ಟಾಕ್ಸಿಕ್ ಬಳಿಕ ಕಾಂತಾರ ಚಿತ್ರತಂಡದ ಮೇಲೂ ಅರಣ್ಯ ನಾಶ ಆರೋಪ? ರಿಷಬ್ ಶೆಟ್ಟಿ ಚಿತ್ರಕ್ಕೆ ಸಂಕಷ್ಟದ ಮೇಲೆ ಸಂಕಷ್ಟ
ಕಾಂತಾರ ಚಾಪ್ಟರ್ 1 ಸಿನಿಮಾ, ಸದ್ಯ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆರೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಶೂಟಿಂಗ್ ನಡೆಸಿದೆ. ಇದೇ ಶೂಟಿಂಗ್ ಸಮಯದಲ್ಲಿ ಚಿತ್ರತಂಡದ ವಿರುದ್ಧ ಅರಣ್ಯ ಜಾಗಕ್ಕೆ ಬೆಂಕಿ ಹಚ್ಚಿ ಪರಿಸರಕ್ಕೆ ಹಾನಿ ಮಾಡಿದ ಆರೋಪ ಕೇಳಿಬಂದಿದೆ.

Kantara Chapter 1: ರಿಷಬ್ ಶೆಟ್ಟಿ ನಿರ್ದೇಶಕನದ ಮತ್ತು ನಾಯಕನಾಗಿ ನಟಿಸುತ್ತಿರುವ ಕಾಂತಾರ ಚಾಪ್ಟರ್ 1 ಸಿನಿಮಾ ಬಗ್ಗೆ ಸದ್ಯ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಮೊದಲ ಭಾಗದ ಅಭೂತಪೂರ್ವ ಯಶಸ್ಸಿನ ಬಳಿಕ, ಎರಡನೇ ಭಾಗದ ಮೇಲೆ ಕರ್ನಾಟಕ ಮಾತ್ರವಲ್ಲದೆ, ದೇಶದ ಸಿನಿಮಾ ಪ್ರಿಯರ ಗಮನ ಈ ಸಿನಿಮಾ ಮೇಲಿದೆ. ಇಂತಿಪ್ಪ ಕಾಂತಾರ ಚಾಪ್ಟರ್ 1 ಚಿತ್ರ ಸದ್ಯ ಶೂಟಿಂಗ್ ಹಂತದಲ್ಲಿದೆ. ಹೀಗಿರುವಾಗಲೇ, ಇದೇ ತಂಡದ ವಿರುದ್ಧ ಅರಣ್ಯ ನಾಶ ಆರೋಪ ಕೇಳಿಬಂದಿದೆ.
ಹೊಂಬಾಳೆ ಫಿಲಂಸ್ ಬ್ಯಾನರ್‌ನಲ್ಲಿ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಕಾಂತಾರ ಚಾಪ್ಟರ್ 1 ಸಿನಿಮಾ, ಸದ್ಯ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆರೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಶೂಟಿಂಗ್ ನಡೆಸಿದೆ. ಇದೇ ಶೂಟಿಂಗ್ ಸಮಯದಲ್ಲಿ ಅರಣ್ಯ ಜಾಗಕ್ಕೆ ಬೆಂಕಿ ಹಚ್ಚಿ ಪರಿಸರಕ್ಕೆ ಹಾನಿ ಮಾಡಲಾಗುತ್ತಿದೆ ಎಂಬ ದೂರು ಕೇಳಿಬಂದಿದೆ.
ಈ ತಿಂಗಳ ಆರಂಭದಿಂದಲೂ ಇಲ್ಲಿನ ಹೆರೂರು ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿನ ಗೋಮಾಳ ಜಾಗದಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ, ಅರಣ್ಯ ಇಲಾಖೆಯಿಂದ ಕಾಂತಾರ ಚಿತ್ರತಂಡ ಪರವಾನಗಿ ಪಡೆದುಕೊಂಡಿದೆ. ಹೀಗಿರುವಾಗಲೇ ಶೂಟಿಂಗ್ ವೇಳೆ ಅರಣ್ಯಕ್ಕೆ ಬೆಂಕಿ ಹಚ್ಚಿದ ಆರೋಪ ಕೇಳಿಬಂದಿದೆ. ಇತ್ತ ಅರಣ್ಯ ಭೂಮಿಗೆ ಬೆಂಕಿ ಹಚ್ಚಿದ್ದಕ್ಕೆ, ಹೆರೂರು ಗ್ರಾಮಸ್ಥರು ಚಿತ್ರತಂಡ ಮತ್ತು ಅರಣ್ಯ ಇಲಾಖೆ ನಡೆಯ ವಿರುದ್ಧ ಕೊಂಚ ಗರಂ ಆಗಿದ್ದಾರೆ.
ಕಾಂತಾರ ಚಾಪ್ಟರ್ 1ಕ್ಕೆ ಸರಣಿ ಸಂಕಷ್ಟ
- ಕಳೆದ ವರ್ಷದ ನವೆಂಬರ್‌ನಲ್ಲಿಯೂ ಇದೇ ಕಾಂತಾರ ಚಾಪ್ಟರ್ 1 ಸಿನಿಮಾ ಶೂಟಿಂಗ್ ವೇಳೆ ಕೆಲ ಅವಘಡಗಳು ಸಂಭವಿಸಿದ್ದವು. ಶೂಟಿಂಗ್ ಸೆಟ್‌ನಲ್ಲಿ ಜೂನಿಯರ್ ಕಲಾವಿದರಿಗೆ ಸಂಭಾವನೆ ನೀಡದೆ, ಅವ್ಯವಸ್ಥೆಯ ವಸತಿ ಸೌಕರ್ಯದ ಜತೆಗೆ ಊಟ ನೀಡುತ್ತಿಲ್ಲ ಎಂಬ ಆರೋಪ ಹೊಂಬಾಳೆ ಫಿಲಂಸ್ ವಿರುದ್ಧ ಕೇಳಿಬಂದಿತ್ತು.
- ಕಾಂತಾರ ಚಿತ್ರದ ಜೂನಿಯರ್ ಕಲಾವಿದರನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್, ಕೊಲ್ಲೂರು ಸಮೀಪದ ಜಡ್ಕಳ್ ಬಳಿ ಪಲ್ಟಿ ಹೊಡೆದಿತ್ತು. ಪಲ್ಟಿಯಾದ ಹಿನ್ನೆಲೆಯಲ್ಲಿ ಬಸ್‌ನಲ್ಲಿದ್ದ 20 ಜನರ ಪೈಕಿ ಆರು ಜನರಿಗೆ ಗಂಭೀರ ಗಾಯಗಳಾಗಿದ್ದು, ಎಲ್ಲರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ರಿಷಬ್ ಶೆಟ್ಟಿಯ ಇದೇ ಚಿತ್ರದ ವಿರುದ್ಧ ಅರಣ್ಯ ನಾಶ ಆರೋಪ ಕೇಳಿಬಂದಿದೆ.
- ಟಾಕ್ಸಿಕ್ ತಂಡಕ್ಕೂ ಎದುರಾಗಿತ್ತು ಇಂಥದ್ದೇ ಸಮಸ್ಯೆ: ಕಾಂತಾರ ಮಾತ್ರವಲ್ಲದೆ, ರಾಕಿಂಗ್ ಸ್ಟಾರ್ ನಟನೆಯ ಟಾಕ್ಸಿಕ್ ಸಿನಿಮಾ ತಂಡದ ವಿರುದ್ಧವೂ ಕಳೆದ ವರ್ಷ ಅರಣ್ಯ ನಾಶದ ಆರೋಪ ಕೇಳಿಬಂದಿತ್ತು. ಸ್ವತಃ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿಯ ಕೆಲ ಸ್ಯಾಟಲೈಟ್ ಫೋಟೋಗಳನ್ನು ಹಂಚಿಕೊಂಡು, ಚಿತ್ರತಂಡದ ವಿರುದ್ಧ ಕಾನೂನು ಕ್ರಮಕ್ಕೆ ಆದೇಶಿಸಿದ್ದರು.
ಅಕ್ಟೋಬರ್ 2ರಂದು ಸಿನಿಮಾ ಬಿಡುಗಡೆ
ರಿಷಬ್ ಶೆಟ್ಟಿ ನಿರ್ದೇಶನದ ಜತೆಗೆ ನಾಯಕ ನಟನಾಗಿಯೂ ಕಾಂತಾರ ಚಾಪ್ಟರ್ 1ರಲ್ಲಿ ನಟಿಸುತ್ತಿದ್ದಾರೆ. ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ನೂರಾರು ಕೋಟಿಯ ಹೂಡಿಕೆ ಮಾಡುತ್ತಿರುವ ಹೊಂಬಾಳೆ, ಕುಂದಾಪುರದ ಕೆರಾಡಿಯಲ್ಲಿ ಕದಂಬ ಸಾಮ್ರಾಜ್ಯವನ್ನು ಹೋಲುವ ದೊಡ್ಡ ಸೆಟ್ ಹಾಕಿ ಸಿನಿಮಾ ಶೂಟಿಂಗ್ ಆರಂಭಿಸಿದೆ. ಇದೇ ಚಿತ್ರಕ್ಕಾಗಿ ಕೇರಳದ ಕಲರಿಪಯಟ್ಟು ಕಲೆಯನ್ನೂ ಕರಗತ ಮಾಡಿಕೊಳ್ಳುತ್ತಿದ್ದಾರೆ ರಿಷಬ್. ಅಂದಹಾಗೆ ಈ ಸಿನಿಮಾ ಇದೇ ವರ್ಷದ ಅಕ್ಟೋಬರ್ 2ರಂದು ಬಿಡುಗಡೆ ಆಗಲಿದೆ.

ವಿಭಾಗ