ಹಿರಿಯ ನಟ ಸರಿಗಮ ವಿಜಿ ಆರೋಗ್ಯ ಸ್ಥಿತಿ ಗಂಭೀರ; ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯ್
ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ಆರೋಗ್ಯದಲ್ಲಿ ಏರುಪೇರಾಗಿದೆ. ಅವರ ಮಗ ರೋಹಿತ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕಳೆದ ನಾಲ್ಕು ದಿನಗಳಿಂದಲೂ ಚಿಕಿತ್ಸೆ ಪಡೆಯುತ್ತಲೇ ಇದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ಆರೋಗ್ಯದಲ್ಲಿ ಏರುಪೇರಾಗಿದೆ. ಕಳೆದ ನಾಲ್ಕು ದಿನಗಳಿಂದಲೂ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಲೇ ಇದ್ದಾರೆ. ಯಶವಂತಪುರದ ಬಳಿಯ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಸರಿಗಮ ವಿಜಯ್ ಮಗ ತನ್ನ ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದು ಐಸಿಯುನಲ್ಲಿದ್ದಾರೆ ಎಂದು ಹೇಳಿದ್ದಾರೆ.
ಹಾಸ್ಯನಟ ವಿಜಯ್ ಆರೋಗ್ಯದಲ್ಲಿ ಏರುಪೇರು
ಕನ್ನಡ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ ಇವರ ಮುಖ ಎಲ್ಲರಿಗೂ ಚಿರಪರಿಚಿತ. ಇವರ ಕಾಮಿಡಿಯನ್ನು ನೋಡಿ ನಕ್ಕವರು ಹಲವರಿದ್ದಾರೆ. ಹಳೆ ಕಾಲದ ಸಿನಿಮಾದಿಂದ ಹಿಡಿದು ಈ ಕಾಲದವರೆಗೂ ಅವರು ಹಲವು ಸಿನಿಮಾಗಳಲ್ಲಿ ಅಭಿನಯಿಸಿ ಜನರ ಮನ ಗೆದ್ದಿದ್ದಾರೆ.
ಹಲವು ಸಿನಿಮಾಗಳಲ್ಲಿ ನಟ ಸರಿಗಮ ವಿಜಿ ಅಭಿನಯಿಸಿದ್ದು, ತಮ್ಮ ಹಾಸ್ಯದಿಂದ ಎಲ್ಲರನ್ನೂ ನಕ್ಕು ನಲಿಸಿದ್ದಾರೆ. 1980ರಲ್ಲಿ ಗೀತಪ್ರಿಯಾ ನಿರ್ದೇಶನದ ‘ಬೆಳವಳದ ಮಡಿಲಲ್ಲಿ’ ಸಿನಿಮಾದಲ್ಲಿ ಚಿಕ್ಕದೊಂದು ಪಾತ್ರ ಮಾಡುವ ಮೂಲಕ ಸಿನಿ ಲೋಕಕ್ಕೆ ಇವರು ಕಾಲಿಟ್ಟಿದ್ದರು. ತದ ನಂತರ ಅವಕಾಶಗಳು ಇವರನ್ನು ಹುಡುಕಿ ಬಂತು. ಸಾಕಷ್ಟು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡು ಇನ್ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ಇವರು ನಟನೆ ಮಾಡಿದರು. ಇದರಿಂದಾಗಿ ಸಾಕಷ್ಟು ಜನರಿಗೆ ಇವರು ಪರಿಚಿತರು.
ಧಾರಾವಾಹಿಗಳಲ್ಲೂ ಅಭಿನಯಿಸಿದ ವಿಜಯ್
ವಿಜಯ್ ನಟನೆ ಮಾತ್ರವಲ್ಲ ಸಿನಿಮಾ ಕ್ಷೇತ್ರಕ್ಕೆ ಇನ್ನೂ ಬೇರೆ ರೀತಿಯಲ್ಲಿಯೂ ಕೊಡುಗೆ ನೀಡಿದ್ದಾರೆ. ಸುಮಾರು 80 ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಸಿನಿಮಾ ಮಾತ್ರವಲ್ಲ ನಂತರ ಇವರು ಕಿರುತೆರೆಯಲ್ಲೂ ಕಾಣಿಸಿಕೊಂಡಿದ್ದಾರೆ. ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ.ಇನ್ನೂ ಸ್ಯಾಂಡಲ್ ವುಡ್ ಖ್ಯಾತ ಹಾಸ್ಯನಟ ಸರಿಗಮ ವಿಜಿ ಕುಟುಂಬ ಆರ್ಥಿಕವಾಗಿ ಸಮಸ್ಯೆ ಅನುಭವಿಸುತ್ತಿದ್ದು ಸಹಾಯದ ಅವಶ್ಯಕತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಕನ್ನಡ ಕಾಮಿಡಿ ನಟರ ಸಾಲಿನಲ್ಲಿ ಕಾಣಿಸಿಕೊಂಡ ಸರಿಗಮ ವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಲೇ ಇದ್ದಾರೆ. ನಟ ಸರಿಗಮ ವಿಜಿ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಮುಂದುವರೆಸಲಾಗಿದೆ.
