ಶತ್ರು ಸಂಹಾರ, ವಾಮಾಚಾರ ನಿವಾರಣೆ ಪೂಜೆಗೆ ಖ್ಯಾತಿ ಪಡೆದ ಪ್ರಸಿದ್ಧ ದೇಗುಲಕ್ಕೆ ಭೇಟಿ ನೀಡಿದ ದರ್ಶನ್
ನಟ ದರ್ಶನ್, ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ಮಡಾಯಿ ಶ್ರೀ ತಿರುವರ್ಕ್ಕಾಟ್ಟು ಕಾವು ಭಗವತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಶತ್ರು ಸಂಹಾರ ಪೂಜೆ ಮಾತ್ರವಲ್ಲದೆ, ವಾಮಾಚಾರ ಮಾಟಮಂತ್ರ ನಿವಾರಣೆಗೂ ಪುಣ್ಯ ಕ್ಷೇತ್ರವೂ ಇದಾಗಿದೆಯಂತೆ.

Actor Darshan: ಸ್ಯಾಂಡಲ್‌ವುಡ್ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ರಿಲೀಫ್ ಮೂಡ್‌ನಲ್ಲಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆದು, ಒಂದಷ್ಟು ದಿನ ವಿಶ್ರಾಂತಿ ಪಡೆದು ಮತ್ತೆ ನಟನೆಗೆ ಮರಳಿದ್ದಾರೆ. ಈಗಾಗಲೇ ಮಿಲನಾ ಪ್ರಕಾಶ್ ನಿರ್ದೇಶನದ ಡೆವಿಲ್ ಸಿನಿಮಾದ ಶೂಟಿಂಗ್‌ನಲ್ಲಿಯೂ ದರ್ಶನ್ ಭಾಗವಹಿಸಿದ್ದಾರೆ. ಈ ಗ್ಯಾಪ್‌ನಲ್ಲಿಯೇ ಪತ್ನಿ ವಿಜಯಲಕ್ಷ್ಮೀ ಮತ್ತು ಪುತ್ರ ವಿನೀಶ್ ಜತೆಗೆ ಕೇರಳದ ಪ್ರಸಿದ್ಧ ದೇವಾಲಯಕ್ಕೆ ಆಗಮಿಸಿದ್ದಾರೆ. ಈ ದೇವಾಲಯದ ವೈಶಿಷ್ಠ್ಯತೆ ಏನೆಂದರೆ, ಇಲ್ಲಿ ಶತ್ರು ಸಂಹಾರ ಪೂಜೆ ನೆರವೇರಿಸಲಾಗುತ್ತದೆ!
ಕೇರಳದ ಕನ್ನೂರಿನಲ್ಲಿನ ದೇವಸ್ಥಾನ
ಹೌದು, ಕೇರಳದ ಕಣ್ಣೂರಿನಲ್ಲಿ ಪುರಾಣ ಪ್ರಸಿದ್ಧ ಶ್ರೀ ಮಡಾಯಿ ತಿರುವರ್ಕ್ಕಾಟ್ಟು ಕಾವು ಭಗವತಿ ದೇವಸ್ಥಾನವಿದೆ. ಈ ದೇವಸ್ಥಾನದ ಐತಿಹ್ಯದ ಕಾರಣಕ್ಕೇ ಇಲ್ಲಿ ಸಾಕಷ್ಟು ಭಕ್ತರು ನಿತ್ಯ ಆಗಮಿಸುತ್ತಾರೆ. ರಾಜಕಾರಣಿಗಳು, ಸಿನಿಮಾ ಕಲಾವಿದರೂ ದೇವರ ಮೊರೆಹೋದ ಸಾಕಷ್ಟು ಉದಾಹರಣೆಗಳಿವೆ. ಮಡಾಯಿ ಶ್ರೀ ತಿರುವರ್ಕ್ಕಾಟ್ಟು ಕಾವು ಭಗವತಿ ದೇವಸ್ಥಾನದಲ್ಲಿ ಶತ್ರು ಸಂಹಾರ ಪೂಜೆಯೇ ವಿಶೇಷ. ಇದೀಗ ಇದೇ ದೇಗುಲಕ್ಕೆ ದರ್ಶನ್ ದಂಪತಿಯೂ ಆಗಮಿಸಿದ್ದು ಶತ್ರು ಸಂಹಾರ ಪೂಜೆ ಕಾರ್ಯ ನೆರವೇರಿಸಿದ್ದಾರೆ ಎನ್ನಲಾಗುತ್ತಿದೆ.
ಮಾಟಮಂತ್ರ ನಿವಾರಣೆಗೂ ಪುಣ್ಯಕ್ಷೇತ್ರ
ರೇಷ್ಮೆ ಪಂಚೆ ಧರಿಸಿದ ದರ್ಶನ್ ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ಮಡಾಯಿ ಶ್ರೀ ತಿರುವರ್ಕ್ಕಾಟ್ಟು ಕಾವು ಭಗವತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಈ ಪೂಜಾ ವಿಧಾನವೂ ಅಷ್ಟೇ ವಿಶೇಷತೆಯಿಂದ ಕೂಡಿದೆ. ಎಂಟತ್ತು ರೀತಿಯಲ್ಲಿ ಈ ಪೂಜೆ ನಡೆದಿದ್ದು, ಇಲ್ಲಿ ಕೇವಲ ಶತ್ರು ಸಂಹಾರ ಮಾತ್ರವಲ್ಲದೆ, ವಾಮಾಚಾರ ಮಾಟಮಂತ್ರ ನಿವಾರಣೆಗೂ ಪುಣ್ಯ ಕ್ಷೇತ್ರವೂ ಇದಾಗಿದೆಯಂತೆ. ಈ ದೇಗುಲದಲ್ಲಿ ಪಾರ್ವತಿ ದೇವಿ ಉಗ್ರರೂಪದ ಭದ್ರಕಾಳಿಯ ಅವತಾರದಲ್ಲಿ ನೆಲೆಸಿದ್ದಾಳೆ ಎಂಬ ಪ್ರತೀತಿ ಇದೆ.
ಮಾಂಸಾಹಾರ ನೈವೇದ್ಯ
ಈ ದೇಗುಲದಲ್ಲಿ ಮಾಂಸಾಹಾರವನ್ನೂ ದೇವಿಗೆ ನೈವೇದ್ಯದ ರೂಪದಲ್ಲಿ ನೀಡಲಾಗುತ್ತದೆ. ಬ್ರಾಹ್ಮಣ ಅರ್ಚಕರೇ ದೇವಿಗೆ ನೈವೇದ್ಯ ಅರ್ಪಿಸುತ್ತಾರೆ. ಮಾಂಸಾಹಾರ ಸೇವಿಸುವ ಭಕ್ತರಿಗೆ ಮಾಂಸಾಹಾರವನ್ನೇ ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಸಸ್ಯಾಹಾರಿಗಳಿಗೆ ಅಕ್ಕಿ, ಬೇಳೆ, ಬೆಲ್ಲದ ಪ್ರಸಾದವಿದೆ. ರಾತ್ರಿ ಎಂಟು ಗಂಟೆಯ ನಂತರ ದೇವಸ್ಥಾನದ ಆವರಣದಲ್ಲಿ ಅರ್ಚಕರನ್ನು ಬಿಟ್ಟು ಬೇರೆ ಯಾರೂ ಸುಳಿಯುವಂತಿಲ್ಲ. ದೇವಸ್ಥಾನವನ್ನು ಪ್ರದಕ್ಷಿಣೆ ಹಾಕುವುದೂ ಸಹ ನಿಷಿದ್ಧ.


