ಸ್ಕ್ವಾಡನ್ ಲೀಡರ್ ದೇವಯ್ಯ ತಮಿಳು ಯೋಧನಲ್ಲ, ಅಕ್ಷಯ್ ಕುಮಾರ್ ನಟನೆಯ ಸ್ಕೈ ಫೋರ್ಸ್ ಸಿನಿಮಾದ ಕುರಿತು ಕೊಡವರ ಆಕ್ರೋಶ
Akshay kumar Sky Force movie controversy: ಅಕ್ಷಯ್ ಕುಮಾರ್ ನಟನೆಯ ಸ್ಕೈಫೋರ್ಸ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡುತ್ತಿರುವಾಗಲೇ ಕರ್ನಾಟಕದಲ್ಲಿ ಕನ್ನಡಿಗರ, ಕೊಡವ ಸಮುದಾಯವರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಿನಿಮಾದಲ್ಲಿ ಕೊಡಗಿನ ವೀರ ಅಜ್ಜಮಾಡಾ ಬೋಪಯ್ಯ ದೇವಯ್ಯ ಅವರನ್ನು ತಮಿಳು ಯೋಧನಾಗಿ ತೋರಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

Akshay kumar Sky Force movie controversy: ಅಕ್ಷಯ್ ಕುಮಾರ್ ನಟನೆಯ ಸ್ಕೈಫೋರ್ಸ್ ಸಿನಿಮಾ ಈ ವಾರ ತೆರೆಕಂಡಿತ್ತು. ಒಂದೆಡೆ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಮೊದಲ ದಿನ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 12.25 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಎರಡನೇ ದಿನವಾದ ಶನಿವಾರ ಬಾಕ್ಸ್ ಆಫೀಸ್‌ನಲ್ಲಿ 21.50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾ ಅಕ್ಷಯ್ ಕುಮಾರ್‌ಗೆ ಸತತ ಸೋಲಿನ ಬಳಿಕ ಯಶಸ್ಸು ತಂದುಕೊಡುವ ಸೂಚನೆ ಇದೆ. ಇದೇ ಸಂದರ್ಭದಲ್ಲಿ ಈ ಸಿನಿಮಾದ ಕುರಿತು ಕರ್ನಾಟಕದ ಕೊಡವರು ಒಂದು ಕಾರಣಕ್ಕೆ ಅಸಮಾಧಾನಗೊಂಡಿದ್ದಾರೆ. ಈ ಚಿತ್ರದಲ್ಲಿ ಕರ್ನಾಟಕದ ವೀರ ಸೈನಿಕ, ಕೊಡಗಿನ ವೀರ ಅಜ್ಜಮಾಡಾ ಬೋಪಯ್ಯ ದೇವಯ್ಯ ಅವರನ್ನು ಚಿತ್ರದಲ್ಲಿ ತೋರಿಸಿರುವ ರೀತಿಗೆ ಕೊಡವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಕ್ವಾಡನ್ ಲೀಡರ್ ಅಜ್ಜಮಾಡಾ ಬೋಪಯ್ಯ ದೇವಯ್ಯ ಅವರನ್ನು ಈ ಚಿತ್ರದಲ್ಲಿ ತಮಿಳು ಯೋಧನಂತೆ ತೋರಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಹಲವು ಕೊಡವರು ವಿಡಿಯೋ ಮತ್ತು ಪೋಸ್ಟ್ ಸಂದೇಶಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪ್ರತಿಭಟನೆ ದಾಖಲಿಸುತ್ತಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸ್ಕೈಫೋರ್ಸ್ ಸಿನಿಮಾ ತಂಡಕ್ಕೆ ಈ ರೀತಿ ತಿಳಿಸಲಾಗಿದೆ. ಈ ವಿಡಿಯೋವನ್ನು ಲಾಯರ್ ತಾನಿಯ ಮಾಡಿದ್ದಾರೆ. "ಆತ್ಮೀಯ ಸ್ಕೈಫೋರ್ಸ್ ಸಿನಿಮಾ ತಂಡ, ನೀವು ನಿಜವಾದ ವ್ಯಕ್ತಿಯ ಸಿನಿಮಾ ಮಾಡುವುದಿದ್ದರೆ, ಅದನ್ನು ನೀವು ನೈಜ್ಯವಾಗಿ ತರಬೇಕು. ಸರ್‌ಗೊಢ ಏರ್‌ಬೇಸ್‌ನಲ್ಲಿ 1965ರಲ್ಲಿ ನಡೆದ ಭಾರತದ ಮೊದಲ ಏರ್‌ಸ್ಟೈಕ್ ಕುರಿತು ಸತ್ಯಘಟನೆ ಆಧರಿಸಿ ಸಿನಿಮಾ ಮಾಡಲಾಗಿದೆ. ಈ ಸಂದರ್ಭದಲ್ಲಿ ಸ್ಕ್ವಾಡನ್ ಲೀಡರ್ ಅಜ್ಜಮಾಡಾ ಬೋಪಯ್ಯ ದೇವಯ್ಯ ಅವರು ತೋರಿದ ಧೈರ್ಯ, ಸಾಹಸಕ್ಕೆ ಮಹಾವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸ್ಕ್ವಾಡನ್ ಲೀಡರ್ ಅಜ್ಜಮಾಡಾ ಬೋಪಯ್ಯ ದೇವಯ್ಯ ಅವರು ಕೊಡವ ಸಮುದಾಯದವರು. ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ವಾಸಿಸುವ ಮಾರ್ಷಲ್ ಸಮುದಾಯವಿದು. ನಾವು ವಿಶೇಷ ಸಂಸ್ಕೃತಿ ಹೊಂದಿದ್ದೇವೆ. ನಮ್ಮ ಪೂರ್ವಜರು ಯೋಧರಾಗಿ, ಕೃಷಿಕರಾಗಿ ಖ್ಯಾತಿ ಪಡೆದಿದ್ದಾರೆ. ನಮ್ಮ ಸಮುದಾಯವು ಭಾರತೀಯ ಸಶಸ್ತ್ರ ಪಡೆಗೆ ಅಭೂತಪೂರ್ವ ಕೊಡುಗೆ ನೀಡಿದೆ" ಎಂದು ಲಾಯರ್ ತಾನಿಯ ವಿಡಿಯೋದಲ್ಲಿ ತಿಳಿಸಿದ್ದಾರೆ.
