Pushpa 2 OTT: ಒಟಿಟಿಯಲ್ಲಿ ಕನ್ನಡ ಅವತರಣಿಕೆಯಲ್ಲೂ ತೆರೆಕಂಡ ಪುಷ್ಪ 2; ಕನ್ನಡ ಸಿನಿಪ್ರೇಮಿಗಳ ಅಸಮಾಧಾನಕ್ಕೆ ತೆರೆ
ಕನ್ನಡ ಸುದ್ದಿ  /  ಮನರಂಜನೆ  /  Pushpa 2 Ott: ಒಟಿಟಿಯಲ್ಲಿ ಕನ್ನಡ ಅವತರಣಿಕೆಯಲ್ಲೂ ತೆರೆಕಂಡ ಪುಷ್ಪ 2; ಕನ್ನಡ ಸಿನಿಪ್ರೇಮಿಗಳ ಅಸಮಾಧಾನಕ್ಕೆ ತೆರೆ

Pushpa 2 OTT: ಒಟಿಟಿಯಲ್ಲಿ ಕನ್ನಡ ಅವತರಣಿಕೆಯಲ್ಲೂ ತೆರೆಕಂಡ ಪುಷ್ಪ 2; ಕನ್ನಡ ಸಿನಿಪ್ರೇಮಿಗಳ ಅಸಮಾಧಾನಕ್ಕೆ ತೆರೆ

Pushpa 2 OTT: ಜನವರಿ 29ರ ಮಧ್ಯರಾತ್ರಿಯಿಂದ ಮೂಲ ತೆಲುಗು ಸೇರಿದಂತೆ ತಮಿಳು, ಹಿಂದಿ ಮಲಯಾಳಂ ಭಾಷೆಗಳಲ್ಲಷ್ಟೇ ಬಿಡುಗಡೆಯಾಗಿದ್ದ ಪುಷ್ಪ 2 ಸಿನಿಮಾದ ಕನ್ನಡ ಅವತರಣಿಕೆ ಮಾತ್ರ ಒಟಿಟಿ ವೇದಿಕೆಗೆ ಲಗ್ಗೆಯಿಟ್ಟಿರಲಿಲ್ಲ.

 ಒಟಿಟಿಯಲ್ಲಿ ಕನ್ನಡ ಅವತರಣಿಕೆಯಲ್ಲೂ ತೆರೆಕಂಡ ಪುಷ್ಪ 2
ಒಟಿಟಿಯಲ್ಲಿ ಕನ್ನಡ ಅವತರಣಿಕೆಯಲ್ಲೂ ತೆರೆಕಂಡ ಪುಷ್ಪ 2

2024ರಲ್ಲಿ ಬಿಡುಗಡೆಯಾಗಿ ದೇಶದಾದ್ಯಂತದ ಚಿತ್ರಮಂದಿರಗಳ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಂಡಿದ್ದ, ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಲನಚಿತ್ರ ನೆಟ್‌ಫ್ಲಿಕ್ಸ್‌ ಮೂಲಕ ಒಟಿಟಿಗೆ ಲಗ್ಗೆಯಿಟ್ಟಿದೆ. ಜನವರಿ 29ರ ಮಧ್ಯರಾತ್ರಿಯಿಂದ ಮೂಲ ತೆಲುಗು ಸೇರಿದಂತೆ ತಮಿಳು, ಹಿಂದಿ ಮಲಯಾಳಂ ಭಾಷೆಗಳಲ್ಲಷ್ಟೇ ಬಿಡುಗಡೆಯಾಗಿದ್ದ ಪುಷ್ಪ 2 ಸಿನಿಮಾದ ಕನ್ನಡ ಅವತರಣಿಕೆ ಮಾತ್ರ ಒಟಿಟಿ ವೇದಿಕೆಗೆ ಲಗ್ಗೆಯಿಟ್ಟಿರಲಿಲ್ಲ. ಈ ಕುರಿತು ಕನ್ನಡ ಸಿನಿಮಾ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದರು. ನಂತರದ ಬೆಳವಣಿಗೆಗಳಲ್ಲಿ ಪುಷ್ಪ 2 ಸಿನಿಮಾದ ಕನ್ನಡ ಅವರಣಿಕೆ ಸಹ ಬಿಡುಗಡೆಯಾಗಲಿದೆ ಎಂದು ನೆಟ್‌ಫ್ಲಿಕ್ಸ್ ಸ್ಪಷ್ಟನೆ ನೀಡಿತ್ತು. ಕೊನೆಗೂ ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡದಲ್ಲೂ ಪುಷ್ಪ 2 ಬಿಡುಗಡೆಯಾಗಿದೆ. ಈ ಮೂಲಕ ಕನ್ನಡ ಭಾಷೆಯಲ್ಲೂ ಒಟಿಟಿ ಮೂಲಕ ನೀವು ಪುಷ್ಪ 2 ಸಿನಿಮಾ ವೀಕ್ಷಿಸಬಹುದಾಗಿದೆ.

ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮತ್ತಿತರ ತಾರಾಗಣದ ಪುಷ್ಪ 2 ಸಿನಿಮಾ ಚಿತ್ರಮಂದಿರಗಳ ಗಲ್ಲಾಪೆಟ್ಟಿಗೆಗಳಲ್ಲಿ ಧೂಳೆಬ್ಬಿಸಿತ್ತು. ಪುಷ್ಪ 2- ದಿ ರೂಲ್ ನೋಡಿದ ಪ್ರೇಕ್ಷಕರು ಸುಕುಮಾರ್ ನಿರ್ದೇಶನಕ್ಕೆ ಬಹುಪರಾಕ್ ಹೇಳಿದ್ದರು.

ಕಲೆಕ್ಷನ್‌ನಲ್ಲಿ ದಾಖಲೆ

ಪುಷ್ಪ 2 ಈಗಾಗಲೇ ಸಾಕಷ್ಟು ದಾಖಲೆಗಳನ್ನು ಸೃಷ್ಟಿಸಿದೆ. ಈ ಸಿನಿಮಾ ಹಿಂದಿಯಲ್ಲಿ 800 ಕೋಟಿ ರೂ.ಗಳ ಕಲೆಕ್ಷನ್‌ ಮಾಡಿದ್ದೇ ದೊಡ್ಡ ಇತಿಹಾಸ. ಬಾಲಿವುಡ್ ನಲ್ಲಿ ಸಾರ್ವಕಾಲಿಕ ದಾಖಲೆಯಲ್ಲಿ ಇದೂ ಒಂದಾಗಿದೆ. ಹಿಂದಿಯಲ್ಲಿಯೇ ಅಲ್ಲಿನ ಯಾವುದೇ ನಟ ಇಷ್ಟೊಂದು ಕಲೆಕ್ಷನ್‌ ಗಡಿ ಮುಟ್ಟಿದ ಉದಾಹರಣೆ ಇಲ್ಲ. ಒಟ್ಟಾರೆ ಕಲೆಕ್ಷನ್‌ ನೋಡುವುದಾದರೆ, ಪುಷ್ಪ 2 ಸಿನಿಮಾ ಈಗಾಗಲೇ 1,830 ಕೋಟಿ ರೂ.ಗಳ ಒಟ್ಟು ಮೊತ್ತವನ್ನು ದಾಟಿದೆ. ಬಾಹುಬಲಿ 2 ಮತ್ತು ಆರ್‌ಆರ್‌ಆರ್‌ ಚಿತ್ರದ ಗಳಿಕೆಯನ್ನು ಹಿಂದಿಕ್ಕಿ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೊರ ಹೊಮ್ಮಿದೆ "ಪುಷ್ಪ 2" ಸಿನಿಮಾ. 

ಭಾರಿ ಮೊತ್ತಕ್ಕೆ ಮಾರಾಟವಾಯ್ತು ಒಟಿಟಿ ಹಕ್ಕು

ಪುಷ್ಪ 2 ನ ಒಟಿಟಿ ಹಕ್ಕುಗಳನ್ನು ನೆಟ್‌ಪ್ಲಿಕ್ಸ್‌ ಸಂಸ್ಥೆ ಭಾರಿ ಬೆಲೆಗೆ ಖರೀದಿಸಿದೆ. ಅಮೆಜಾನ್ ಒಟಿಟಿಯಿಂದ ತೀವ್ರ ಸ್ಪರ್ಧೆಯ ಹೊರತಾಗಿಯೂ, ಪುಷ್ಪ 2 ಚಿತ್ರದ ಒಟಿಟಿ ಹಕ್ಕುಗಳನ್ನು ‌ನೆಟ್‌ಫ್ಲಿಕ್ಸ್‌ ಸಂಸ್ಥೆ ಬರೋಬ್ಬರಿ 270 ಕೋಟಿ ರೂ.ಗೆ ಪಡೆದುಕೊಂಡಿದೆ ಎನ್ನಲಾಗುತ್ತಿದೆ. ಅಮೆಜಾನ್ ಪ್ರೈಮ್ ವಿಡಿಯೋ 2021ರಲ್ಲಿ ಪುಷ್ಪ: ದಿ ರೈಸ್ ಚಿತ್ರದ ಒಟಿಟಿ ಹಕ್ಕುಗಳನ್ನು ಪಡೆದಿತ್ತು. ಇದೀಗ ಇವೆರಡರ ಸ್ಪರ್ಧೆಯಲ್ಲಿ ಪಾರ್ಟ್‌ 2 ನೆಟ್‌ಫ್ಲಿಕ್ಸ್‌ ಪಾಲಾಗಿದೆ.

ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜುನ್‌ಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದಾರೆ. ಶ್ರೀಲೀಲಾ ಐಟಂ ಹಾಡಿನಲ್ಲಿ ಬಳುಕಿದರೆ, ಫಹಾದ್‌ ಫಾಸಿಲ್‌, ರಾವ್ ರಮೇಶ್, ಜಗಪತಿ ಬಾಬು, ಅನಸೂಯಾ, ಸುನಿಲ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಮತ್ತು ಬಂಗಾಳಿ ಭಾಷೆಗಳಲ್ಲಿ ಬಿಡುಗಡೆಯಾದ ಪುಷ್ಪ 2 ಸಿನಿಮಾ ಎಲ್ಲ ಭಾಷೆಗಳಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಪುಷ್ಪ 2 ಕಲೆಕ್ಷನ್ ತೆಲುಗುಗಿಂತ ಹಿಂದಿಯಲ್ಲಿ ಅಧಿಕ.

 

Whats_app_banner