Anupama Parameswaran: ಧ್ರುವ್ ವಿಕ್ರಮ್ ಜೊತೆ ಡೇಟ್ ಮಾಡ್ತಿದ್ದಾರಾ ಅನುಪಮಾ ಪರಮೇಶ್ವರನ್, ಲೀಕ್ ಆಯ್ತು ಕಿಸ್ಸಿಂಗ್ ಫೋಟೊ
Anupama Parameswaran Dating Rumour: ದಕ್ಷಿಣ ಭಾರತದ ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಹಾಗೂ ಧ್ರುವ್ ವಿಕ್ರಮ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಎಲ್ಲೆಡೆ ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ಕೊಡುವಂತೆ ಈ ಜೋಡಿ ಕಿಸ್ ಮಾಡುತ್ತಿರುವ ಫೋಟೊ ಒಂದು ಈಗ ವೈರಲ್ ಆಗಿದೆ.

ನಟಿ ಅನುಪಮಾ ಪರಮೇಶ್ವರನ್ ಹಾಗೂ ಧ್ರುವ್ ವಿಕ್ರಮ್ ಮಾರಿ ಸೆಲ್ವರಾಜ್ ನಿರ್ದೇಶನದ ‘ಬೈಸನ್‘ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಜೋಡಿಯ ನಡುವೆ ಸಮ್‌ಥಿಂಗ್ ಸಮ್‌ಥಿಂಗ್ ನಡೆಯುತ್ತಿದೆ ಎಂಬ ಗಾಳಿಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇದಕ್ಕೆ ಇಂಬು ನೀಡುವಂತೆ ರೆಡ್ಡಿಟ್ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಈ ಜೋಡಿಯ ಕಿಸ್ಸಿಂಗ್ ಫೋಟೊವೊಂದು ವೈರಲ್ ಆಗಿದೆ.
ಈ ಫೋಟೊ ನೋಡಿದ ಹಲವರು ಧ್ರುವ್ ಹಾಗೂ ಅನುಪಮಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದರೆ, ಕೆಲವರು ಇಲ್ಲ ಇದು ಬೈಸನ್ ಚಿತ್ರದ ಪ್ರಚಾರದ ಗಿಮಿಕ್ ಎನ್ನುತ್ತಿದ್ದಾರೆ. ಅಂದ ಹಾಗೆ ಧ್ರುವ್ ವಿಕ್ರಮ್ ತಮಿಳಿನ ಖ್ಯಾತ ನಟ ವಿಕ್ರಮ್ ಅವರ ಪುತ್ರ.
ಅನುಪಮಾ, ಧ್ರುವ್ ಡೇಟಿಂಗ್ ಮಾಡುತ್ತಿದ್ದಾರಾ?
ರೆಡ್ಡಿಟ್‌ನ ಮಾಲಿವುಡ್, ಕಾಲಿವುಡ್ ಗ್ರೂಪ್‌ಗಳಲ್ಲಿ ಅನುಪಮಾ ಪರಮೇಶ್ವರನ್ ಎಂಬ ಹೆಸರಿನ ಬಳಕೆದಾರರು ಬ್ಲೂ ಮೂನ್ ಎಂಬ ಹೆಸರಿನಲ್ಲಿ ಸ್ಪೂಟಿ ಫೈ ಮಾಡಿದ ಲಿಸ್ಟ್‌ನ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದಾರೆ. ತಮ್ಮ ಇಷ್ಟದ ನಟ–ನಟಿಯರ ಹೆಸರಿನಲ್ಲಿ ಅಭಿಮಾನಿಗಳು ಖಾತೆ ತೆರೆಯುವುದು ಸಾಮಾನ್ಯವಾದರೂ ಈ ಖಾತೆಯ ಡಿಸ್‌ಪ್ಲೇ ಇಮೇಜ್ ಗಾಸಿಪ್ ಹುಟ್ಟು ಹಾಕುವಂತೆ ಮಾಡಿದೆ.
ಈ ಚಿತ್ರದಲ್ಲಿ ಅನುಪಮಾರಂತೆ ಕಾಣುವಂತೆ ಮಹಿಳೆಯು ಧ್ರುವ್‌ರಂತೆ ಕಾಣುವ ವ್ಯಕ್ತಿಗೆ ಮುತ್ತಿಡುತ್ತಿದ್ದಾರೆ. ಸ್ಕ್ರೀನ್‌ಶಾಟ್ ಅಥವಾ ಚಿತ್ರದ ಸತ್ಯಾಸತ್ಯತೆಯನ್ನು ಹಿಂದೂಸ್ತಾನ್ ಟೈಮ್ಸ್ ಪರಿಶೀಲಿಸಲು ಸಾಧ್ಯವಾಗದಿದ್ದರೂ, ಅಭಿಮಾನಿಗಳು ಅವರು ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿಯನ್ನು ನಂಬಿದಂತೆ ಕಾಣುತ್ತಿದೆ. ಆದರೆ ಈ ವದಂತಿ ಬಗ್ಗೆ ಅನುಪಮಾ ಆಗಲಿ, ಧ್ರುವ್ ಆಗಲಿ ಈವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.
