ಪ್ಯಾನ್ ಇಂಡಿಯನ್ ಕಣ್ಣಪ್ಪ ಚಿತ್ರದ ಶಿವ ಶಿವ ಶಂಕರ ಹಾಡು ಬಿಡುಗಡೆ ಮಾಡಿದ ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜಿ
ಟಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ಕಣ್ಣಪ್ಪ ಸಿನಿಮಾ ಏಪ್ರಿಲ್ 25ಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಇದೀಗ ಇದೇ ಚಿತ್ರದ ಶಿವ ಶಿವ ಶಂಕರ ಹಾಡನ್ನು ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರುಜೀ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

Kannappa Movie Shiva Shiva Shankara Song: ಟಾಲಿವುಡ್ ನಟ ಮೋಹನ್ ಬಾಬು ನಿರ್ಮಾಣ ಮಾಡಿರುವ ಬಹುನಿರೀಕ್ಷಿತ ಕಣ್ಣಪ್ಪ ಸಿನಿಮಾ ಬಿಡುಗಡೆಯ ಸನಿಹದಲ್ಲಿದೆ. ಬಹುಕೋಟಿ ವೆಚ್ಚದಲ್ಲಿ ಮೂಡಿಬಂದಿರುವ ಈ ಸಿನಿಮಾ ಈಗಾಗಲೇ ಬಹುತಾರಾಗಣದ ಮೂಲಕವೇ ಎಲ್ಲರ ನಿರೀಕ್ಷೆ ಹೆಚ್ಚಿಸಿದೆ. ಅದರಂತೆ ಟೀಸರ್ ಮತ್ತು ಪೋಸ್ಟರ್ ಮೂಲಕವೂ ಗಮನ ಸೆಳೆದಿದೆ. ಇದೀಗ ಇದೇ ಚಿತ್ರದ "ಶಿವ ಶಿವ ಶಂಕರ" ಎಂಬ ಹಾಡು ಬಿಡುಗಡೆ ಆಗಿದೆ. ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜಿ ಈ ಹಾಡನ್ನು ಬಿಡುಗಡೆ ಮಾಡಿ, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು.
ನನಗೆ "ಕಣ್ಣಪ್ಪ ಅಂದಕೂಡಲೆ ನೆನಪಿಗೆ ಬರುವುದು ಡಾ. ರಾಜಕುಮಾರ್ ಅವರು ಎಂದು ಮಾತು ಆರಂಭಿಸಿದ ನಟ, ನಿರ್ಮಾಪಕ ಮೋಹನ್ ಬಾಬು, "ಇಂದು ಶ್ರೀರವಿಶಂಕರ್ ಗುರೂಜಿ ಅವರು ನನ್ನ ಮಗ ವಿಷ್ಣು ಮಂಚು ಅಭಿನಯದ ಕಣ್ಣಪ್ಪ ಚಿತ್ರದ ಹಾಡನ್ನು ಬಿಡುಗಡೆ ಮಾಡಿ ಆಶೀರ್ವದಿಸಿದ್ದಾರೆ. ಅವರಿಗೆ ಅನಂತ ಧನ್ಯವಾದ. ಇನ್ನು, ನನ್ನ ಆತ್ಮೀಯ ಗೆಳೆಯರಾದ ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರ ಪತ್ನಿಯರಾದ ಭಾರತಿ ವಿಷ್ಣುವರ್ಧನ್ ಹಾಗೂ ಸುಮಲತ ಅಂಬರೀಶ್ ಅವರು ಬಂದಿರುವುದು ಬಹಳ ಖುಷಿಯಾಗಿದೆ. ರಾಕ್ ಲೈನ್ ವೆಂಕಟೇಶ್ ಅವರು ಕರ್ನಾಟಕದಲ್ಲಿ ಕಣ್ಣಪ್ಪ ಚಿತ್ರದ ವಿತರಣೆ ಹಕ್ಕನ್ನು ಪಡೆದುಕೊಂಡಿದ್ದಾರೆ" ಎಂದರು.
ಸೋಮವಾರದ ದಿನ ನಮ್ಮ ಚಿತ್ರದ "ಶಿವಶಿವ ಶಂಕರ" ಹಾಡು ಬಿಡುಗಡೆಯಾಗಿದೆ. ಹಾಡು ಬಿಡುಗಡೆ ಮಾಡಿಕೊಟ್ಟ ಗುರೂಜಿ ಅವರಿಗೆ, ಭಾರತಿ ವಿಷ್ಣುವರ್ಧನ್, ಸುಮಲತ ಅಂಬರೀಶ್ ಹಾಗೂ ರಾಕ್ ಲೈನ್ ವೆಂಕಟೇಶ್ ಅವರಿಗೆ ಧನ್ಯವಾದ. ನಮ್ಮ ಚಿತ್ರ ಏಪ್ರಿಲ್ 25ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಎಲ್ಲರು ನೋಡಿ ಪ್ರೋತ್ಸಾಹ ನೀಡಿ ಎಂದರು ನಟ ವಿಷ್ಣು ಮಂಚು.
