‘ಅಪಾಯವಿದೆ ಎಚ್ಚರಿಕೆ’ ಎನ್ನುತ್ತಿದ್ದಾರೆ ಅಣ್ಣಯ್ಯ ಸೀರಿಯಲ್ ಶಿವಣ್ಣ, ಅಮೃತಧಾರೆ ಧಾರಾವಾಹಿಯ ಮಲ್ಲಿ
Apaayavide Eccharike Teaser: ಅಮೃತಧಾರೆ ಸೀರಿಯಲ್ ಮಲ್ಲಿ ಖ್ಯಾತಿಯ ರಾಧಾ ಭಗವತಿ ಮತ್ತು ಅಣ್ಣಯ್ಯ ಧಾರಾವಾಹಿ ಶಿವಣ್ಣ ಖ್ಯಾತಿಯ ವಿಕಾಶ್ ಉತ್ತಯ್ಯ ಜೋಡಿಯಾಗಿ ನಟಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ಅಪಾಯವಿದೆ ಎಚ್ಚರಿಕೆ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಈ ಸಿನಿಮಾ ಫೆಬ್ರವರಿ ಮೊದಲ ವಾರದಲ್ಲಿ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ.
Apaayavide Eccharike Movie Teaser: ಕನ್ನಡ ಕಿರುತೆರೆಯಲ್ಲಿ ಅದರಲ್ಲೂ ಜೀ ಕನ್ನಡದಲ್ಲಿ ಈಗಾಗಲೇ ಪ್ರಸಾರ ಆರಂಭಿಸಿರುವ ಅಣ್ಣಯ್ಯ ಸೀರಿಯಲ್, ವೀಕ್ಷಕರ ಮನ ಗೆದ್ದಿದೆ. ವಾರ ವಾರ ಒಳ್ಳೆಯ ಟಿಆರ್‌ಪಿ ಗಿಟ್ಟಿಸಿಕೊಳ್ಳುತ್ತಿದೆ. ಅದೇ ರೀತಿ ಇದಕ್ಕೂ ಮೊದಲೇ ಶುರುವಾದ ಅಮೃತಧಾರೆ ಧಾರಾವಾಹಿಯೂ ಸದ್ಯ ಕಿರುತೆರೆ ವೀಕ್ಷಕರ ಹಾಟ್ ಸೆನ್ಸೆಷನ್. ಇಂತಿಪ್ಪ ಎರಡೂ ಧಾರಾವಾಹಿಯಲ್ಲಿನ ಕಲಾವಿದರೀಗ ಒಂದೇ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾದ ಮೊದಲ ಟೀಸರ್ ಬಿಡುಗಡೆ ಆಗಿದೆ. ಅಷ್ಟಕ್ಕೂ ಆ ಸಿನಿಮಾ ಹೆಸರು ‘ಅಪಾಯವಿದೆ ಎಚ್ಚರಿಕೆ’!
ಮುಖ್ಯಭೂಮಿಕೆಯಲ್ಲಿ ವಿಕಾಶ್, ರಾಧಾ
ಇತ್ತೀಚೆಗಷ್ಟೇ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ‘ಅಪಾಯವಿದೆ ಎಚ್ಚರಿಕೆ’ ಚಿತ್ರತಂಡ ಅದರ ವಿಶೇಷತೆಯಿಂದ ನಿರೀಕ್ಷೆ ಹುಟ್ಟಿಸಿತ್ತು. ಅದಾದ ಬಳಿಕ ಬ್ಯಾಚುಲರ್ ಬದುಕು.. ಅನ್ನುವ ಸಾಂಗ್ ಬಿಡುಗಡೆಗೊಳಿಸಿ, ಎಲ್ಲಾ ಬ್ಯಾಚುಲರ್ಸ್ ಬದುಕಿನ ಬವಣೆಗಳ ನೈಜತೆಯನ್ನು ತೋರಿಸಿ ಕಚಗುಳಿ ಇಟ್ಟ ಚಿತ್ರತಂಡ, ಇದೀಗ ಟೀಸರ್ ಬಿಡುಗಡೆಗೊಳಿಸಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಈ ಸಿನಿಮಾದಲ್ಲಿ ಜೀ ಕನ್ನಡದ ಅಣ್ಣಯ್ಯ ಸೀರಿಯಲ್ ಶಿವಣ್ಣ ಖ್ಯಾತಿಯ ವಿಕಾಶ್ ಉತ್ತಯ್ಯ, ಅಮೃತಧಾರೆ ಸೀರಿಯಲ್ ಮಲ್ಲಿ ಖ್ಯಾತಿಯ ರಾಧಾ ಭಗವತಿ ನಟಿಸಿದ್ದಾರೆ.
ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ ಸಿನಿಮಾ
ತುಂಬಾ ದಿನಗಳ ಬಳಿಕ ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಸಸ್ಪೆನ್ಸ್ ಹಾರರ್ ಥ್ರಿಲ್ಲರ್ ಸಿನಿಮಾವನ್ನು ಬರೆದು, ನಿರ್ದೇಶಿಸಿದ ಅಭಿಜಿತ್ ತೀರ್ಥಹಳ್ಳಿ, ಚಿತ್ರದ ಬಹುತೇಕ ಭಾಗವನ್ನು ಕತ್ತಲೆಯ ಕಾಡಲ್ಲಿ ಚಿತ್ರೀಕರಿಸಿದ್ದಾರೆ. ನೋಡುಗನ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಹೊಸ ತರಹದ ಚಿತ್ರಕಥೆಯುಳ್ಳ ಈ ಚಿತ್ರದ ಮೇಕಿಂಗ್, ಮ್ಯೂಸಿಕ್, ಲೊಕೇಶನ್, ಎಲ್ಲವೂ ಬೆರಗು ಮೂಡಿಸುವಂತಿದೆ ಎಂಬುದು ತಂಡದ ಅಭಿಪ್ರಾಯ.
ವಿ. ಜಿ ಮಂಜುನಾಥ್ ಮತ್ತು ಪೂರ್ಣಿಮಾ ಎಂ ಗೌಡ ನಿರ್ಮಾಣದ ಈ ಚಿತ್ರದಲ್ಲಿ ನಟ ವಿಕಾಶ್ ಉತ್ತಯ್ಯ, ರಾಧಾ ಭಗವತಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾದ ಇನ್ನುಳಿದ ತಾರಾಗಣದಲ್ಲಿ, ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸಂಗೀತ, ಛಾಯಾಗ್ರಹಣ ಎರಡೂ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ ಸುನಾದ್ ಗೌತಮ್.
ಫೆಬ್ರವರಿ 7ರಂದು ತೆರೆಗೆ
‘ಅಪಾಯವಿದೆ ಎಚ್ಚರಿಕೆ’ ಚಿತ್ರ ತಾಂತ್ರಿಕವಾಗಿ, ಅದ್ಭುತವೆನಿಸುವಂತೆ ಟೀಸರ್‌ನಲ್ಲಿ ಕಂಡಿದೆ. ಸೀಟಿನ ತುದಿಗೆ ತಂದು ಕೂರಿಸುವ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಸಿನಿಮಾ ಇದ್ದಾಗಿದೆ. ಪ್ರೇಕ್ಷಕರಿಗೆ ಮನರಂಜನೆಯ ನೀಡಲಿದೆ ಎಂಬುದು ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಅಭಿಪ್ರಾಯ. ಅಂದಹಾಗೆ ಫೆಬ್ರವರಿ 7ರಂದು ‘ಅಪಾಯವಿದೆ ಎಚ್ಚರಿಕೆ’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.