಟ್ ಮೆಟ್ಟಿಲೇರಿತ್ತು. ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದಿದ್ದರು. ಹೀಗಿರುವಾಗ ಇದೀಗ ಮತ್ತೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ಮೋದಿ ಸರ್‌ನೇಮ್ ಕೇಸ್‌ನಲ್ಲಿ ದೋಷಿ ಎನಿಸಿಕೊಂಡ ರಾಹುಲ್ ಗಾಂಧಿ ಶುಕ್ರವಾರ ಸಂಸತ್ ಸದಸ್ಯತ್ವ ಕಳೆದುಕೊಂಡಿದ್ದಾರೆ. ಸೂರತ್ ನ್ಯಾಯಾಲಯವು, ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಪ್ಪಿತಸ್ಥರೆಂದು ಪರಿಗಣಿಸಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದಾಗಿ ಸಂಸತ್ ಪ್ರಕಟಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಚೇತನ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ಮತ್ತು ಜೈಲು ಶಿಕ್ಷೆ ಪ್ರಕಟವಾದ ಬಳಿಕ ಇದು ನಿಜಕ್ಕೂ ಅತಿರೇಕ ಎಂದು ಚೇತನ್ ಅಹಿಂಸಾ ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಬರಹವೊಂದನ್ನು ತಮ್ಮ ಸೋಷಿಯಲ್ ಮೀಡಿಯಾ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಚೇತನ್ ಪೋಸ್ಟ್‌ನಲ್ಲೇನಿದೆ?
‘ಎಲ್ಲಾ ಕಳ್ಳರು ಮೋದಿ ಉಪನಾಮಗಳನ್ನು ಹೊಂದಿದ್ದಾರೆ’ ಎಂಬ ವಿಡಂಬನಾತ್ಮಕ ಪ್ರತಿಕ್ರಿಯೆಗಾಗಿ ರಾಹುಲ್ ಗಾಂಧಿಯವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯಾಗಿದೆ ಮತ್ತು ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ- ಇದು ನಿಜಕ್ಕೂ ಅತಿರೇಕವಾಗಿದೆ.
ಆದಾಗ್ಯೂ, ಮೋದಿ ಹೆಸರಿನ ವ್ಯಕ್ತಿ ಹೇಗೆ ಸಮರ್ಥನೀಯವಾಗಿ ಆಕ್ರೋಶಗೊಳ್ಳಬಹುದು ಎಂಬುದು ಸ್ಪಷ್ಟವಾಗಿದೆ— ‘ಎಲ್ಲಾ ಭಯೋತ್ಪಾದಕರು ಖಾನ್ ಉಪನಾಮಗಳನ್ನು ಹೇಗೆ ಹೊಂದಿದ್ದಾರೆ' ಎಂಬುದು ಮಾನನಷ್ಟವಾಗುವುದಿಲ್ಲವೇ?" ಎಂದಿದ್ದಾರೆ.
ಹಿಂದುತ್ವದ ಬಗ್ಗೆ ಟೀಕೆ
ಹಿಂದುತ್ವವನ್ನು ಸುಳ್ಳಿನ ಅಧಾರದ ಮೇಲೆ ಕಟ್ಟಲಾಗಿದೆ ಎಂದು ಚೇತನ್ ಅಹಿಂಸಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಜೊತೆಗೆ ಬಾಬರಿ ಮಸೀದಿ, ರಾಮ ಜನ್ಮಭೂಮಿ, ಇತ್ತೀಚೆಗೆ ಸುದ್ದಿಯಲ್ಲಿರುವ ಉರಿಗೌಡ ಹಾಗೂ ನಂಜೇಗೌಡ ಬಗ್ಗೆ ಬರೆದುಕೊಂಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ನಟ ಚೇತನ ಅವರನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿ, ಕೋರ್ಟ್‌ಗೆ ಹಾಜರುಪಡಿಸಿದ್ದರು. 14 ದಿನಗಳ ನ್ಯಾಯಾಂಗ ಬಂಧನಕ್ಕೂ ಕೋರ್ಟ್ ಆದೇಶಿಸಿತ್ತು. ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದರು.
ಹಿಂದುತ್ವದ ಬಗ್ಗೆ ಚೇತನ್ ಟ್ವಿಟ್ ಏನಾಗಿತ್ತು?
‘ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ.
ಸಾವರ್ಕರ್ ಹೇಳಿಕೆ : ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಭಾರತೀಯ ರಾಷ್ಟ್ರ ಪ್ರಾರಂಭವಾಯಿತು. ಇದು ಒಂದು ಸುಳ್ಳು.
1992ರಲ್ಲಿ: ಬಾಬರಿ ಮಸೀದಿ ‘ರಾಮನ ಜನ್ಮಭೂಮಿ’. ಇದು ಒಂದು ಸುಳ್ಳು.
ಈಗ 2023ರಲ್ಲಿ: ಉರಿಗೌಡ ಮತ್ತು ನಂಜೇಗೌಡರು ಟಿಪ್ಪುವನ್ನು ಕೊಂದರು- ಇದು ಕೂಡ ಒಂದು ಸುಳ್ಳು.
ಹಿಂದುತ್ವವನ್ನು ಸತ್ಯದಿಂದ ಸೋಲಿಸಬಹುದು ಸತ್ಯವೇ ಸಮಾನತೆ’ ಎಂದು ಚೇತನ್ ಮಾಡಿರುವ ಪೋಸ್ಟ್ ವೈರಲ್ ಆಗಿತ್ತು.