ಕನ್ನಡ ಸುದ್ದಿ  /  ಮನರಂಜನೆ  /  ದ್ವಾರಕೀಶ್ ನಿಧನ; 2023, 2019ರಲ್ಲಿ ಸುಳ್ಳು ಸುದ್ದಿ ಪ್ರಸಾರ, ನಾನು ಬದುಕಿದ್ದೇನೆ, ಅಪಪ್ರಚಾರ ಬೇಡ ಎಂದಿದ್ದರು ಹಿರಿಯ ನಟ

ದ್ವಾರಕೀಶ್ ನಿಧನ; 2023, 2019ರಲ್ಲಿ ಸುಳ್ಳು ಸುದ್ದಿ ಪ್ರಸಾರ, ನಾನು ಬದುಕಿದ್ದೇನೆ, ಅಪಪ್ರಚಾರ ಬೇಡ ಎಂದಿದ್ದರು ಹಿರಿಯ ನಟ

ತನ್ನದೇ ಸಾವಿನ ಸುದ್ದಿಯನ್ನು ಎರಡು ಸಲ ಓದಿದ್ದರು ಕನ್ನಡ ಚಿತ್ರರಂಗ ಪ್ರಚಂಡ ಕುಳ್ಳ ದ್ವಾರಕೀಶ್. ಕಳೆದ ವರ್ಷ ಏಪ್ರಿಲ್‌ನಲ್ಲಿ, 2019ರಲ್ಲಿ ಕೂಡ ಈ ರೀತಿ ಸುಳ್ಳು ಸುದ್ದಿ ಪ್ರಕಟವಾಗಿತ್ತು. ಆಗ, ನಾನು ಬದುಕಿದ್ದೇನೆ, ಅಪಪ್ರಚಾರ ಬೇಡ ಎಂದಿದ್ದರು ಹಿರಿಯ ನಟ ದ್ವಾರಕೀಶ್. ಅದರ ನೆನಪು ಈ ವರದಿಯಲ್ಲಿದೆ.

ಕನ್ನಡ ಚಿತ್ರರಂಗದ ಪ್ರಚಂಡ ಕುಳ್ಳ ದ್ವಾರಕೀಶ್
ಕನ್ನಡ ಚಿತ್ರರಂಗದ ಪ್ರಚಂಡ ಕುಳ್ಳ ದ್ವಾರಕೀಶ್ (dwarakishchitra.com)

ಬೆಂಗಳೂರು: ನಾನು ಬದುಕಿದ್ದೇನೆ. ಅಪಪ್ರಚಾರ, ಸುಳ್ಳು ಸುದ್ದಿ ಬೇಡ ಎಂದು ಎಂದು ಹೇಳುತ್ತ ಬಂದಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ್ ಅವರು ಇಂದು (ಏಪ್ರಿಲ್ 15) ನಿಜವಾಗಿಯೂ ಇಹಲೋಕ ತ್ಯಜಿಸಿದರು. ಕಳೆದ ವರ್ಷ ಏಪ್ರಿಲ್‌ 30ರ ಆಸುಪಾಸಿನಲ್ಲಿ ದ್ವಾರಕೀಶ್ ನಿಧನದ ಸುದ್ದಿ ವ್ಯಾಪಕವಾಗಿ ಹರಡಿತ್ತು.

ಟ್ರೆಂಡಿಂಗ್​ ಸುದ್ದಿ

ದ್ವಾರಕೀಶ್‌ ಅವರು ತಮ್ಮ ಸಾವಿನ ಕುರಿತಂತೆ ಹಲವು ಸಲ ಸ್ಪಷ್ಟೀಕರಣ ಕೊಟ್ಟ ನೆನಪುಗಳನ್ನೂ ಅನೇಕರು ಸ್ಮರಿಸಿಕೊಳ್ಳುತ್ತಿದ್ದಾರೆ. ಎರಡು ಸಲ ಅವರ ನಿಧನಕ್ಕೆ ಸಂಬಂಧಿಸಿದ ಸುಳ್ಳು ಸುದ್ದಿಗಳು ಹರಡಿದ್ದವು.

