ಪ್ಯಾಶನ್ ಹಿಂದೆ ಹೋಗುವವರಿಗೆ ಅರವಿಂದ ಸ್ವಾಮಿ, ವಿವೇಕ್ ಒಬೆರಾಯ್ ಸ್ಫೂರ್ತಿಯಾಗಲಿ- ರಂಗಸ್ವಾಮಿ ಮೂಕನಹಳ್ಳಿ ಬರಹ
ರಂಗಸ್ವಾಮಿ ಮೂಕನಹಳ್ಳಿ ಬರಹ: ನಮ್ಮಲ್ಲಿ ಬಹುತೇಕರು ನಿಮ್ಮ ಪ್ಯಾಶನ್ ಫಾಲೋ ಮಾಡಿ ಎನ್ನುತ್ತಾರೆ. ಇವತ್ತಿಗಂತೂ ಇದು ಅತ್ಯಂತ ಅಬ್ಯುಸ್ ಆಗಿರುವ ಪದವಾಗಿ ಹೋಗಿದೆ. ಪ್ಯಾಶನ್ ಹಿಂದೆ ಹೋಗುವುದು ತಪ್ಪಲ್ಲ, ಅಲ್ಲಿ ಯಶಸ್ಸು ಸಿಗಲಿಲ್ಲ ಎಂದು ಅಳುತ್ತಾ ಕೂರುವುದು ತಪ್ಪು ಎಂದು ರಂಗಸ್ವಾಮಿ ಮೂಕನಹಳ್ಳಿ ಹೇಳಿದ್ದಾರೆ.
ಅರವಿಂದ ಸ್ವಾಮಿ ಎನ್ನುವ ಸ್ಫುರದ್ರೂಪಿ ನಾಯಕ ನಟ ಯಾರಿಗೆ ಗೊತ್ತಿಲ್ಲ ಹೇಳಿ? ತಲಪತಿ , ರೋಜಾದಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದ್ದ ಇವರು ಚಿತ್ರರಂಗ ಪ್ರವೇಶಿಸಿದ್ದು 1991ರಲ್ಲಿ, ಎರಡು ಸಾವಿರದ ವೇಳೆಗೆ ಇವರ ಚಿತ್ರಗಳು ಒಂದರ ಮೇಲೊಂದು ಬಾಕ್ಸ್ ಆಫೀಸ್ ನಲ್ಲಿ ನೆಲಕಚ್ಚಿದ ಕಾರಣ ನಟನೆ ತೊರೆಯುತ್ತಾರೆ. ಬದುಕೇ ಹೀಗೆ ಯಾವ ಕ್ಷಣದಲ್ಲಿ ಮಗ್ಗುಲು ಬದಲಾಯಿಸುತ್ತದೆ ಗೊತ್ತಾಗುವುದಿಲ್ಲ. ಅಯ್ಯೋ ನನ್ನ ಹಣೆಬರಹವೇ ಎಂದು ಸ್ವಾಮಿ ಅಳುತ್ತಾ ಕೂರಲಿಲ್ಲ. ಇರಲಿ ನನಗೂ ಸಮಯ ಬರುತ್ತದೆ ಎಂದುಕೊಂಡು ತಮ್ಮನ್ನು ತಾವು ಬಿಸಿನೆಸ್‌ನಲ್ಲಿ ತೊಡಗಿಸಿಕೊಳ್ಳುತ್ತಾರೆ. 2005ರಲ್ಲಿ ಟ್ಯಾಲೆಂಟ್ ಮ್ಯಾಕ್ಸಿಮಸ್ ಎನ್ನುವ ಪೇ ರೋಲ್ ಪ್ರೋಸೆಸ್ ಮಾಡುವ ಸಂಸ್ಥೆ ತೆರೆಯುತ್ತಾರೆ. ಇಂದಿಗೆ ಈ ಸಂಸ್ಥೆ ಹತ್ತಿರತ್ತಿರ ಮೂರುವರೆ ಸಾವಿರ ಕೋಟಿ ರೆವೆನ್ಯೂ ಹೊಂದಿದೆ. ವ್ಯಾಪಾರ ಜಗತ್ತಿನಲ್ಲಿ ತನ್ನ ಛಾಪು ಮೂಡಿಸಿದ ನಂತರ 2015ರಲ್ಲಿ ಮರಳಿ ಚಲನಚಿತ್ರದಲ್ಲಿ ನಟನೆಯಲ್ಲಿ ತೊಡಗಿಕೊಂಡಿದ್ದಾರೆ. ನಿಯಮಿತವಾಗಿ ನಟಿಸುತ್ತಾ ಅಲ್ಲೂ ಯಶಸ್ಸು ಕಂಡುಕೊಂಡಿದ್ದಾರೆ.
