ಒಟಿಟಿಯಲ್ಲಿ ವಿದ್ಯಾಪತಿ ನೋಡಿದ್ರ? ಕರಾಟೆ ಸೀನ್‌ಗಳಲ್ಲಿ ಸಖತ್ ಕಾಮಿಡಿ, ನಾಗಭೂಷಣ ಸಿನಿಮಾ ಥಿಯೇಟರ್‌ನಲ್ಲಿ ಸೋತದ್ಯಾಕೆ
ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವಿದ್ಯಾಪತಿ ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾ ಸರಳ ಕಥೆ ಮತ್ತು ಕಾಮಿಡಿ ದೃಶ್ಯಗಳಿಂದ ಇಷ್ಟವಾಗುತ್ತದೆ. ಕರಾಟೆ ಎಪಿಸೋಡ್ ಮಿಸ್ ಮಾಡದೆ ನೋಡಬೇಕಾದ ಅಧ್ಯಾಯ.

ಸರಳ ಕಥೆಯೊಂದಿಗೆ ಆಹ್ಲಾದಕರವಾದ ಮನರಂಜನೆ ಇರುವ ಸಿನಿಮಾಗಳು ಮಲಯಾಳಂನಲ್ಲಿ ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ. ಕನ್ನಡದಲ್ಲಿಯೂ ಇಂತಹ ಪ್ರಯತ್ನಗಳು ಸಾಕಷ್ಟು ನಡೆಯುತ್ತಿವೆ. ಕನ್ನಡ ನಟ ನಾಗಭೂಷಣ್ ಈ ಹಿಂದೆ ಟಗರು ಪಲ್ಯದ ಮೂಲಕ ಸಿನಿಮಾ ಪ್ರೇಕ್ಷಕರಿಗೆ ಸೊಗಸಾದ ಮನರಂಜನೆ ಉಣಬಡಿಸಿದ್ದರು. ಇತ್ತೀಚೆಗೆ ಇವರ ವಿದ್ಯಾಪತಿ ಸಿನಿಮಾ ಬಿಡುಗಡೆಯಾಗಿತ್ತು. ಇದರಲ್ಲಿಯೂ ಹಾಸ್ಯ, ಒಂದಿಷ್ಟು ಸೆಂಟಿಮೆಂಟ್ ಇವೆ. ಈ ಸಿನಿಮಾ ಥಿಯೇಟರ್‌ನಲ್ಲಿ ಯಶಸ್ಸು ಪಡೆಯಲು ವಿಫಲವಾಗಿದೆ.
ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವಿದ್ಯಾಪತಿ ಸಿನಿಮಾ ರಿಲೀಸ್ ಆಗಿದೆ. ಪ್ರೈಮ್ ವಿಡಿಯೋದ ಮೊದಲ ಪುಟದಲ್ಲಿ ನಿಮ್ಮ ಕಣ್ಣಿಗೆ ಈ ಸಿನಿಮಾ ಕಾಣದೆ ಇರಬಹುದು. ಟಾಪ್ 10ನಲ್ಲಿ ಬೇರೆ ಸಿನಿಮಾಗಳು ಇರುವುದು ಇದಕ್ಕೆ ಕಾರಣವಾಗಿರಬಹುದು. ಈ ಒಟಿಟಿಯ ಸರ್ಚ್ ಬಾರ್‌ನಲ್ಲಿ vidyapati ಎಂದು ಹುಡುಕಿದರೆ ಈ ಸಿನಿಮಾ ದೊರಕುತ್ತದೆ. ಕನ್ನಡದಲ್ಲಿ ಕಾಮಿಡಿ ಸಿನಿಮಾ ನೋಡಲು ಬಯಸುವವರಿಗೆ ಇದು ಒಳ್ಳೆಯ ಆಯ್ಕೆಯಾಗಬಹುದು.
