Bhavana about Marriage: ಮದುವೆಯಾಗಿಲ್ಲ ಎಂದರೆ ಜೀವನ ಹಾಳಾಗುವುದಿಲ್ಲ..ಮದುವೆ ಬಗ್ಗೆ ಭಾವನಾ ರಾಮಣ್ಣ ಮಾತು
''ಮದುವೆ ಆಗಿಲ್ಲವೆಂದರೆ ಜೀವನ ಹಾಳಾಯ್ತು ಎಂಬ ಭಾವನೆ ನನಗೆ ಇಲ್ಲ. ಮದುವೆಯಾಗಿ ಪತಿಯನ್ನು ಕಳೆದುಕೊಂಡವನ್ನು ನೋಡಿದ್ದೇನೆ, ಇನ್ನೂ ಕೆಲವರ ಕಷ್ಟದ ದಿನಗಳನ್ನು ನೋಡಿದ್ದೇನೆ. ಇದನ್ನೆಲ್ಲಾ ನೆನಪಿಸಿಕೊಂಡರೆ ನಾನು ಸೇಫ್ ಇದ್ದೇನೆ ಅನ್ನಿಸುತ್ತದೆ. ಇರುವುದರಲ್ಲಿ ಸದ್ಯಕ್ಕೆ ಖುಷಿಯಾಗಿದ್ದೇನೆ'' ಎಂದು ಭಾವನಾ ಹೇಳಿದ್ದಾರೆ.
'ಚಂದ್ರಮುಖಿ ಪ್ರಾಣಸಖಿ' ಸಿನಿಮಾ ಎಂದರೆ ನಮ್ಮ ಕಣ್ಣ ಮುಂದೆ ಬರುವುದು ದಾವಣಗೆರೆ ಚೆಲುವೆ ಭಾವನಾ ರಾಮಣ್ಣ. ಕೆಲವು ದಿನಗಳಿಂದ ಸಿನಿಮಾಗಳಿಂದ ದೂರವಾಗಿದ್ದ ಭಾವನಾ ಈಗ ಮತ್ತೆ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಕಿರುತೆರೆಯಲ್ಲೂ ಸಕ್ರಿಯರಾಗಿದ್ದಾರೆ. ಭರತನಾಟ್ಯ ಕಲಾವಿದೆಯೂ ಆಗಿರುವ ಭಾವನಾ ಅನೇಕ ವೇದಿಕೆಗಳಲ್ಲಿ ಕಾರ್ಯಕ್ರಮ ಕೂಡಾ ನೀಡಿದ್ದಾರೆ.
ಭಾವನಾ ಮೊದಲ ಹೆಸರು ನಂದಿನಿ ರಾಮಣ್ಣ. ನಿರ್ದೇಶಕ ಕೋಡ್ಲು ರಾಮಕೃಷ್ಣ, ನಂದಿನಿ ಹೆಸರನ್ನು ಭಾವನಾ ರಾಮಣ್ಣ ಎಂದು ಬದಲಿಸಿದರು. 1996ರಲ್ಲಿ ತುಳು ಚಿತ್ರದ ಮೂಲಕ ನಟನೆ ಆರಂಭಿಸಿದ ಭಾವನಾ 1997ರಲ್ಲಿ 'ನೀ ಮುಡಿದ ಮಲ್ಲಿಗೆ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದರು. ನಂತರ ನಂ 1, ಚಂದ್ರಮುಖಿ ಪ್ರಾಣಸಖಿ, ದೇವೀರಿ, ದೀಪಾವಳಿ, ಎಲ್ಲರ ಮನೆ ದೋಸೆನೂ, ಕುರಿಗಳು ಸಾರ್ ಕುರಿಗಳು, ಪರ್ವ, ನಿನಗಾಗಿ, ಚೆಲ್ವಿ, ರಾಂಗ್ ನಂಬರ್, ಪ್ರೀತಿ ಪ್ರೇಮ ಪ್ರಣಯ, ಶಾಂತಿ, ಫ್ಯಾಮಿಲಿ, ಇಂತಿ ನಿನ್ನ ಪ್ರೀತಿಯ, ಆಪ್ತರಕ್ಷಕ, ಚಿಂಗಾರಿ, ಭಾಗೀರಥಿ, ಕ್ರೇಜಿ ಸ್ಟಾರ್, ನಿರುತ್ತರ ಸಿನಿಮಾಗಳಲ್ಲಿ ಅವರು ನಟಿಸಿದರು.
