Annayya Serial: ಬಾಡಿ ಶೇಮಿಂಗ್ ಬಗ್ಗೆ ಖಡಕ್ ಕ್ಲಾಸ್ ತೆಗೆದುಕೊಂಡ ಪಾರು; ವೀಕ್ಷಕರಿಂದ ಅಣ್ಣಯ್ಯ ಧಾರಾವಾಹಿಗೆ ಮೆಚ್ಚುಗೆ
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಹೆಣ್ಣು ನೋಡಲು ಬಂದವರು ಅಣ್ಣಯ್ಯನ ಇಬ್ಬರು ತಂಗಿಯರನ್ನು ನಿರಾಕರಿಸುತ್ತಾರೆ. ಆದರೆ ರಶ್ಮಿಯನ್ನು ನಿರಾಕರಿಸಲು ಅವರು ನೀಡಿದ ಕಾರಣ ಮಾತ್ರ ಯಾರಿಗೂ ಇಷ್ಟ ಆಗುವುದಿಲ್ಲ. ಈ ಬಗ್ಗೆ ಪಾರು ಏನು ಹೇಳಿದ್ದಾಳೆ ನೋಡಿ.
ಅಣ್ಣಯ್ಯ ಧಾರಾವಾಹಿಯಲ್ಲಿ ಅಣ್ಣಯ್ಯನ ಮನೆಗೆ ಗಂಡಿನ ಕಡೆಯವರು ಬಂದಿರುತ್ತಾರೆ. ಅವರು ಮೊದಲು ರತ್ನಾಳನ್ನು ನೋಡುತ್ತಾರೆ. ಆದರೆ ಅವಳಿಗೆ ಹಲವು ಸಂಬಂಧ ಬಂದು ತಪ್ಪಿ ಹೋಗಿದೆ ಎನ್ನುವ ವಿಚಾರಕ್ಕಾಗಿ ನಿರಾಕರಣೆ ಮಾಡುತ್ತಾರೆ. ಎರಡನೇ ತಂಗಿಯನ್ನು ತೋರಿಸಲು ಹೇಳುತ್ತಾರೆ. ಆದರೆ ರಶ್ಮಿ ರೆಡಿಯಾಗಿ ಬಂದಾಗ ಅವರು ಅವಮಾನ ಮಾಡುತ್ತಾರೆ. ಇಷ್ಟು ದಪ್ಪ ಇರುವ ಹುಡುಗಿ ನಮಗೆ ಬೇಡ ಎಂದು ಹೇಳುತ್ತಾರೆ. ಆದರೆ ಆ ಮಾತನ್ನು ಕೇಳಿ ರತ್ನಾಳಿಗೆ ತುಂಬಾ ಕೋಪ ಬರುತ್ತದೆ. “ನೀವು ಇಂದೇ ಬರುತ್ತೇವೆ ಎಂದು ಮೊದಲೇ ಒಂದು ಮಾತನ್ನೂ ತಿಳಿಸಿರಲಿಲ್ಲ. ನಾವು ಗಡಿಬಿಡಿಯಲ್ಲೇ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ, ಅಷ್ಟೇ ಅಲ್ಲ ನನ್ನನ್ನು ನೋಡಲು ಬಂದು ನಾನು ಬೇಡ ಎಂದಿರಿ. ಎರಡನೆಯವಳನ್ನು ತೋರಿಸಿ ಎಂದದ್ದಕ್ಕೆ ನಾವು ಒಪ್ಪಿಕೊಂಡೆವು. ಈಗ ದಪ್ಪ ಎಂದು ಅವಳನ್ನು ಬೇಡ ಎನ್ನುತ್ತಿದ್ದೀರಿ, ಮೂರನೆಯವಳನ್ನು ತೋರಿಸಿದರೆ ಅವಳಿಗೆ ವಿದ್ಯೆ ಇಲ್ಲ ಎಂದರೂ ಎನ್ನಬಹುದು. ನೀವೆಲ್ಲ ನಮ್ಮನೆಯಲ್ಲಿ ಇದೇ ರೀತಿ ಹೆಣ್ಣು ನೋಡಿಕೊಂಡು ಕೂರಬೇಕು ಎಂದುಕೊಂಡಿದ್ದೀರಾ? ನನ್ನ ತಂಗಿ ಎಂಬ ಕಾರಣಕ್ಕಲ್ಲ. ಅವಳಿಗೂ ಒಂದು ಒಳ್ಳೆಯ ಮನಸಿದೆ ಅದನ್ನು ನೀವು ದಪ್ಪ ಎನ್ನುವ ಮೂಲಕ ನೋಯಿಸಬೇಡಿ ಇದು ಸರಿಯಲ್ಲ” ಎನ್ನುತ್ತಾಳೆ.