ನನಗೆ ಈ ಸಿನಿಮಾದ ಎಲ್ಲಾ ಅಧ್ಯಾಯಗಳಲ್ಲಿ ಹೆಚ್ಚು ಇಷ್ಟವಾದದ್ದು ಕರಾಟೆ ಎಪಿಸೋಡ್. ಜಗ್ಗುನ ವಿರುದ್ಧ ಹೋರಾಡಲು "ಕರಾಟೆ ಕಲಿಯಲು" ವಿದ್ಯಾಪತಿ ಹೋಗುತ್ತಾನೆ. ಅಲ್ಲಿ ಕರಾಟೆ ಕಲಿಯುವ ಕಲಿಸುವ ದೃಶ್ಯಗಳು ಸಖತ್ ಕಾಮಿಡಿಯಾಗಿವೆ. ಮನೆಯಲ್ಲಿ ಮಕ್ಕಳು ಇದ್ದರಂತೂ ಕರಾಟೆ ಕಲಿಕೆ ದೃಶ್ಯಗಳಿಗೆ ಜೋರಾಗಿ ನಗಬಹುದು. ಇದೇ ಸಮಯದಲ್ಲಿ ಜಗ್ಗೇಶ್ ಧ್ವನಿಯಲ್ಲಿ "ಇದೇನು ವಿಧಿಯೇ... ಅಯ್ಯೋ ದುರ್ವಿಧಿಯೇ" ಈ ಹಾಡು ಕಣ್ಣಿಗೂ ಕಿವಿಗೂ ಹಬ್ಬ ನೀಡುತ್ತದೆ. ಈ ಹಾಡಿನ ನಡುವೆ ನಾಗಭೂಷಣ್ ಅವರು ಕರಾಟೆ ಕಲಿಯುವ ಕಾಮಿಡಿ ಸೀನ್‌ಗಳು ನಗೆ ಉಕ್ಕಿಸುತ್ತದೆ. ಕರಾಟೆ ಮಾಸ್ಟರ್ ಆಗಿ ಕಾರ್ತಿಕ್ ರಾವ್ ಗಮನ ಸೆಳೆಯುತ್ತಾರೆ.
ಈ ಚಿತ್ರದ ಆರಂಭದಲ್ಲಿ ನಾಗಭೂಷಣ್ "ರಾಯಲ್ ಜೀವನಶೈಲಿ" ಮೂಲಕ ಗಮನ ಸೆಳೆಯುತ್ತಾರೆ. ಖ್ಯಾತ ನಟಿ ವಿದ್ಯಾಳ "ಪತಿಯಾಗಿದ್ದುಕೊಂಡು" ರಿಚ್ ಆಗಿರುತ್ತಾನೆ. ಆದರೆ, ಶ್ರೀಮಂತನಾಗಿದ್ದವ ಒಂದೇ ಕ್ಷಣದಲ್ಲಿ ಬೀದಿಗೆ ಬೀಳುವುದನ್ನು ಅರಗಿಸಿಕೊಳ್ಳಲು ಪ್ರೇಕ್ಷಕರಿಗೆ ಕಷ್ಟವಾಗಬಹುದು. ಜಗ್ಗು ಎಂಬ ರೌಡಿ ಮೈಮುಟ್ಟಿದ್ದಕ್ಕೆ ಗಂಡನಾದವ ಫೈಟ್ ಮಾಡಿಲ್ಲ ಎನ್ನುವುದು ಪತ್ನಿಯ ಕೋಪಕ್ಕೆ ಕಾರಣ. "ಜಗ್ಗು ಎಂಬ ಕೆಜಿಎಫ್ ಗರುಡನ ವಿರುದ್ಧ ಗುಬ್ಬಚ್ಚಿಯಂತೆ ಇರುವ ಗಂಡನನ್ನು ಯುದ್ಧಕ್ಕೆ ಕಳುಹಿಸುವ ಮನಸ್ಥಿತಿ ನಿಜವಾದ ಪತ್ನಿಗೆ ವಾಸ್ತವವಾಗಿ ಇರಬಹುದೇ?". ಆಕೆ ನೀಡುವ ಕಾರಣ ಸರಿಯಾಗಿದ್ದರೂ ವೇದಿಕೆ ಸರಿಯಾದಂತೆ ಇಲ್ಲ. ಶ್ರೀಮಂತಿಕೆಯಿಂದ ಬೀದಿಗೆ ಬೀಳುವ ಈ ದೃಶ್ಯ ನನಗೆ ಅವಾಸ್ತವವಾಗಿ ಕಾಣಿಸಿತ್ತು.
