Pooja Gandhi on Ramya: ರಮ್ಯಾ ಬಗ್ಗೆ ಕನ್ನಡದಲ್ಲಿಯೇ ಪತ್ರ ಬರೆದ ಪೂಜಾ ಗಾಂಧಿ.. ಮಳೆ ಹುಡುಗಿಯ ಬರವಣಿಗೆಯನ್ನೊಮ್ಮೆ ನೋಡಿ?
"ನಾನು ರಮ್ಯಾ ಅವರ ವೀಕೆಂಡ್ ವಿಥ್ ರಮೇಶ್ ಏಪಿಸೋಡ್ ನೋಡಲು ತುಂಬ ಕಾತರದಲ್ಲಿದ್ದೇನೆ" ಎಂದು ನಟಿ ಪೂಜಾ ಗಾಂಧಿ ಅಚ್ಚ ಕನ್ನಡದಲ್ಲಿ ಪತ್ರವೊಂದನ್ನು ಬರೆದಿದ್ದಾರೆ.
Pooja Gandhi on Ramya: ವೀಕೆಂಡ್ ವಿಥ್ ರಮೇಶ್ ಸೀಸನ್ 5 ಇಂದಿನಿಂದ ಶುರುವಾಗುತ್ತಿದೆ. ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ 5ನೇ ಸೀಸನ್‌ನ ಮೊದಲ ಏಪಿಸೋಡ್ ಇಂದು ರಾತ್ರಿ (ಮಾ. 25) ಬಿತ್ತರವಾಗಲಿದೆ. ಈ ಆವೃತ್ತಿಯ ಮೊದಲ ಅತಿಥಿಯಾಗಿ ನಟಿ, ಮೋಹಕ ತಾರೆ ರಮ್ಯಾ ಭಾಗವಹಿಸುತ್ತಿದ್ದಾರೆ.
ಈಗಾಗಲೇ ಈ ಶೋದ ಹಲವು ಪ್ರೋಮೋಗಳು ಬಿಡುಗಡೆ ಆಗಿದ್ದು, ರಮ್ಯಾ ಬಗೆಗಿನ ಗೊತ್ತಿಲ್ಲದ ಸಂಗತಿಗಳನ್ನು ತಿಳಿದುಕೊಳ್ಳಲು ಅವರ ಅಭಿಮಾನಿಗಳು ಕಾತರದಲ್ಲಿದ್ದಾರೆ. ಈ ನಡುವೆಯೇ ಮಳೆ ಹುಡುಗಿ ಪೂಜಾ ಗಾಂಧಿ ಸಹ ಕಾಯುತ್ತದ್ದಾರೆ. ಅಷ್ಟೇ ಅಲ್ಲ ರಮ್ಯಾ ಕುರಿತಾಗಿ ಪತ್ರವೊಂದನ್ನೂ ಬರೆದಿದ್ದಾರೆ.
"ನಾನು ರಮ್ಯಾ ಅವರ ವೀಕೆಂಡ್ ವಿಥ್ ರಮೇಶ್ ಏಪಿಸೋಡ್ ನೋಡಲು ತುಂಬ ಕಾತರದಲ್ಲಿದ್ದೇನೆ" ಎಂದು ನಟಿ ಪೂಜಾ ಗಾಂಧಿ ಅಚ್ಚ ಕನ್ನಡದಲ್ಲಿ ಪತ್ರವೊಂದನ್ನು ಬರೆದಿದ್ದು ಅದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ನಟಿಯ ಈ ಕನ್ನಡ ಪ್ರೀತಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಪೂಜಾ ಬರೆದ ಪತ್ರದ ಪೂರ್ತಿ ವಿವರ ಇಲ್ಲಿದೆ.
ಮಳೆ ಹುಡುಗಿ ಬರೆದ ಕನ್ನಡ ಪತ್ರ ಹೀಗಿದೆ..
