Divya Shridhar: ಹೆರಿಗೆ ಹತ್ತಿರ ಬಂದರೂ ಕೆಲಸ ಮಾಡುತ್ತಿದ್ದೇನೆ, ಆರ್ಥಿಕ ಸಮಸ್ಯೆ ಇದೆ... ನೋವು ಹಂಚಿಕೊಂಡ 'ಆಕಾಶ ದೀಪ' ನಟಿ
ಗರ್ಭಿಣಿ ಮಹಿಳೆಯರು ಡೆಲಿವರಿ ಹತ್ತಿರ ಬಂದಾಗ ಈ ರೀತಿ ಕೆಲಸ ಮಾಡುವುದು ಕಷ್ಟ. ಆದರೆ ನನಗೆ ಯಾರೂ ಸಪೋರ್ಟ್ ಇಲ್ಲ, ನನ್ನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ನನಗೆ ಮಗು ಮುಖ್ಯ. ಆದ್ದರಿಂದ ಈ ಪರಿಸ್ಥಿತಿಯಲ್ಲೂ ದುಡಿಯುತ್ತಿದ್ದೇನೆ. ವಾಹಿನಿಯವರು ನನಗಾಗಿ ಕಥೆಯನ್ನೇ ಬದಲಿಸಿದರು.
ಪ್ರೀತಿಸಿದ ವ್ಯಕ್ತಿಯನ್ನು ನಂಬಿ ಮದುವೆಯಾಗಿ ಮೋಸ ಹೋದ ಎಷ್ಟೋ ಜನರಿದ್ದಾರೆ. ಇತ್ತೀಚೆಗೆ ನಟಿ ರಾಖಿ ಸಾವಂತ್ ಕೂಡಾ ತಾವು ಪ್ರೀತಿಸಿ ಮದುವೆಯಾಗಿದ್ದ ಆದಿಲ್ ಖಾನ್ ದುರಾನಿಯಿಂದ ಮೋಸ ಹೋಗಿದ್ದರು. ಈ ವಿಚಾರ ದೊಡ್ಡ ಸುದ್ದಿಯಾಗಿತ್ತು. ಕೆಲವು ದಿನಗಳ ಹಿಂದೆ ಕನ್ನಡ ಮೂಲದ ನಟಿ ದಿವ್ಯಾ ಶ್ರೀಧರ್ ಕೂಡಾ ತಾವು ತಮಿಳು ನಟನಿಂದ ಮೋಸ ಹೋದ ನೋವನ್ನು ಹೊರ ಹಾಕಿದ್ದರು.
ಟ್ರೆಂಡಿಂಗ್ ಸುದ್ದಿ
ಹೆರಿಗೆ ಹತ್ತಿರ ಬಂದರೂ ಕೆಲಸ ಮಾಡುತ್ತಿದ್ದೇನೆ
ಇತ್ತೀಚಿಗೆ ತಮಿಳು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ದಿವ್ಯಾ ತಮ್ಮ ಈಗಿನ ಪರಿಸ್ಥಿತಿ ಬಗ್ಗೆ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ. ದಿವ್ಯಾ ಈಗ 9 ತಿಂಗಳ ಗರ್ಭಿಣಿ. ''ಡೆಲಿವರಿಗೆ ಇನ್ನು 10-15 ದಿನಗಳಷ್ಟೇ ಬಾಕಿ ಉಳಿದಿದೆ. ಈಗಲೂ ನಾನು ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದೇನೆ. ಗರ್ಭಿಣಿ ಮಹಿಳೆಯರು ಡೆಲಿವರಿ ಹತ್ತಿರ ಬಂದಾಗ ಈ ರೀತಿ ಕೆಲಸ ಮಾಡುವುದು ಕಷ್ಟ. ಆದರೆ ನನಗೆ ಯಾರೂ ಸಪೋರ್ಟ್ ಇಲ್ಲ, ನನ್ನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ನನಗೆ ಮಗು ಮುಖ್ಯ. ಆದ್ದರಿಂದ ಈ ಪರಿಸ್ಥಿತಿಯಲ್ಲೂ ದುಡಿಯುತ್ತಿದ್ದೇನೆ. ವಾಹಿನಿಯವರು ನನಗಾಗಿ ಕಥೆಯನ್ನೇ ಬದಲಿಸಿದರು. ಬಹಳ ಜನರು ಈ ಮಗು ನಿನಗೆ ಬೇಕಾ? ಎಂದು ಕೇಳಿದ್ದರು. ಆದರೆ ಯಾರೋ ಮಾಡಿದ ತಪ್ಪಿಗೆ ಈ ಮಗುವಿಗೆ ಏಕೆ ಶಿಕ್ಷೆ ನೀಡಬೇಕು? ನನಗೆ ಒಂದು ವೇಳೆ ಗಂಡು ಮಗು ಆದರೆ ಮಹಿಳೆಯರಿಗೆ ಹೇಗೆ ಗೌರವ ನೀಡಬೇಕು ಎಂದು ಕಲಿಸುತ್ತೇನೆ'' ಎಂದು ದಿವ್ಯಾ ಸಂದರ್ಶನದಲ್ಲಿ ಹೇಳಿಕೊಂಡು ಭಾವುಕರಾಗಿದ್ದಾರೆ.