ಸರಳ ಕಥೆಯಲ್ಲಿ ಪೇಲವವಾಗಬಹುದಾದ ಈ ಸಿನಿಮಾವನ್ನು ಕೊನೆಗೆ ಡಾಲಿ ಧನಂಜಯ್ ಎತ್ತಲು ಬಂದಿದ್ದಾರೆ. ಅವರ ವೇಷ ಭೂಷಣ, ಫೈಟಿಂಗ್ ಇಷ್ಟವಾಗುತ್ತದೆ. ಕೊನೆಯ ಫೈಟಿಂಗ್ ನಡೆಯುವಲ್ಲಿಗೆ ಮಲೈಕಾ ಟಿ ವಸುಪಾಲ್ ಅಥವಾ ನಾಯಕಿ ಬರುವುದು "ಅನಿರೀಕ್ಷಿತ, ಕಾಕಾತಾಳೀಯ" ಮತ್ತು "ಅವಾಸ್ತವ". ನಾಯಕನಿಗೆ ಪೆಟ್ಟು ಬೀಳುತ್ತಿದೆ. ಅಲ್ಲಿಗೆ ನಾಯಕಿ ಬರುತ್ತಾಳೆ ಎನ್ನುವ ದೃಶ್ಯಗಳು ಸಹಜವಾಗಿ ಕಾಣಿಸದು. ಒಟಿಟಿಯಲ್ಲಿ ನೋಡಿ ಖುಷಿ ಪಡಬಹುದಾದ ಸಿನಿಮಾ ಇದು. ಆದರೆ, ಚಿತ್ರಮಂದಿರಗಳಲ್ಲಿ ಈಗ ಜನರು ಹೆಚ್ಚಾಗಿ "ಸಿಂಪಲ್" ಸಿನಿಮಾ ನೋಡಲು ಬರುತ್ತಿಲ್ಲ ಎನ್ನುವುದು ದೂರು. ಜನರ ಮುಂದೆ ಮನರಂಜನೆಗೆ ಆಯ್ಕೆಗಳು ಇವೆ. ಕೈಯಲ್ಲಿರುವ ಮೊಬೈಲ್‌ನಲ್ಲಿಯೇ ಹಲವು ಸಿನಿಮಾಗಳನ್ನು ನೋಡಬಹುದು. ಇಂತಹ ಸಮಯದಲ್ಲಿ ವಿದ್ಯಾಪತಿಯಂತಹ ಕಾಮಿಡಿ ಸಿನಿಮಾಗಳು ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯಲು ವಿಫಲವಾಗುತ್ತವೆ.
ಈ ಚಿತ್ರದ ಬಹುತೇಕ ಅಂಶಗಳು ಈಗಾಗಲೇ ಟ್ರೇಲರ್‌ನಲ್ಲಿ ಕಾಣಿಸಿದೆ. ಸಿನಿಮಾದ ಹಾಡುಗಳಲ್ಲಿಯೂ ಕರಾಟೆ ಇತ್ಯಾದಿಗಳನ್ನು ನೋಡಬಹುದು. ಜತೆಗೆ, ಮುಂದೆ ಏನಾಗಲಿದೆ ಎಂಬುಂದನ್ನು ಕೆಲವು ಕಡೆ ಊಹಿಸಬಹುದು. ಹೀಗಾಗಿ, ಈ ಚಿತ್ರ ಕುತೂಹಲವಿಲ್ಲದೆ ನೋಡಿಕೊಂಡು ಹೋಗಬಹುದಾದ ಸಿನಿಮಾವಾಗಿದೆ. ಹೀಗಿದ್ದರೂ, ಒಟಿಟಿಯಲ್ಲಿ ವಿದ್ಯಾಪತಿ ತಪ್ಪದೇ ನೋಡಬಹುದಾದ ಸಿನಿಮಾ. ಮನೆಯಲ್ಲಿ ಮಕ್ಕಳು, ದೊಡ್ಡವರ ಜತೆ ಎಲ್ಲರೂ ಕುಳಿತು ನಗು ನಗುತ್ತಾ ಈ ಸಿನಿಮಾ ನೋಡಬಹುದು.