ʼಸತ್ಯʼದ ನಂತರ 8 ತಿಂಗಳು ಸಿನಿಮಾಗಳಿಲ್ಲದೆ ಇದ್ದೆ; ಮನೋಜ್ ಬಾಜ್ಪೇಯಿ
́ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಸತ್ಯ ಚಿತ್ರದ ಭಿಕು ಮಾಹ್ಟ್ರೆ ಪಾತ್ರದ ಯಶಸ್ಸಿನ ಬಳಿಕ, ನಿರ್ದೇಶಕರು ನನಗೆ ಖಳನಟನ ಪಾತ್ರಕ್ಕೆ ಹೆಚ್ಚು ಆಫರ್ ನೀಡುತ್ತಿದ್ದರು, ಎಂದು ತಮಗೆ ಹೆಸರು ತಂದು ಕೊಟ್ಟ ಪಾತ್ರದ ಬಗ್ಗೆ ನೆನೆದಿದ್ದಾರೆ ನಟ ಮನೋಜ್ ಬಾಜ್ಪೇಯಿ.
ಭಿಕು ಮಾಹ್ಟ್ರೆ ಪಾತ್ರ ಮನೋಜ್ ಬಾಜ್ಪೇಯಿ ಅವರ ವೃತ್ತಿಜೀವನವನ್ನೇ ಬದಲಿಸಿತ್ತು. ಇವರ ಮುಂಬೈ ಗ್ಯಾಂಗ್‌ಸ್ಟರ್ ಪಾತ್ರ ಇವರನ್ನು ಫೇಮಸ್ಸ್ ಮಾಡಿದ್ದು ಮಾತ್ರವಲ್ಲ, ಅನೇಕ ಪ್ರಶಸ್ತಿಗಳನ್ನೂ ತಂದುಕೊಟ್ಟಿತ್ತು. ಆದರೆ ಈ ಯಶಸ್ಸಿನ ನಂತರ ಕೇವಲ ಖಳನಾಯಕ ಪಾತ್ರಕಷ್ಟೇ ಬಾಜ್ಪೇಯಿ ಸೀಮಿತರಾಗಿದ್ದರು, ಅಲ್ಲದೇ ನಿರ್ದೇಶಕರು ವಿಲನ್ ಪಾತ್ರಕ್ಕೆ ಮಾತ್ರ ಇವರಿಗೆ ಆಫರ್ ನೀಡುತ್ತಿದ್ದರು. ಆದರೆ ಇವರಿಗೆ ಭಿನ್ನ ಪಾತ್ರ ಮಾಡಬೇಕು ಎಂಬ ಹಂಬಲವಿದ್ದ ಕಾರಣ, ಬಂದ ಆಫರ್‌ಗಳನ್ನು ತಿರಸ್ಕರಿಸುತ್ತಿದ್ದರಂತೆ.
ಸತ್ಯ ಸಿನಿಮಾ 1998ರಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ ಮನೋಜ್ ಜೊತೆಗೆ ಜೆಡಿ ಚಕ್ರವರ್ತಿ, ಊರ್ಮಿಳಾ ಮಾತೋಂಡ್ಕರ್, ಸೌರಭ್ ಶುಕ್ಲಾ, ಆದಿತ್ಯ ಶ್ರೀವಾಸ್ತವ್ ಹಾಗೂ ಪರೇಶ್ ರಾವಲ್ ಮುಂತಾದವರು ತೆರೆ ಹಂಚಿಕೊಂಡಿದ್ದರು. ಈ ಚಿತ್ರಕ್ಕೆ ಸೌರಭ್ ಹಾಗೂ ಅನುರಾಗ್ ಕಶ್ಯಪ್ ಚಿತ್ರಕಥೆ ಬರೆದಿದ್ದರು.
ಬಾಜ್ಪೇಯಿ ನಟನೆಯ ಗುಲ್‌ಮೊಹರ್ ಚಿತ್ರ ಬಿಡುಗಡೆ ಸಿದ್ಧವಾಗಿದ್ದು, ಈ ವೇಳೆ ತಮಗೆ ಹೆಸರು ತಂದುಕೊಟ್ಟ ಚಿತ್ರದ ಬಗ್ಗೆ ನೆನಪಿಸಿಕೊಂಡಿದ್ದಾರೆ ಈ ನಟ. ಆಗ ಇವರು ಮಾಲ್‌ಗೆ ಭೇಟಿ ನೀಡಿದ್ದ ಸಂದರ್ಭವನ್ನು ನೆನಪಿಸಿಕೊಂಡ ನಟ, ಭಿಕು ಮಾಹ್ಟ್ರೆ ಅಭಿಮಾನಿಗಳನ್ನು ನಿಯಂತ್ರಿಸಲು ಸೆಕ್ಯೂರಿಟಿ ಸಾಲುತ್ತಿರಲಿಲ್ಲ ಎಂದಿದ್ದಾರೆ.
