Prakash Raj: ನಮ್ಮದೇ ತಪ್ಪಿಂದ ಮಕ್ಕಳ ಉಸಿರುಗಟ್ಟುತ್ತಿದೆ! ಇಂದಿನ ಮಕ್ಕಳು ಮತ್ತು ಭವಿಷ್ಯದ ಕಟು ವಾಸ್ತವ ತೆರೆದಿಟ್ಟ ನಟ ಪ್ರಕಾಶ್ ರಾಜ್
Prakash Raj: ನಟ ಪ್ರಕಾಶ್ ರಾಜ್ ಇದೀಗ ಸಿನಿಮಾ, ರಾಜಕಾರಣ ಹೊರತುಪಡಿಸಿ ಮಕ್ಕಳು ಮತ್ತು ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ನಾಳೆಯ ಭವಿಷ್ಯಕ್ಕಾಗಿ ಮಕ್ಕಳು ರೂಪುಗೊಳ್ಳುತ್ತಿದ್ದಾರೆಯೇ? ಈ ಹಂತದಲ್ಲಿ ಪೋಷಕರ ಜವಾಬ್ದಾರಿಗಳೇನು? ಎಂಬ ಕಟು ವಾಸ್ತವವನ್ನು ತೆರೆದಿಟ್ಟಿದ್ದಾರೆ.

Prakash Raj About Parenting: ಬಹುಭಾಷಾ ನಟ ಪ್ರಕಾಶ್ ರಾಜ್ ಕೇವಲ ಓರ್ವ ನಟ ಮಾತ್ರವಲ್ಲ, ಅವರೊಳಗೊಬ್ಬ ಅದ್ಭುತ ಮಾತುಗಾರನ ಜತೆಗೆ, ಅತ್ಯಾಪ್ತವಾಗಿ ಕೇಳುಗ ಇದ್ದಾನೆ. ಅನಿಸಿದ್ದನ್ನು ಅಷ್ಟೇ ಮನ ಮುಟ್ಟುವಂತೆ ಹೇಳುವ ಅವರ ಧಾಟಿಯೂ ಅಷ್ಟೇ ಗಾಢವಾಗಿರುತ್ತದೆ. ರಾಜಕೀಯ, ಸಿನಿಮಾ ಮಾತ್ರವಲ್ಲದೆ, ಪ್ರಸ್ತುತತೆಯ ಜತೆಗೂ ಅವರ ಮಾತನಾಡುತ್ತಾರೆ. ನೇರವಾಗಿಯೇ ಪ್ರತಿಕ್ರಿಯೆ ನೀಡುತ್ತಾರೆ. ಸರಿ ಅನಿಸಿದ್ದನ್ನು ಸರಿ ಎನ್ನುತ್ತ, ತಪ್ಪಾಗಿದ್ದನ್ನು ತಪ್ಪು ಎಂದು ಹೇಳಿದ ಮತ್ತು ಅಷ್ಟೇ ಕಟು ಟೀಕೆಗಳನ್ನು ಎದುರಿಸಿದ ಸಾಕಷ್ಟು ಉದಾಹರಣೆಗಳಿವೆ. ಈಗ ಇದೇ ಪ್ರಕಾಶ್ ರಾಜ್ ಮಕ್ಕಳ ಪಾಲನೆ ಪೋಷಣೆಯಲ್ಲಿ ತೊಡಗಿರುವ ಪೋಷಕರ ಜವಾಬ್ದಾರಿಗಳ ಬಗ್ಗೆ ಮಾತನಾಡಿದ್ದಾರೆ.
ಇಂದಿನ ಮಕ್ಕಳು ಮತ್ತು ಪೋಷಕರ ಬಗ್ಗೆ ನಟ ಪ್ರಕಾಶ್ ರಾಜ್ ಆಡಿದ ಮಾತುಗಳ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಕ್ಕಳನ್ನು ನಾವು ಹೇಗೆ ಬೆಳೆಸುತ್ತಿದ್ದೇವೆ? ಭವಿಷ್ಯದ ಮಕ್ಕಳನ್ನಾಗಿ ನಿರ್ಮಾಣ ಮಾಡುತ್ತಿದ್ದೇವೆಯೇ? ಮಕ್ಕಳು ಪ್ರಸ್ತುತ ಆಗುವುದಕ್ಕೆ ನಾವು ಅವರನ್ನು ಬೆಳೆಸುತ್ತಾ ಇದ್ದೀವಾ? ಎಂದು ಒಂದಷ್ಟು ಪ್ರಶ್ನೆಗಳನ್ನು ಪೋಷಕರ ಮುಂದಿಟ್ಟಿದ್ದಾರೆ. ಇದರ ಜತೆಗೆ ನಮ್ಮ ಮಕ್ಕಳನ್ನು ನಾವೇ ಬೆಳೆಸುತ್ತಿಲ್ಲ, ಅವರಿಗೆ ನಾವೇ ಸಮಯ ಕೊಡುತ್ತಿಲ್ಲ ಎಂದೂ ವಾಸ್ತವದ ಮಾತುಗಳನ್ನಾಡಿದ್ದಾರೆ ಪ್ರಕಾಶ್ ರಾಜ್. ಹಾಗಾದರೆ, ಅವರು ಆಡಿದ ಮಾತಿನ ವಿವರ ಇಲ್ಲಿದೆ.
ಪ್ರಕಾಶ್ ರಾಜ್ ಹೇಳಿದ್ದೇನು?
