Adipurush: ನಮ್ಮ ದೇಶದವರನ್ನ ಬುದ್ಧಿ ಇಲ್ಲದವರು ಅನ್ಕೊಂಡಿದೀರಾ? ಆದಿಪುರುಷ ಫಿಲ್ಮ್ ಮೇಕರ್ಸ್ಗೆ ಅಲಹಾಬಾದ್ ಹೈಕೋರ್ಟ್ ತರಾಟೆ
Adipurush movie case: "ಪುಣ್ಯಕ್ಕೆ ಸಿನಿಮಾ ನೋಡಿದ ಬಳಿಕ ಜನರು ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿಲ್ಲ. ನೀವು ಭಗವಾನ್ ರಾಮ, ಲಕ್ಷ್ಮಣ, ಹನುಮಂತ, ರಾವಣನನ್ನು ತೋರಿಸಿ ನಂತರ ಅದು ರಾಮಾಯಣವಲ್ಲ ಎಂದು ಹೇಳೋಕಾಗುತ್ತಾ? ನಮ್ಮ ದೇಶದ ಜನರು, ಯುವಕರು ಬುದ್ಧಿ ಇಲ್ಲದವರು ಅಂದುಕೊಂಡಿದ್ದೀರಾ?" ಎಂದು ಕೋರ್ಟ್ ಕಿಡಿಕಾರಿದೆ.
ಇತ್ತೀಚೆಗೆ ತೆರೆಕಂಡ ಟಾಲಿವುಡ್ ನಟ ಪ್ರಭಾಸ್ ಅಭಿನಯದ 'ಆದಿಪುರುಷ' (Adipurush) ಸಿನಿಮಾ ಸಿಕ್ಕಾಪಟ್ಟೆ ಟ್ರೋಲ್ ಹಾಗೂ ಆಕ್ರೋಶಕ್ಕೆ ಒಳಗಾಗಿದೆ. ಸಿನಿಮಾ ನೋಡಿದ ಬಹುತೇಕ ಪ್ರೇಕ್ಷಕರು ನಿರಾಶೆಗೊಳಗಾಗಿದ್ದಾರೆ. ಚಿತ್ರದ ವಿರುದ್ಧ ಕೋರ್ಟ್ಗೆ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳ ವಿಚಾರಣೆಯನ್ನು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಇಂದು ನಡೆಸಿದೆ.
‘ಆದಿಪುರುಷ’ ಚಿತ್ರದ ಸಂಭಾಷಣೆಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಹಾಗೂ ಇದು ಪ್ರೇಕ್ಷಕರನ್ನು ಕೆರಳಿಸಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಚಿತ್ರದ ನಿರ್ದೇಶಕ ಓಂ ರಾವತ್ರನ್ನು ತರಾಟೆಗೆ ತೆಗೆದುಕೊಂಡಿದೆ. ಈ ಪ್ರಕರಣದಲ್ಲಿ ಸಹ ಲೇಖಕ ಮನೋಜ್ ಮುಂತಶಿರ್ ಶುಕ್ಲಾ ಅವರನ್ನು ಕಕ್ಷಿದಾರರನ್ನಾಗಿ ಮಾಡುವಂತೆ ನ್ಯಾಯಾಲಯ ಸೂಚಿಸಿದ್ದು, ಒಂದು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ.
ಹಿಂದೂ ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಪೌರಾಣಿಕ ಸಾಹಸಮಯ ಚಿತ್ರ ಎಂದು ಹೇಳಿಕೊಳ್ಳುವ 'ಆದಿಪುರುಷ'ವನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.
