Air Show 2025: ವೈಮಾನಿಕ ಪ್ರದರ್ಶನ ವೀಕ್ಷಿಸಿದ ಪ್ರತಿಯೊಬ್ಬರಿಗೂ ಆಗುವ ಅನುಭವ ಒಂದೇ; ಮೇರಾ ಭಾರತ್ ಮಹಾನ್
ಕನ್ನಡ ಸುದ್ದಿ  /  ಮನರಂಜನೆ  /  Air Show 2025: ವೈಮಾನಿಕ ಪ್ರದರ್ಶನ ವೀಕ್ಷಿಸಿದ ಪ್ರತಿಯೊಬ್ಬರಿಗೂ ಆಗುವ ಅನುಭವ ಒಂದೇ; ಮೇರಾ ಭಾರತ್ ಮಹಾನ್

Air Show 2025: ವೈಮಾನಿಕ ಪ್ರದರ್ಶನ ವೀಕ್ಷಿಸಿದ ಪ್ರತಿಯೊಬ್ಬರಿಗೂ ಆಗುವ ಅನುಭವ ಒಂದೇ; ಮೇರಾ ಭಾರತ್ ಮಹಾನ್

Air Show 2025: ಉದ್ಯಾನ ನಗರಿ ಬೆಂಗಳೂರಿನ ವಾಯುಪಡೆ ನಿಲ್ದಾಣ ಯಲಹಂಕದಲ್ಲಿ ನಡೆಯುವ ವೈಮಾನಿಕ ಪ್ರದರ್ಶನ ಭಾರತದ ಪ್ರಜೆಗಳಿಗೊಂದು ಹೆಮ್ಮೆ.

ವೈಮಾನಿಕ ಪ್ರದರ್ಶನ
ವೈಮಾನಿಕ ಪ್ರದರ್ಶನ (ANI)

Air Show 2025: ಬಾನೆತ್ತರಕ್ಕೆ ಹಾರುವ ಲೋಹದ ಹಕ್ಕಿಗಳನ್ನು ನೋಡಲು ಸಾಕಷ್ಟು ಜನ ಕಾತರದಿಂದ ಕಾಯುತ್ತಿರುವ ಸಮಯ ಇದು. ಉದ್ಯಾನ ನಗರಿ ಬೆಂಗಳೂರಿನ ವಾಯುಪಡೆ ನಿಲ್ದಾಣ ಯಲಹಂಕದಲ್ಲಿ ನಡೆಯುವ ವೈಮಾನಿಕ ಪ್ರದರ್ಶನ ಭಾರತದ ಪ್ರಜೆಗಳಿಗೊಂದು ಹೆಮ್ಮೆ. ವೈಮಾನಿಕ ಪ್ರದರ್ಶನಕ್ಕೆ ಹೋಗುತ್ತಿದ್ದಂತೆ, ಬೆಂಗಳೂರು ಬಿಟ್ಟು ಬೇರೆ ಯಾವುದೋ ಹಳ್ಳಿಗೆ ಹೋದ ಅನುಭವ ಆಗುತ್ತದೆ. ಅಲ್ಲಿನ ವಾತಾವರಣವನ್ನು ನೋಡುತ್ತಿದ್ದಂತೆ, ಯಾವಾಗ ವಿಮಾನಗಳ ಹಾರಾಟ ಆರಂಭವಾಗುತ್ತದೆ ಎಂದು ಇನ್ನಷ್ಟು ತವಕ ಹುಟ್ಟುತ್ತದೆ. ಇನ್ನು ವಿಮಾನಗಳು ಹಾರಾಟ ಆರಂಭಿಸುವ ಹೊತ್ತಿಗಂತೂ ಎದೆಯಲ್ಲಿ ನಡುಕ ಹುಟ್ಟುತ್ತದೆ. ಯಾಕೆಂದರೆ ಹತ್ತಿರದಿಂದ ಅವುಗಳ ಶಬ್ಧ ಅಷ್ಟು ದೊಡ್ಡದಾಗಿ ಕೇಳುತ್ತದೆ.

ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟ

ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ಕಂಡು ಇವುಗಳೇನಾದರೂ ವಿಮಾನಕ್ಕೆ ತಗುಲಿದರೆ ಎಂಬ ಅನುಮಾನ ಮೂಡುತ್ತದೆ. ಮಾಂಸ ಮಾರಾಟವನ್ನು ನಿಷೇಧ ಮಾಡಿ ಹಕ್ಕಿಗಳು ಹಾರಾಡದಂತೆ ನಿಗಾ ವಹಿಸಿದರೂ ಸಹ ಅಲ್ಲೊಂದು, ಇಲ್ಲೊಂದು ಹಕ್ಕಿಗಳು ಆಕಾಶದಲ್ಲಿ ಹಾರಾಡುವುದು ಕಾಣಿಸುತ್ತದೆ. ಹೆಸರೇ ಗೊತ್ತಿಲ್ಲದ ಯುದ್ಧ ವಿಮಾನಗಳು ಹಾರಾಡುವಾಗ ಅಯ್ಯೋ! ನಾನ್ಯಾಕೆ ಇಷ್ಟು ದಿನ ಇವುಗಳ ಬಗ್ಗೆ ತಿಳಿದುಕೊಂಡಿಲ್ಲ ಎನ್ನುತ್ತ ನಿಮ್ಮ ಮನಸು ಅಲ್ಲಿನ ಕಾಮೆಂಟ್ರಿ ಕೇಳಲು ಹಾತೊರೆಯುತ್ತದೆ. ಕಣ್ಣುಗಳು ಆಕಾಶಕ್ಕೆ ನೆಟ್ಟಿರುತ್ತದೆ.

ಅಲ್ಲಲ್ಲಿ ಹಾಕಿರುವ ಕಬ್ಬಿಣದ ತಂತಿಗಳ ಸುತ್ತ ಜನ ಹೆಚ್ಚಾಗಿ ನಿಂತಿರುತ್ತಾರೆ. ಯಾಕೆಂದರೆ ವಿಮಾನಗಳು ಲ್ಯಾಂಡ್‌ ಆಗುವುದನ್ನೂ ಸಹ ಅಲ್ಲಿಂದ ತುಂಬಾ ಚೆನ್ನಾಗಿ ನೋಡಬಹುದು ಎಂಬ ಕಾರಣಕ್ಕಾಗಿ. ಧೂಳೇ ತುಂಬಿರುವ ಆ ಮೈದಾನದಲ್ಲಿ ಅಲ್ಲಲ್ಲಿ ಪ್ಲಾಸ್ಟಿಕ್, ಪೇಪರ್, ಟವಲ್‌ ಹೀಗೆ ನೆಲಕ್ಕೆ ಕೂತರೂ ಬಟ್ಟೆಗಳು ಮಣ್ಣಾಗಬಾರದು ಎಂಬ ಜಾಗ್ರತೆಯಲ್ಲಿ ಹಲವರು ಬಂದಿರುತ್ತಾರೆ. ಆದರೆ ಇದೇ ಮೊದಲ ಬಾರಿ ಹೋದವರಿಗೆ ತಾವೇನು ತಂದಿಲ್ಲವಲ್ಲ ಎಂದೆನಿಸುವುದು ನಿಜ.

