Pushpa 2 First Half Review: ಈ ಪುಷ್ಪರಾಜ್ ಈಗ ಬರೀ ಬಲವಂತನಲ್ಲ, ಹಣವಂತನೂ ಹೌದು! ಹೇಗಿದೆ ಪುಷ್ಪ 2 ಚಿತ್ರ
Pushpa 2 The Rule First Half Review: ಮೂರು ವರ್ಷದ ಬಳಿಕ ರೂಲ್ ಮಾಡಲು ಬರುತ್ತಿದೆ ಪುಷ್ಪ 2 ಸಿನಿಮಾ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಜೋಡಿಯ ಈ ಚಿತ್ರ ನಿಜಕ್ಕೂ ಬಾಕ್ಸ್ ಆಫೀಸ್‌ನಲ್ಲಿ ರೂಲ್ ಮಾಡುತ್ತಿದೆಯೇ? ಈ ಸಿನಿಮಾದ ಮೊದಲಾರ್ಧ ಹೇಗಿದೆ? ಇಲ್ಲಿದೆ ನೋಡಿ ಪುಷ್ಪ 2 ದಿ ರೂಲ್ ಫಸ್ಟ್ ಹಾಫ್ ವಿಮರ್ಶೆ.
Pushpa 2 First Half Review: ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಬಹುನಿರೀಕ್ಷಿತ ಪುಷ್ಪ 2 ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿದೆ. ಈ ನಡುವೆ ಕರ್ನಾಟಕದಲ್ಲಿಯೂ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಿದೆ. ಕನ್ನಡಕ್ಕೆ ಡಬ್ ಆದರೂ, ತೆಲುಗು ಅವತರಣಿಕೆಯೇ ಕರ್ನಾಟಕದಾದ್ಯಂತ ರಿಲೀಸ್ ಆಗಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಸೇರಿ ಇನ್ನೂ ಹಲವು ಸ್ಟಾರ್ ನಟರು ನಟಿಸಿರುವ ಈ ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಮೊದಲ ಭಾಗ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಇದೀಗ ಮೂರು ವರ್ಷದ ಬಳಿಕ ರೂಲ್ ಮಾಡಲು ಬರುತ್ತಿದೆ ಪುಷ್ಪ 2 ದಿ ರೂಲ್. ಹಾಗಾದರೆ, ಈ ಚಿತ್ರದ ಮೊದಲಾರ್ಧ ಹೇಗಿದೆ? ಇಲ್ಲಿದೆ ನೋಡಿ ಪುಷ್ಪ 2 ದಿ ರೂಲ್ಸ್ ಫಸ್ಟ್ ಹಾಫ್ ವಿಮರ್ಶೆ.
ಪುಷ್ಪರಾಜ್ ಮೊದಲ ಭಾಗಕ್ಕಿಂತ ವೈಲಂಟ್. ಬಲವಂತ ಮಾತ್ರವಲ್ಲ, ಹಣವಂತನಾಗಿಯೂ ಅಬ್ಬರಿಸಿದ್ದಾನೆ. ಖಡಕ್ ಪುಷ್ಪ ಮೊದಲಾರ್ಧದುದ್ದಕ್ಕೂ ಅಬ್ಬರಿಸಿದ್ದಾನೆ. ಮೊದಲಾರ್ಧದ ಪ್ರತಿ ಫ್ರೇಮ್ ನಲ್ಲೂ ಪುಷ್ಪ ಕಾಣಿಸುತ್ತ ಹೋಗುತ್ತಾನೆ. ವಿಶಿಷ್ಟ ಮ್ಯಾನರಿಸಂ, ಡೈಲಾಗ್ ಡೆಲಿವರಿ ಮೂಲಕ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುತ್ತ ಹೋಗುತ್ತಾನೆ. ಹಣವೊಂದಿದ್ದರೆ ಕೇಂದ್ರ ಸಚಿವನನ್ನೇ ಈ ಪುಷ್ಪ ಖರೀದಿಸುತ್ತಾನೆ. ತನಗನಿಸಿದವನನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುವ ತಾಕತ್ತು ಪುಷ್ಪನಿಗಿದೆ. ಅಷ್ಟೊಂದು ಪ್ರಭಾವಿಯಾಗಿ ಬೆಳೆದಿದ್ದಾನೆ ಪುಷ್ಪರಾಜ್.
