ಸಕಲೇಶಪುರದ ಕಾಫಿ ಎಸ್ಟೇಟ್ ಹುಡುಗ ಅಮೃತಧಾರೆ ಧಾರಾವಾಹಿಯ ಪಾರ್ಥ ಪಾತ್ರಧಾರಿ ನಟ ಕರಣ್ ಬಗ್ಗೆ ನಿಮಗೆಷ್ಟು ಗೊತ್ತು? ಸಂದರ್ಶನ
Karan KR Interview: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಅಮೃತಧಾರೆʼ ಧಾರಾವಾಹಿಯಲ್ಲಿ ಈಗ ಪಾರ್ಥ ದಿವಾನ್ ಪಾತ್ರದಲ್ಲಿ ಮಿಂಚುತ್ತಿರುವ ನಟ ಕರಣ್ ಕೆ ಆರ್. ಈಗ ಇದೇ ನಟನ ರಿಯಲ್ ಲೈಫ್ ಕಹಾನಿ ಹೇಗಿದೆ? ಇವರ ಮೂಲ ಎಲ್ಲಿಯವರು, ಈ ಹಿಂದಿನ ಸೀರಿಯಲ್‌ಗಳಾವವು ಎಂಬ ಕುರಿತ ಮಾಹಿತಿ ಇಲ್ಲಿದೆ. - ಸಂದರ್ಶನ ಪದ್ಮಶ್ರೀ ಭಟ್
Amruthadhaare Serial Karan KR Interview: ಅಮೃತಧಾರೆ ಧಾರಾವಾಹಿಯಲ್ಲಿ ಪಾರ್ಥ ಪಾತ್ರ ಮಾಡುತ್ತಿರುವ ನಟ ಕರಣ್ ಅವರು ಈ ಹಿಂದೆಯೇ ʼಸಿಂಧೂರʼ, ʼಅರಸಿʼ ಧಾರಾವಾಹಿಯಲ್ಲಿ ನಟಿಸಿ ಜನ-ಮನ ಗೆದ್ದಿದ್ದರು. ಕರಣ್ ಅವರು ಕೆಲ ವರ್ಷಗಳ ಕಾಲ ಚಿತ್ರರಂಗದಿಂದ ದೂರ ಇದ್ದರು. ಈ ಬಗ್ಗೆ ಅವರು ಪಂಚಮಿ ಟಾಕ್ಸ್ ಯುಟ್ಯೂಬ್ ಚಾನೆಲ್ ಜೊತೆಗೆ ಮಾತನಾಡಿದ್ದಾರೆ.
- ಕರಣ್ ಹೆಸರು ಇಟ್ಟವರು ಯಾರು?
ಇದು ನನ್ನ ನಿಜವಾದ ಹೆಸರು. ನನ್ನ ತಂದೆ-ತಾಯಿ ಹೆಸರನ್ನು ಇಟ್ಟಿದ್ದಾರೆ. ಸಂಸ್ಕೃತದಲ್ಲಿ ಕರಣ್ ಅಂದರೆ ಕಿವಿ ಎಂದರ್ಥ. ಸೂಕ್ಷ್ಮವಾಗಿ ಕೇಳುವವನು ಕರಣ್ ಅಂತ ನಾನು ಅಂದುಕೊಂಡಿದ್ದೇನೆ.
- ಎಲ್ಲಿಯವರು?
ಸಕಲೇಶಪುರದ ಕುಂಬರಡಿಯಲ್ಲಿ ನಮ್ಮ ಕಾಫಿ ಎಸ್ಟೇಟ್ ಇದೆ. ಅಲ್ಲಿಯೇ ನನ್ನ ತಂದೆ-ತಾಯಿ ಇದ್ದಾರೆ.
- ನಟನೆ ಶುರುವಾಗಿದ್ದು ಹೇಗೆ?
