Seetha Rama Serial: ಸೀತಾರಾಮ ಧಾರಾವಾಹಿ ಪ್ರೇಕ್ಷಕರು ನನಗೆ ಇದೇ ಪ್ರಶ್ನೆ ಕೇಳ್ತಿದ್ದಾರೆ: ನಟಿ ಪದ್ಮಕಲಾ ಸಂದರ್ಶನ
ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಎಲ್ಲರಿಂದ ದೂರವಾಗಿದ್ದಾಳೆ. ಆದರೆ ಸಿಹಿ ಪಾತ್ರವನ್ನು ಇನ್ನು ಮುಂದಿನ ದಿನಗಳಲ್ಲಿ ನೋಡಲು ಸಾಧ್ಯವಿಲ್ಲ ಎಂದು ವೀಕ್ಷಕರು ಬೇಸರಪಟ್ಟಿದ್ದಾರೆ. ಈ ಬಗ್ಗೆ ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಅಜ್ಜಿ ಪಾತ್ರದಲ್ಲಿ ಅಭಿನಯಿಸುತ್ತಿರುವ ನಟಿ ಪದ್ಮಕಲಾ ಹೇಳಿದ್ದೇನು ನೋಡಿ. -ಸಂದರ್ಶನ ಪದ್ಮಶ್ರೀ ಭಟ್
ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಸೀತಾರಾಮʼ ಧಾರಾವಾಹಿಯಲ್ಲಿ ಸಿಹಿ ಪಾತ್ರದ ಸಾವಾಗಿದೆ. ಸಿಹಿ ಬದುಕಿಲ್ಲ ಎಂದು ವೀಕ್ಷಕರು ಬೇಸರ ಮಾಡಿಕೊಂಡಿದ್ದಾರೆ. ʼಸೀತಾರಾಮʼ ಧಾರಾವಾಹಿಯಲ್ಲಿ ಶಾಂತಮ್ಮ ಪಾತ್ರ ಮಾಡ್ತಿರುವ ನಟಿ ಪದ್ಮಕಲಾ ಅವರು ಈ ಬಗ್ಗೆ Panchami Talks ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಸಿಹಿ ಸಾವಾಗಿದೆ, ಪ್ರೇಕ್ಷಕರು ನಿಮ್ಮ ಬಳಿ ಏನು ಹೇಳುತ್ತಾರೆ?
ಮಗುವನ್ನು ಸಾಯಿಸೋ ಪ್ರೋಮೋ ರಿಲೀಸ್ ಆದಾಗಿನಿಂದ ಅನೇಕರು ನನಗೆ ಫೋನ್ ಮಾಡಿ ಯಾಕೆ ಸಿಹಿಯನ್ನು ಸಾಯಿಸಿದ್ರಿ ಅಂತ ಕೇಳುತ್ತಿರುತ್ತಾರೆ. ಕಥೆ ಯಾವ ರೀತಿ ಮುಂದುವರೆಯಬೇಕು ಎನ್ನೋದು ವಾಹಿನಿಗೆ ಬಿಟ್ಟಿದ್ದು. ನನಗೆ ಸೀತಾರಾಮ ಧಾರಾವಾಹಿ ಎಂದರೆ ತುಂಬ ಇಷ್ಟ. ನನಗೆ ಎಲ್ಲೂ ನೀಡದ ಜನಪ್ರಿಯತೆಯನ್ನು ಈ ಧಾರಾವಾಹಿ ಕೊಟ್ಟಿದೆ. 