ಇನ್ನು ಭಾವನಾ ವೈಯಕ್ತಿಕ ವಿಚಾರದ ಬಗ್ಗೆ ಹೇಳುವುದಾದರೆ ಅವರು ಇನ್ನೂ ಮದುವೆಯಾಗಿಲ್ಲ. ಇತ್ತೀಚೆಗೆ ದಿಗ್ವಿಜಯ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಭಾವನಾ ಮದುವೆ ಬಗ್ಗೆ ಮಾತನಾಡಿದ್ದಾರೆ. ''ಮದುವೆ ಆಗದಿರಲು ನಿರ್ದಿಷ್ಟ ಕಾರಣಗಳೇನೂ ಇಲ್ಲ. ಆದರೂ ನಾನು ಸಣ್ಣ ಪುಟ್ಟ ವಿಚಾರಕ್ಕೆ ಕೋಪ ಮಾಡಿಕೊಳ್ಳುತ್ತೇನೆ, ಅಪ್‌ಸೆಟ್ ಆಗುತ್ತೇನೆ. ತಾಳ್ಮೆ ಇಲ್ಲ, ಇದು ಬೇರೆಯವರಿಗೆ ಕಿರಿಕಿರಿ ಎನಿಸಬಾರದು. ಆದರೆ ನಾನು ಎಲ್ಲಾ ವಿಚಾರದಲ್ಲಿ ಸ್ವಲ್ಪ ಪರಿಪೂರ್ಣತೆ ಬಯಸುತ್ತೇನೆ. ನನಗೆ ಸಂಬಂಧಗಳಲ್ಲಿ ಬಂಧಿಯಾಗಲು ಇಷ್ಟವಿಲ್ಲ. ನನ್ನನ್ನು ನೋಡಿದವರೂ ಕೂಡಾ ನಾನು ಅವರಿಗೆ ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸುತ್ತೇನೆ ಎಂದು ಎನ್ನಿಸಿಲ್ಲದಿರಬಹುದು. ಮದುವೆ ಆಗಿಲ್ಲವೆಂದರೆ ಜೀವನ ಹಾಳಾಯ್ತು ಎಂಬ ಭಾವನೆ ನನಗೆ ಇಲ್ಲ. ಮದುವೆಯಾಗಿ ಪತಿಯನ್ನು ಕಳೆದುಕೊಂಡವನ್ನು ನೋಡಿದ್ದೇನೆ, ಇನ್ನೂ ಕೆಲವರ ಕಷ್ಟದ ದಿನಗಳನ್ನು ನೋಡಿದ್ದೇನೆ. ಇದನ್ನೆಲ್ಲಾ ನೆನಪಿಸಿಕೊಂಡರೆ ನಾನು ಸೇಫ್ ಇದ್ದೇನೆ ಅನ್ನಿಸುತ್ತದೆ. ಇರುವುದರಲ್ಲಿ ಸದ್ಯಕ್ಕೆ ಖುಷಿಯಾಗಿದ್ದೇನೆ'' ಎಂದು ಭಾವನಾ ಹೇಳಿದ್ದಾರೆ.
ಇತ್ತೀಚೆಗೆ ಭಾವನಾ ಅಭಿನಯದ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಬಿಡುಗಡೆ ಆಗಿದೆ. ಇದನ್ನು ಹೊರತುಪಡಿಸಿ ಭಾವನಾ ರಾಜಕೀಯದಲ್ಲಿ ಕೂಡಾ ಬ್ಯುಸಿ ಇದ್ದಾರೆ. ಒಂದು ಸಿನಿಮಾ ನಿರ್ಮಾಣ ಮಾಡಬೇಕೆನ್ನುವುದು ಭಾವನಾ ಆಸೆಯಂತೆ. ಹಾಗೇ ಮಹಿಳೆಯರಿಗೆ ಸಹಾಯವಾಗುವಂತ ಉತ್ತಮ ಕೆಲಸಗಳನ್ನು ಮಾಡಬೇಕು ಎಂದು ಭಾವನಾ ಸಂದರ್ಶನದಲ್ಲಿ ಹೇಳಿದ್ದಾರೆ.
ವಿಭಾಗ