ಬಾಡಿ ಶೇಮಿಂಗ್ ಬಗ್ಗೆ ಪಾರು ಮಾತು
ಅದನ್ನು ಕೇಳಿ ಅಣ್ಣಯ್ಯನ ಬಳಿ “ಏನಯ್ಯ ನಿಮ್ಮನೆಗೆ ಹೆಣ್ಣು ನೋಡಲು ಬಂದರೆ ನಿನ್ನ ತಂಗಿ ಈ ರೀತಿ ಅವಮಾನ ಮಾಡುತ್ತಿದ್ಧಾಳೆ” ಎಂದು ಗಂಡಿನಕಡೆಯವರು ಪ್ರಶ್ನೆ ಮಾಡುತ್ತಾರೆ. ಆಗ ಅಣ್ಣಯ್ಯ ರತ್ನಾಳ ಬಳಿ ಸುಮ್ಮನಿರಲು ಹೇಳುತ್ತಾನೆ. ಆದರೆ ಪಾರು ಸುಮ್ಮನಾಗುವುದಿಲ್ಲ. “ರತ್ನಾ ಹೇಳಿದ್ದು ಸರಿ ಇದೆ. ದಪ್ಪ, ಸಣ್ಣ ಇದೆಲ್ಲ ಸ್ವಾಭಾವಿಕ ಗುಣ. ಒಬ್ಬೊಬ್ಬರು ಒಂದೊಂದು ರೀತಿ ಇರಲು ಅವರದೇ ಆದ ಕಾರಣ ಇರುತ್ತದೆ. ದಪ್ಪ ಇದ್ದರೆ ತಿಂದು ತಿಂದು ಸೋಂಬೇರಿಯಾಗಿ ಮೈ ಬೆಳೆಸಿಕೊಂಡಿದ್ದಾಳೆ ಎನ್ನುತ್ತಾರೆ. ಇನ್ನು ಸಣ್ಣ ಇದ್ದರೆ ತಿನ್ನದೇ ಯಾವುದೋ ಖಾಯಿಲೆ ಇದೆ ಎಂದುಕೊಳ್ಳುತ್ತಾರೆ. ಆದರೆ ಅದು ಹಾಗಲ್ಲ ಹಾರ್ಮೋನ್ ವ್ಯತ್ಯಾಸ, ವಂಶವಾಹಿ, ಥೈರಾಯ್ಡ್ ಇನ್ನೂ ಏನೇನೋ ಕಾರಣ ಇರುತ್ತದೆ. ಅಷ್ಟಕ್ಕೆಲ್ಲ ಬಾಡಿ ಶೇಮಿಂಗ್ ಮಾಡಬಾರದು. ಇಂದು ತೆಳ್ಳಗಿದ್ದಾಳೆ ಎಂದು ಮದುವೆಯಾಗಿ ನಂತರ ದಪ್ಪವಾದರೆ ನೀವು ಅವಳನ್ನು ಬಿಟ್ಟು ಬಿಡುತ್ತೀರಾ?” ಎಂದು ಪ್ರಶ್ನೆ ಮಾಡುತ್ತಾಳೆ.
ಧಾರಾವಾಹಿಯಲ್ಲಿ ಬಾಡಿ ಶೇಮಿಂಗ್ ಬಗ್ಗೆ ಮತ್ತು ಕೆಲವರ ಕಷ್ಟದ ಬಗ್ಗೆ ಮಾತನಾಡಿದ್ದಾರೆ. ಆ ಮಾತುಗಳಲ್ಲಿ ಸತ್ಯಾಂಶ ಅಡಗಿದೆ. ಹಾಗಾಗಿ ವೀಕ್ಷಕರು ಧಾರಾವಾಹಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜನಾಭಿಪ್ರಾಯ
ಈ ಒಂದು ಸಂದೇಶವನ್ನು ಧಾರಾವಾಹಿ ಮೂಲಕ ತೋರಿಸಿದ್ದಕ್ಕೆ ಧನ್ಯವಾದಗಳು ಸರ್. ಪಾರು ಸೂಪರ್ ನಿಮ್ಮ ಅಭಿನಯ ಎಂದು ವಿದ್ಯಾ ಕಾಮೆಂಟ್ ಮಾಡಿದ್ದಾರೆ. ಎಪಿಸೋಡ್ ಚೆನ್ನಾಗಿದೆ, ಎಲ್ಲರಿಗೂ ಇದೊಂದು ಪಾಠ, ಇಂಥಹ ಸಂದೇಶಗಳನ್ನೇ ನೀಡಿ…ಹೀಗೆ ಇನ್ನಿತರ ಕಾಮೆಂಟ್ಸ್ ಬರುತ್ತಿದ್ದು ಮೆಚ್ಚುಗೆ ವ್ಯಕ್ತವಾಗಿದೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.