Pushpa 2 The Rule: ಬೆಂಗಳೂರಿನಲ್ಲಿ ಬೆಳಗಿನ ಜಾವ 3 ಗಂಟೆಯಿಂದಲೇ ಪುಷ್ಪ 2 ಚಿತ್ರ ಪ್ರದರ್ಶನ, ಅಡ್ವಾನ್ಸ್ ಬುಕಿಂಗ್‌ ಶುರು
ಕನ್ನಡ ಸುದ್ದಿ  /  ಮನರಂಜನೆ  /  Pushpa 2 The Rule: ಬೆಂಗಳೂರಿನಲ್ಲಿ ಬೆಳಗಿನ ಜಾವ 3 ಗಂಟೆಯಿಂದಲೇ ಪುಷ್ಪ 2 ಚಿತ್ರ ಪ್ರದರ್ಶನ, ಅಡ್ವಾನ್ಸ್ ಬುಕಿಂಗ್‌ ಶುರು

Pushpa 2 The Rule: ಬೆಂಗಳೂರಿನಲ್ಲಿ ಬೆಳಗಿನ ಜಾವ 3 ಗಂಟೆಯಿಂದಲೇ ಪುಷ್ಪ 2 ಚಿತ್ರ ಪ್ರದರ್ಶನ, ಅಡ್ವಾನ್ಸ್ ಬುಕಿಂಗ್‌ ಶುರು

Pushpa 2 The Rule Ticket Price in Bengaluru: ಪುಷ್ಪ 2 ಚಿತ್ರದ ಮುಂಗಡ ಟಿಕೆಟ್‌ ಬುಕಿಂಗ್‌ ಕರ್ನಾಟಕದಲ್ಲಿಯೂ ಆರಂಭವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಸಾವಿರಾರು ಶೋಗಳನ್ನು ಪಡೆದಿದೆ ಅಲ್ಲು ಅರ್ಜುನ್‌ ನಟನೆಯ ಈ ಸಿನಿಮಾ. ಬೆಳಗಿನ ಜಾವ 3ಗಂಟೆಯಿಂದಲೇ ಶೋ ಶುರುವಾಗಲಿವೆ.

ಬೆಂಗಳೂರಿನಲ್ಲಿ ಪುಷ್ಪ 2 ಅಡ್ವಾನ್ಸ್ ಬುಕಿಂಗ್‌ ಶುರು
ಬೆಂಗಳೂರಿನಲ್ಲಿ ಪುಷ್ಪ 2 ಅಡ್ವಾನ್ಸ್ ಬುಕಿಂಗ್‌ ಶುರು

Pushpa 2 The Rule Advance Booking: ಅಲ್ಲು ಅರ್ಜುನ್‍ ಅಭಿನಯದ ‘ಪುಷ್ಪ 2’ ಚಿತ್ರವು ಡಿ.05 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದ್ದು, ಈ ಚಿತ್ರಕ್ಕೆ ಪ್ರೇಕ್ಷಕರ ವಲಯದಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳು ಗರಿಗೆದರಿವೆ. ಚಿತ್ರವು ಬೆಂಗಳೂರಿನ ಮೆಜೆಸ್ಟಿಕ್‍ ಪ್ರದೇಶದಲ್ಲಿ 100 ಮೀಟರ್ ಅಂತರವಿರುವ ಸಂತೋಷ್‍, ತ್ರಿವೇಣಿ ಮತ್ತು ಅನುಪಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ವಿಷಯ ಗೊತ್ತೇ ಇದೆ. ಈಗ ರಾಜ್ಯದಲ್ಲಿ ಅಡ್ವಾನ್ಸ್ ಬುಕ್ಕಿಂಗ್‍ ಪ್ರಾರಂಭವಾಗಿದ್ದು, ಬೆಳಿಗ್ಗೆ ಮೂರು ಗಂಟೆಯಿಂದಲೇ ಬೆಂಗಳೂರಿನ ಹಲವು ಕಡೆ ಚಿತ್ರ ಪ್ರದರ್ಶನ ಪ್ರಾರಂಭವಾಗಲಿದೆ.