ಇವತ್ತು ಇವರ ಕಥೆ ಹೇಳಲು ಮುಖ್ಯ ಕಾರಣವಿದೆ. ನಮ್ಮಲ್ಲಿ ಬಹುತೇಕರು ನಿಮ್ಮ ಪ್ಯಾಶನ್ ಫಾಲೋ ಮಾಡಿ ಎನ್ನುತ್ತಾರೆ. ಇವತ್ತಿಗಂತೂ ಇದು ಅತ್ಯಂತ ಅಬ್ಯುಸ್ ಆಗಿರುವ ಪದವಾಗಿ ಹೋಗಿದೆ. ಅರವಿಂದ ಸ್ವಾಮಿ ಪ್ಯಾಶನ್ ನಟನೆ , ಆದರೇನು ಮಾಡುವುದು, ಅಲ್ಲಿ ಆತನಿಗೆ ಬಯಸಿದ ಫಲಿತಾಂಶ ಸಿಗಲಿಲ್ಲ. ಅವರು ಬ್ಯುಸಿನೆಸ್‌ಗೆ ಹೊರಳಿಕೊಂಡರು. ಅಲ್ಲಿ ಯಶಸ್ಸು ಕಂಡರು , ಈಗ ನೋಡಿ ಮತ್ತೆ ಅವರು ನಟಿಸುತ್ತಿದ್ದಾರೆ. ಯಶಸ್ಸು ಅವರ ಬೆನ್ನ ಹಿಂದೆ ಬಿದ್ದಿದೆ.
ಸಾರಾಂಶವಿಷ್ಟೇ , ಪ್ಯಾಶನ್ ಹಿಂದೆ ಹೋಗುವುದು ತಪ್ಪಲ್ಲ , ಅಲ್ಲಿ ಯಶಸ್ಸು ಸಿಗಲಿಲ್ಲ ಎಂದು ಅಳುತ್ತಾ ಕೂರುವುದು ತಪ್ಪು. ಬದುಕು ಕೇಳುವ ವಾಟ್ ನೆಕ್ಸ್ಟ್? ಎನ್ನುವ ಪ್ರಶ್ನೆಗೆ ನಾವು ಸನ್ನದ್ಧರಾಗಿರಬೇಕು. ಅದೇ ಜೀವನ , ಅದು ನಿಜವಾದ ಪ್ಯಾಶನ್ . ಎಂತಹ ಸನ್ನಿವೇಶದಲ್ಲೂ ಬದುಕನ್ನು ಪ್ರೀತಿಸುವುದು ಬಿಡದೆ ಇರುವುದು ನಿಜವಾದ ಪ್ಯಾಶನ್ . ಹುಟ್ಟಿದವರೆಲ್ಲಾ ಸಾಯಲೇಬೇಕು ಅದು ವಿಧಿ ನಿಯಮ. ಆದರೆ ಸಾಯೋಕೆ ಮುಂಚೆ ಒಂದೊಳ್ಳೆ ಬದುಕನ್ನು ಬಾಳುವುದಕ್ಕಿಂತ ಮಹತ್ತರ ಸಾಧನೆ ಬೇರೇನೂ ಇಲ್ಲ.
ಇವರ ಜೊತೆಗೆ ಇಂತಹುದೇ ಸಾಧನೆ ಮಾಡಿದ ಇನ್ನೊಬ್ಬ ಕಲಾವಿದ ವಿವೇಕ್ ಒಬೆರಾಯ್. ವಿವೇಕ್ ಮಾಡೆಲಿಂಗ್ ಮಾಡುತ್ತಾರೆ. ಸ್ಟಾಕ್ ಮಾರ್ಕೆಟ್‌ನಲ್ಲಿ ಒಂದಷ್ಟು ವರ್ಷ ಸವೆಸುತ್ತಾರೆ. ಚಿತ್ರ ನಟರಾಗಿ ಒಂದಷ್ಟು ವರ್ಷ ಕಳೆಯುತ್ತಾರೆ. ಕೈ ಇಟ್ಟ ಕಡೆಯೆಲ್ಲಾ ಅವರು ಯಶಸ್ಸು ಕೂಡ ಕಾಣುತ್ತಾರೆ. ಆದರೆ, ಬಾಲಿವುಡ್‌ನ ರಾಜಕೀಯ ಅವರ ಬದುಕಿಗೆ ಬಹು ದೊಡ್ಡ ತಿರುವನ್ನು ನೀಡುತ್ತದೆ. ಆತನಲ್ಲಿದ್ದ ಬಿಸಿನೆಸ್‌ಮ್ಯಾನ್ ಕೆಲಸ ಶುರು ಮಾಡಿಕೊಳ್ಳುತ್ತಾನೆ. ಇಂದಿಗೆ ಆತ ಹಲವಾರು ಕ್ಷೇತ್ರದಲ್ಲಿ ಹೂಡಿಕೆಯನ್ನು ಮಾಡಿದ್ದಾರೆ. ದುಬೈನಲ್ಲಿ ನೆಲೆಸಿ ಅಲ್ಲಿನ ರಿಯಲ್ ಎಸ್ಟೇಟ್ ವ್ಯಾಪಾರದಲ್ಲೂ ಯಶಸ್ಸು ಕಾಣುತ್ತಿದ್ದಾರೆ.
ಕನ್ನಡ ಶಿಕ್ಷಕನಾಗಿ, ಬರಹಗಾರನಾಗಿ ಬದುಕಬೇಕು ಎನ್ನುವುದು ನನ್ನ ಪ್ಯಾಶನ್ ಆಗಿತ್ತು. ಅಣ್ಣ (ಅಪ್ಪ ) ಅದೆಲ್ಲ ಸರಿ ಕಣಯ್ಯಾ ಭಟ್ಟ , ಊಟಕ್ಕೆ ಏನು ಮಾಡುವೆ? ಎಂದು ಕೇಳಿದ್ದರು. ಅಣ್ಣನ ಬುದ್ದಿ ಮಾತು ನನ್ನ ಬದುಕಿನ ದಾರಿಯನ್ನು ಕೂಡ ಬದಲಿಸಿತು. ಇಪ್ಪತ್ತು ವರ್ಷ ಕಾರ್ಪೊರೇಟ್ ಬದುಕಿನ ನಂತರ ನನ್ನ ಪ್ಯಾಶನ್ ಬರಹಕ್ಕೆ ಹೊರಳಿದ್ದೇನೆ. ಇವತ್ತು ಪ್ಯಾಶನ್ ಹೆಸರಿನಲ್ಲಿ ಬದುಕು ಕಟ್ಟಿ ಕೊಳ್ಳಲು ಹೆಣಗುವ ಮಕ್ಕಳ ಕಂಡಾಗ ಇಷ್ಟೆಲ್ಲಾ ಹೇಳಬೇಕು ಎನಿಸಿತು.
ಹೋಗುವ ಮುನ್ನ : ಇದು ಕೇವಲ ನನ್ನ ಅನಿಸಿಕೆ. ನಿಮ್ಮ ಇಷ್ಟದ ಬದುಕು ಬದುಕುವ ಹಕ್ಕು ನಿಮಗಿದೆ. ನಾಲ್ಕು ಜನಕ್ಕೆ ಪ್ರೇರಣೆಯಾಗಲಿ ಎಂದು ಇಂತಹ ವಿಷಯ ಬರೆಯುತ್ತೇನೆ ಅಷ್ಟೇ. ಮಿಕ್ಕಂತೆ ನಾನು ಸದಾ ಹೇಳುವುದು ಅವರವರ ತಲೆಗೆ ಅವರವರ ಕೈ.
ಲೇಖನ: ರಂಗಸ್ವಾಮಿ ಮೂಕನಹಳ್ಳಿ
ಈ ಕೆಳಗಿನ ಲೇಖನಗಳನ್ನೂ ಓದಿ
- ಜಗತ್ತು ನಿಬ್ಬೆರಗಾಗಿ ನಿಂತು ನೋಡುವ ಒಂದು ಜಯ ಸಿಗುವ ಮುಂಚೆ ಅದೆಷ್ಟು ಸಂಘರ್ಷಗಳು ಇರುತ್ತವೆ ಗೊತ್ತಾ? ರಂಗಸ್ವಾಮಿ ಮೂಕನಹಳ್ಳಿ
- ನಮ್ಮ ಯಶಸ್ಸಿಗೆ ಕಾರಣರಾರು? ತಿಂಡಿ ತಿಂದು ಬಿಲ್ ಕೊಡದೆ ಹೋಗುತ್ತಿದ್ದವನಿಂದಲೇ ಲಾಭವಾಯ್ತು -ರಂಗಸ್ವಾಮಿ ಮೂಕನಹಳ್ಳಿ ಬರಹ
- ಮಕ್ಕಳಲ್ಲಿ ವ್ಯಕ್ತಿತ್ವ ನಿರ್ಮಾಣ ಮಾಡದೆ ಭವಿಷ್ಯ ಉಜ್ವಲವಾಗಲಿ, ದೇಶ ವಿಶ್ವಗುರುವಾಗಲಿ ಎಂದು ಆಶಿಸುವುದು ತಿರುಕನ ಕನಸಿನಂತೆ– ರಂಗ ನೋಟ