ಅಜ್ಞಾತವಾಸಿ ಏಪ್ರಿಲ್‌ 11ರಂದು ಬಿಡುಗಡೆ: ಈ ಸಿನಿಮಾ 3 ವರ್ಷ ಅಜ್ಞಾತವಾಸದಲ್ಲಿದ್ದದ್ದು ಏಕೆ? ಹೇಮಂತ್‌ ಎಂ ರಾವ್‌ ಹೀಗಂದ್ರು
ಕನ್ನಡ ಸುದ್ದಿ  /  ಮನರಂಜನೆ  /  ಅಜ್ಞಾತವಾಸಿ ಏಪ್ರಿಲ್‌ 11ರಂದು ಬಿಡುಗಡೆ: ಈ ಸಿನಿಮಾ 3 ವರ್ಷ ಅಜ್ಞಾತವಾಸದಲ್ಲಿದ್ದದ್ದು ಏಕೆ? ಹೇಮಂತ್‌ ಎಂ ರಾವ್‌ ಹೀಗಂದ್ರು

ಅಜ್ಞಾತವಾಸಿ ಏಪ್ರಿಲ್‌ 11ರಂದು ಬಿಡುಗಡೆ: ಈ ಸಿನಿಮಾ 3 ವರ್ಷ ಅಜ್ಞಾತವಾಸದಲ್ಲಿದ್ದದ್ದು ಏಕೆ? ಹೇಮಂತ್‌ ಎಂ ರಾವ್‌ ಹೀಗಂದ್ರು

ಗುಲ್ಟೂ ಖ್ಯಾತಿಯ ಜನಾರ್ದನ್‌ ಚಿಕ್ಕಣ್ಣ ನಿರ್ದೇಶನದ ಅಜ್ಞಾತವಾಸಿ ಸಿನಿಮಾವನ್ನು ಹೇಮಂತ್‌ ಎಂ ರಾವ್‌ ನಿರ್ಮಿಸಿದ್ದಾರೆ. ಈ ಸಿನಿಮಾ ಏಪ್ರಿಲ್‌ 11ರಂದು ತೆರೆ ಕಾಣಲಿದೆ. ಈ ಚಿತ್ರ ಬಿಡುಗಡೆ ಸಾಕಷ್ಟು ವಿಳಂಬವಾಗಿರುವ ಕಾರಣವನ್ನು ನಿರ್ಮಾಪಕ ಹೇಮಂತ್‌ ಎಂ ರಾವ್‌ ತಿಳಿಸಿದ್ದಾರೆ.

ಅಜ್ಞಾತವಾಸಿ ಏಪ್ರಿಲ್‌ 11ರಂದು ಬಿಡುಗಡೆ: ಈ ಸಿನಿಮಾ 3 ವರ್ಷ ಅಜ್ಞಾತವಾಸದಲ್ಲಿದ್ದದ್ದು ಏಕೆ?
ಅಜ್ಞಾತವಾಸಿ ಏಪ್ರಿಲ್‌ 11ರಂದು ಬಿಡುಗಡೆ: ಈ ಸಿನಿಮಾ 3 ವರ್ಷ ಅಜ್ಞಾತವಾಸದಲ್ಲಿದ್ದದ್ದು ಏಕೆ?