ನನಗೆ ನಟನೆ ಮೇಲೆ ಆಸಕ್ತಿ ಇದ್ದಿದ್ದರಿಂದ ತಂದೆಯನ್ನು ಒಪ್ಪಿಸಿ ಮುಂಬೈನಲ್ಲಿ ಮೂರು ತಿಂಗಳಗಳ ಕಾಲ ವರ್ಕ್‌ಶಾಪ್‌ನಲ್ಲಿ ಭಾಗವಹಿಸಿದೆ. ಆಗ ನನಗೆ 19 ವರ್ಷ. ಡಿಗ್ರಿ ಮುಗಿಯುವ ಟೈಮ್‌ನಲ್ಲಿ ನನಗೆ ʼಸಿಂಧೂರʼ ಧಾರಾವಾಹಿ ಸಿಗ್ತು. ಸುವರ್ಣ ವಾಹಿನಿಯಲ್ಲಿ ಆ ಧಾರಾವಾಹಿ ಪ್ರಸಾರ ಆಗುತ್ತಿತ್ತು. ರಮೇಶ್ ಭಟ್, ರಶ್ಮಿ ಕುಲಕರ್ಣಿ ಮುಂತಾದವರು ಆ ಧಾರಾವಾಹಿಯಲ್ಲಿ ನಟಿಸಿದ್ದರು. ಅದರಲ್ಲಿ ನಾನು ಆದಿತ್ಯ ಪಾತ್ರ ಮಾಡಿದ್ದೆ, ಒಳ್ಳೆಯ ಪ್ರತಿಕ್ರಿಯೆ ಸಿಗ್ತು. ಒಂದು ವರ್ಷಕ್ಕೆ ಆ ಸೀರಿಯಲ್ ಅಂತ್ಯ ಆಯ್ತು. ಆಮೇಲೆ ನಾನು ಸ್ವಲ್ಪ ಬ್ರೇಕ್ ತಗೊಂಡೆ. ಪ್ರಕೃತಿ ನಡುವೆ ಸುತ್ತಾಟ, ಬರೆಯುವುದು, ರೈಡ್ ಹೋಗುವುದು ನನಗೆ ತುಂಬ ಇಷ್ಟ. ಇದರಲ್ಲಿ ಸಮಯ ಕಳೆದೆ.
- ಅರಸಿ ಸೀರಿಯಲ್ ನಿಮ್ಮನ್ನು ಅರಸಿ ಬಂದಿದ್ದು ಹೇಗೆ?
ಊರಲ್ಲಿದ್ದಾಗ ನಿರ್ದೇಶಕ ಅರವಿಂದ್ ಕೌಶಿಕ್ ಅವರು ಫೋನ್ ಮಾಡಿ ʼಅರಸಿʼ ಆಫರ್ ಕೊಟ್ಟರು. ನಾನು ಆರಂಭದಲ್ಲಿ ಬೇಡ ಅಂತ ಹೇಳಿದ್ದೆ, ಆಮೇಲೆ ನಟಿಸುವ ಹಾಗೆ ಆಯ್ತು. ʼಅರಸಿʼ ಧಾರಾವಾಹಿಯಲ್ಲಿ ನಾನು ಲೀಡ್ ಆಗಿದ್ದೆ, ರಚಿತಾ ರಾಮ್ ಅವರು ನೆಗೆಟಿವ್ ಶೇಡ್ ಪಾತ್ರ ನಿಭಾಯಿಸಿದ್ದರು. ಈ ಸೀರಿಯಲ್‌ಗೆ ಒಳ್ಳೆಯ ಪ್ರತಿಕ್ರಿಯೆ ಸಿಗ್ತು. ನಾನು ಆಗ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರದೆ ಇದ್ದರೂ ಕೂಡ, ಹೊರಗಡೆ ಹೋದಾಗ ಜನರು ನಮ್ಮನ್ನು ಗುರುತಿಸಿ ಮಾತನಾಡಿಸುತ್ತಿದ್ದರು. ಸೀರಿಯಲ್‌ಅನ್ನು ವೀಕ್ಷಕರು ವೈಯಕ್ತಿಕವಾಗಿ ತಗೊಳ್ಳುತ್ತಾರೆ. ಹೀಗಾಗಿ ಆಗ ಎಪಿಸೋಡ್ ಬಗ್ಗೆ ಪ್ರೇಕ್ಷಕರು ಪ್ರಶ್ನೆ ಕೇಳುತ್ತಿದ್ದರು.