“ನಾಳೆಯ ಭವಿಷ್ಯಕ್ಕಾಗಿ ಮಕ್ಕಳನ್ನು ರೂಪಿಸುವುದು ಅಲ್ಲ, ಇವತ್ತು ಅಂತ ಒಂದಿದೆ. ಒಂದು ಪ್ರಪಂಚ ಇದೆ. ಅದು ಹಸಿವಿನ ಪ್ರಪಂಚ, ಒಂದು ಕುತೂಹಲದ ಪ್ರಪಂಚ, ತನ್ನನ್ನು ತಾನು ರೂಪಿಸಿಕೊಳ್ಳುವ ಪ್ರಪಂಚ. ಮಕ್ಕಳಿಗೆ ನಾವು ಕಲಿಸಬೇಕಾಗಿಲ್ಲ. ಗ್ರಹಿಕೆಯನ್ನು ಸೂಕ್ಷ್ಮಗೊಳಿಸಬೇಕು ಅಷ್ಟೇ. ಆ ಕೆಲಸ ಇಂದು ನಡೆಯುತ್ತಾ ಇಲ್ಲ. ಎಲ್ಲಿಯತನಕ ಈ ಕೆಲಸ ನಡೆಯುವುದಿಲ್ಲವೋ, ನಮ್ಮ ಭಯಗಳನ್ನು, ನಮ್ಮ ಒತ್ತಡಗಳನ್ನು ಭವಿಷ್ಯದ ಕಲ್ಪನೆ ಇರುವ ನಮ್ಮ ಮೂರ್ಖತೆಯನ್ನೇ ಆ ಮಕ್ಕಳಲ್ಲಿ ಬೆಳೆಸ್ತಾ ಇರುತ್ತೇವೆಯೇ ಹೊರತು, ಭವಿಷ್ಯದಲ್ಲಿ ಅವರು ರೆಲೆವೆಂಟ್ ಆಗಿರ್ತಾರಾ?” ಎಂದು ಪ್ರಶ್ನೆ ಮಾಡಿದ್ದಾರೆ.
“ಒಂದು ಶಿಕ್ಷಣ ವ್ಯವಸ್ಥೆ, ಒಂದು ಪಠ್ಯ ಕ್ರಮವನ್ನು ಏನೇ ಕಟ್ಟಬೇಕಾದರೂ, ಅದು ಭವಿಷ್ಯವನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಾ ಇದೆಯಾ ನಮಗೆ? ಹತ್ತು ವರ್ಷಗಳ ನಂತರ ಪ್ರಪಂಚ ಹೇಗೆ ಇರುತ್ತದೆ, ಹತ್ತು ವರ್ಷಗಳ ನಂತರ ಯಾವ್ಯಾವ ಅವಶ್ಯಕತೆಗಳು ಇರುತ್ತವೆ, ಹತ್ತು ವರ್ಷಗಳ ನಂತರ ಆ ಮಕ್ಕಳು ಪ್ರಸ್ತುತ ಆಗುವುದಕ್ಕೆ ನಾವು ಅವರನ್ನು ಬೆಳೆಸುತ್ತಾ ಇದ್ದೀವಾ? ಯಾರು ಬೆಳೆಸ್ತಾ ಇದ್ದಾರೆ" ಎಂದಿದ್ದಾರೆ ಪ್ರಕಾಶ್ ರಾಜ್.
ಮಕ್ಕಳ ಉಸಿರುಗಟ್ಟುತ್ತಿದೆ..
“ಮಕ್ಕಳನ್ನು ಶಾಲೆಗೆ ಕಳಿಸ್ತೀವಿ, ಪಾಠಕ್ಕೆ ಕಳಿಸ್ತೀವಿ, ರಾತ್ರಿ ಮಲಗಿಕೊಳ್ತೇವೆ. ಬೆಳಿಗ್ಗೆ ಒಂದು ಗಂಟೆ, ಮಧ್ಯಾಹ್ನ ಒಂದು ಗಂಟೆ, ಸಾಯಂಕಾಲ ಒಂದೆರಡು ಗಂಟೆ ಸಿಗಬಹುದು ಅಷ್ಟೇ. ಆದರೆ ಅವರಿಗೆ ಟೈಮ್ಕೊಡುತ್ತಾ ಇಲ್ಲ. ಯಾರು ಯಾರೋ ಬೆಳೆಸ್ತಾ ಇದ್ದಾರೆ ನಮ್ಮ ಮಕ್ಕಳನ್ನು. ಬೆಳಿಗ್ಗೆ ಶಾಲೆ, ಮಧ್ಯಾಹ್ನದ ನಂತ್ರ ಟ್ಯೂಷನ್, ಮಕ್ಕಳಿಗೆ ಉಸಿರುಗಟ್ಟುವ ವಾತಾವರಣ ಆಗ್ತಾ ಇದೆ. ಒಂದು ಶಾಲೆಗೋ ಅಥವಾ ಸಿಸ್ಟಮ್ಗೆ ಹಾಕಿ ಬಿಟ್ರೆ ಮುಗಿತು, ಆ ಶಾಲೆಯ ಜವಾಬ್ದಾರಿ ಅಂದುಕೊಳ್ತಾರೆ. ಮಕ್ಕಳ ಜೊತೆ ನಾವು ಮಾತಾಡ್ತಾ ಇಲ್ಲ, ಅವರನ್ನು ಕೇಳಿಸಿಕೊಳ್ತಾ ಇಲ್ಲ” ಎಂದಿದ್ದಾರೆ ಪ್ರಕಾಶ್ ರಾಜ್.
ಪ್ರಕಾಶ್ ರಾಜ್ ವಿಡಿಯೋ