ಅಜ್ಞಾತವಾಸಿ ಎಂಬ ಸಿನಿಮಾ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಆದರೆ, ಈ ಸಿನಿಮಾ ಕಳೆದ ಮೂರು ವರ್ಷಗಳಿಂದ ಬಿಡುಗಡೆಯಾಗದೆ ಕಾಯುತ್ತಿತ್ತು. ಗುಲ್ಟೂ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ಸಿನಿಮಾ ಇದಾಗಿದೆ. ಈ ಚಿತ್ರದ ಶೂಟಿಂಗ್‌ ಆರಂಭವಾಗಿ ಮೂರು ವರ್ಷಗಳು ಕಳೆದಿವೆ. ಮುಂದಿನ ತಿಂಗಳು ಅಂದರೆ ಏಪ್ರಿಲ್‌ 11ರಂದು ಈ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರವನ್ನು ನಿರ್ಮಾಣ ಮಾಡಿರುವ ಹೇಮಂತ್‌ ಎಂ ರಾವ್‌ ಅವರು "ಈ ಚಿತ್ರದ ಬಿಡುಗಡೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿರುವುದಾಗಿ" ಹೇಳಿದ್ದಾರೆ. "ಮೂರು ವರ್ಷ ಸುದೀರ್ಘ ಸಮಯ ಎನ್ನುವುದು ನಿಜ. ನಾವು ಸಿನಿಮಾ ಬಿಡುಗಡೆಗೆ ಸಿದ್ಧರಾಗಿದ್ದೇವು. ಆದರೆ, ನಾನು ಬಿಡುಗಡೆಯನ್ನು ವಿಳಂಬ ಮಾಡಿದೆ. ತಾಂತ್ರಿಕ ಕಾರಣಗಳಿಂದ ಈ ಸಿನಿಮಾ ಬಿಡುಗಡೆಗೆ ಬ್ರೇಕ್‌ ಹಾಕಿದೆ. ಯಾಕೆಂದರೆ, ಆಗ ಈ ಚಿತ್ರ ಬಿಡುಗಡೆಗೆ ಮಾರುಕಟ್ಟೆ ಅನುಕೂಲವಾಗಿರಲಿಲ್ಲ" ಎಂದು ದಿ ಹಿಂದೂವಿಗೆ ನೀಡಿದ ಸಂದರ್ಶನದಲ್ಲಿ ಹೇಮಂತ್‌ ಮಾಹಿತಿ ನೀಡಿದ್ದಾರೆ.  ಈ  ಸಿನಿಮಾದಲ್ಲಿ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಹಣ ಕಳೆದುಕೊಳ್ಳಲು ನಾನು ರೆಡಿ ಇರಲಿಲ್ಲ

"ಅಜ್ಞಾತವಾಸಿ ಸಿನಿಮಾವು ನಾನು ಇತರೆ ಸಿನಿಮಾಗಳಿಂದ ಸಂಪಾದನೆ ಮಾಡಿರುವ ಹಣದಿಂದ ನಿರ್ಮಿಸಲಾಗಿದೆ. ಆ ಹಣವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಎಲ್ಲಾ ಕಳೆದುಕೊಂಡು ಬರಿಗೈನಲ್ಲಿ ಹಿಂತುರುಗುವುದು ನನ್ನ ಆಯ್ಕೆಯಾಗಿರಲಿಲ್ಲ. ಇದು ಕೇವಲ ನನ್ನ ವಿಷಯವಲ್ಲ. ನನ್ನ ಮೇಲೆ ನಂಬಿಕೆ ಇಟ್ಟ ಇಬ್ಬರು ಹೂಡಿಕೆದಾರರು ಕೂಡ ಇದ್ದರು. ಹೀಗಾಗಿ, ಗಳಿಕೆ ಉತ್ತಮಪಡಿಸಬೇಕಿತ್ತು. ಆ ಸಮಯದಲ್ಲಿ ಮಾರುಕಟ್ಟೆ ತುಂಬಾ ಕೆಟ್ಟದ್ದಾಗಿತ್ತು. ಯಾರೂ ಮುಂದೆ ಬಂದು ತಮ್ಮ ಚಲನಚಿತ್ರವನ್ನು ಖರೀದಿಸಲು ಮತ್ತು ಗುಣಮಟ್ಟಕ್ಕೆ ತಕ್ಕಂತೆ ಉತ್ತಮ ಮೌಲ್ಯ ನೀಡಲು ಸಿದ್ಧರಿರಲಿಲ್ಲ" ಎಂದು ಹೇಮಂತ್‌ ಎಂ ರಾವ್‌ ಹೇಳಿದ್ದಾರೆ.

ಅಜ್ಞಾತವಾಸಿ ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ಸಂಯೋಜಕರಾಗಿ ಮತ್ತು ಅದ್ವೈತ ಗುರುಮೂರ್ತಿ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಇದು ತಾಂತ್ರಿಕವಾಗಿ ಉತ್ತಮ ಸಿನಿಮಾ. ಈ ಸಮಯದಲ್ಲಿ ಹೇಮಂತ್‌ಗೆ ಅತ್ಯಂತ ಕಡಿಮೆ ಆಫರ್‌ಗಳು ಸಿಗುತ್ತಿದ್ದವು. ಪರಿಸ್ಥಿತಿ ಸರಿಯಾಗುವ ತನಕ ಕಾಯಲು ನಿರ್ಧರಿಸಿದ್ದೇವು ಎಂದು ಅವರು ಹೇಳಿದ್ದಾರೆ.