1988ರಿಂದ ನಾನು ನಟಿಸುತ್ತಿದ್ದರೂ ಕೂಡ ಈ ಧಾರಾವಾಹಿ ತಂದುಕೊಟ್ಟ ಜನಪ್ರಿಯತೆಯನ್ನು ಯಾವ ಧಾರಾವಾಹಿಯೂ ತಂದುಕೊಟ್ಟಿಲ್ಲ. ದಾರಿಯಲ್ಲಿ ಹೋಗುತ್ತಿರುವವರು ನನ್ನನ್ನು ಕಂಡರೆ ಮಾತಾಡಿಸಿ ಫೋಟೋ ತೆಗೆಸಿಕೊಂಡು ಹೋಗುತ್ತಿರುತ್ತಾರೆ. ಪ್ರಪಂಚಕ್ಕೆ ನಾನು ಸಿಹಿ ಅಜ್ಜಿ ಆಗಿದ್ದೀನಿ. ಇನ್ನು ಸೀತಾ ಪಕ್ಕದಮನೆಯವಳಾದಳೂ ಕೂಡ ಶಾಂತಮ್ಮ ನೆರವಾಗುತ್ತಾಳೆ. ಈಗ ಸಮಾಜದಲ್ಲಿ ಈ ರೀತಿ ಇರೋರು ತುಂಬ ಅಪರೂಪ. ಇಂಥದನ್ನೆಲ್ಲ ಧಾರಾವಾಹಿಯಲ್ಲಿ ತೋರಿಸುತ್ತಿರೋದು ಖುಷಿ ಪಟ್ಟಿದೆ. ಸ್ವಪ್ನಾ ಕೃಷ್ಣ ಅವರು ಫೋನ್ ಮಾಡಿ ನೀವೇ ಶಾಂತಮ್ಮನ ಪಾತ್ರ ಮಾಡಬೇಕು ಅಂತ ಹೇಳಿದ್ದರು.
ವೀಕ್ಷಕರು ಏನು ಪ್ರಶ್ನೆ ಕೇಳ್ತಾರೆ?
ಮುಂದೆ ಏನಾಗುತ್ತೆ ಅಂತ ಕೇಳ್ತಾರೆ. ನಮಗೆ ಗೊತ್ತಿಲ್ಲ ಅಂತ ಹೇಳುತ್ತೇವೆ. ನಮ್ಮ ಧಾರಾವಾಹಿಯಲ್ಲಿ ತಾತನ ಪಾತ್ರ ಮಾಡುತ್ತಿರುವ ಕಲಾಗಂಗೋತ್ರಿ ಮಂಜು ಅವರು ನಮ್ಮ ʼಸಂಕೀರ್ತನʼ ಸಿನಿಮಾದಲ್ಲಿ ನಿರ್ದೇಶನ ಮಾಡುತ್ತಿದ್ದಾರೆ. ನಾವು ಸಿನಿಮಾ ಕೆಲಸ ಅಂತ ಹೊರಗಡೆ ಹೋದಾಗಲೂ ಸಿಹಿಯನ್ನು ಕರೆದುಕೊಂಡು ಬಂದಿಲ್ವಾ ಅಂತ ಪ್ರಶ್ನೆ ಮಾಡುತ್ತಾರೆ.
ಸೀತಾರಾಮ ಧಾರಾವಾಹಿ ತಂಡ ಹೇಗಿದೆ?
ನಮಗೆ ಸೀತಾರಾಮ ಧಾರಾವಾಹಿ ತಂಡ ತುಂಬ ಇಷ್ಟ. ಎಲ್ಲರೂ ಮನೆಯಿಂದ ಅಡುಗೆ ಮಾಡಿಕೊಂಡು ಬರುತ್ತಾರೆ. ಸಿಹಿ ನಮಗೆ ಸ್ವಂತ ಮೊಮ್ಮಗಳೇ ಎನ್ನೋ ರೀತಿಯಲ್ಲಿ ಆಗಿದ್ದಾಳೆ. ಸ್ಕೂಲ್‌ನಲ್ಲಿ ತಾತ-ಅಜ್ಜಿಯನ್ನು ಕರೆದುಕೊಂಡು ಬನ್ನಿ ಅಂತ ಹೇಳಿದ್ದಾರೆ ಅಂತ ಸಿಹಿ ಹೇಳ್ತಾಳೆ. ಸಮಯ ಹೋಗೋದು ಗೊತ್ತಾಗೋದಿಲ್ಲ, ಅಷ್ಟರಮಟ್ಟಿಗೆ ನಾವು ಎಂಜಾಯ್ ಮಾಡ್ತೀವಿ.