ಬೆಂಗಳೂರು ಮೂಲದ ದಿವ್ಯಾ ಶ್ರೀಧರ್
ದಿವ್ಯಾ ಶ್ರೀಧರ್ ಬೆಂಗಳೂರಿನವರು. ಕನ್ನಡದ ಆಕಾಶ ದೀಪ, ಸೇವಂತಿ ಸೇರಿ ಕೆಲವೊಂದು ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು. ನಂತರ ಅವರಿಗೆ ತಮಿಳು ಕಿರುತೆರೆಯಲ್ಲಿ ಅವಕಾಶ ದೊರೆತಿದ್ದರಿಂದ ಅಲ್ಲಿ ಸಕ್ರಿಯರಾಗಿದ್ದರು. 2015 ರಲ್ಲಿ ಪ್ರಸಾರವಾಗುತ್ತಿದ್ದ ತಮಿಳು ಧಾರಾವಾಹಿಯೊಂದರಲ್ಲಿ ದಿವ್ಯಾ ಅರ್ನವ್ ಎಂಬುವರೊಂದಿಗೆ ನಟಿಸಿದ್ದರು. ಅರ್ನವ್ ಮೂಲ ಹೆಸರು ಅಮ್ಜದ್ ಖಾನ್. ದಿವ್ಯಾ ಹಾಗೂ ಅಮ್ಜದ್ ಖಾನ್ ಪರಿಚಯ, ನಂತರ ಪ್ರೀತಿಗೆ ತಿರುಗಿದೆ. 2017 ರಿಂದ ಪ್ರೀತಿಯಲ್ಲಿದ್ದ ಇವರು 2 ವರ್ಷಗಳ ಹಿಂದಷ್ಟೇ ಮದುವೆಯಾಗಿ ಚೆನ್ನೈನಲ್ಲಿ ಸೆಟಲ್ ಆಗಿದ್ದರು.
ಪತಿಯಿಂದ ಮೋಸ ಹೋದ ನಟಿ
ಮದುವೆಯಾದ ಹೊಸತರಲ್ಲಿ ಎಲ್ಲವೂ ಸರಿಯಾಗಿತ್ತು. ಆದರೆ ಕೆಲವು ದಿನಗಳ ನಂತರ ಇಬ್ಬರ ನಡುವೆ ಬಿರುಕು ಉಂಟಾಗಿದೆ. ದಿವ್ಯಾಗೆ ಪತಿ ಅಮ್ಜದ್ ಖಾನ್ ಕಿರುಕುಳ ನೀಡಲು ಆರಂಭಿಸಿದ್ದಾರೆ. ಪತ್ನಿ ಗರ್ಭಿಣಿ ಎಂದೂ ನೋಡದೆ ಅಮ್ಜದ್ ಖಾನ್, ಆಕೆ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ ಕೊಲೆ ಬೆದರಿಕೆ ಕೂಡಾ ಹಾಕಿದ್ದರು ಎಂದು ದಿವ್ಯಾ ಪರ ವಕೀಲರು ಮಾಹಿತಿ ನೀಡಿದ್ದರು. ದಿವ್ಯ ಹಾಗೂ ಅಮ್ಜದ್, ಗುಟ್ಟಾಗಿ ಮದುವೆ ಆಗಿದ್ದು ಪತಿಯಿಂದ ದೂರಾಗುವ ಕೆಲವು ದಿನಗಳ ಮುನ್ನ, ನಾವಿಬ್ಬರು ಮದುವೆಯಾಗಿದ್ದೇವೆ ಎಂಬ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಆದರೆ ಮದುವೆ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಅಮ್ಜದ್ ನನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು ಎಂದು ಕೂಡಾ ದಿವ್ಯಾ ದೂರಿನಲ್ಲಿ ಉಲ್ಲೇಖಿಸಿದ್ದರು.
ಅಮ್ಜದ್ ಖಾನ್ ಅವರನ್ನು ಪ್ರೀತಿಸಿದ ಬಳಿಕ ನಾನೂ ಕೂಡಾ ಅವರ ಧರ್ಮಕ್ಕೆ ಮತಾಂತರವಾಗಿ ಅವರೊಂದಿಗೆ ಜೀವನ ನಡೆಸುತ್ತಿದ್ದೆ. ಆದರೆ ಆತನಿಗೆ ಬೇರೆ ನಟಿಯೊಂದಿಗೆ ಅಫೇರ್ ಇದೆ. ಆದ್ದರಿಂದ ನನ್ನನ್ನು ಹೀಗೆ ಹಿಂಸಿಸುತ್ತಿದ್ದಾರೆ ಎಂದು ದಿವ್ಯಾ ಆರೋಪಿಸಿದ್ದರು.
ದಿವ್ಯಾಗೆ ಧೈರ್ಯ ಹೇಳಿದ ನೆಟಿಜನ್ಸ್
ದಿವ್ಯಾ ಪರಿಸ್ಥಿತಿ ನೋಡಿದ ಎಲ್ಲರೂ ಬೇಸರ ವ್ಯಕ್ತಪಡಿಸುತ್ತಿದ್ಧಾರೆ. ಒಬ್ಬ ಸೆಲೆಬ್ರಿಟಿಯೇ ಈ ರೀತಿ ಮೋಸ ಹೋದರೆ ಸಾಮಾನ್ಯರ ಪರಿಸ್ಥಿತಿ ಏನು? ಏನೇ ಆಗಲೀ ನೀವು ಮಾನಸಿಕವಾಗಿ ಸ್ಟ್ರಾಂಗ್ ಆಗಿರಿ. ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ. ನಿಮ್ಮ ಹಾಗೂ ಮಗುವಿನ ಆರೋಗ್ಯದ ಕಡೆ ಗಮನ ನೀಡಿ. ದೇವರು ಖಂಡಿತ ನಿಮಗೆ ಒಳ್ಳೆಯದು ಮಾಡುತ್ತಾರೆ ಎಂದು ಧೈರ್ಯ ಹೇಳುತ್ತಿದ್ದಾರೆ.