ಅಕ್ಷಯ್ ಕುಮಾರ್‌ಗೆ ʻಕಂಟೆಂಟ್ ಕುಮಾರ್ ಈಸ್ ಬ್ಯಾಕ್ʼ ಎಂದ ನೆಟ್ಟಿಗರು; ʻಕೇಸರಿ ಚಾಪ್ಟರ್ 2ʼ ಟ್ರೇಲರ್ ಬಿಡುಗಡೆ
ಅಕ್ಷಯ್ ಕುಮಾರ್ ಮತ್ತು ಆರ್‌ಮಾಧವನ್, ಅನನ್ಯಾ ಪಾಂಡೆ ಮುಖ್ಯಭೂಮಿಕೆಯಲ್ಲಿನ ʻಕೇಸರಿ ಚಾಪ್ಟರ್ 2ʼ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಹಿನ್ನೆಲೆಯ ರಿಯಲ್ ಕಥೆಯ ಮತ್ತೊಂದು ಮಗ್ಗಲನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಕರಣ್ ಸಿಂಗ್ ತ್ಯಾಗಿ.

Kesari Chapter 2 Trailer: ಬಾಲಿವುಡ್ ಚಿತ್ರರಂಗದಲ್ಲಿ ಸತ್ಯ ಘಟನೆಗಳನ್ನು ಆಧರಿಸಿದ ಸಾಕಷ್ಟು ಸಿನಿಮಾಗಳು ನಿರ್ಮಾಣವಾಗಿವೆ. ಒಂದಷ್ಟು ಸಿನಿಮಾಗಳು ಹೊಸ ಹೊಸ ದಾಖಲೆಗಳನ್ನು ಬರೆದರೆ, ಇನ್ನು ಕೆಲವು ಹೇಳ ಹೆಸರಿಲ್ಲದಂತೆ ಮಾಯವಾಗಿವೆ. ಇದೀಗ ಈ ಸತ್ಯ ಘಟನೆ ಆಧರಿತ ಸಿನಿಮಾಗಳ ಸಾಲಿಗೆ ಇನ್ನೊಂದು ಸಿನಿಮಾ ಸೇರ್ಪಡೆಯಾಗುತ್ತಿದೆ. ಆ ಚಿತ್ರವೇ ʻಕೇಸರಿ ಚಾಪ್ಟರ್ 2ʼ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಆರ್ ಮಾಧವನ್ ಅಭಿನಯದ ಈ ಚಿತ್ರ 1919ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ತೆರೆಮರೆಯ ಕಥೆಯನ್ನು ಪ್ರೇಕ್ಷಕರ ಮುಂದೆ ತೆರೆದಿಡಲಿದೆ. ಇದೆಲ್ಲದರ ನಡುವೆಯೇ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ.
3 ನಿಮಿಷ 2 ಸೆಕೆಂಡುಗಳ ಕೋರ್ಟ್ ರೂಮ್ ಡ್ರಾಮಾ ಶೈಲಿಯ ಕೇಸರಿ ಚಾಪ್ಟರ್ 2 ಟ್ರೇಲರ್‌ನಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಬ್ರಿಟಿಷ್ ಆಡಳಿತದ ಜನರಲ್ ಡೈಯರ್ ಪಿತೂರಿಯಡಿಯಲ್ಲಿ ಹೇಗೆ ನಡೆಸಲಾಯಿತು ಎಂಬುದನ್ನು ಕಣ್ಣಿಗೆ ಕಟ್ಟಿದಂತೆ ತೋರಿಸಲಾಗಿದೆ. ಈ ಘಟನೆಯ ಸತ್ಯಾಸತ್ಯತೆಯನ್ನು ಬಯಲಿಗೆಳೆಯಲು ವಕೀಲ ಸಿ ಶಂಕರನ್ ನಾಯರ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದು, ಗಮನ ಸೆಳೆದಿದ್ದಾರೆ. ಅಕ್ಷಯ್ ಕುಮಾರ್‌ಗೆ ಎದುರಾಗಿ ನಟ ಆರ್ ಮಾಧವನ್ ಬ್ರಿಟಿಷರ ಪರ ವಕೀಲರಾಗಿ ಕಾಣಿಸಿಕೊಂಡಿದ್ದಾರೆ. ಅನನ್ಯಾ ಪಾಂಡೆ ಸಹ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿದ್ದಾರೆ.
