ಅಯ್ಯನ ಮನೆ ವಿಮರ್ಶೆ: 6 ಎಪಿಸೋಡ್‌, 6 ಸಾವು, ಕಾರಣ ಯಾರು? ಶ್ರುತಿ ನಾಯ್ಡು ನಿರ್ಮಾಣದ ಥ್ರಿಲ್ಲರ್‌ ವೆಬ್‌ ಸರಣಿ ಹೀಗಿದೆ ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  ಅಯ್ಯನ ಮನೆ ವಿಮರ್ಶೆ: 6 ಎಪಿಸೋಡ್‌, 6 ಸಾವು, ಕಾರಣ ಯಾರು? ಶ್ರುತಿ ನಾಯ್ಡು ನಿರ್ಮಾಣದ ಥ್ರಿಲ್ಲರ್‌ ವೆಬ್‌ ಸರಣಿ ಹೀಗಿದೆ ನೋಡಿ

ಅಯ್ಯನ ಮನೆ ವಿಮರ್ಶೆ: 6 ಎಪಿಸೋಡ್‌, 6 ಸಾವು, ಕಾರಣ ಯಾರು? ಶ್ರುತಿ ನಾಯ್ಡು ನಿರ್ಮಾಣದ ಥ್ರಿಲ್ಲರ್‌ ವೆಬ್‌ ಸರಣಿ ಹೀಗಿದೆ ನೋಡಿ

ಅಯ್ಯನ ಮನೆ ವೆಬ್‌ ಸರಣಿ ವಿಮರ್ಶೆ: ಜೀ 5 ಕನ್ನಡ ಒರಿಜಿನಲ್‌ ವೆಬ್‌ ಸರಣಿ ಏಪ್ರಿಲ್‌ 25ರಂದು ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಶ್ರುತಿ ನಾಯ್ಡು ನಿರ್ಮಾಣದ, ರಮೇಶ್‌ ಇಂದಿರಾ ನಿರ್ದೇಶನದ ಈ ವೆಬ್‌ ಸರಣಿಯು ಚಿಕ್ಕಮಗಳೂರಿನ ಮನೆಯೊಂದರಲ್ಲಿ ನಡೆಯುವ ನಿಗೂಢ ಸಾವುಗಳ ಸುತ್ತ ಇರುವ ಕೌತುಕದ ಕಥೆಯನ್ನು ಒಳಗೊಂಡಿದೆ.

ಅಯ್ಯನ ಮನೆ ವಿಮರ್ಶೆ: 6 ಎಪಿಸೋಡ್‌, 6 ಸಾವು, ಕಾರಣ ಯಾರು?  ಶ್ರುತಿ ನಾಯ್ಡು ನಿರ್ಮಾಣದ ಥ್ರಿಲ್ಲರ್‌ ವೆಬ್‌ ಸರಣಿ ರಿವ್ಯೂ
ಅಯ್ಯನ ಮನೆ ವಿಮರ್ಶೆ: 6 ಎಪಿಸೋಡ್‌, 6 ಸಾವು, ಕಾರಣ ಯಾರು? ಶ್ರುತಿ ನಾಯ್ಡು ನಿರ್ಮಾಣದ ಥ್ರಿಲ್ಲರ್‌ ವೆಬ್‌ ಸರಣಿ ರಿವ್ಯೂ