ಸಿಹಿ ಪಾತ್ರಧಾರಿ ಇಡೀ ಮನೆಯನ್ನು ನಡೆಸಿಕೊಂಡು ಹೋಗುತ್ತಿದ್ದಾಳೆ
ಸಿಹಿ ಪಾತ್ರಧಾರಿ ರೀತು ಸಿಂಗ್ ತಾಯಿಗೆ ಕನ್ನಡ ಬರೋದಿಲ್ಲ, ಬದುಕಬೇಕು ಎನ್ನೋ ಛಲ ಇದೆ. ಪ್ರತಿಭೆ ಇದ್ದರೆ ಹೇಗೆ ಬೇಕಿದ್ರೂ ಬೆಳೆಯಬಹುದು ಎನ್ನೋದಕ್ಕೆ ರೀತು ಸಿಂಗ್ ಸಾಕ್ಷಿ. ವಯಸ್ಸಿಗೂ ಮೀರಿದ ಜವಾಬ್ದಾರಿ, ಬುದ್ಧಿ ಆ ಮಗುಗೆ ಇದೆ. ಯಾರ ಜೊತೆ ಹೇಗೆ ಇರಬೇಕು ಎನ್ನೋದು ರೀತುಗೆ ಗೊತ್ತು. ಮುಂದೊಂದು ದಿನ ಅವಳು ದೊಡ್ಡ ನಟಿಯಾಗ್ತಾಳೆ. ಆ ಮಗುವಿಗೆ ಇರುವಷ್ಟು ಪ್ರೌಢಿಮೆ ನಾವು ಅವಳ ವಯಸ್ಸಿನ ಯಾವ ಮಗುವಿನಲ್ಲಿಯೂ ನೋಡಿಲ್ಲ.
ಸೀತಾರಾಮ ಧಾರಾವಾಹಿ ಕಥೆ ತುಂಬ ಚೆನ್ನಾಗಿದೆ..
ಸಮಾಜದಲ್ಲಿ ಸರೋಗಸಿ ಮದರ್ ಎನ್ನುವ ಕಾನ್ಸೆಪ್ಟ್ ಬಂದಿದೆ. ಇದು ಸಮಾಜದಲ್ಲಿ ಸುಧಾರಣೆ ತರುವ ವಿಷಯ ಎನ್ನಬಹುದು. ಮಗು ಇದ್ದು ವಿಧವೆ ಇರೋರು, ಗಂಡ ಬಿಟ್ಟೋರಿಗೆ ಎರಡನೇ ಮದುವೆ ಆಗಲು ಕಂಡೀಷನ್ ಹಾಕುವ ಜನರಿದ್ದಾರೆ. ಮಗು ಬೇಡ, ಆ ಹೆಣ್ಣು ಮಾತ್ರ ನಮ್ಮ ಮನೆಗೆ ಬರಲಿ ಅಂತ ಹೇಳುವವರೂ ಇದ್ದಾರೆ. ಆದರೆ ಆ ಮಗುವನ್ನು ಕೂಡ ಒಪ್ಪುವ ಪುರುಷರು, ಮನೆಯವರು ಇರಬೇಕು. ಈ ಧಾರಾವಾಹಿ ಮೂಲಕ ಸುಧಾರಣೆ ಆಗುವ ರೀತಿಯ ಕಂಟೆಂಟ್ ಪ್ರಸಾರ ಆಗ್ತಿರೋದು ಖುಷಿ ಕೊಟ್ಟಿದೆ.
ಸಂದರ್ಶನ: ಪದ್ಮಶ್ರೀ ಭಟ್
ಇದನ್ನೂ ಓದಿ: ಒಂದೇ ಚಿತ್ರದಲ್ಲಿ ಅಭಿನಯಿಸಲಿದ್ದಾರಾ ಪ್ರಭಾಸ್ ಮತ್ತು ರಿಷಭ್ ಶೆಟ್ಟಿ? ಸಿನಿ ಅಂಗಳದಲ್ಲಿ ಹೀಗೊಂದು ಹೊಸ ಸುದ್ದಿ