ಆಂಗ್ಲ ಮಾಧ್ಯಮಗಳಿಗೆ ನೀಡಿದ ಸಂದರ್ಶನದದಲ್ಲಿ ಈ ಬಗ್ಗೆ ಮಾತನಾಡಿದ ನಟ ʼನನಗೆ ಖಳ ನಾಯಕನಾಗಿ ಮುಂದುವರಿಯುವ ಹಂಬಲ ಇರಲಿಲ್ಲ. ಆ ಕಾರಣಕ್ಕೆ ನಾನು ಬಹಳ ಸಮಯದವರೆಗೆ ಸಿನಿಮಾಗಳೇ ಇಲ್ಲದೆ ಇದ್ದೆ. ಸತ್ಯ ಸಿನಿಮಾದ ಬಳಿಕ ಬಾಲಿವುಡ್‌ಗೆ ಒಬ್ಬ ಹೊಸ ಖಳನಟ ಸಿಕ್ಕ ಎಂಬ ಮನೋಭಾವದಿಂದಲೇ ಎಲ್ಲರೂ ನನ್ನನ್ನು ನೋಡುತ್ತಿದ್ದರು, ಆದರೆ ನನಗೆ ಖಳನಟನಾಗುವುದು ಇಷ್ಟವಿರಲಿಲ್ಲ. ಆ ಕಾರಣಕ್ಕೆ ಈ ಸಿನಿಮಾದ ಬಳಿಕ 8 ತಿಂಗಳು ಕೆಲಸವಿಲ್ಲದೇ ಇದ್ದೆ" ಎಂದು ಅಂದಿನ ದಿನಗಳನ್ನು ಮೆಲುಕು ಹಾಕಿದ್ದಾರೆ.
ʼನನಗೆ ಸೂಪರ್‌ಸ್ಟಾರ್‌ಗಳ ಎದುರು ಖಳನಟನಾಗುವ ಹಲವು ಅವಕಾಶಗಳು ಬಂದಿದ್ದವು. ಆದರೆ ನನ್ನ ಮನಸ್ಸನ್ನು ಬೇರೆಯದ್ದನ್ನೇ ಯೋಚಿಸುತ್ತಿತ್ತು. ಆದರೆ ಅಷ್ಟೊಂದು ಹಣ ಹಾಗೂ ಸಿನಿಮಾಗಳಿಗೆ ಇಲ್ಲ ಎನ್ನುವುದೂ ಕಷ್ಟವಾಗುತ್ತಿತ್ತು. ಆದರೆ ಸತ್ಯ ಸಿನಿಮಾಗೂ ಮೊದಲು ನನಗೆ ಹಣ ಹಾಗೂ ಸಿನಿಮಾ ಎರಡೂ ಬೇಕಿತ್ತು, ಆದರೆ ಈ ಸಿನಿಮಾದ ನಂತರ ಈ ಎರಡನ್ನೂ ನಾನು ಬೇಡ ಎನ್ನುತ್ತಿದೆ. ಆಗ ಅದು ನನಗೆ ಸರಿಯೋ ತಪ್ಪೋ ತಿಳಿಯುತ್ತಿರಲಿಲ್ಲʼ ಎಂದು ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಸತ್ಯ ಸಿನಿಮಾದ ಬಳಿಕ ಮನೋಜ್ ರಾಮ್ ಗೋಪಾಲ್ ವರ್ಮಾ ಅವರ ಕೌನ್ ಹಾಗೂ ರೋಡ್ ಸಿನಿಮಾಗಳಲ್ಲಿ ನಟಿಸಿದ್ದರು. ಸ್ಕೂಲ್, ದಿಲ್ ಪೆ ಮತ್ ಲೇ ಯಾರ್, ಅಕ್ಸ್ ಮುಂತಾದ ಕೆಲವು ಸಿನಿಮಾಗಳಲ್ಲಿ ಬಾಜಪೇಯಿ ಮುಖ್ಯಪಾತ್ರದಲ್ಲೂ ನಟಿಸಿದ್ದರು. ಈ ಸಿನಿಮಾಗಳು 1999 ರಿಂದ 2002 ಇಸವಿಯ ಮಧ್ಯದಲ್ಲಿ ಬಿಡುಗಡೆಯಾಗಿದ್ದವು.
ಆ ನಂತರ ಇವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟ ಸಿನಿಮಾ 2010ರಲ್ಲಿ ಬಿಡುಗಡೆಯಾದ ರಾಜನೀತಿ. ಆ ನಂತರ ಬಿಡುಗಡೆ ಕಂಡ ಗ್ಯಾಂಗ್ಸ್ ಆಫ್ ವಾಸ್ಸಿಪುರ್ ಭಾಗ- 1, ಸ್ಪೆಷಲ್ 26, ಅಲಿಘರ್, ಸೋನಂಚಿರಿಯಾ ಸಿನಿಮಾಗಳು ಇವರಿಗೆ ಹೆಸರು ತಂದುಕೊಟ್ಟಿದ್ದವು.
2021ರಲ್ಲಿ ಜೀ 5ನಲ್ಲಿ ಬಿಡುಗಡೆಯಾದ ಡಯಲ್ 100 ಸಿನಿಮಾ ನಂತರ ಇವರು ತೆರೆ ಮೇಲೆ ಕಾಣಿಸಿರಲಿಲ್ಲ. ಇದೀಗ ಗುಲ್‌ಮೊಹರ್ ಬಿಡುಗಡೆಗೆ ಸಿದ್ಧವಾಗಿದ್ದು, ಈ ಚಿತ್ರದಲ್ಲಿ ಮನೋಜ್ ಜೊತೆ ಶರ್ಮಿಳಾ ಟಾಗೋರ್, ಸಿಮ್ರನ್, ಸೂರಜ್ ಶರ್ಮಾ ಮೊದಲಾದವರು ನಟಿಸುತ್ತಿದ್ದಾರೆ. ಈ ಚಿತ್ರವು ಮಾರ್ಚ್ 3ಕ್ಕೆ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ.
ವಿಭಾಗ