ಭಾರತಿ, ಸುಮಲತಾ ಹೇಳಿದ್ದೇನು?
ಇಂದು ಬಿಡುಗಡೆಯಾದ ಹಾಡು ತುಂಬಾ ಚೆನ್ನಾಗಿದೆ. ಚಿತ್ರ ನೋಡುವ ಕಾತುರ ಹೆಚ್ಚಾಗಿದೆ. ನಮ್ಮ ಯಜಮಾನರಿಗೆ ಮೋಹನ್ ಬಾಬು ಎಂದರೆ ಬಹಳ ಪ್ರೀತಿ. ಅವರಿಗೂ ನಮ್ಮ ಯಜಮಾನರೆಂದರೆ ಅಷ್ಟೇ ಪ್ರೀತಿ. ಹಾಗಾಗಿ ಮೋಹನ್ ಬಾಬು, ಅವರ ಮಗನಿಗೆ ನಮ್ಮ ಯಜಮಾನರ ಹೆಸರನ್ನೇ (ವಿಷ್ಣು) ಇಟ್ಟಿದ್ದಾರೆ ಎಂದು ನಟಿ ಭಾರತಿ ವಿಷ್ಣುವರ್ಧನ್.
ಅಂಬರೀಶ್ ಅವರಿಗೆ ಮೋಹನ್ ಬಾಬು ಬಹಳ ಆತ್ಮೀಯರು. ಅವರ ಮಗ ವಿಷ್ಣು ಅವರನ್ನು ಸಹ ನಾವು ಚಿಕ್ಕವಯಸ್ಸಿನಿಂದ ನೋಡಿಕೊಂಡು ಬಂದಿದ್ದೇವೆ. ಮೋಹನ್ ಬಾಬು ನಿರ್ಮಾಣದ ಹಾಗೂ ವಿಷ್ಣು ಮಂಚು ಅಭಿನಯದ "ಕಣ್ಣಪ್ಪ" ಚಿತ್ರದ ಹಾಡನ್ನು ನೋಡಿ ಬಹಳ ಖುಷಿಯಾಯಿತು. ಚಿತ್ರ ಯಶಸ್ವಿಯಾಗಲೆಂದು ಸುಮಲತ ಅಂಬರೀಶ್ ಹಾರೈಸಿದರು.
ಕರ್ನಾಟಕದ ವಿತರಣೆ ಹಕ್ಕು ಪಡೆದ ರಾಕ್‌ಲೈನ್
"ಕಣ್ಣಪ್ಪ" ಚಿತ್ರವನ್ನು ನಾನು ಈಗಾಗಲೇ ನೋಡಿದ್ದೇನೆ. ಬಹಳ ಚೆನ್ನಾಗಿದೆ. ಈ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಸಂತೋಷವಾಗುತ್ತಿದೆ ಎಂದು ಕರ್ನಾಟಕದ ವಿತರಣೆ ಹಕ್ಕು ಪಡೆದುಕೊಂಡಿರುವ ರಾಕ್ ಲೈನ್ ವೆಂಕಟೇಶ್ ತಿಳಿಸಿದರು. ನಿರ್ದೇಶಕ ಮುಖೇಶ್ ಕುಮಾರ್ ಸಿಂಗ್, ಹಾಡು ಬರೆದಿರುವ ರಾಮಜೋಗಿ ಶಾಸ್ತ್ರಿ ಹಾಗೂ ಸಂಗೀತ ನಿರ್ದೇಶಕ ಸ್ಟೀಫನ್ ದೇವಸ್ಸಿ ಕಣ್ಣಪ್ಪ ಚಿತ್ರದ ಕುರಿತು ಮಾತನಾಡಿದರು. ಹೆಸಾರಾಂತ ಗಾಯಕ ವಿಜಯ್ ಪ್ರಕಾಶ್ ಈ ಹಾಡನ್ನು ಹಾಡಿದ್ದಾರೆ.
ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಹಾಗೂ ವಿಷ್ಣು ಮಂಚು ಮುಖ್ಯಪಾತ್ರದಲ್ಲಿ ನಟಿಸಿರುವ ಬಹು ನಿರೀಕ್ಷಿತ "ಕಣ್ಣಪ್ಪ" ಚಿತ್ರದ "ಶಿವಶಿವ ಶಂಕರ" ಹಾಡು ಬಿಡುಗಡೆಯ ಸಂದರ್ಭದಲ್ಲಿ ಭಾರತಿ ವಿಷ್ಣುವರ್ಧನ್, ಸುಮಲತ ಅಂಬರೀಶ್ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅತಿಥಿಗಳಾಗಿ ಭಾಗವಹಿಸಿದ್ದರು.
