ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರನ ಚಿತ್ರದ ವಿರುದ್ಧವೂ ಅರಣ್ಯ ಇಲಾಖೆ ನಿಯಮ ಉಲ್ಲಂಘನೆ ಆರೋಪ
ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ನಟನೆಯ ಕಲ್ಟ್ ಸಿನಿಮಾ ಶೂಟಿಂಗ್ ವೇಳೆ, ತುಂಗಭದ್ರಾ ನದಿ ತೀರದ ಅರಣ್ಯ ಪ್ರದೇಶದಲ್ಲಿ ಬೆಂಕಿ ಹಾಕಿದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಸದ್ಯ ಚಿತ್ರತಂಡಕ್ಕೆ ಸರ್ಕಾರ ನೋಟೀಸ್ ನೀಡಿದ್ದು, ಚಿತ್ರೀಕರಣಕ್ಕೆ ಬ್ರೇಕ್ ಹಾಕಿದೆ.

ಹೊಸಪೇಟೆ: ಇತ್ತೀಚಿನ ಕೆಲ ದಿನಗಳಿಂದ ಕನ್ನಡ ಚಿತ್ರೋದ್ಯಮ, ಅರಣ್ಯ ಇಲಾಖೆಯ ಕೆಂಗೆಣ್ಣಿಗೆ ಗುರಿಯಾಗುತ್ತಲೇ ಇದೆ. ಈಗ ಅದಕ್ಕೆ ಹೊಸ ಸೇರ್ಪಡೆ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ನಟನೆಯ ಕಲ್ಟ್ ಸಿನಿಮಾ. ಕಲ್ಟ್ ಸಿನಿಮಾ ಶೂಟಿಂಗ್ ವೇಳೆ, ತುಂಗಭದ್ರಾ ನದಿ ತೀರದ ಅರಣ್ಯ ಪ್ರದೇಶದಲ್ಲಿ ಬೆಂಕಿ ಹಾಕಿದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಸದ್ಯ ಚಿತ್ರತಂಡಕ್ಕೆ ಸರ್ಕಾರ ಶಾಕ್ ನೀಡಿದ್ದು, ಚಿತ್ರೀಕರಣಕ್ಕೆ ತಡೆ ನೀಡಿದೆ.
ಹಂಪಿಯ ಸಣಾಪುರ, ವಿರುಪಾಪುರ ಗಡ್ಡಿ ಬಳಿಯಲ್ಲಿ ಕಳೆದ ಕೆಲ ದಿನಗಳಿಂದ ಕಲ್ಟ್ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಇದೇ ಚಿತ್ರೀಕರಣದ ಸಲುವಾಗಿ ನದಿ ತೀರದ ಬಳಿ ಬೆಂಕಿ ಹಾಕಲಾಗಿತ್ತು. ಚಿತ್ರತಂಡದ ಈ ನಡೆ ಅಲ್ಲಿನ ಪರಿಸರವಾದಿಗಳ ಕಣ್ಣುಕೆಂಪಗಾಗಿಸಿತ್ತು. ಅರಣ್ಯ ಇಲಾಖೆಯ ಗಮನಕ್ಕೆ ಬಂದ ಬಳಿಕ, ಯಾವುದೇ ಪರವಾನಗಿ ಪಡೆಯದೇ ಶೂಟಿಂಗ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸದ್ಯ ಸರ್ಕಾರದಿಂದಲೇ ಶೂಟಿಂಗ್‌ಗೆ ತಡೆ ನೀಡಲಾಗಿದೆ.
ಕಳೆದ ಕೆಲ ದಿನಗಳಿಂದ ಈ ಪ್ರದೇಶದಲ್ಲಿ ಶೂಟಿಂಗ್ ಮಾಡಿಕೊಳ್ಳಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿತ್ತು. ಅದರಂತೆ ಹಂಪಿಯ ವಿವಿಧ ಕಡೆಗಳಲ್ಲಿ ಈಗಾಗಲೇ ಚಿತ್ರೀಕರಣ ಮಾಡಿಕೊಂಡಿದೆ. ಅರಣ್ಯ ಪ್ರದೇಶದ ಬಳಿ ಚಿತ್ರೀಕರಣ ಮಾಡಲು, ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿಯನ್ನು ಚಿತ್ರತಂಡ ಪಡೆದುಕೊಂಡಿರಲಿಲ್ಲ. ಅದರ ಮೇಲಾಗ್ಯೂ ಈ ಸ್ಥಳ ಅರಣ್ಯ ಪ್ರದೇಶ ಆಗಿರುವುದರಿಂದ ಮತ್ತು ನೀರುನಾಯಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಆಗಿದ್ದರಿಂದ ಅರಣ್ಯ ಇಲಾಖೆ ಕಲ್ಟ್ ಚಿತ್ರದ ಚಿತ್ರೀಕರಣವನ್ನು ತಡೆ ಹಿಡಿದಿದೆ.
ಟಾಕ್ಸಿಕ್, ಕಾಂತಾರ ಚಿತ್ರತಂಡಕ್ಕೂ ಬಿಸಿ
ಕೆಲ ದಿನಗಳ ಹಿಂದಷ್ಟೇ ಕಾಂತಾರ ಸಿನಿಮಾ ತಂಡಕ್ಕೂ ಇಂಥದ್ದೇ ಸಮಸ್ಯೆ ಎದುರಾಗಿತ್ತು. ಹೊಂಬಾಳೆ ಫಿಲಂಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಕಾಂತಾರ ಚಾಪ್ಟರ್ 1 ಸಿನಿಮಾ, ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆರೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಶೂಟಿಂಗ್ ನಡೆಸಿತ್ತು. ಶೂಟಿಂಗ್ ಸಮಯದಲ್ಲಿ ಅರಣ್ಯ ಜಾಗಕ್ಕೆ ಬೆಂಕಿ ಹಚ್ಚಿ ಪರಿಸರಕ್ಕೆ ಹಾನಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಅದಕ್ಕೂ ಮೊದಲು ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಸ್ ಸಿನಿಮಾದಿಂದಲೂ ಅರಣ್ಯ ನಾಶ ಆರೋಪ ಕೇಳಿಬಂದಿತ್ತು.

ವಿಭಾಗ