ಪ್ರೇಕ್ಷಕನನ್ನು ಸೀಟಿನಂಚಿಗೆ ತಂದು ಕೂರಿಸುವ ಈ ಅನಾಮಧೇಯನ ಕಥೆಯೇ ಬಲು ರೋಚಕ; ಅನಾಮಧೇಯ ಅಶೋಕ್‍ ಕುಮಾರ್ ಚಿತ್ರವಿಮರ್ಶೆ
ಕನ್ನಡ ಸುದ್ದಿ  /  ಮನರಂಜನೆ  /  ಪ್ರೇಕ್ಷಕನನ್ನು ಸೀಟಿನಂಚಿಗೆ ತಂದು ಕೂರಿಸುವ ಈ ಅನಾಮಧೇಯನ ಕಥೆಯೇ ಬಲು ರೋಚಕ; ಅನಾಮಧೇಯ ಅಶೋಕ್‍ ಕುಮಾರ್ ಚಿತ್ರವಿಮರ್ಶೆ

ಪ್ರೇಕ್ಷಕನನ್ನು ಸೀಟಿನಂಚಿಗೆ ತಂದು ಕೂರಿಸುವ ಈ ಅನಾಮಧೇಯನ ಕಥೆಯೇ ಬಲು ರೋಚಕ; ಅನಾಮಧೇಯ ಅಶೋಕ್‍ ಕುಮಾರ್ ಚಿತ್ರವಿಮರ್ಶೆ

Anamadheya Ashok Kumar Review: ಅನಾಮಧೇಯ ಅಶೋಕ್‍ ಕುಮಾರ್‌ ಪಕ್ಕಾ ಥ್ರಿಲ್ಲರ್ ಚಿತ್ರ. ಇದೇ ಮೊದಲ ಬಾರಿಗೆ ನಿರ್ದೇಶನಕ್ಕಿಳಿದ ಸಾಗರ್ ಕುಮಾರ್, ಒಂದೊಳ್ಳೆಯ ತಂತ್ರ- ಪ್ರತಿತಂತದ ಕಥೆಯನ್ನು ಹೊತ್ತು ಬಂದಿದ್ದಾರೆ.

ಅನಾಮಧೇಯ ಅಶೋಕ್‍ ಕುಮಾರ್ ಚಿತ್ರವಿಮರ್ಶೆ
ಅನಾಮಧೇಯ ಅಶೋಕ್‍ ಕುಮಾರ್ ಚಿತ್ರವಿಮರ್ಶೆ

Anamadheya Ashok Kumar Review: ಕನ್ನಡದಲ್ಲಿ ಇತ್ತೀಚೆಗೆ ಸಾಕಷ್ಟು ಥ್ರಿಲ್ಲರ್ ಚಿತ್ರಗಳು, ಮರ್ಡರ್ ಮಿಸ್ಟ್ರಿಗಳು ಬಂದಿವೆ. ಆ ಪೈಕಿ ಈ ವಾರ ಬಿಡುಗಡೆಯಾದ ‘ಅನಾಮಧೇಯ ಅಶೋಕ್‍ ಕುಮಾರ್’ ಸಹ ಒಂದು. ಸಂಜೆ ಆರರಿಂದ ಬೆಳಗ್ಗೆ ಆರರವರೆಗೂ 12 ಗಂಟೆಗಳ ಅವಧಿಯಲ್ಲಿ ನಡೆಯುವ ಕಥೆ ಪ್ರೇಕ್ಷಕರನ್ನು ಸೀಟಿನಂಚಿನಲ್ಲಿ ತಂದು ಕೂರಿಸುತ್ತದೆ.

ಚಿತ್ರದ ಕಥೆ ಏನು?