ಜಲಿಯನ್ ವಾಲಾಬಾಗ್ ದುರಂತದ ಕಥೆ
ಕರಣ್ ಜೋಹಾರ್ ಅವರ ಧರ್ಮ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಕೇಸರಿ ಚಾಪ್ಟರ್ 2 ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, 2019ರಲ್ಲಿ ಬಿಡುಗಡೆ ಆಗಿದ್ದ ಕೇಸರಿ ಸಿನಿಮಾದ ಮುಂದುವರಿದ ಭಾಗ ಇದಾಗಿದೆ. ರಘು ಪಾಲಟ್ ಮತ್ತು ಪುಷ್ಪಾ ಪಾಲಟ್ ಅವರ ʻದಿ ಕೇಸ್ ದಟ್ ಶೇಕ್ ದಿ ಎಂಪೈರ್ʼ ಪುಸ್ತಕವನ್ನು ಆಧರಿಸಿದೆ. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಹಿಂದಿನ ಸತ್ಯವನ್ನು ಬಹಿರಂಗಪಡಿಸಲು ಬ್ರಿಟಿಷರ ವಿರುದ್ಧ ಹೋರಾಡಿದ ಬ್ಯಾರಿಸ್ಟರ್ ಸಿ ಶಂಕರನ್ ನಾಯರ್ ಅವರ ಹೋರಾಟದ ಕಥೆಯನ್ನು ಆಧರಿಸಿದೆ.
ಕೇಸರಿ ಚಾಪ್ಟರ್ 2 ಯಾವಾಗ?
ಕೇಸರಿ ಚಾಪ್ಟರ್ 2 ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು ಮೆಚ್ಚುಗೆ ವ್ಯಕ್ತವಾಗಿದೆ. ಒಂದಷ್ಟು ಕೌತುಕಗಳನ್ನು ಹೊತ್ತು ʻಕಂಟೆಂಟ್ ಕುಮಾರ್ʼ ಮತ್ತೆ ಆಗಮಿಸಿದ್ದಾರೆ ಎಂದು ಈ ಟ್ರೇಲರ್ ಬಗ್ಗೆ ಪಾಸಿಟಿವ್ ಆಗಿ ಮಾತನಾಡುತ್ತಿದ್ದಾರೆ. ಅಕ್ಷಯ್ ಕುಮಾರ್ ಕಂಬ್ಯಾಕ್‌ಗೆ ಇದು ಸೂಕ್ತ ಸಿನಿಮಾ ಎಂದೂ ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ತರಹೇವಾರಿ ಕಾಮೆಂಟ್‌ಗಳು ಸಂದಾಯವಾಗುತ್ತಿವೆ.
ಹಾಗಾದರೆ ಸದ್ಯ ಟ್ರೇಲರ್ ಮೂಲಕ ರಂಜಿಸಿದ ಈ ಸಿನಿಮಾದ ಬಿಡುಗಡೆ ಯಾವಾಗ? ಅದಕ್ಕೂ ಇದೀಗ ಉತ್ತರ ಸಿಕ್ಕಿದೆ. ಏಪ್ರಿಲ್ 18ರಂದು ಕೇಸರಿ ಚಾಪ್ಟರ್ 2 ಸಿನಿಮಾ ಬಿಡುಗಡೆ ಆಗಲಿದೆ. ಇದೇ ವರ್ಷದ ಜನವರಿಯಲ್ಲಿ ಸ್ಕೈ ಫೋರ್ಸ್ ಸಿನಿಮಾ ಬಿಡುಗಡೆ ಆಗಿ ಯಶಸ್ಸು ಕಂಡಿತ್ತು. ಇದೀಗ ಎರಡೇ ತಿಂಗಳ ಗ್ಯಾಪ್‌ನಲ್ಲಿ ಎರಡನೇ ಸಿನಿಮಾದ ಮೂಲಕ ಆಗಮಿಸುತ್ತಿದ್ದಾರೆ.