Pushpa 2: ಪುಷ್ಪ 2 ಸಿನಿಮಾಕ್ಕೆ ಹೊಸ ದೃಶ್ಯ ವೈಭವಗಳ ಸೇರ್ಪಡೆ, ಅಲ್ಲು ಅರ್ಜುನ್ ನಟನೆಯ ಸಿನಿಮಾ ಮರುಬಿಡುಗಡೆ
ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ 2’ ಸಿನಿಮಾ ಎಲ್ಲೆಡೆ ಸುದ್ದಿಯಲ್ಲಿದೆ. ಅಷ್ಟೇ ಅಲ್ಲ, ತನ್ನ ಕಲೆಕ್ಷನ್ ವಿಚಾರವಾಗಿ ಹಲವು ದಾಖಲೆಗಳನ್ನು ಪುಡಿಗಟ್ಟಿದೆ. ಹೀಗಿರುವಾಗ ಇನ್ನೂ 20 ನಿಮಿಷ ಹೆಚ್ಚುವರಿ ದೃಶ್ಯ ಸೇರ್ಪಡೆಯೊಂದಿಗೆ ಸಿನಿಮಾ ಮತ್ತೆ ಬಿಡುಗಡೆಯಾಗಲಿದೆ.
![ಇನ್ನೂ ಹೆಚ್ಚು ದೃಶ್ಯಗಳ ಜೊತೆಗೆ ಮತ್ತೊಮ್ಮೆ ಬರಲಿದೆ ಪುಷ್ಪ 2 ಸಿನಿಮಾ ಇನ್ನೂ ಹೆಚ್ಚು ದೃಶ್ಯಗಳ ಜೊತೆಗೆ ಮತ್ತೊಮ್ಮೆ ಬರಲಿದೆ ಪುಷ್ಪ 2 ಸಿನಿಮಾ](https://images.hindustantimes.com/kannada/img/2025/01/09/550x309/f__1736423525331_1736423535895.png)
ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2 – ದಿ ರೂಲ್’ ಚಿತ್ರವು ಜಾಗತಿಕವಾಗಿ 1,831 ಕೋಟಿ ರೂ. ಗಳಿಕೆ ಮಾಡುವ ಮೂಲಕ ಹಿಂದಿನ ಕೆಲವು ದಾಖಲೆಗಳನ್ನು ಪುಡಿ ಮಾಡಿದೆ. ಅಷ್ಟೇ ಅಲ್ಲ, ಹಿಂದಿ ಭಾಷೆಗೂ ಡಬ್ ಆಗಿ ಅತೀ ಹೆಚ್ಚು ಗಳಿಕೆ ಮಾಡಿದ ಮೊದಲ ಬಾಲಿವುಡ್ ಚಿತ್ರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಈ ಮಧ್ಯೆ, ಚಿತ್ರದ ಹೊಸ ಅವತರಣಿಕೆಯು ಜನವರಿ 17ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.
ಏನಿದು ಹೊಸ ಅವತರಣಿಕೆ?
ಏನಿದು ಹೊಸ ಅವತರಣಿಕೆ ಎಂಬ ಪ್ರಶ್ನೆ ಬರುವುದು ಸಹಜ. ಸಾಮಾನ್ಯವಾಗಿ ಒಂದು ಚಿತ್ರದ ಅವಧಿ ಹೆಚ್ಚಾಯಿತು ಎಂಬ ಕಾರಣಕ್ಕೆ ಅದನ್ನು ಟ್ರಿಮ್ ಮಾಡಿ ಬಿಡುಗಡೆ ಮಾಡುವುದು ವಾಡಿಕೆ. ಆದರೆ, ‘ಪುಷ್ಪ 2’ ಚಿತ್ರಕ್ಕೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ಖುಷಿಯಾಗಿರುವ ಚಿತ್ರತಂಡ, ಇನ್ನೂ 20 ನಿಮಿಷ ಅವಧಿಯ ಹೊಸ ದೃಶ್ಯಗಳನ್ನು ಸೇರಿಸಿ ಚಿತ್ರವನ್ನು ಮರುಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದೆಯಂತೆ.