‘ಅನಾಮಧೇಯ ಅಶೋಕ್‍ ಕುಮಾರ್’ ಪ್ರಾರಂಭವಾಗುವುದು ಪ್ರಜ್ಞೆ ತಪ್ಪಿಬಿದ್ದಿದ್ದ ಪತ್ರಕರ್ತ ಪ್ರವೀಣ್ ರಾಜಶೇಖರ್ (ಕಿಶೋರ್ ಕುಮಾರ್) ಪ್ರಜ್ಞೆ ಬಂದು ಎದ್ದು ಕೂರುವ ಮೂಲಕ. ಒಳಗೆ ಹೋಗಿ ನೋಡಿದರೆ, ತಾನು ಸಂದರ್ಶನ ಮಾಡುವುದಕ್ಕೆ ಬಂದಿದ್ದ ಪ್ರಖ್ಯಾತ ಕ್ರಿಮಿನಲ್‍ ಲಾಯರ್ ಆನಂದ್‍ ಭಟ್‍ ಕೊಲೆಯಾಗಿರುತ್ತದೆ. ಅವನಿಗೆ ಮನೆಯಲ್ಲಿ ಇನ್ನೂ ಯಾರೋ ಇರುವ ಅನುಮಾನ ಮೂಡುತ್ತದೆ. ತನ್ನ ಆತ್ಮರಕ್ಷಣೆಗಾಗಿ ಆತನನ್ನೂ ಕೊಲೆ ಮಾಡುವ ಪ್ರವೀಣ್‍ಗೆ, ಆತ ಮಾಜಿ ಪೊಲೀಸ್ ಕಮಿಷನರ್ ಎಂದು ಗೊತ್ತಾಗುತ್ತದೆ. ಶರಣಾಗುವ ಪ್ರವೀಣ್‍ನನ್ನು ಪೊಲೀಸರು ಒಂದು ಜಾಗಕ್ಕೆ ಕರೆದುಕೊಂಡು ಹೋಗಿ ತನಿಖೆ ಪ್ರಾರಂಭಿಸುತ್ತಾರೆ. ಈ ಪ್ರಕರಣದಲ್ಲಿ ಪ್ರವೀಣ್‍ ಶಂಕಿತನೂ ಹೌದು, ಸಾಕ್ಷಿಯೂ ಹೌದು. ಹಾಗಾದರೆ, ಈ ‘ಅನಾಮಧೇಯ ಅಶೋಕ್‍ ಕುಮಾರ್’ ಯಾರು? ಉತ್ತರ ಗೊತ್ತಾಗಬೇಕಿದ್ದರೆ ಚಿತ್ರ ನೋಡಬೇಕು.

ಹೇಗಿದೆ ‘ಅನಾಮಧೇಯ’ನ ಕಥೆ?

ಮೊದಲೇ ಹೇಳಿದಂತೆ ಇದೊಂದು ಪಕ್ಕಾ ಥ್ರಿಲ್ಲರ್ ಚಿತ್ರ. ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸಾಗರ್ ಕುಮಾರ್, ಒಂದೊಳ್ಳೆಯ ತಂತ್ರ- ಪ್ರತಿತಂತದ ಕಥೆಯನ್ನು ಮಾಡಿಟ್ಟುಕೊಂಡಿದ್ದಾರೆ. ಅವರಿಗೆ ಎಷ್ಟು ಹೇಳಬೇಕು, ಏನು ಹೇಳಬೇಕು ಎಂಬುದು ಗೊತ್ತಿದೆ. ಹಾಗಾಗಿ, ವಿಳಂಬ ಮಾಡದೆ, ಸುಮ್ಮನೆ ಎಳೆಯದೆ ಕಥೆ ಹೇಳುತ್ತಾ ಹೋಗುತ್ತಾರೆ. ಸಂಭಾಷಣೆಗಳು ಸಹ ಅಷ್ಟೇ. ಸನ್ನಿವೇಶಗಳಿಗೆ, ಪಾತ್ರಗಳಿಗೆ ಎಷ್ಟು ಬೇಕೋ ಅಷ್ಟಿವೆ. ತಮ್ಮ ಕಥೆಯನ್ನು 104 ನಿಮಿಷಗಳಲ್ಲಿ ಮುಗಿಸುತ್ತಾರೆ. ಕಥೆಗೆ ಎಷ್ಟು ಬೇಕೋ, ಅಷ್ಟು ಸೀಮಿತವಾಗಿ ಪರಿಸರ ಮತ್ತು ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ. ಇದು ಚಿತ್ರದ ದೊಡ್ಡ ಪ್ಲಸ್. ಮೇಲಾಗಿ ಈ ಕಥೆಯಲ್ಲಿ ಸಾಕಷ್ಟು ತಿರುವುಗಳಿವೆ. ಅದರಲ್ಲೂ ಕೊನೆಯ 20 ನಿಮಿಷಗಳು ಚಿತ್ರದ ಹೈಲೈಟ್‍. ಚಿತ್ರವು ಅಲ್ಲಲ್ಲಿ ನಿಧಾನವೆಂದನಿಸಿದರೂ, ಮೊದಲ ಪ್ರಯತ್ನದಲ್ಲೇ ಸಾಗರ್ ಒಂದೊಳ್ಳೆಯ ಪ್ರಯತ್ನ ಮಾಡಿರುವುದರ ಜೊತೆಗೆ ಭರವಸೆ ಮೂಡಿಸುತ್ತಾರೆ.