ಮೊದಲ ಸಲ 2019ರ ಜುಲೈನಲ್ಲಿ ಹಿರಿಯ ನಟ ದ್ವಾರಕೀಶ್ ಅವರ ನಿಧನದ ಸುದ್ದಿ ಪ್ರಸಾರವಾಗಿದ್ದವು. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆಗ ಬಿಜೆಪಿ ನಾಯಕರೊಬ್ಬರು ದ್ವಾರಕೀಶ್ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿ ತೀವ್ರ ಟೀಕೆಗೆ ಒಳಗಾಗಿದ್ದರು. ಇದಾದ ಬಳಿಕ ನಟ ದ್ವಾರಕೀಶ್ ಅವರು ವಿಡಿಯೋ ಹೇಳಿಕೆ ನೀಡಿ, ತಾನು ಬದುಕಿದ್ದೇನೆ ಎಂದು ಹೇಳಿಕೊಂಡಿದ್ದರು.

ನಟ ದ್ವಾರಕೀಶ್ ಅವರು 2019ರಲ್ಲಿ ನೀಡಿದ ಹೇಳಿಕೆ ಹೀಗಿತ್ತು..

"ನಮಸ್ಕಾರ. ನಿಮ್ಮ ದ್ವಾರಕೀಶ್, ನಿಮ್ಮ ಕರ್ನಾಟಕದ ಕುಳ್ಳ ಆರೋಗ್ಯವಾಗಿ ಇದ್ದೇನೆ. ಹುಷಾರಾಗಿ ಇದ್ದೇನೆ. ಯಾವ ತರವಾದ ಸುಳ್ಳುವದಂತಿಗಳಿಗೆ ನಿಗಾ ಕೊಡಬೇಡಿ. ಏನೇ ಆದರೂ ನಿಮಗೆ ಗೊತ್ತಾಗುತ್ತೆ. ನಿಮ್ಮಗಳೆಲ್ಲರ ಪ್ರೀತಿ ವಿಶ್ವಾಸ, ಆಶೀರ್ವಾದದಿಂದ ನಿಮ್ಮ ದ್ವಾರಕೀಶ್ ಚೆನ್ನಾಗಿದ್ದಾನೆ. ಚೆನ್ನಾಗಿದ್ದೀನಿ. ಚೆನ್ನಾಗಿರ್ತೀನಿ. ಎಲ್ಲ ಆ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ. ನಮಸ್ಕಾರ" ಎಂದು ದ್ವಾರಕೀಶ್ ಅಂದು ಹೇಳಿದ್ದರು. ಇದಕ್ಕೂ ಮೊದಲು 2018ರಲ್ಲಿ ಅವರಿಗೆ ಸ್ವಲ್ಪ ಅನಾರೋಗ್ಯ ಕಾಡಿತ್ತು. ಅದಕ್ಕೆ ಅವರು ಚಿಕಿತ್ಸೆಯನ್ನೂ ಪಡೆದಿದ್ದರು.

