Chethan Ahimsa on Munirathna: 'ಉರಿಗೌಡ- ನಂಜೇಗೌಡ' ಸಿನಿಮಾ ನಿರ್ಮಾಣಕ್ಕಿಳಿದ ಮುನಿರತ್ನ ಬಗ್ಗೆ ಚೇತನ್ ಅಹಿಂಸಾ ಪ್ರತಿಕ್ರಿಯೆ ಹೀಗಿತ್ತು
ಕರ್ನಾಟಕದ ಮುಸ್ಲಿಂ ಮೂಲದ ಐಕಾನ್ ಟಿಪ್ಪುವನ್ನು ಬ್ರಿಟಿಷ್ ಸೈನಿಕರ ಬದಲು ಉರಿಗೌಡ ಮತ್ತು ನಂಜೇಗೌಡರು ಕೊಂದರು ಎಂಬುದು ಹಿಂದುತ್ವದ ಸ್ವಯಂ-ಘೋಷಿತ ಕಟ್ಟುಕಥೆಯಾಗಿದೆ.
Chethan Ahimsa on Munirathna: ರಾಜ್ಯ ರಾಜಕಾರಣದಲ್ಲಿ ಸದ್ಯ ಸುದ್ದಿಯಲ್ಲಿರುವ ಎರಡು ಹೆಸರುಗಳೆಂದರೆ ಅದು ಉರೀಗೌಡ ಮತ್ತು ನಂಜೇಗೌಡ! ಇದಕ್ಕೆ ಕಾರಣ ಇತ್ತೀಚೆಗಷ್ಟೇ ಬಿಜೆಪಿ ನೀಡಿದ್ದ ಹೇಳಿಕೆ. ಟಿಪ್ಪು ಸುಲ್ತಾನ್ ಹತ್ಯೆಗೈದ ಒಕ್ಕಲಿಗ ವೀರರೇ ಈ ಉರಿಗೌಡ ಮತ್ತು ನಂಜೇಗೌಡ ಎಂದಿತ್ತು. ಬಿಜೆಪಿಯ ಈ ಹೇಳಿಕೆಗೆ ವಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ತೀವ್ರ ವಾಗ್ದಾಳಿ ನಡೆಸಿದ್ದು, ಒಕ್ಕಲಿಗ ಸಮುದಾಯಕ್ಕೆ ಇದು ಕಳಂಕ ಎಂದು ಆರೋಪಿಸಿದೆ. ಈ ನಡುವೆ ನಿರ್ಮಾಪಕ ಮತ್ತು ಸಚಿವ ಮುನಿರತ್ನ ಈ ಶೀರ್ಷಿಕೆಯನ್ನು ಇತ್ತೀಚೆಗಷ್ಟೇ ನೋಂದಣಿ ಮಾಡಿಸಿದ್ದಾರೆ. ಈ ವಿಚಾರದ ಬಗ್ಗೆಯೇ ನಟ ಚೇತನ್ ಅಹಿಂಸಾ ಪ್ರತಿಕ್ರಿಯೆ ನೀಡಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಚೇತನ್ ಹೇಳಿದ್ದೇನು?
ಈ ಸಂಬಂಧ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು, "ಮುನಿರತ್ನ 'ಉರಿಗೌಡ- ನಂಜೇಗೌಡ' ಎಂಬ ಶೀರ್ಷಿಕೆಯನ್ನು ನೋಂದಾಯಿಸಿದ್ದಾರೆ ಮತ್ತು ಕಾಲ್ಪನಿಕ ಜೋಡಿಯ ಮೇಲೆ ಚಲನಚಿತ್ರ ಮಾಡಲು ಉದ್ದೇಶಿಸಿದ್ದಾರೆ. ಸಿನಿಮಾ ಸಾಮಾನ್ಯವಾಗಿ 'ಮಾಯಾ ಪ್ರಪಂಚ' ಆಗಿದ್ದು ಅದು ಪ್ರೇಕ್ಷಕರನ್ನು ಕಪೋಲಕಲ್ಪಿತ ಸನ್ನಿವೇಶಗಳು ಮತ್ತು ಜೀವನಕ್ಕಿಂತ ದೊಡ್ಡ ಹಿಂಸೆಯ ಮೂಲಕ ರಂಜಿಸುತ್ತದೆ. ಫ್ಯಾಂಟಸಿ ಟ್ಯಾಗ್ ಟೀಮ್ ಉರಿ-ನಂಜೆ ಕನ್ನಡ ಚಲನಚಿತ್ರೋದ್ಯಮಕ್ಕೆ ಹೇಳಿ ಮಾಡಿಸಿದಂತೆ ಇದೆ" ಎಂದಿದ್ದಾರೆ.