ಫೈಲೆಟ್‌ಗಳ ಸಾಹಸಕ್ಕೆ ಬೆರಗಾಗಲೇಬೇಕು

“ಬಿಡು ಮುಂದಿನ ಬಾರಿ ಬಂದಾಗ ನಾನೂ ಇದೆಲ್ಲ ತಯಾರಿ ಮಾಡಿಕೊಂಡು ಬರುತ್ತೇನೆ” ಎಂಬ ಮಾತು ನಿಮ್ಮ ಮನಸಿನಲ್ಲಿ ಬಂದು ಹೋಗಬಹುದು. ಇನ್ನು ಆಕಾಶದಲ್ಲಿ ಹಾರಾಡುವ ಲೋಕದ ಹಕ್ಕಿಗಳ ಸೊಕ್ಕಿನ ಸದ್ದು ಎದೆ ನಡುಗಿಸುವುದರೊಟ್ಟಿಗೆ, ಆ ಸಾಹಸವನ್ನು ಮಾಡುವ ಪೈಲೆಟ್‌ಗಳ ಬಗ್ಗೆ ಗೌರವ ಮೂಡಿಸುವುದಂತೂ ನಿಜ. ಗುರುತ್ವಾಕರ್ಷಣೆ ಇರುವ ಭೂಮಿಯ ಮೇಲೆ ನಡೆಯುವಾಗಲೇ ನಾವು ಎಡವುತ್ತೇವೆ, ಇನ್ನು ಗುರುತ್ವಾಕರ್ಷಣೆ ಇಲ್ಲದೇ ಗಾಳಿಯಲ್ಲೇ ತೇಲಿ ಅಲ್ಲಿ ಸಾಹಸ ಮಾಡುವುದೆಂದರೆ ಏನು? ಅವರ ತರಬೇತಿ, ಅವರ ಶ್ರಮ, ಅವರ ಶ್ರದ್ಧೆ ಎಲ್ಲವೂ ಎಷ್ಟಿರಬಹುದು? ಜೀವದ ಆಸೆಯನ್ನು ಬಿಟ್ಟು ಅವರು ಇಷ್ಟೊಂದೆಲ್ಲ ಮಾಡುತ್ತಾರಲ್ಲ ಎಂದೆನಿಸುತ್ತದೆ.

“ಮೇರಾ ಭಾರತ್ ಮಹಾನ್”

ಇನ್ನು ಅದೇ ಪೈಲೆಟ್‌ನ ಅಮ್ಮನೋ, ಅಪ್ಪನೋ, ಹೆಂಡತಿಯೋ ಕೆಳಗಡೆ ಕುಳಿತು ನೋಡುತ್ತಿರುವಾಗ ಅವರ ಮನಸಿನಲ್ಲಿ ಖುಷಿ? ದುಃಖ? ಹೆಮ್ಮೆ? ಯಾವ ಭಾವದಲ್ಲಿ ಅವರು ಕುಳಿತಿರಬಹುದು ಎಂಬ ಪ್ರಶ್ನೆ ಮೂಡುತ್ತದೆ. ಇನ್ನು ತಾಯೊಬ್ಬಳು ತನ್ನ ಮಗಳಿಗೆ ನೀನೂ ಹೀಗೆ ಆಗಬೇಕು ಎನ್ನುತ್ತಾ, ಆ ಕೂಸನ್ನು ಎತ್ತಿ ಹಿಡಿದು ಕಿವಿಯಲ್ಲಿ ಆತ್ಮ ವಿಶ್ವಾಸ ಬರುವಂತೆ ಮಾತಾಡುವುದನ್ನು ನೋಡಿದರೆ ಆಹಾ! ಅದರ ಅನುಭವವೇ ಬೇರೆ. ನೀವೂ ನಮ್ಮ ದೇಶದ ಹೆಮ್ಮೆಯ ಪ್ರತೀಕವಾದ ಏರ್ ಶೋ ನೋಡಿ ಬನ್ನಿ. ಆದರೆ ವೈಮಾನಿಕ ಪ್ರದರ್ಶನ ವೀಕ್ಷಿಸಿದ ಪ್ರತಿಯೊಬ್ಬರಿಗೂ ಆಗುವ ಅನುಭವ ಒಂದೇ “ಮೇರಾ ಭಾರತ್ ಮಹಾನ್”

ಬಿಸಿಲಲ್ಲಿ ನಿಲ್ಲದೇ ಅದೆಷ್ಟೋ ದಿನ ಒಳಗಡೆಯೇ ಕೂತು ಕೆಲಸ ಮಾಡಿದ ಹಲವರಿಗೆ ಇದೊಂದು ಹೊಸ ಅನುಭವ ಆಗುವುದಂತೂ ನಿಜ. ಇಂತಹ ಏರ್ ಶೋ ಕಣ್ತುಂಬಿಕೊಳ್ಳುವ ಭಾಗ್ಯ ನನಗೂ ಸಿಕ್ಕಿದೆ ಎಂದು ನಿಮಗೂ ಅನಿಸಬಹುದು.

Whats_app_banner