ಕಳೆದ ವರ್ಷ ಏಪ್ರಿಲ್‌ನಲ್ಲಿ ದ್ವಾರಕೀಶ್ ನಿಧನದ ಸುಳ್ಳುಸುದ್ದಿ

ಇದಾಗಿ, ಕಳೆದ ವರ್ಷ ಏಪ್ರಿಲ್‌ 30 ರಂದು ಎರಡನೇ ಸಲ ದ್ವಾರಕೀಶ್ ನಿಧನದ ಸುಳ್ಳು ಸುದ್ದಿ ಹರಡಿತ್ತು. ಸೋಷಿಯಲ್ ಮೀಡಿಯಾಗಳಲ್ಲಿ ಈ ಸುದ್ದಿ ವ್ಯಾಪಕವಾಗಿ ಹರಡಿದ್ದಲ್ಲದೇ ಕಳವಳ ಮೂಡಿಸಿತ್ತು. ಆಗಲೂ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ದ್ವಾರಕೀಶ್, ನಾನು ನಿಮ್ಮ ದ್ವಾರಕೀಶ್ ಎಂದು ಬಹಳ ಆರಾಮವಾಗಿ ಬದುಕಿದ್ದೇನೆ ಎಂದು ಹೇಳಿದ್ದರು. ಎಕ್ಸ್‌ಪ್ರೆಸ್ ಸಿನಿಮಾದ ಪತ್ರಕರ್ತೆ ಎ ಶಾರದಾ ಅವರು ಈ ವಿಡಿಯೋ ಶೇರ್ ಮಾಡಿಕೊಂಡಿದ್ದರು.

“ಎಲ್ಲರಿಗೂ ನಮಸ್ಕಾರ, ನಮಸ್ಕಾರ, ನಮಸ್ಕಾರ… ನಾನು ದ್ವಾರಕೀಶ್, ನೀವು ಸಾಕಿದ ದ್ವಾರಕೀಶ್, ನೀವು ಬೆಳೆಸಿದ ದ್ವಾರಕೀಶ್‌, ಚೆನ್ನಾಗಿದ್ದೇನೆ. ನಿಮ್ಮಗಳೆಲ್ಲರ ಆಶೀರ್ವಾದ ನನಗೆ ಬೇಕು. ಗಟ್ಟಿಮುಟ್ಟಾಗಿದ್ದೇನೆ. ಯಾತರದ ಚಿಂತೆಯೂ ಇಲ್ಲ. ನಗುನಗುತಾ ಇದ್ದೇನೆ. ನಿಮ್ಮ ವಿಶ್ವಾಸ, ನಿಮ್ಮ ಪ್ರೀತಿ ಇದೇ ರೀತಿ ಇರಲಿ. ನಿಮ್ಮ ಆಶೀರ್ವಾದ ಇರುವವರೆಗೂ ನನಗೇನೂ ಆಗಲ್ಲ. ಐ ಆಮ್ ಕ್ವೈಟ್ ಆಲ್‌ರೈಟ್. ಐ ಆಮ್ ಫೈನ್‌” ಎಂದು ಅತ್ಯಂತ ವಿಶ್ವಾಸದೊಂದಿಗೆ ಹೇಳಿದ್ದರು.

ಹೀಗೆ ಎರಡು ಸಲ ತನ್ನ ಸಾವಿನ ಸುದ್ದಿ ಪ್ರಸಾರವಾದಾಗಲೂ, ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ವಿನಂತಿ ಮಾಡಿದ್ದರು ಹಿರಿಯ ನಟ, ಕನ್ನಡಚಿತ್ರರಂಗದ ಪ್ರಚಂಡ ಕುಳ್ಳ ದ್ವಾರಕೀಶ್. ಅವರು ಇನ್ನು ನೆನಪು ಮಾತ್ರ.

ಕನ್ನಡ ಚಲನಚಿತ್ರ ಸುದ್ದಿ, ಟಿವಿ ಧಾರಾವಾಹಿಗಳು, ಒಟಿಟಿ, ವೆಬ್‌ ಸಿರೀಸ್, ಸಿನಿಮಾ ವಿಮರ್ಶೆ, ಸ್ಯಾಂಡಲ್‌ವುಡ್, ಬಾಲಿವುಡ್, ಹಾಲಿವುಡ್, ಟಾಲಿವುಡ್, ಕಾಲಿವುಡ್ ಲೋಕದ ತಾಜಾ ವಿದ್ಯಮಾನಗಳಿಗೆ 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಮನರಂಜನೆ ವಿಭಾಗ ನೋಡಿ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point