ತಮಿಳು ಯೋಧನೆಂದು ಏಕೆ ತೋರಿಸಿದ್ದೀರಿ?
"ಈ ಸಿನಿಮಾದಲ್ಲಿ ಸ್ಕ್ವಾಡನ್ ಲೀಡರ್ ಅಜ್ಜಮಾಡಾ ಬೋಪಯ್ಯ ದೇವಯ್ಯ ಮತ್ತು ಅವರ ಪತ್ನಿಯನ್ನು ತಮಿಳುನಾಡಿನವರು ಎಂದು ತೋರಿಸಲಾಗಿದೆ. ನೈಜ ಘಟನೆಯಾಧರಿತ, ನಿಜವಾದ ವ್ಯಕ್ತಿಗಳ ಕುರಿತು ಸಿನಿಮಾ ಮಾಡುವಾಗ ಅವರ ಮೂಲದ ಕುರಿತು, ಸಂಸ್ಕೃತಿ ಕುರಿತು, ಅವರ ಕುಟುಂಬದ ಕುರಿತು ಗೌರವ ತೋರಿಸಿ. ನಾವು ಅತ್ಯಂತ ಕಡಿಮೆ ಜನಸಂಖ್ಯೆ ಇರುವ ಕೊಡವ ಸಮುದಾಯವೆಂದು ನೀವು ಒಬ್ಬ ವ್ಯಕ್ತಿಯ ಸಂಪೂರ್ಣ ವಂಶಾವಳಿ ಬದಲಾಯಿಸುವಂತೆ ಇಲ್ಲ" ಎಂದು ಆ ವಿಡಿಯೋದಲ್ಲಿ ತಾನಿಯ ತಿಳಿಸಿದ್ದಾರೆ.
"ನೀವು ಈ ಸಿನಿಮಾದಲ್ಲಿ ದೇವಯ್ಯ ಅವರನ್ನು ಮದ್ರಾಸಿಗರೆಂದು ಏಕೆ ತೋರಿಸಿದ್ದೀರಿ ಎಂದು ನನಗೆ ಅರ್ಥವಾಗುತ್ತಿಲ್ಲ. ದಕ್ಷಿಣದಲ್ಲಿ ಜನಪ್ರಿಯತೆ ಪಡೆಯುವ ಉದ್ದೇಶ ಇದರ ಹಿಂದೆ ಇರಬಹುದೇ. ಅಥವಾ ಸಿನಿಮಾ ಮಾಡುವವರಿಗೆ "ಆತ ಎಲ್ಲಿಂದ ಬಂದವನು" ಎನ್ನುವ ಕುರಿತು ಯಾವುದೇ ಕಾಳಜಿ ಇಲ್ಲದೆ ಇರುವುದು, ಈ ರೀತಿ ಆಗಲು ಕಾರಣವೇ? ಬಾಲಿವುಡ್‌ನ ಟೈಪ್‌ಕಾಸ್ಟ್ ಕಾರಣವೇ, ತಿಳಿಯುತ್ತಿಲ್ಲ. ನೀವು ಈ ಜಗತ್ತಿನ ಎಲ್ಲಾ ಸೃಜನಶೀಲತೆಯನ್ನು ಬಳಸಲು ಅವಕಾಶವಿದೆ. ಆದರೆ, ನೀವು ನಿಮ್ಮ ಸಿನಿಮಾವನ್ನು ಮಾರುಕಟ್ಟೆ ಮಾಡುವಾಗ, ಒಬ್ಬ ನಿಜವಾದ ವ್ಯಕ್ತಿಯ ಕುರಿತು ಕಥೆ ತಿಳಿಸುವಾಗ ನೀವು ಅದನ್ನು ನೈಜ್ಯವಾಗಿ ತರಬೇಕು" ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಸಾಕಷ್ಟು ಜನರು ಕೊಡಗಿನ ಅನೇಕ ವೀರ ಸೈನಿಕರನ್ನು, ಅವರ ತ್ಯಾಗ ಬಲಿದಾನಗಳನ್ನು ನೆನಪಿಸಿಕೊಂಡಿದ್ದಾರೆ. ಸಿನಿಮಾವೊಂದರಲ್ಲಿ ಈ ರೀತಿ ಮಾಡುವುದು ತಪ್ಪಾಗುತ್ತದೆ ಎಂದು ಸಾಕಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಚಿತ್ರತಂಡದಿಂದ ಈ ಕುರಿತು ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