ಹೊರಗಡೆ ವೈಲೆಂಟ್ ಆಗಿ ಕಂಡರೂ, ಈ ಪುಷ್ಪರಾಜ್ ಅಷ್ಟೇ ರೊಮ್ಯಾಂಟಿಕ್. ಶ್ರೀವಲ್ಲಿ ಮೇಲೆ ಎಲ್ಲಿಲ್ಲದ ಪ್ರೀತಿ. ಎಂಥ ಕಡು ಕೋಪವೂ ಇದ್ದರೂ ಆಕೆಯ ಮುಂದೆ ಬೆಣ್ಣೆಯಂತೆ ಕರುಗುವ ಗುಣದವನು. ಸಿಂಡಿಕೇಟ್ ಮುಖ್ಯಸ್ಥನಾಗಿರೋ ಪುಷ್ಪ ಯಾರ ಮುಂದೆಯೂ ಬಗ್ಗದವನು. ಆ ನೇಚರ್ ಎರಡನೇ ಭಾಗದಲ್ಲಿಯೂ ಎದ್ದು ಕಾಣುತ್ತದೆ. ಹೀಗಿರುವಾಗಲೇ ಭನ್ವರ್ ಸಿಂಗ್ ಶೇಖಾವತ್ ಎದುರು ಮುಖಾಮುಖಿ ಆಗ್ತಾನೆ ಪುಷ್ಪ. ಸಂಧಾನ ಸಭೆ ನೆಪದಲ್ಲಿ ಸಿಂಡಿಕೇಟ್ ಸದಸ್ಯರಿರುವ ಸಭೆಗೆ ಕುಡಿದ ಮತ್ತಿನಲ್ಲಿ ಬಂದು, ಶೇಖಾವತ್ ಗೆ Sorry ಹೇಳಿ ಹೋಗ್ತಾನೆ.
ಅಸಲಿಗೆ ಕಥೆ ಶುರುವಾಗುವುದೇ ಇಲ್ಲಿಂದ. ಮೊದಲಾರ್ಧ ಮುಗಿಯುವಷ್ಟರಲ್ಲಿ ಶೇಖಾವತ್ Vs ಪುಷ್ಪ ಕಾಳಗಕ್ಕೆ ಅಖಾಡ ಸಿದ್ಧವಾಗುತ್ತದೆ. ಕಡು ಕೋಪಿ ಪುಷ್ಪಗೆ ಶೇಖಾವತ್ ಟಕ್ಕರ್ ಕೊಡ್ತಾನಾ? ದ್ವಿತೀಯಾರ್ಧದಲ್ಲಿ ಗೊತ್ತಾಗಲಿದೆ. ಮೇಕಿಂಗ್ ವಿಚಾರದಲ್ಲಿ ಮೊದಲಾರ್ಧ ರಿಚ್ ಆಗಿಯೇ ಮೂಡಿಬಂದಿದೆ. ದೊಡ್ಡ ಕ್ಯಾನ್ವಾಸ್ ನಲ್ಲಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಸುಕುಮಾರ್.
ಮೊದಲಾರ್ಧದಲ್ಲಿ ಅಲ್ಲು ಅರ್ಜುನ್ ಪ್ರಭಾವಳಿಯೇ ಹಿರಿದು. ಆಕ್ಷನ್ ಅವತಾರದಲ್ಲಿ ಮಾತ್ರವಲ್ಲದೆ, ಪೀಲಿಂಗ್ಸ್ ಹಾಡಿನಲ್ಲಿನ ಕುಣಿತದಿಂದಲೂ ಗಮನ ಸೆಳೆಯುತ್ತಾರೆ. ಅಲ್ಲು ಅರ್ಜುನ್ ಜತೆಜತೆಗೆ ರಶ್ಮಿಕಾ ಮಂದಣ್ಣ ಸಹ, ಮೊದಲಾರ್ಧ ಕಾಣಿಸುತ್ತಲೇ ಹೋಗುತ್ತಾರೆ. ಪೀಲಿಂಗ್ಸ್ ಹಾಡಿನಲ್ಲಿ ಮೈ ಚಳಿಬಿಟ್ಟು ಸೊಂಟ ಬಳುಕಿಸಿ ಸೈಎನಿಸಿಕೊಳ್ಳುತ್ತಾರೆ ರಶ್ಮಿಕಾ.
ಮೊದಲಾರ್ಧದಲ್ಲಿ ಮುಕ್ಕಾಲು ಗಂಟೆ ಕಾಲ ನಾಯಕನ ಇಂಟ್ರೋ ತೆರೆ ಮೇಲೆ ತೇಲಿಬರುತ್ತದೆ. ಅಷ್ಟರ ಮಟ್ಟಿಗೆ ಪುಷ್ಪರಾಜನನ್ನು ವೈಭವೀಕರಿಸಲಾಗಿದೆ.
ವಿಭಾಗ