ಅಯ್ಯನ ಮನೆ ವೆಬ್‌ ಸರಣಿ ವಿಮರ್ಶೆ: ಕನ್ನಡದಲ್ಲಿ ವೆಬ್‌ ಸರಣಿಗಳು ನಿರ್ಮಾಣವಾಗುತ್ತಿಲ್ಲ ಅಥವಾ ಕನ್ನಡ ವೆಬ್‌ ಸರಣಿಗಳಿಗೆ ಸೂಕ್ತ ವೇದಿಕೆ ದೊರಕುತ್ತಿಲ್ಲ ಎಂಬ ಬೇಸರದ ನಡುವೆ ಆಶಾಕಿರಣದಂತೆ ಜೀ5ನ ಒರಿಜಿನಲ್‌ ಕನ್ನಡ ವೆಬ್‌ ಸರಣಿ ಕನ್ನಡ ಮತ್ತು ಹಿಂದಿಯಲ್ಲಿ ಏಪ್ರಿಲ್‌ 25ರಂದು ಬಿಡುಗಡೆಯಾಗಿದೆ. ಕನ್ನಡ ಧಾರಾವಾಹಿ ನಿರ್ಮಾಣದಲ್ಲಿ ತಮ್ಮದೇ ಛಾಪು ಮೂಡಿಸಿರುವ ಶ್ರುತಿ ನಾಯ್ಡು ನಿರ್ಮಾಣದ ಈ ಮಿನಿ ವೆಬ್‌ಸರಣಿಯಲ್ಲಿ ಸಣ್ಣ ಸಣ್ಣ ಎಪಿಸೋಡ್‌ಗಳಿವೆ. ಪ್ರತಿ ಎಪಿಸೋಡ್‌ಗಳ ಅವಧಿ 20 ನಿಮಿಷಕ್ಕಿಂತ ಕಡಿಮೆ ಇದೆ. 20.41 ನಿಮಿಷ +17.43 ನಿಮಿಷ +18.33 ನಿಮಿಷ +18.37 ನಿಮಿಷ +18.41 ನಿಮಿಷ +18.24ನಿಮಿಷ = ಒಟ್ಟು 111.19 ನಿಮಿಷಗಳಿವೆ. ಒಂದು ಸಿನಿಮಾ ನೋಡುವುದಕ್ಕಿಂತಲೂ ಬೇಗ ಈ ಮಿನಿ ವೆಬ್‌ಸರಣಿಯನ್ನು ನೋಡಿ ಮುಗಿಸಬಹುದು. ಕನ್ನಡದ ಮೊದಲ ಜೀ5 ಒರಿಜಿನಲ್‌ ವೆಬ್‌ಸರಣಿಯನ್ನು ಯಶಸ್ಸುಗೊಳಿಸಬೇಕೆಂದು ಪಣತೊಟ್ಟಂತೆ ಎಲ್ಲೂ ಬೋರ್‌ ಹೊಡೆಸಬಾರದೆಂದು ಸಂಕಲನಕಾರರು ಧಾರಾಳವಾಗಿ ಕತ್ತರಿ ಪ್ರಯೋಗ ಮಾಡಿದ್ದಾರೆ.

ಅಯ್ಯನ ಮನೆ ವೆಬ್‌ ಸರಣಿ ಕಥೆಯೇನು?

ಅದು ಚಿಕ್ಕಮಗಳೂರಿನ ಒಂದು ಊರಿನಲ್ಲಿರುವ ಅಯ್ಯನ ಮನೆ. ಜಾಜಿ ಎಂಬ ಮಧುಮಗಳು ಮದುವೆಯಾಗಿ ಗಂಡನ ಮನೆಗೆ ಬರುತ್ತಾಳೆ. ವಧು ಬಲಗಾಲಿಟ್ಟು ಮನೆ ಪ್ರವೇಶಿಸುವಾಗ ಮಾವನ ಹಠಾತ್‌ ಸಾವು. ಈಕೆಯ ಕಾಲ್ಗುಣ ಎಂದು ಉಳಿದವರು ಹೇಳಿದರೆ ಗಂಡ "ಅದು ಹಾರ್ಟ್‌ ಅಟ್ಯಾಕ್‌" ಎನ್ನುತ್ತಾನೆ. ವಿಶೇಷವೆಂದರೆ ಆ ಗಂಡ ಮದುವೆಯಾದ ಬಳಿಕ ಸರಿಯಾಗಿ ಬಾಯ್ಬಿಟ್ಟು ಮಾತನಾಡಿದ್ದು ಅದೇ ಮೊದಲು. ಈ ಮನೆಯಲ್ಲಿ ಎಲ್ಲರೂ ನಂಬುವ ದೈವ "ಕೊಂಡಯ್ಯನ ದೈವಸ್ಥಾನ" ಇರುತ್ತದೆ. ಈ ಮನೆಗೆ ಬಂದ ಸೊಸೆಯರ ನಿಗೂಢ ಸಾವುಗಳು ಒಂದೊಂದಾಗಿ ತೆರೆದುಕೊಳ್ಳುತ್ತದೆ. ಜಾಜಿಯ ಆತಂಕ ವೆಬ್‌ ಸರಣಿಯ ನೋಡುಗನ ಆತಂಕವೂ ಆಗುತ್ತದೆ. ಬಾವಿಗೆ ಬಿದ್ದು ಸಾವು, ಸೀಮೆ ಎಣ್ಣೆ ಸುರಿದು ಸಾವು, ಹೃದಯಘಾತದ ಸಾವು, ಬಾಯಲ್ಲಿ ನೊರೆಕಾರಿ ಸಾವು... ಹೀಗೆ ಸಾವುಗಳ ಸರಮಾಲೆ ನಡೆಯುತ್ತದೆ. ಒಟ್ಟು ಆರು ಸಾವು ಆಗುತ್ತದೆ ಎಂದು ಪೂಜಾರಿ ಹೇಳುತ್ತಾರೆ. ಆರನೇ ಸಾವು ಜಾಜಿಯದ್ದ ಅಥವಾ ಇನ್ಯಾರದ್ದು? ಈ ನಿಗೂಢ ಮನೆಯಲ್ಲಿ ತನ್ನನ್ನು ತಾನು ಬದುಕಿಸಿಕೊಳ್ಳುವ ತುರ್ತು ಜಾಜಿಗೆ ಎದುರಾಗುತ್ತದೆ. ಆಕೆ ಬಚಾವ್‌ ಆಗುತ್ತಾಳ? ಸತ್ಯ ಹೊರಬೀಳುತ್ತದೆಯೇ? ಕುತೂಹಲ ಇರುವವರು ತಪ್ಪದೇ ಈ ವೆಬ್‌ಸರಣಿಯನ್ನು ನೋಡಿ.

