ಯುವ ಜನರ ಮೇಲೆ ದುಷ್ಪರಿಣಾಮ ಬೀರುವ ಬಿಗ್‌ಬಾಸ್ ಶೋ ಕಾರ್ಯಕ್ರಮವನ್ನು ಸರ್ಕಾರ ನಿಯಂತ್ರಿಸಬೇಕು: ಅರುಣ್ ಜೋಳದಕೂಡ್ಲಿಗಿ ಫೇಸ್‌ಬುಕ್ ಪೋಸ್ಟ್
ಬಿಗ್‌ಬಾಸ್ ಕಾರ್ಯಕ್ರಮ ಯುವಜನತೆಯನ್ನು ದಾರಿ ತಪ್ಪಿಸುತ್ತಿದೆ. ಸಾಮಾನ್ಯವಾಗಿ ವಿವಾದಕ್ಕೆ ಒಳಗಾದವರನ್ನು ಸ್ಪರ್ಧಿಗಳನ್ನಾಗಿ ಕರೆ ತರುತ್ತಾರೆ. ಆದ್ದರಿಂದ ಬಿಗ್‌ಬಾಸ್‌ಗೆ ಹೋಗಲು ಯುವಜನತೆ ಮಾಡಬಾರದ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಇಂತಹ ಶೋಗೆ ನಿಯಂತ್ರಣ ಹೇರಬೇಕು ಎಂದು ಅರುಣ್ ಜೋಳದಕೂಡ್ಲಿಗಿ ಎಂಬುವವರು ಫೇಸ್‌ಬುಕ್ ಪೋಸ್ಟ್ ಹಂಚಿಕೊಂಡಿದ್ದಾರೆ.

ಹಿಂದಿಯಲ್ಲಿ ಮೊದಲ ಬಾರಿಗೆ ಆರಂಭವಾದ ಬಿಗ್‌ಬಾಶ್ ಶೋ ಈಗ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲೂ ನಡೆಯುತ್ತಿದೆ. ಹಿಂದಿ ಹೊರತುಪಡಿಸಿ ಕನ್ನಡದಲ್ಲಿ ಅತಿ ಹೆಚ್ಚು ಶೋ ಪ್ರಸಾರವಾಗಿದೆ. 3 ದಿನಗಳ ಹಿಂದೆ ಸೀಸನ್ 11 ಆರಂಭವಾಗಿದೆ. ಸ್ಪರ್ಧಿಗಳ ನಡುವೆ ಮುನಿಸು ಕೂಡಾ ಶುರುವಾಗಿದೆ.
ಸಾಮಾನ್ಯವಾಗಿ ಬಿಗ್‌ಬಾಸ್‌ನಲ್ಲಿ ಕಾಂಟ್ರವರ್ಸಿಗೆ ಒಳಗಾದವರನ್ನು ಕರೆ ತರುತ್ತಾರೆ ಎಂಬ ಆರೋಪ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಕೆಲವು ಸೀಸನ್‌ಗಳಿಂದ ಸಮಾಜದಲ್ಲಿ ನಾನಾ ವಿಚಾರಗಳಿಗೆ ಸುದ್ದಿಯಾದವರೇ ಸ್ಪರ್ಧಿಗಳಾಗಿ ಬರುತ್ತಾರೆ. ಈ ವಿಚಾರವಾಗಿ ಎಲ್ಲೆಡೆ ಆಕ್ಷೇಪ ಕೇಳಿಬರುತ್ತಿದೆ. ಅರುಣ್ ಜೋಳದಕೂಡ್ಲಿಗಿ
ಎಂಬ ಫೇಸ್‌ಬುಕ್ ಯೂಸರ್ ಕೂಡಾ ಈ ವಿಚಾರವಾಗಿ ಬರೆದುಕೊಂಡಿದ್ದಾರೆ. 2022ರಲ್ಲಿ ತೆರೆ ಕಂಡ ಹದಿನೇಳೆಂಟು ಸಿನಿಮಾದಲ್ಲಿ ಬಿಗ್‌ಬಾಸ್‌ಗೆ ಸಂಬಂಧಿಸಿದ ಕಂಟೆಂಟ್ ಇರುವುದನ್ನು ತಮ್ಮ ವಾಲ್‌ನಲ್ಲಿ ಬರೆದುಕೊಂಡಿದ್ದಾರೆ.
'ಹದಿನೇಳೆಂಟು' ಸಿನೆಮಾ ಮತ್ತು 'ಬಿಗ್ ಬಾಸ್' ದುಷ್ಪರಿಣಾಮ
ಪೃಥ್ವಿ ಕೊಣನೂರ್ ಅವರ ಕತೆ, ಸಂಭಾಷಣೆ ಮತ್ತು ನಿರ್ದೇಶನದ ‘ಹದಿನೇಳೇಂಟು’ ಚಿತ್ರ ಕೆಲವು ಮಿತಿಗಳ ಮಧ್ಯೆ ನಗರದೊಳಗಿನ ಜಾತಿ ಮತ್ತು ಪ್ರಾದೇಶಿಕ ತಾರತಮ್ಯವನ್ನು ಚಿತ್ರಿಸುವ ಒಂದು ಗಂಭೀರ ಪ್ರಯತ್ನ. ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ವಲಸೆ ಬಂದ ಕೆಳಜಾತಿ ಕುಟುಂಬದ ಹುಡುಗಿ, ಬೆಂಗಳೂರಿನ ಬ್ರಾಹ್ಮಣ ಹುಡುಗನ ಹದಿಹರೆಯದ ಪ್ರೇಮ ಪ್ರಕರಣದ ಕಥೆ ಇದಾದರೂ, ಇಲ್ಲಿನ ಸೂಕ್ಷ್ಮತೆ ಬೆಂಗಳೂರು ನಗರವೊಂದರ ಖಾಸಗಿ ಕಾಲೇಜೊಂದು 'ಜಾತಿ' ವಿಷ್ಯವನ್ನು ಹೇಗೆ ನಿರ್ವಹಿಸುತ್ತದೆ ಎನ್ನುವುದನ್ನು ಗುರುತಿಸಲಾಗಿದೆ.
ಈ ಸಿನೆಮಾದ ಕೇಂದ್ರ ಬಿಂದು, ಹದಿಹರೆಯದ ಯುವ ಪ್ರೇಮಿಗಳು ತಮ್ಮ ಖಾಸಗೀ ಕ್ಷಣಗಳನ್ನು ಮೊಬೈಲಿನಲ್ಲಿ ಸೆರೆಹಿಡಿಯುತ್ತಾರೆ. ಈ ವೀಡಿಯೋ ಲೀಕ್ ಆಗಿ ಸಮಸ್ಯೆ ಶುರುವಾಗುತ್ತದೆ. ಯುವಕ ತನ್ನ ಖಾಸಗಿ ವೀಡಿಯೋವನ್ನು ಲೀಕ್ ಮಾಡಲು ತನ್ನ ಗೆಳೆಯನಿಗೆ ಹೇಳಿರುತ್ತಾನೆ. ಕಾರಣವೆಂದರೆ ವೀಡಿಯೋ ಲೀಕ್ ಆಗಿ ಜನಪ್ರಿಯವಾದರೆ ನನ್ನನ್ನು 'ಬಿಗ್ ಬಾಸ್' ಗೆ ಸೇರಿಸಿಕೊಳ್ಳಬಹುದು ಎನ್ನುವುದಾಗಿರುತ್ತದೆ.
ಅಂದರೆ 'ಬಿಗ್ ಬಾಸ್' ತನ್ನ ರಿಯಾಲಿಟಿ ಶೋಗೆ ಕ್ರಿಮಿನಲ್ಸ್ ಗಳನ್ನು/ಅಪರಾಧ ಎಸಗಿ ಜೈಲು ಸೇರಿದವರನ್ನು, ಸಮಾಜ ಬಾಹಿರ/ಸಂವಿಧಾನ ವಿರೋಧಿ ಸಂಗತಿಗಳಿಗೆ ವಿವಾದಕ್ಕೆ ಎಡೆಯಾದವರನ್ನು ಆಯ್ಕೆ ಮಾಡಿಕೊಳ್ಳುವ ವಿಧಾನವು ಯುವ ಜನರಲ್ಲಿ ಅಂಥಹದ್ದೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುತ್ತಿರುವುದನ್ನು ಈ ಸಿನೆಮಾ ಪರಿಣಾಮಕಾರಿಯಾಗಿ ಬಿಂಬಿಸಿದೆ. ಈ ನೆಲೆಯಲ್ಲಿ ಸಿನಿಮಾದ ಆಚೆಯೂ 'ಬಿಗ್ ಬಾಸ್' ಯುವ ಜನರಲ್ಲಿ ಇಂತಹ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಸರಕಾರ ಗಂಭೀರವಾಗಿ ಪರಿಗಣಿಸಿ ಇಂತಹ ಶೋಗಳನ್ನು ನಿಯಂತ್ರಿಸಬೇಕಾಗಿದೆ.
ಇಂತಹ ವಿಶಿಷ್ಟ ಪ್ರಯತ್ನವಾದ 'ಹದಿನೇಳೆಂಟು' ಸಿನೆಮಾ YouTube ನಲ್ಲಿದೆ ನೋಡಿ, ಹಾಗೆಯೇ ಸ್ಕ್ಯಾನ್ ಮಾಡಿ ಒಂದಷ್ಟು ಪೇ ಮಾಡಿ.
ಎಂದು ಅರುಣ್ ಜೋಳದಕೂಡ್ಲಿಗಿ ಬರೆದುಕೊಂಡಿದ್ದಾರೆ.