"ಪುಣ್ಯಕ್ಕೆ ಸಿನಿಮಾ ನೋಡಿದ ಬಳಿಕ ಜನರು ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿಲ್ಲ. ಈ ಸಿನಿಮಾದಲ್ಲಿ ಹನುಮಂತ ಮತ್ತು ಸೀತೆ ಏನೂ ಅಲ್ಲವೆಂಬಂತೆ ತೋರಿಸಲಾಗಿದೆ. ನೀವು ಭಗವಾನ್ ರಾಮ, ಲಕ್ಷ್ಮಣ, ಹನುಮಂತ, ರಾವಣನನ್ನು ತೋರಿಸಿ ನಂತರ ಅದು ರಾಮಾಯಣವಲ್ಲ ಎಂದು ಹೇಳೋಕಾಗುತ್ತಾ? ನಮ್ಮ ದೇಶದ ಜನರು, ಯುವಕರು ಬುದ್ಧಿ ಇಲ್ಲದವರು ಅಂದುಕೊಂಡಿದ್ದೀರಾ?" ಎಂದು ಕೋರ್ಟ್ ಕಿಡಿಕಾರಿದೆ.
"ಚಿತ್ರದಲ್ಲಿನ ಸಂಭಾಷಣೆಗಳು ಒಂದು ದೊಡ್ಡ ಸಮಸ್ಯೆಯಾಗಿದೆ. ರಾಮಾಯಣವು ನಮಗೆ ಒಂದು ಮಾದರಿಯಾಗಿದೆ. ಜನರು ಮನೆಯಿಂದ ಹೊರಡುವ ಮೊದಲು ರಾಮಚರಿತಮಾನಸ ಓದುತ್ತಾರೆ. ಚಲನಚಿತ್ರಗಳು ಕೆಲವು ವಿಷಯಗಳನ್ನು ಮುಟ್ಟಬಾರದು" ಎಂದು ಕೋರ್ಟ್ ಹೇಳಿದೆ.
"ಈ (ಹಿಂದೂ) ಧರ್ಮದ ಜನರು ತುಂಬಾ ಸಹಿಷ್ಣುರು ಎಂಬ ಕಾರಣಕ್ಕೆ ಈ ವಿಷಯದ ಬಗ್ಗೆ ನಾವು ಕಣ್ಣು ಮುಚ್ಚಲಾಗುತ್ತದೆಯೇ? ಸೆನ್ಸಾರ್ ಮಂಡಳಿ ಎಂದು ಕರೆಯಲ್ಪಡುವ ಚಲನಚಿತ್ರ ಪ್ರಮಾಣೀಕರಣ ಪ್ರಾಧಿಕಾರವು ತನ್ನ ಜವಾಬ್ದಾರಿಯನ್ನು ಪೂರೈಸಿದೆಯೇ" ಎಂದು ಅಲಹಾಬಾದ್ ನ್ಯಾಯಾಲಯ ಪ್ರಶ್ನಿಸಿದೆ.
"ಚಿತ್ರದಿಂದ ಆಕ್ಷೇಪಾರ್ಹ ಸಂಭಾಷಣೆಗಳನ್ನು ತೆಗೆದುಹಾಕಲಾಗಿದೆ" ಎಂದು ಡೆಪ್ಯುಟಿ ಸಾಲಿಸಿಟರ್ ಜನರಲ್ ನ್ಯಾಯಾಲಯಕ್ಕೆ ತಿಳಿಸಿದ್ದು, ಇದಕ್ಕೆ ಪ್ರತಿಕ್ರಯಿಸಿದ ಹೈಕೋರ್ಟ್, "ಸೆನ್ಸಾರ್ ಮಂಡಳಿಯು ಏನು ಮಾಡುತ್ತಿದೆ? ಆಕ್ಷೇಪಾರ್ಹ ಸಂಭಾಷಣೆಗಳನ್ನು ತೆಗೆದುಹಾಕುವುದು ಮಾತ್ರ ಸಾಕಾಗಲ್ಲ. ಒಂದು ವೇಳೆ ಚಿತ್ರದ ಪ್ರದರ್ಶನವನ್ನು ನಿಲ್ಲಿಸಿದರೂ ಕೂಡ ಈಗಾಗಲೆ ಜನರ ಭಾವನೆಗಳನ್ನು ನೋಯಿಸಿದ್ದಕ್ಕೆ ಪರಿಹಾರ ಸಿಗಲಿದೆಯೇ" ಎಂದು ಕೇಳಿದೆ. ಪ್ರಕರಣದ ವಿಚಾರಣೆ ನಾಳೆ (ಜೂನ್ 28) ಮುಂದುವರಿಯಲಿದೆ.