Hema Malini: ಹೇಮಾ ಮಾಲಿನಿ ವಿರುದ್ಧ ದೂರು; ಕನಸಿನ ಕನ್ಯೆ ಯಾಕೆ ಪುರಿ ಜಗನ್ನಾಥ ದೇಗುಲ ಪ್ರವೇಶಿಸಬಾರದು? ಇಲ್ಲಿದೆ ವಿವಾದದ ವಿವರ
Hema Malini: ಪುರಿ ಜಗನ್ನಾಥ ದೇಗುಲಕ್ಕೆ ಪ್ರವೇಶಿಸಿದ ನಟಿ, ಸಂಸದೆ ಕನಸಿನ ಕನ್ಯೆ ಹೇಮಾಮಾಲಿನಿ ವಿರುದ್ಧ ಸ್ಥಳೀಯ ಸಂಘಟನೆ ಶ್ರೀ ಜಗನ್ನಾಥ ಸೇನಾವು ಅಲ್ಲಿನ ಸಿಂಘದವರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇವರು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ದೂರಲಾಗಿದೆ. ಏನಿದು ವಿವಾದ? ತಿಳಿಯೋಣ ಬನ್ನಿ.

Hema Malini: ಹಿರಿಯ ನಟಿ ಮತ್ತು ಬಿಜೆಪಿ ಸಂಸದೆ "ಕನಸಿನ ಕನ್ಯೆ" ಹೇಮಾ ಮಾಲಿನಿ ಕಳೆದ ವಾರ ಹೋಳಿ ಹಬ್ಬದ ಸಂದರ್ಭದಲ್ಲಿ ಒಡಿಶಾದ ಪ್ರಶಿದ್ಧ ದೇವಲಯ ಪುರಿ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಸಂಸದೆ ಹೇಮಾಮಾಲಿನಿ ಅವರು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಜತೆ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಆದರೆ, ಈಕೆ ದೇವಾಲಯ ಪ್ರವೇಶಿಸಿದ್ದು ಕಾನೂನು ಬಾಹಿರ, ಇದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಶ್ರೀ ಜಗನ್ನಾಥ ಸೇನಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ ಎಂದು ಮಿಡ್‌ಡೇ ವರದಿ ಮಾಡಿದೆ.
ಶ್ರೀ ಜಗನ್ನಾಥ ಸೇನಾ ಎಂಬ ಸ್ಥಳೀಯ ಸಂಘಟನೆಯು ಸಿಂಘದವಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ನಟಿ ಮತ್ತು ರಾಜಕಾರಣಿ ಹೇಮಾಮಾಲಿನಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿದೆ. ಇವರ ಪ್ರಕಾರ ನಟಿಯು ಧರ್ಮೇಂದ್ರಎಂಬ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಧರ್ಮೇಂದ್ರ ಮುಸ್ಲಿಂ ವ್ಯಕ್ತಿ ಎಂದು ದೂರಿನಲ್ಲಿ ತಿಳಿಸಲಾಗಿದೆ. ಶ್ರೀ ಮಂದಿರಕ್ಕೆ ಮುಸ್ಲಿಂ ಸಮುದಾಯದವರಿಗೆ ಪ್ರವೇಶವಿಲ್ಲ. ಹೀಗಾಗಿ, ಆರೋಪ ಸಾಬೀತಾದರೆ ನಟಿ ಹೇಮಾ ಮಾಲಿನಿಯನ್ನು ಬಂಧಿಸಬೇಕೆಂದು ಸಂಘಟನೆಯ ಮುಖ್ಯಸ್ಥ ಪ್ರಿಯದರ್ಶನ್ ಪಟ್ನಾಯಕ್ ಒತ್ತಾಯಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ ನಟಿ ಹೇಮಾ ಮಾಲಿನಿ ಅವರು 1980ರಲ್ಲಿ ಧರ್ಮೇಂದ್ರ ಅವರನ್ನು ಮದುವೆಯಾಗಿದ್ದಾರೆ. ಪ್ರಕಾಶ್ ಕೌರ್ ಅವರನ್ನು ಈಗಾಗಲೇ ವಿವಾಹವಾಗಿದ್ದ ಧರ್ಮೇಂದ್ರ ಇಸ್ಲಾಂಗೆ ಮತಾಂತರಗೊಂಡು ಹಿಂದೂ ವಿವಾಹ ಕಾಯ್ದೆಯನ್ನು ಬೈಪಾಸ್ ಮಾಡಿ ಹೇಮಾ ಮಾಲಿನಿ ಜತೆ ನಿಖಾಹ್ ಮಾಡಿಕೊಂಡಿದ್ದರು. ಮೌಲಾನಾ ಕಾಜಿ ಅಬ್ದುಲ್ಲಾ ಫೈಜಾಬಾದಿ ಅವರು ಇಸ್ಲಾಂ ಸಂಪ್ರದಾಯದಂತೆ ಇವರ ವಿವಾಹ ನಡೆಸಿಕೊಟ್ಟಿದ್ದಾರೆ. ಹೀಗಾಗಿ, ಈಕೆ ಹಿಂದೂ ಅಲ್ಲ. ಈಕೆ ಪುರಿ ಜಗನ್ನಾಥ ದೇಗುಲ ಪ್ರವೇಶಿಸಿರುವುದು ನಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಧರ್ಮೇಂದ್ರ ಮತ್ತು ಹೇಮಾ ನಟಿಸಿದ ಸಿನಿಮಾಗಳು
'ದಿ ಬರ್ನಿಂಗ್ ಟ್ರೈನ್', 'ಶೋಲೆ', 'ರಾಜಾ ಜಾನಿ', 'ಬಘವತ್', 'ಧರ್ಮ್ ಔರ್ ಕಾನೂನ್', 'ದೋ ದಿಶಾಯೆನ್' ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳಲ್ಲಿ ನಟ ಧರ್ಮೇಂದ್ರ ಮತ್ತು ಹೇಮಾಮಾಲಿನಿ ನಟಿಸಿದ್ದಾರೆ. ಇವರಿಗೆ ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್ ಎಂಬ ಹೆಣ್ಣು ಮಕ್ಕಳಿದ್ದಾರೆ. ಐದು ಮೊಮ್ಮಕ್ಕಳು ಇದ್ದಾರೆ. ಇನ್ನೊಂದೆಡೆ ನಟ ಧರ್ಮೇಂದ್ರರಿಗೆ ಪ್ರಕಾಶ್ ಕೌರ್ ಜತೆ ವಿವಾಹವಾದ ಸಂದರ್ಭದಲ್ಲಿ ನಾಲ್ವರು ಮಕ್ಕಳಿದ್ದಾರೆ. ಅಂದರೆ, ಸನ್ನಿ ಡಿಯೋಲ್, ಬಾಬಿ ಡಿಯೋಲ್, ವಿಜೇತಾ ಮತ್ತು ಅಜೀತಾ ಎಂಬ ನಾಲ್ವರು ಮಕ್ಕಳ ತಂದೆಯೂ ಇವರಾಗಿದ್ದಾರೆ.
ಪುರಿ ಜಗನ್ನಾಥ ದೇವಾಲಯದ ಬಗ್ಗೆ
ಒಡಿಶಾ ರಾಜ್ಯದ ಪುರಿಯಲ್ಲಿರುವ ಜನಪ್ರಿಯ ದೇಗುಲ. ಪುರಿಯ ಶ್ರೀ ಜಗನ್ನಾಥ ದೇವಾಲಯವು ವಿಷ್ಣುವಿನ ಒಂದು ರೂಪವಾದ ಜಗನ್ನಾಥನ ದೇವಾಲಯ. ಇದು ಪುರಾತನ ಹಿಂದೂ ದೇಗುಲವಾಗಿದೆ. ಹತ್ತನೇ ಶತಮಾನದಲ್ಲಿ ಹಿಂದಿನ ದೇವಾಲಯದ ಸ್ಥಳದಲ್ಲಿಯೇ ಪುನರ್ ನಿರ್ಮಿಸಲಾಗಿದೆ. ಪೂರ್ವ ಗಂಗಾ ರಾಜವಂಶದ ಮೊದಲನೆಯ ರಾಜ ಅನಂತವರ್ಮನ್ ಚೋಡಗಂಗ ದೇವ ಈ ದೇಗುಲದ ನಿರ್ಮಾಣ ಆರಂಭಿಸಿದ್ದರು. ಪುರಿಯ ವಾರ್ಷಿಕ ರಥಯಾತ್ರೆ ಅತ್ಯಂತ ಜನಪ್ರಿಯತೆ ಪಡೆದಿದೆ.