‘ಪುಷ್ಪ 2’ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್, ಕಳೆದ ಕೆಲವು ದಿನಗಳ ಹಿಂದಷ್ಟೇ ಕೇರಳ, ಗುಜರಾತ್‍, ಪಂಜಾಬ್‍, ದೆಹಲಿ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಪ್ರಾರಂಭವಾಗಿತ್ತು. ಇನ್ನು, ಬೆಂಗಳೂರಿನಲ್ಲಿ ಶನಿವಾರ ರಾತ್ರಿಯಿಂದ ಮುಂಗಡ ಬುಕ್ಕಿಂಗ್‍ ಪ್ರಾರಂಭವಾಗಿದ್ದು, ಟಿಕೆಟ್‍ ಮಾರಾಟ ಭರದಿಂದ ಸಾಗಿದೆ. ಬೇರೆ ನಗರಗಳಿಗೆ ಹೋಲಿಕೆ ಮಾಡಿದರೆ, ಟಿಕೆಟ್‌ ದರದ ವಿಚಾರದಲ್ಲಿ ಬೆಂಗಳೂರೇ ಮುಂದು. ಒಂದೊಂದು ಟಿಕೆಟ್‌ಗೆ ಸಾವಿರಾರು ದರ ನಿಗದಿ ಮಾಡಿದ ಉದಾಹರಣೆಗಳೂ ಇವೆ.

ಟಿಕೆಟ್‌ ದರ ಜತೆಗೆ ಶೋಗಳಲ್ಲೂ ಕರ್ನಾಟಕ ಮುಂದು

ಆಂಧ್ರ ಪ್ರದೇಶ, ತೆಲಂಗಾಣ, ತಮಿಳು ನಾಡು ಸೇರಿದಂತೆ ಬೇರೆ ರಾಜ್ಯಗಳಲ್ಲಿ ಬೆಳಗಿನ ಪ್ರದರ್ಶನವನ್ನು 10 ಗಂಟೆಗೆ ಪ್ರದರ್ಶನ ಶುರು ಮಾಡಬೇಕೆಂಬ ನಿಯಮವಿದೆ. ಹಾಗೆಯೇ, ಅಲ್ಲಿ ಟಿಕೆಟ್‍ ದರವನ್ನು ಇಷ್ಟಬಂದಂತೆ ಏರಿಸುವಂತಿಲ್ಲ ಎಂದು ಅಲ್ಲಿನ ಸರ್ಕಾರ ಕಾನೂನು ಮಾಡಿವೆ. ಆದರೆ, ಕರ್ನಾಟಕದಲ್ಲಿ ಅದ್ಯಾವ ನೀತಿ- ನಿಯಮಗಳೂ ಇಲ್ಲ. ಇಲ್ಲಿ ಪರಭಾಷೆಯ ಚಿತ್ರಗಳಿಗೆ ಇಷ್ಟ ಬಂದಷ್ಟು ಟಿಕೆಟ್‍ ದರ ನಿಗದಿಪಡಿಸಲಾಗುತ್ತದೆ ಮತ್ತು ಪ್ರದರ್ಶನಗಳ ಸಂಖ್ಯೆಯನ್ನು ಏರಿಸಲಾಗುತ್ತದೆ.