ಇದಕ್ಕೂ ಮೊದಲು ಮತ್ತೊಂದು ಪೋಸ್ಟ್ ಹಾಕಿದ್ದ ಚೇತನ್, "ಹಿಂದುತ್ವದ ಸಿದ್ಧಾಂತವು ದ್ವೇಷ ಮತ್ತು ಸುಳ್ಳಿನ ಮೇಲೆ ಕಟ್ಟಲ್ಪಟ್ಟಿದೆ. ಕರ್ನಾಟಕದ ಮುಸ್ಲಿಂ ಮೂಲದ ಐಕಾನ್ ಟಿಪ್ಪುವನ್ನು ಬ್ರಿಟಿಷ್ ಸೈನಿಕರ ಬದಲು ಉರಿಗೌಡ ಮತ್ತು ನಂಜೇಗೌಡರು ಕೊಂದರು ಎಂಬುದು ಹಿಂದುತ್ವದ ಸ್ವಯಂ-ಘೋಷಿತ ಕಟ್ಟುಕಥೆಯಾಗಿದೆ. ಇಂದು ಇದು ಕಾಲ್ಪನಿಕ ಉರಿಗೌಡ ಮತ್ತು ನಂಜೇಗೌಡ ಅಷ್ಟೇ, ಆದರೆ ನಾಳೆ ಇದೇ ಮಿಕ್ಕಿ (ಮೌಸ್) ಮತ್ತು ಡ್ಯಾಫಿ (ಡಕ್) ಕಾರ್ಟೂನ್‌ಗಳಾಗುವ ಸಂಭವ ಸೃಷ್ಟಿಯಾಗಬಹುದು" ಎಂದಿದ್ದರು.
ವಾಣಿಜ್ಯ ಮಂಡಳಿಯಲ್ಲಿ ಶೀರ್ಷಿಕೆ ನೋಂದಣಿ
‘ಉರಿಗೌಡ ಮತ್ತು ನಂಜೇಗೌಡ’ ಹೆಸರುಗಳು ರಾಜಕಾರಣದಲ್ಲಿ ಸದ್ದು ಮಾಡುತ್ತಿದ್ದಂತೆ, ಈ ಎಲ್ಲ ಬೆಳವಣಿಗೆಯ ನಡುವೆಯೇ ನಿರ್ಮಾಪಕ, ಸಚಿವ ಮುನಿರತ್ನ ‘ಉರೀಗೌಡ ಮತ್ತು ನಂಜೇಗೌಡ’ ಹೆಸರನ್ನೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶೀರ್ಷಿಕೆ ನೋಂದಣಿ ಮಾಡಿಸಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಟಕ್ಕರ್ ಕೊಟ್ಟಿದ್ದಾರೆ.
ಚಂದನವನದಲ್ಲಿ ಅದ್ದೂರಿ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಮುನಿರತ್ನ ಒಡೆತನದ ವೃಷಭಾದ್ರಿ ಪ್ರೊಡಕ್ಷನ್ಸ್ ಮೂಲಕ ‘ಉರಿಗೌಡ ಮತ್ತು ನಂಜೇಗೌಡ’ ಚಿತ್ರವನ್ನು ತೆರೆಗೆ ತರಲು ಮುಂದಡಿ ಇಟ್ಟಿದ್ದಾರೆ. ಅದರ ಮೊದಲಾರ್ಥವಾಗಿ ವಾಣಿಜ್ಯ ಮಂಡಳಿಯಲ್ಲಿ ಶೀರ್ಷಿಕೆ ನೋಂದಾಯಿಸಿದ್ದಾರೆ. ಮುನಿರತ್ನ ಅವರ ಈ ನಡೆ ರಾಜ್ಯ ರಾಜಕಾರಣದಲ್ಲಿಯೂ ಟೀಕೆಗೆ ಗುರಿಯಾಗಿದೆ. ಜೆಡಿಎಸ್‌ನ ಎಚ್.ಡಿ ಕುಮಾರಸ್ವಾಮಿ ಬಿಜೆಪಿಯ ಈ ನಡೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.