- ಅರಸಿ ಬಳಿಕ ರಚಿತಾ ರಾಮ್ ಮತ್ತೆ ಸಿಕ್ಕಿದ್ರಾ
ರಚಿತಾ ರಾಮ್ ಅವರಿಗೆ ಅಂದೇ ನಾನು ನಿಮ್ಮ ಸ್ಕ್ರೀನ್ ಪ್ರೆಸೆನ್ಸ್ ಚೆನ್ನಾಗಿದೆ, ನಿಮಗೆ ಒಳ್ಳೆಯ ಭವಿಷ್ಯ ಇದೆ ಅಂತ ಹೇಳಿದ್ದೆ. ಇಂದು ರಚಿತಾ ರಾಮ್ ಅವರ ಯಶಸ್ಸು ನೋಡಿದರೆ ಖುಷಿ ಆಗುತ್ತದೆ. ನಾನೇ ಚಿತ್ರರಂಗದಿಂದ ದೂರ ಇದ್ದೆ, ಹೀಗಾಗಿ ʼಅರಸಿʼ ಆದ್ಮೇಲೆ ರಚಿತಾ ರಾಮ್ ಅವರನ್ನು ಭೇಟಿ ಮಾಡುವ ಅವಕಾಶ ಕೂಡಿಬರಲಿಲ್ಲ.
- ವಜ್ರಕಾಯ ಸಿನಿಮಾ ಮಾಡಿದ್ರಿ..
ʼವಜ್ರಕಾಯʼ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಜೊತೆ ನಟಿಸುವ ಅವಕಾಶ ಸಿಗ್ತು. ಅಲ್ಲಿ ನನ್ನದು ಸಣ್ಣ ಪಾತ್ರವಾದರೂ ಕೂಡ ತುಂಬ ಪ್ರಭಾವ ಬೀರುವ ಪಾತ್ರವಾಗಿತ್ತು.
- ಇಂದು, ಅಂದಿನ ಕಿರುತೆರೆ ಹೇಗಿದೆ?
ಅಂದು ಸೋಶಿಯಲ್ ಮೀಡಿಯಾ ಅಷ್ಟು ಸ್ಟ್ರಾಂಗ್ ಇರಲಿಲ್ಲ. ಇಂದು ಸೋಶಿಯಲ್ ಮೀಡಿಯಾ ತುಂಬ ಸ್ಟ್ರಾಂಗ್ ಇದೆ, ಕಿರುತೆರೆ ಧಾರಾವಾಹಿಗಳ ಬಗ್ಗೆ ಇಲ್ಲಿ ಜಾಸ್ತಿ ಆದ್ಯತೆ ಸಿಗ್ತಿದೆ. ಹಳೆಯ ಫ್ಲೇವರ್ ಬಿಡದೆ, ಸೀರಿಯಲ್ ಬರುತ್ತಿದೆ. ಇಲ್ಲಿ ಸ್ವಲ್ಪ ಚಿತ್ರಕಥೆ ಭಿನ್ನವಾಗಿ ಬರುತ್ತಿದ್ದರೂ ಕೂಡ ಫ್ಯಾಮಿಲಿ, ಎಮೋಶನ್ಸ್ ಅನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ.
- ಸಂಭಾವನೆ ಹೇಗಿದೆ?
ಯಾರ ಪಾತ್ರ ಎಷ್ಟು ಮುಖ್ಯವಾಗಿದೆ, ಎಷ್ಟು ದಿನ ಇರುತ್ತದೆ ಎನ್ನುವುದರ ಮೇಲೆ ಸಂಭಾವನೆ ನಿರ್ಧರಿತವಾಗಿರುತ್ತದೆ.
ಸಂದರ್ಶನ- ಪದ್ಮಶ್ರೀ ಭಟ್
ವಿಭಾಗ