ವೀಕೆಂಡ್ ವಿತ್ ರಮೇಶ್.. ರಮೇಶ್ ಸರ್.. ನಿಮ್ಮ ಮತ್ತು ರಮ್ಯಾ ಮಧ್ಯೆ ನಡೆಯುವ ಮಾತಿನ ಜುಗಲ್‌ಬಂದಿ ನೋಡೋದಕ್ಕೆ ಲಕ್ಷಾಂತರ ಕನ್ನಡಿಗರ ರೀತಿ ನಾನೂ ಕೂಡ ಕಾತುರದಿಂದ ಕಾಯ್ತಿದ್ದೀನಿ. ರಮ್ಯಾ ಅದ್ಭುತ ವ್ಯಕ್ತಿ. ತುಂಬಾ ಬೋಲ್ಡ್. ಮನಸ್ಸಿಗೆ ಅನಿಸಿದ್ದನ್ನು ಎದುರಲ್ಲಿಯೇ ನೇರವಾಗಿ ಹೇಳುತ್ತಾರೆ. ನುಣುಚಿಕೊಳ್ಳುವ ಸ್ವಭಾವ ಅವರದಲ್ಲ
ನನಗೆ ರಮ್ಯಾ ವೈಯಕ್ತಿಕವಾಗಿ ಯಾಕೆ ಇಷ್ಟ ಆಗ್ತಾರೆ ಅಂದ್ರೆ ಇತರೆ ನಟಿಯರ ಬಗ್ಗೆಯೂ ಅವರು ನಿಲುವು ತೆಗೆದುಕೊಳ್ಳುತ್ತಾರೆ. ಅವರಲ್ಲಿನ ಆ ಗುಣ ನನಗೆ ತುಂಬಾ ಇಷ್ಟ ಆಗುತ್ತದೆ.
ನನಗೆ ಈಗಲೂ ತುಂಬಾ ಚೆನ್ನಾಗಿ ನೆನಪಿದೆ. ನಾನು ರಾಯಚೂರಿನ ಚುನಾವಣೆಯಲ್ಲಿ ಕೆಟ್ಟದಾಗಿ ಸೋತಾಗ, ಪೂಜಾ ಗಾಂಧಿ ವೆಲ್ ಟ್ರೈಡ್ ಎಂದು ರಮ್ಯಾ ನನಗೆ ಹೇಳಿದ್ದರು.
’ರಮ್ಯಾ ನಿಮ್ಮ ಪ್ರೊಡಕ್ಷನ್ ಕಂಪನಿಗೆ ಶುಭವಾಗಲಿ. ನಿಮ್ಮ ಸಂಸ್ಥೆಯಿಂದ ರಾಷ್ಟ್ರ ಮಟ್ಟದ ಕನ್ನಡ ಸಿನಿಮಾಗಳು ಮೂಡಿಬರಲಿ" ಎಂದು ರಮ್ಯಾ ಕುರಿತು ತಮ್ಮ ಮನದಾಳದ ಮಾತುಗಳನ್ನು ನಟಿ ಪೂಜಾ ಗಾಂಧಿ ಹಂಚಿಕೊಂಡಿದ್ದಾರೆ.
ರಮ್ಯಾಗಿಂತ ಪೂಜಾ ಸೀನಿಯರ್..
ಸಿನಿಮಾ ವಿಚಾರದಲ್ಲಿ ಈ ಇಬ್ಬರೂ ಚೆಲುವೆಯರು ಸಾಕಷ್ಟು ಹೆಸರು ಮಾಡಿದ್ದಾರೆ. ರಮ್ಯಾಗೆ ಹೋಲಿಕೆ ಮಾಡಿದರೆ ಪೂಜಾ ಗಾಂಧಿ ಸೀನಿಯರ್. 2001ರಲ್ಲಿ ಕತ್ರೋಂಕಿ ಕಿಲಾಡಿ ಅನ್ನೋ ಹಿಂದಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪೂಜಾ ಎಂಟ್ರಿಕೊಟ್ಟರೆ, 2003ರಲ್ಲಿ ಅಭಿ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡಿಗರಿಗೆ ರಮ್ಯಾ ಚಿರಪರಿಚಿತ. ಇಬ್ಬರೂ ಕನ್ನಡದ ಬಹುತೇಕ ಎಲ್ಲ ಸ್ಟಾರ್‌ಗಳ ಜತೆಗೆ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂಗೂ ಹೋಗಿ ಬಂದಿದ್ದಾರೆ.