‘ಪುಷ್ಪ 2’ ಚಿತ್ರವು 3 ತಾಸು 20 ನಿಮಿಷ ಮತ್ತು 38 ಸಕೆಂಡ್‍ಗಳ (200.38 ನಿಮಿಷ) ಅವಧಿಯದ್ದಾಗಿತ್ತು. 2021ರಲ್ಲಿ ಬಿಡುಗಡೆಯಾದ ‘ಪುಷ್ಪ 1’ ಚಿತ್ರವು 179 ನಿಮಿಷಗಳ ಅವಧಿಯದ್ದಾಗಿತ್ತು. ಅದಕ್ಕೆ ಹೋಲಿಸಿದರೆ, ಎರಡನೆಯ ಭಾಗವು 21 ನಿಮಿಷಗಳಷ್ಟು ದೊಡ್ಡದಾಗಿತ್ತು. ಈಗ ‘ಪುಷ್ಪ 2’ ಚಿತ್ರಕ್ಕೆ 20 ನಿಮಿಷಗಳಷ್ಟು ಹೊಸದಾಗಿ ಸೇರ್ಪಡೆಯಾಗುವದರಿಂದ, ಮೂರು ತಾಸು 40 ನಿಮಿಷಗಳಷ್ಟಾಗುತ್ತದೆ. ಅಂದರೆ 220 ನಿಮಿಷಗಳಷ್ಟಾಗುತ್ತದೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಚಿತ್ರದ ಹೊಸ ಅವತರಣಿಕೆಯು ಸಂಕ್ರಾಂತಿ ಹಬ್ಬದ ವಿಶೇಷವಾಗಿ ಜನವರಿ 11ರಂದು ಬಿಡುಗಡೆಯಾಗಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದ್ದು, ಜನವರಿ 17ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.
ಸಾಮಾನ್ಯವಾಗಿ ಮೂರು ತಾಸಿಗಿಂತ ಹೆಚ್ಚು ಅವಧಿಯ ಚಿತ್ರಗಳನ್ನು ಜನ ನೋಡುವುದಿಲ್ಲ ಎಂಬ ಮಾತಿದೆ. ಆದರೆ, ಈ ಮಾತನ್ನು ಕೆಲವು ಚಿತ್ರಗಳು ಸುಳ್ಳು ಮಾಡುತ್ತಲೇ ಇವೆ. ‘ಪುಷ್ಪ 2’ ಚಿತ್ರವು ಸದ್ಯ 200 ನಿಮಿಷಗಳಿಷ್ಟದ್ದರೂ, ಯಾವುದೇ ಸಮಸ್ಯೆ ಆಗಿಲ್ಲ. ಚಿತ್ರ ಯಶಸ್ವಿ ಪ್ರದರ್ಶನಗಳನ್ನು ಕಾಣುತ್ತಲೇ ಇದೆ.
ಪಾತ್ರವರ್ಗ
‘ಪುಷ್ಪ – ದಿ ರೂಲ್’ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟಿಸಿದ್ದು, ಮಿಕ್ಕಂತೆ ಧನಂಜಯ್, ಫಹಾದ್ ಫಾಸಿಲ್, ಸುನೀಲ್, ಅನುಸೂಯ ಭಾರದ್ವಾಜ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಲೀಲಾ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಈ ಚಿತ್ರಕ್ಕೆ ಸುಕುಮಾರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಮೈತ್ರಿ ಮೂವಿ ಮೇಕರ್ಸ್ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಪುಷ್ಪ 2’ ಸಿನಿಮಾವನ್ನು ಇನ್ನಷ್ಟು ಜನ ನೋಡಲು ಕಾದಿದ್ದಾರೆ ಎಂದು ಈ ರೀತಿ ಮಾಡಲಾಗಿದೆ. ಬಾಹುಬಲಿ ಸಿನಿಮಾ ಧಾಖಲೆಯನ್ನೂ ಹಿಂದಿಕ್ಕಿ ಮುಂದೆ ಸಾಗುತ್ತಿರುವ ‘ಪುಷ್ಪ 2’ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ಭಾರೀ ವಿಜಯ ಸಾಧಿಸಿದೆ. ಇನ್ನು ಸಂಧ್ಯಾ ಥಿಯೇಟರ್‌ನಲ್ಲಿ ಆದ ದುರ್ಗಟನೆಯ ಕೇಸ್‌ನಿಂದಲೂ ಅಲ್ಲು ಅರ್ಜುನ್ ಬೇಲ್ ಪಡೆದಿದ್ದಾರೆ.
ಬರಹ: ಚೇತನ್ ನಾಡಿಗೇರ್
ಇದನ್ನೂ ಓದಿ: Seetha Rama Serial: ಸಿಹಿಯ ಹೊಸ ಲೋಕಕ್ಕೆ ಸುಬ್ಬಿಯ ಪದಾರ್ಪಣೆ; ಕಿಲಾಡಿ ಜೋಡಿಯೀಗ ಬೆಸ್ಟ್ ಫ್ರೆಂಡ್ಸ್
![Whats_app_banner Whats_app_banner](https://kannada.hindustantimes.com/static-content/1y/wBanner.png)