ಈ ಪೋಸ್ಟ್‌ಗೆ ರೆಡ್ಡಿಟ್‌ನಲ್ಲಿ ಅಭಿಮಾನಿಗಳ ಕಾಮೆಂಟ್ಸ್ ಹೀಗಿದೆ
‘ಓ ದೇವರೇ. ಅನುಪಮಾ ಪರಮೇಶ್ವರನ್ ಮತ್ತು ಧ್ರುವ ವಿಕ್ರಮ್ ಡೇಟಿಂಗ್ ಮಾಡುತ್ತಿದ್ದಾರಾ?‘ ಎಂದು ಈ ಸ್ಕ್ರೀನ್‌ಶಾಟ್ ಹಂಚಿಕೊಂಡ ವ್ಯಕ್ತಿ ಶೀರ್ಷಿಕೆ ಬರೆದುಕೊಳ್ಳುವ ಮೂಲಕ ಪ್ರಶ್ನೆ ಕೇಳಿದ್ದಾರೆ. ‘ಈಗ ಅವರು ಈ ಪ್ಲೇಪಟ್ಟಿಯನ್ನು ಅಳಿಸಿದ್ದಾರೆ ಅಥವಾ ಪ್ರೈವೇಸಿ ಸೆಟ್ಟಿಂಗ್ ಮಾಡಿರಬಹುದು ಎಂದು ನಾನು ಭಾವಿಸುತ್ತೇನೆ‘ ಎಂದು ಪ್ಲೇಪಟ್ಟಿಗಾಗಿ ಹುಡುಕಿದ ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ಪ್ಲೇಪಟ್ಟಿಯನ್ನು ಈಗ ರಿಮೂವ್ ಮಾಡಲಾಗಿದೆ. ಆದ್ದರಿಂದ ಈ ವಿಚಾರ ನಿಜ ಎಂದು ನಾನು ಭಾವಿಸುತ್ತೇನೆ‘ ಎಂದು ಬರೆದಿದ್ದಾರೆ.
ಆದಾಗ್ಯೂ, ಕೆಲವರು ಅನುಪಮಾ ಅಥವಾ ಧ್ರುವ್ ಸ್ಪಾಟಿಫೈನಲ್ಲಿ ತಮ್ಮ ನಿಜವಾದ ಹೆಸರುಗಳು ಅಥವಾ ಚಿತ್ರಗಳನ್ನು ಬಳಸುತ್ತಾರೆ ಎಂದು ಭಾವಿಸುವುದು ಮೂರ್ಖತನ ಎಂದು ಹೇಳಿದ್ದಾರೆ. ‘ಇದು ಅವರ ಹೊಸ ಚಿತ್ರಕ್ಕೆ ಪ್ರಚಾರವೇ? ಅವರು ತಮ್ಮ ಸ್ಪಾಟಿಫೈ ಪ್ಲೇಪಟ್ಟಿಯನ್ನು ಸಾರ್ವಜನಿಕರಿಗಾಗಿ ಏಕೆ ಹಂಚಿಕೊಳ್ಳುತ್ತಾರೆ‘ ಎಂದು ಇನ್ನೊಬ್ಬ ಅಭಿಮಾನಿ ಅನುಮಾನ ವ್ಯಕ್ತಪಡಿಸಿದ್ದಾರೆ. ‘ಇದು ನಿಜವಾಗಿಯೂ ಅಸಂಬದ್ಧ. ನನ್ನ ಪ್ರಕಾರ, ಅವರು ತಮ್ಮ ಪೂರ್ಣ ಹೆಸರುಗಳು ಮತ್ತು ಆಲ್ಬಮ್ ಕವರ್ ಚುಂಬನದೊಂದಿಗೆ ಸಾರ್ವಜನಿಕ ಸ್ಪಾಟಿಫೈ ಪ್ಲೇಪಟ್ಟಿಯನ್ನು ಏಕೆ ಬಳಸುತ್ತಾರೆ?‘ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.
ಅನುಪಮಾ ಹಾಗೂ ಧ್ರುವ್ ಮುಂದಿನ ಸಿನಿಮಾಗಳು
ಅನುಪಮಾ ಡ್ರ್ಯಾಗನ್ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಬೈಸನ್ ಜೊತೆ ಲಾಕ್‌ಡೌನ್, ಪರಧಾ, ಪೆಟ್ ಡಿಟೆಕ್ಟಿವ್ ಮತ್ತು ಜೆಎಸ್‌ಕೆ ಟ್ರುತ್ ಶಲ್ ಆಲ್ವೇಸ್ ಚಿತ್ರಗಳು ಅವರ ಕೈಯಲ್ಲಿವೆ. ಮಹಾನ್‌ನಲ್ಲಿ ಕಾಣಿಸಿಕೊಂಡ ಧ್ರುವ್, ಬೈಸನ್‌ಗೆ ಮಾತ್ರ ಸಹಿ ಹಾಕಿದ್ದಾರೆ.
ಬೈಸನ್ ಚಿತ್ರದಲ್ಲಿ ಅನುಪಮಾ–ಧ್ರುವ್ ಜೊತೆ ಲಾಲ್, ಪಶುಪತಿ, ರಾಜಿಶಾ ವಿಜಯನ್, ಹರಿ ಕೃಷ್ಣನ್, ಅಜಗಂ ಪೆರುಮಾಳ್ ಮತ್ತು ಕಲೈಯರಸನ್ ಮೊದಲಾದವರು ನಟಿಸಲಿದ್ದಾರೆ.