ಹೇಗಿದೆ ಅಯ್ಯನ ಮನೆ ವೆಬ್‌ ಸರಣಿ?

ಜೀ5ನ ಮೊದಲ ಕನ್ನಡ ವೆಬ್‌ ಸರಣಿ ಮುಂಬರುವ ಕನ್ನಡ ವೆಬ್‌ ಸರಣಿಗಳಿಗೆ ಉತ್ತಮ ಆರಂಭ ಎನ್ನಬಹುದು. ಜಾಜಿಗೆ ಅಯ್ಯನ ಮನೆಯಲ್ಲಿ ಬದುಕುಳಿಯುವ ಆತಂಕ. ಒಟಿಟಿ ಕಂಟೆಂಟ್‌ ಲೋಕದಲ್ಲಿ ಕನ್ನಡಕ್ಕೂ ಮಾಡು ಇಲ್ಲವೇ ಮಡಿ ಎಂಬ ಸ್ಥಿತಿಯಿದೆ. ಇದೇ ಕಾರಣಕ್ಕೆ ಅಯ್ಯನ ಮನೆ ವೆಬ್‌ ಸರಣಿಯನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ಮಿಸಿದಂತೆ ಕಾಣಿಸುತ್ತದೆ.

ನಿಗೂಢತೆಯ ಬೆನ್ನು ಬಿದ್ದು ಸಾಗುವ ಸವಾಲು ಈ ಸರಣಿಗೆ ಎದುರಾಗಿದೆ. ವೀಕ್ಷಕರಿಗೆ ಎಲ್ಲೂ ಅನುಮಾನ ಬರಬಾರದು ಎಂಬ ಎಚ್ಚರಿಕೆ ನಿರ್ದೇಶಕರಿಗೆ ಇದೆ. ಆದರೆ, ನಾಲ್ಕನೇ ಎಪಿಸೋಡ್‌ಗೆ ಬಂದಾಗ ಆಕಸ್ಮಿಕ ಸಾವಿನ ಕುರಿತು ಸಣ್ಣ ಅನುಮಾನದ ಸುಳಿವೊಂದು ಸಿಕ್ಕರೆ ಅಚ್ಚರಿಯಿಲ್ಲ. ಇಲ್ಲಿ ವೆಬ್‌ ಸರಣಿ ವೀಕ್ಷಕರಿಗೆ ಘಟನೆಗೆ ಕಾರಣವಾಗುವ ನಿರ್ದಿಷ್ಟ ವ್ಯಕ್ತಿಯ ಬದಲು ಇತರರ ಮೇಲೆ ಅನುಮಾನ ಹುಟ್ಟಿಸುವಂತಹ ಪ್ರಯತ್ನಗಳು ಯಶಸ್ವಿಯಾಗಿವೆ. ಕೆಲಸದವಳು, ತಂಗಿ, ದೊಡ್ಡ ಸಹೋದರ, ಕೊಂಡಯ್ಯನ ದೈವಸ್ಥಾನ, ಸ್ಮಶಾನದ ದೆವ್ಚಗಳು... ಹೀಗೆ ಅನುಮಾನ ಹುಟ್ಟಲು ಹಲವು ವಿಷಯಗಳು, ವ್ಯಕ್ತಿಗಳು ಇದ್ದಾರೆ. ಸಸ್ಪೆನ್ಸ್‌ ಥ್ರಿಲ್ಲರ್‌ ಕಥಾಹಂದರ ಇರುವ ಚಂದದ ಪುಟ್ಟ ವೆಬ್‌ ಸರಣಿಯೆಂದು ಹೇಳಲು ಅಚ್ಚರಿಯಿಲ್ಲ.

