25 ವರ್ಷಗಳಿಂದ ಒಂದೇ ಒಂದು ಅಪರಾಧ ನಡೆಯದ ಹಳ್ಳಿಯಲ್ಲಿ ಕೊಲೆ ನಡೆದರೆ ಏನಾಗುತ್ತದೆ? ಒಟಿಟಿಗೆ ಬರ್ತಿದೆ ಕನ್ನಡದ ಸಿನಿಮಾ
ಈ ವರ್ಷ ಕನ್ನಡದಲ್ಲಿ ದೊಡ್ಡ ಬ್ಲಾಕ್ ಬಸ್ಟರ್ ಆಗಿ ಹೊರಹೊಮ್ಮಿರುವ ಅಜ್ಞಾತವಾಸಿ ಸಿನಿಮಾ ಒಟಿಟಿ ಬಿಡುಗಡೆ ದಿನಾಂಕ ಖಚಿತವಾಗಿದೆ. ಮೇ 28 ರಂದು ಜೀ5 ಒಟಿಟಿಯಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಈ ಕ್ರೈಮ್ ಮಿಸ್ಟರಿ ಥ್ರಿಲ್ಲರ್ ಸಿನಿಮಾದಲ್ಲಿ ರಂಗಾಯಣ ರಘು, ಪಾವನ ಗೌಡ, ಶರತ್ ಲೋಹಿತಶ್ವ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಈ ವರ್ಷ ಕನ್ನಡದಲ್ಲಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಕನ್ನಡ ಸಿನಿಮಾಗಳಲ್ಲಿ ʻಅಜ್ಞಾತವಾಸಿʼಯೂ ಒಂದು. ಇದೀಗ ಇದೇ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕ ಅಧಿಕೃತವಾಗಿದೆ. ಯಾವುದೇ ನಿರೀಕ್ಷೆಗಳಿಲ್ಲದೆ ಸಣ್ಣ ಚಿತ್ರವಾಗಿ ತೆರೆಕಂಡ ಈ ಕ್ರೈಮ್ ಮಿಸ್ಟರಿ ಥ್ರಿಲ್ಲರ್ ಸಿನಿಮಾ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಒಂದೂವರೆ ತಿಂಗಳಿಗೆ ಡಿಜಿಟಲ್ ಸ್ಟ್ರೀಮಿಂಗ್‌ಗೆ ಆಗಮಿಸುತ್ತಿದೆ. ಈ ಸಿನಿಮಾದಲ್ಲಿ ರಂಗಾಯಣ ರಘು, ಪಾವನಾ ಗೌಡ, ಸಿದ್ದು ಮೂಲಿಮನಿ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಸೇರಿ ಇನ್ನೂ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಏನಿದು ಅಜ್ಞಾತವಾಸಿ ಸಿನಿಮಾ ಕಥೆ?
ಇಪ್ಪತ್ತೈದು ವರ್ಷಗಳಿಂದ ಮಲೆನಾಡಿನ ನಾಲ್ಕೇರಿ ಗ್ರಾಮದಲ್ಲಿ ಒಂದೇ ಒಂದು ಅಪರಾಧ ನಡೆದಿಲ್ಲ. ಗೋವಿಂದು ಅವರನ್ನು ಪೊಲೀಸ್ ಅಧಿಕಾರಿಯಾಗಿ ಆ ಗ್ರಾಮಕ್ಕೆ ವರ್ಗಾಯಿಸಲಾಗುತ್ತದೆ. ಆ ಶಾಂತಿಯುತ ಹಳ್ಳಿಯಲ್ಲಿ, ನಡೆಯಬಾರದ್ದೊಂದು ನಡೆದುಬಿಡುತ್ತದೆ. ಗ್ರಾಮದ ಮುಖ್ಯಸ್ಥ ಶ್ರೀನಿವಾಸಯ್ಯನನ್ನು ಬರ್ಬರವಾಗಿ ಹತ್ಯೆ ಮಾಡಲಾಗುತ್ತದೆ. ಗೋವಿಂದು ಈ ಪ್ರಕರಣವನ್ನು ಸವಾಲಾಗಿ ತೆಗೆದುಕೊಳ್ಳುತ್ತಾನೆ.