ಕಿಶೋರ್, ಹರ್ಷಿಲ್‍ ಜಿದ್ದಾಜಿದ್ದಿ

ಚಿತ್ರದಲ್ಲಿರುವುದು ಕೆಲವೇ ಪಾತ್ರಗಳು. ಅದರಲ್ಲೂ ಕಿಶೋರ್ ಮತ್ತು ತನಿಖಾಧಿಕಾರಿ ಪಾತ್ರ ಮಾಡಿರುವ ಹರ್ಷಿಲ್‍ ಕೌಶಿಕ್‍ ಸುತ್ತಲೇ ಚಿತ್ರ ಹೆಚ್ಚಾಗಿ ಸುತ್ತುತ್ತದೆ. ಇಬ್ಬರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇಬ್ಬರಲ್ಲಿ ಯಾರು ಹೆಚ್ಚು, ಕಡಿಮೆ ಎಂಬ ಮಾತಿಲ್ಲ. ಹಿನ್ನೆಲೆ ಸಂಗೀತ, ಛಾಯಾಗ್ರಹಣ ಕಥೆಗೆ ಪೂರಕವಾಗಿದೆ. ಚಿತ್ರದ ಬಹುತೇಕ ಭಾಗ ಒಂದು ತನಿಖಾ ಕೊಠಡಿ ಮತ್ತು ಮನೆಯಲ್ಲೇ ಸಾಗುತ್ತದೆ.

‘ಅನಾಮಧೇಯ ಅಶೋಕ್‍ ಕುಮಾರ್’ ಒಂದು ಅದ್ಭುತ ಚಿತ್ರವಲ್ಲದಿದ್ದರೂ, ಕೊನೆಯವರೆಗೂ ಯಾವುದೇ ಬೇಸರ, ಆಕಳಿಕೆ ಇಲ್ಲದೆ ನೋಡಿಸಿಕೊಂಡು ಹೋಗುತ್ತದೆ. ಥ್ರಿಲ್ಲರ್ ಚಿತ್ರಗಳನ್ನು ಇಷ್ಟಪಡುವವರಿಗೆ ‘ಅನಾಮಧೇಯ ಅಶೋಕ್‍ ಕುಮಾರ್’ ಖುಷಿಕೊಡುವ ಚಿತ್ರ.

ಚಿತ್ರದ ವಿವರ

ಸಿನಿಮಾ: ಅನಾಮಧೇಯ ಅಶೋಕ್‍ ಕುಮಾರ್

ಜಾನರ್: ತನಿಖಾ ಥ್ರಿಲ್ಲರ್

ನಿರ್ದೇಶನ: ಸಾಗರ್ ಕುಮಾರ್

ನಿರ್ಮಾಣ: ಕೆ.ಎನ್‍ ಫಿಲಂಸ್‍

ಸಂಗೀತ: ಆಜಾದ್

ಛಾಯಾಗ್ರಹಣ: ಸುನೀಲ್‍ ಹೊನ್ನಾಳಿ

ಸಿನಿಮಾದ ಅವಧಿ: 104 ನಿಮಿಷಗಳು

ಎಚ್‍ಟಿ ಕನ್ನಡ ರೇಟಿಂಗ್‍: 3/5

ವಿಮರ್ಶೆ: ಚೇತನ್‌ ನಾಡಿಗೇರ್

Whats_app_banner