ಬೆಳಗಿನ ಜಾವದಿಂದಲೇ ಪ್ರದರ್ಶನ

ಪುಷ್ಪ 2’ ಚಿತ್ರದ ವಿಷಯದಲ್ಲಿ ಹೇಳುವುದಾದರೆ, ಡಿ.05ರಂದು ಚಿತ್ರದ ಮೊದಲ ಪ್ರದರ್ಶನ ಬೆಳಿಗ್ಗೆ 3.00ಕ್ಕೆ ಪೀಣ್ಯದ ಭಾರತಿ ಚಿತ್ರಮಂದಿರದಲ್ಲಿ ನಿಗದಿಪಡಿಸಲಾಗಿದೆ. ಪ್ರಸನ್ನ ಚಿತ್ರಮಂದಿರದಲ್ಲಿ 3.15ಕ್ಕೆ ಮೊದಲ ಪ್ರದರ್ಶನ ಶುರುವಾದರೆ, ಗೌಡನಪಾಳ್ಯದ ಶ್ರೀನಿವಾಸ, ಕದಿರೇನಹಳ್ಳಿಯ ಮಾದೇಶ್ವರ, ತಾವರೆಕೆರೆಯ ಬಾಲಾಜಿ ಮತ್ತು ಲಕ್ಷ್ಮೀ ಮುಂತಾದ ಕಡೆ 3.30ಕ್ಕೆ ಪ್ರದರ್ಶನ ಶುರುವಾಗಲಿದೆ. ಇನ್ನು, ಸುಂಕದಕಟ್ಟೆಯ ಮೋಹನ, ಮತ್ತಿಕೆರೆಯ ಮುರಳಿ, ರಾಜಾಜಿನಗರದ ನವರಂಗ್‍, ಸರ್ಜಾಪುರದ ರವಿ, ಎಸ್‍.ಜೆ.ಪಿ ರಸ್ತೆಯ ಶಾರದಾ, ಜೆ.ಪಿ.ನಗರದ ಸಿದ್ಧಲಿಂಗೇಶ್ವರ, ವಿವೇಕನಗರದ ಬಾಲಾಜಿ, ಬೊಮ್ಮನಹಳ್ಳಿಯ ಕೃಷ್ಣ, ಆರ್ ಟಿ . ನಗರದ ರಾಧಾಕೃಷ್ಣ, ಉಲ್ಲಾಳದ ವಜ್ರೇಶ್ವರಿ ಮುಂತಾದ ಕಡೆ 4 ಗಂಟೆಗೆ ಪ್ರದರ್ಶನ ಶುರುವಾಗಲಿದೆ. ಕೆಲವು ಮಲ್ಟಿಫ್ಲೆಕ್ಸ್‌ಗಳಲ್ಲಿ ಬೆಳಗ್ಗೆ 6.30ಕ್ಕೆ ಪ್ರದರ್ಶನ ಪ್ರಾರಂಭವಾಗಲಿದೆ. ಏಕಪರದೆಯ ಚಿತ್ರಮಂದಿರಗಳಲ್ಲಿ ದಿನಕ್ಕೆ ಆರು ಪ್ರದರ್ಶನವಿದ್ದರೆ, ಕೆಲವು ಮಲ್ಟಿಫ್ಲೆಕ್ಸ್‌ಗಳಲ್ಲಿ 20ಕ್ಕೂ ಹೆಚ್ಚು ಪ್ರದರ್ಶನಗಳನ್ನು ನಿಗದಿಪಡಿಸಲಾಗಿದೆ.

ವಿದೇಶದಲ್ಲೂ ಕಲೆಕ್ಷನ್‌ ಕಮಾಲ್‌

ಇನ್ನು, ‘ಪುಷ್ಪ 2’ ಚಿತ್ರವು ಡಿಸೆಂಬರ್ 04ರಂದೇ ಅಮೇರಿಕಾದಲ್ಲಿ ಪ್ರೀಮಿಯರ್ ಆಗಲಿದೆ. ಚಿತ್ರದ ಮುಂಗಡ ಬುಕ್ಕಿಂಗ್ ಪ್ರಾರಂಭವಾಗಿದ್ದು, ದಾಖಲೆಯ 974 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುವುದರ ಜೊತೆಗೆ 58 ಸಾವಿರಕ್ಕೂ ಹೆಚ್ಚು ಟಿಕೆಟ್‍ಗಳು ಇದುವರೆಗೂ ಮಾರಾಟವಾಗಿವೆ ಎಂದು ಹೇಳಲಾಗುತ್ತಿದೆ. ಇದರಿಂದ 1.66 ಮಿಲಿಯನ್‍ ಡಾಲರ್ (14.04 ಕೋಟಿ ರೂ.) ಬಿಡುಗಡೆಗೆ ಮುನ್ನವೇ ಬಂದಿದೆ ಎಂಬ ಮಾಹಿತಿ ಇದೆ.

‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್‍, ರಶ್ಮಿಕಾ ಮಂದಣ್ಣ, ಧನಂಜಯ್‍, ಫಹಾದ್‍ ಫಾಸಿಲ್‍, ಸುನೀಲ್, ಅನುಸೂಯ ಭಾರದ್ವಾಜ್‍ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸುಕುಮಾರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದರೆ, ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆಯು ಚಿತ್ರವನ್ನು ನಿರ್ಮಿಸಿದೆ.

ವರದಿ: ಚೇತನ್‌ ನಾಡಿಗೇರ್

Whats_app_banner