ಆತನಿಗೆ ಈ ಕೊಲೆ ಮಾಡಿದ್ದು ರೋಹಿತ್ ಎಂಬ ಅನುಮಾನ. ಅಷ್ಟಕ್ಕೂ ಸಾಫ್ಟ್‌ವೇರ್ ಎಂಜಿನಿಯರ್ ರೋಹಿತ್ ಗ್ರಾಮಕ್ಕೆ ಬಂದಿದ್ದೇಕೆ? ಪಂಕಜಾ ಅವರೊಂದಿಗೆ ಆತನ ಸಂಬಂಧವೇನು? ಶ್ರೀನಿವಾಸಯ್ಯ ಅವರ ಕೊಲೆಗೂ, 1970ರಲ್ಲಿ ಗ್ರಾಮದಲ್ಲಿ ನಡೆದ ಘಟನೆಗೂ ಏನು ಸಂಬಂಧ? ಹೀಗೆ ಈ ಸಿನಿಮಾ ರೋಚಕ ಎನಿಸುತ್ತ ಸಾಗುತ್ತದೆ.
ಯಾವ ಒಟಿಟಿಯಲ್ಲಿ..
ʻಅಜ್ಞಾತವಾಸಿʼ ಸಿನಿಮಾ ಮೇ 28 ರಂದು ಜೀ5 ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಜೀ 5 ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಹೊಸ ಪೋಸ್ಟರ್ ಅನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ. ಅಜ್ಞಾತವಾಸಿ ಚಿತ್ರದಲ್ಲಿ ರಂಗಾಯಣ ರಘು, ಪಾವನ ಗೌಡ, ಶರತ್ ಲೋಹಿತಾಶ್ವ, ಸಿದ್ದು ಮೂಲಿಮನಿ, ರವಿಶಂಕರ್ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಜನಾರ್ದನ್ ಚಿಕ್ಕಣ್ಣ ಈ ಚಿತ್ರದ ನಿರ್ದೇಶಕರು. ನಾನ್ ಲೀನಿಯರ್ ತಂತ್ರದೊಂದಿಗೆ ಸಿನಿಮಾ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ʻಅಜ್ಞಾತವಾಸಿʼ ಚಿತ್ರಕ್ಕೂ ಮೊದಲು ಜನಾರ್ದನ್ ಚಿಕ್ಕಣ್ಣ ʻಗುಲ್ಟುʼ ಮತ್ತು ʻಪೌಡರ್ʼ ಚಿತ್ರಗಳನ್ನು ನಿರ್ದೇಶಿಸಿದ್ದರು. ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಐಎಂಡಿಬಿಯಲ್ಲಿ ಈ ಚಿತ್ರ 8.6 ರೇಟಿಂಗ್ ಗಳಿಸಿದೆ.
ಚರಣ್ ರಾಜ್ ಸಂಗೀತ, ಅದ್ವೈತ್ ಗುರುಮೂರ್ತಿ ಕ್ಯಾಮೆರಾ ವರ್ಕ್ ಈ ಸಿನಿಮಾಕ್ಕಿದೆ. ಜನಾರ್ದನ್ ಚಿಕ್ಕಣ್ಣ ಅವರ ಗುರುಗಳಾದ ಕೃಷ್ಣರಾಜ್ ʻಅಜ್ಞಾತವಾಸಿʼ ಚಿತ್ರಕ್ಕೆ ಕಥೆ ಬರೆದ್ದಾರೆ. ಭರತ್ ಎಂ.ಸಿ ಸಂಕಲನಕಾರರಾಗಿ, ಉಲ್ಲಾಸ್ ಹೈದೂರು ಕಲಾ ನಿರ್ದೇಶಕರಾಗಿ ʻಅಜ್ಞಾತವಾಸಿʼ ಚಿತ್ರದಲ್ಲಿ ಕಾರ್ಯನಿರ್ವಾಹಿಸಿದ್ದಾರೆ. ಈಗಾಗಲೇ ʻಗೋದಿ ಬಣ್ಣ ಸಾಧಾರಣ ಮೈಕಟ್ಟುʼ, ʻಕವಲುದಾರಿʼ, ʻಸಪ್ತ ಸಾಗರದಾಚೆ ಎಲ್ಲೋʼ ಸಿನಿಮಾಗಳನ್ನು ನಿರ್ದೇಶನ ಮಾಡಿದ ಹೇಮಂತ್ ಎಂ ರಾವ್, ʻಅಜ್ಞಾತವಾಸಿʼ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.