ಒಂದು ಸಣ್ಣ ಕಥೆಯನ್ನು ಒಂದು ಮಿನಿ ವೆಬ್‌ ಸರಣಿಯಾಗಿ ಮಾಡಿದಂತೆ ಇದೆ. ಈ ಕಥೆಯನ್ನು ವಿಶಾಲವಾಗಿ ಬೆಳೆಸುವ ಅವಕಾಶವಿತ್ತು. ವೀಕ್ಷಕರಿಗೆ ರೋಮಾಂಚನ ಉಂಟುಮಾಡುವಂತಹ ಅಪೂರ್ವ ಕ್ಷಣಗಳನ್ನು ನೀಡುವ ಅವಕಾಶಗಳು ಇದ್ದವು. ಕಾಂತಾರ ಸಿನಿಮಾದಲ್ಲಿ ದೀವಟಿಗೆ ಹಿಡಿದು ದೈವ ಸುತ್ತಿದಂತೆ ಕೊಂಡಯ್ಯನ ಮೂಲಕ ಈ ಸರಣಿಯಲ್ಲೂ ಗೂಸ್‌ಬಂಬ್ಸ್‌ ತರಿಸುವ ಅವಕಾಶವಿತ್ತು. ನಿಗೂಢ ಘಟನೆಗಳಿಗೆ ಕಾರಣವಾಗುವ ವ್ಯಕ್ತಿಗೆ ಶಿಕ್ಷೆ ನೀಡುವ ಕ್ಷಣವನ್ನು ಕೆಲವೇ ಸೆಕೆಂಡಿಗೆ ಸೀಮಿತಗೊಳಿಸುವ ಬದಲು "ಕೆಲವು ನಿಮಿಷಗಳ ಕಾಲ ವಿಜೃಂಭಿಸಲು" ಅವಕಾಶವಿತ್ತು. ಇಂತಹ ಕ್ಷಣಗಳು ವೆಬ್‌ ಸರಣಿ ಪ್ರೇಕ್ಷಕರಿಗೆ ರೋಮಾಂಚನ ಉಂಟು ಮಾಡಬಹುದಿತ್ತು. ಆದರೆ, ಇಂತಹ ಹಾದಿ ಹಿಡಿಯದೆ ತನ್ನದೇ ಆದ ಸ್ಟೋರಿ ಟೆಲ್ಲಿಂಗ್‌ ಹಾದಿಗೆ ನಿಷ್ಠವಾಗಿ ನಿರ್ದೇಶಕರು ವೆಬ್‌ಸರಣಿ ಮುಗಿಸಿದೆ. ಆರಂಭದಲ್ಲಿ ಒಂದಿಷ್ಟು ಅವಸರವನ್ನು ಕಾಣಬಹುದು. ವೆಬ್‌ ಸರಣಿ ಎಂದರೆ ಸೀರಿಯಲ್‌ನಂತೆ ಇರಬಾರದು, ಸಿನಿಮಾದಂತೆಯೂ ಇರಬಾರದು, ಪ್ರತಿ ಸರಣಿಯ ಎಂಡಿಂಗ್‌ಗೊಂದು ಕೌತುಕ ಇರಬೇಕು ಎಂಬ ಲಾಜಿಕ್‌ಗೆ ತಕ್ಕಂತೆ ಮ್ಯಾಜಿಕ್‌ ಮಾಡುವ ಪ್ರಯತ್ನದಲ್ಲಿ ನಿರ್ದೇಶಕರು ಭಾಗಶಃ ಯಶಸ್ಸಾಗಿದ್ದಾರೆ ಎನ್ನಬಹುದು.

ನಟನೆ ಮತ್ತು ತಾಂತ್ರಿಕ ವಿಚಾರಗಳು

ಈ ಸರಣಿಯಲ್ಲಿ ಕಥೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಇದೇ ಕಾರಣಕ್ಕೆ ಖ್ಯಾತ ಮತ್ತು ಹೆಚ್ಚು ಪರಿಚಿತ ಸೀರಿಯಲ್‌ ನಟಿನಟರನ್ನು ಸರಣಿಗೆ ಸೇರಿಸಲಾಗಿಲ್ಲ ಎಂದು ಶ್ರುತಿ ನಾಯ್ಡು ಹೇಳಿದ್ದರು.‌ ಎಲ್ಲಾ ಕಲಾವಿದರು ತಮಗೆ ನೀಡಿದ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅಚ್ಚುಕಟ್ಟಾಗಿ ತಮ್ಮ ಪಾತ್ರಗಳಲ್ಲಿ ನಟಿಸಿದ್ದಾರೆ. ನಿಗೂಢತೆಯೇ ಢಾಳಾಗಿರುವ ಈ ಸರಣಿಯಲ್ಲಿ ಯಾವ ಕಲಾವಿದರಿಗೂ "ಮನಸ್ಸು ಬಿಚ್ಚಿ" ನಟಿಸುವ ಅವಕಾಶ ದೊರಕಿದಂತೆ ಇಲ್ಲ. ಇರೋದ್ರಲ್ಲಿ ಶೋಭರಾಜ್ ಪಾವೂರ್ ನಟನೆ ಹೆಚ್ಚು ಲವಲವಿಕೆಯಿಂದ ಕೂಡಿದೆ. ಮಾನಸಿ ಸುಧೀರ್‌ ನಿರ್ವಹಿಸಿದ ನಾಗಲಂಬಿಕೆ ಪಾತ್ರವನ್ನ ಇನ್ನಷ್ಟು ಸದೃಢವಾಗಿಸುವ ಅವಕಾಶವಿತ್ತು. ರಮೇಶ್‌ ಇಂದಿರಾ ಪಾತ್ರ ಒಂದು ದೃಶ್ಯಕ್ಕೆ ಸೀಮಿತವಾಗಿದೆ. ಸಿಹಿ ಕಹಿ ಚಂದ್ರು ಮಕ್ಕಳಾದ ಹಿತಾ ಮತ್ತು ಖುಷಿ ಚಂದ್ರಶೇಖರ್‌ ನಟನೆ ಹಿತವಾಗಿದೆ. ಜಾಜಿ ಪಾತ್ರಕ್ಕೆ ಖುಷಿ ರವಿ ನ್ಯಾಯ ಒದಗಿಸಿದ್ದಾರೆ. ಈ ವೆಬ್‌ ಸರಣಿಯಲ್ಲಿ ಹೆಣ್ಣು ಮಕ್ಕಳ ಚಂದದ ಹೆಸರುಗಳು ಗಮನ ಸೆಳೆಯುತ್ತವೆ. ಜಾಜಿ, ಪುಷ್ಪವತಿ, ವನಮಾಲ, ಪದ್ಮಲತಾ, ಚಾರುಲತಾ, ಬಿಂದುಮಾಲಿನಿ ಹೀಗೆ ಚಂದಚಂದದ ಹೆಸರುಗಳಿವೆ.

ಗಮನವಿಟ್ಟು ನೋಡದೆ ಇದ್ದರೆ ಈ ವೆಬ್‌ಸರಣಿಯಲ್ಲಿ ನೋಡುಗರಿಗೆ ಕೆಲವೊಂದು ಗೊಂದಲಗಳು ಉಂಟಾಗಬಹುದು. ಯಾರು ಹೇಳಿದ ಕಥೆ ಸರಿ, ಯಾರು ಹೇಳಿದ ಕಥೆ ಸುಳ್ಳು ಎಂದು ಅರ್ಥವಾಗದೆ ಹೋಗಬಹುದು. ಮದುವೆಯಾಗಿ ಬಂದವಳು ದೈವದ ಕೋಣೆಗೆ ನುಗ್ಗಿ ದೈವದ ಮೊಗವನ್ನು ಬಾವಿಗೆ ಹಾಕುವುದು, ಸ್ಮಶಾನದಲ್ಲಿ ಮನೆ ಕಟ್ಟಿದ ಕಥೆ, ಪೊಲೀಸರ ತನಿಖೆ ಮುಂದೆನಾಯ್ತು ಎಂದು ತಿಳಿಯದೆ ಇರುವುದು, ವಿಮೆಯ ರಹಸ್ಯ ಇತ್ಯಾದಿ ಕಥೆಗಳು ಮುಂದುವರೆಯುವುದಿಲ್ಲ. ಕೊನೆಗೆ ದೇವಸ್ಥಾನದಿಂದ ಜಾಜಿ ತನ್ನ ಪತಿ ಮತ್ತು ಭಾವನ ಜತೆ ಅಷ್ಟೊಂದು ಖುಷಿಖುಷಿಯಾಗಿ ಬರುವ ದೃಶ್ಯವೂ ಅಸಹಜ ಎಂದೆನಿಸಿತು.

ಹೀಗಿದ್ದರೂ, ಒಂದು ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾವನ್ನು ಆರು ಭಾಗಗಳಾಗಿ ಕತ್ತರಿಸಿದಂತೆ ಈ ಮಿನಿ ವೆಬ್‌ಸರಣಿ ನೋಡಿಸಿಕೊಂಡು ಹೋಗುತ್ತದೆ. ಸಸ್ಪೆನ್ಸ್‌ ಥ್ರಿಲ್ಲರ್‌ಗಳಿಗೆ ಇರಬೇಕಾದ ಹಿನ್ನೆಲೆ ಧ್ವನಿ, ಬಿಜಿಎಂ ಇದೆ. ದೃಶ್ಯಗಳು ಮಂದ ಬೆಳಕಿನಲ್ಲಿಯೇ ಹೆಚ್ಚು ಕಾಣಿಸುತ್ತವೆ. ಈ ಸರಣಿಯಲ್ಲಿ ಆರು ಸಾವುಗಳು ನಡೆದರೂ ಹೆಚ್ಚು ಭಯ ಹುಟ್ಟಿಸುವುದಿಲ್ಲ. ಕೇವಲ ಸರಳ ಕುತೂಹಲವನ್ನಿಟ್ಟುಕೊಂಡು ಪ್ರೇಕ್ಷಕರನ್ನು ನೋಡಿಸಿಕೊಂಡು ಹೋಗಿಸುವಲ್ಲಿ ಯಶಸ್ವಿಯಾಗಿದೆ. ಕನ್ನಡ ವೆಬ್‌ಸರಣಿ ಸಂತತಿ ಬೆಳೆಯಲು ಅಯ್ಯನ ಮನೆ ವೆಬ್‌ ಸೀರಿಸ್‌ ಮೂಲಕ ಶ್ರುತಿ ನಾಯ್ಡು ತಂಡ ಒಳ್ಳೆಯ ಪ್ರಯತ್ನ ಮಾಡಿದೆ ಎನ್ನಬಹುದು.

ನಿರ್ಮಾಣ: ಶ್ರುತಿ ನಾಯ್ಡು ಪ್ರೊಡಕ್ಷನ್‌

ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್‌: ಜೀ5

ತಾರಾಗಣ: ಖುಷಿ ರವಿ, ಮಾನಸಿ ಸುಧೀರ್‌, ಹಿತಾ ಚಂದ್ರಶೇಖರ್‌, ಶೋಭಾ ರಾಜ್‌ ಪಾವೂರು, ಅರ್ಚನಾ ಕೊಟ್ಟಿಗೆ, ರಮೇಶ್‌ ಇಂದಿರಾ ಮತ್ತು ಇತರರು

ವಿಮರ್ಶೆ: ಪ್ರವೀಣ್‌ ಚಂದ್ರ ಪುತ್ತೂರು

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in