ಈಗ ಮಾರುಕಟ್ಟೆ ಸಾಕಷ್ಟು ಸುಧಾರಿಸಿದೆ. ಖರೀದಿ ಮಾದರಿಗಳು ಬದಲಾಗಿವೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳು ಆಯ್ಕೆ ಮಾಡಿಕೊಂಡು ಚಲನಚಿತ್ರಗಳನ್ನು ತೆಗೆದುಕೊಳ್ಳುತ್ತಿವೆ. ದೊಡ್ಡ ಸಿನಿಮಾಗಳನ್ನೂ ಕೆಲವೊಮ್ಮೆ ಖರೀದಿಸುತ್ತಿಲ್ಲ. ಕನ್ನಡ ಮಾತ್ರವಲ್ಲ ಇತರೆ ಭಾಷೆಗಳಲ್ಲಿಯೂ ಈ ತೊಂದರೆ ಇದೆ. ಸಾಂಕ್ರಾಮಿಕದ ಸಮಯದಲ್ಲಿ ಒಟಿಟಿಗಳ ಮೂಲಕ ಸಾಕಷ್ಟು ಸಿನಿಮಾ ಬಿಡುಗಡೆ ಮಾಡಲಾಯಿತು. ಆ ಸಮಯದಲ್ಲಿ ಈ ಮಾರುಕಟ್ಟೆ ಅಂಬೆಗಾಲಿಡುತ್ತ ಇತ್ತು. ಈಗ ಸಾಕಷ್ಟು ಸುಧಾರಿಸಿದೆ ಎಂದು ಹೇಮಂತ್‌ ಅಭಿಪ್ರಾಯಪಟ್ಟಿದ್ದಾರೆ.

ಈಗ ಒಟಿಟಿಗಳು ಮಾರುಕಟ್ಟೆಯಲ್ಲಿ ದೃಢವಾಗಿ ನೆಲೆಯೂರಿವೆ. ಅವುಗಳ ಕಾರ್ಯತಂತ್ರಕ್ಕೆ ತಕ್ಕಂತೆ ವರ್ತಿಸುವ ಸಿನಿಮಾಗಳನ್ನು ಒಟಿಟಿಗಳು ಖರೀದಿಸುತ್ತವೆ. "ಒಟಿಟಿಗಳ ದೃಷ್ಟಿಕೋನದಿಂದ ಅವರು ಹೇಳಿದ್ದು ಸರಿ ಇರಬಹುದು. ಆದರೆ, ಸಿನಿಮಾ ಮಾಡಿರುವ ನಮಗೆ ಸಂಬಂಧಿಸಿದಂತೆ ಯೋಚಿಸಿದರೆ ನಮಗೆ ನಿರ್ದಿಷ್ಟ ಮೌಲ್ಯ ದೊರಕುವುದಿಲ್ಲ. ಈ ರೀತಿಯಾದರೆ ಸಿನಿಮಾ ಮಾಡುವ ಸಂಪೂರ್ಣ ಉದ್ದೇಶವೇ ಬದಲಾಗುತ್ತದೆ. ಜನರು ಕನ್ನಡ ಸಿನಿಮಾವನ್ನು ನೋಡಲು ಬಯಸಿದರೆ ಅವರು ಥಿಯೇಟರ್‌ಗಳತ್ತ ಬರಬೇಕು ಎನ್ನುವುದು ಈಗಿನ ಅರಿವು. ಆದರೆ, ಜನರು ಚಿತ್ರಮಂದಿರಕ್ಕೆ ಬರಬೇಕಾದರೆ, ನಾವು ಒಳ್ಳೆಯ ಸಿನಿಮಾ ಮಾಡಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಇದದು ಮಲಯಾಳಂ, ತೆಲುಗು, ತಮಿಳು ಚಿತ್ರರಂಗಕ್ಕೂ ಅನ್ವಯಿಸುತ್ತದೆ" ಎಂದು ಅವರು ಹೇಳಿದ್ದಾರೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner