Bagheera TV Premiere: ಮ್ಯಾಕ್ಸ್ ಮ್ಯಾಕ್ಸಿಮಮ್ ಮನರಂಜನೆ ಬಳಿಕ ಬಘೀರನ ಆಗಮನ; ಈ ವಾರಾಂತ್ಯಕ್ಕೆ ಟಿವಿಯಲ್ಲಿ ನೋಡಿ ಶ್ರೀಮುರಳಿ ಸಿನಿಮಾ
ಶ್ರೀಮುರಳಿ ನಟನೆಯ, ಡಾ ಸೂರಿ ನಿರ್ದೇಶನದಲ್ಲಿ ಮೂಡಿಬಂದ ಬಘೀರ ಸಿನಿಮಾ ನಾಲ್ಕು ತಿಂಗಳ ಬಳಿಕ ಕಿರುತೆರೆಗೆ ಆಗಮಿಸುತ್ತಿದೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿ ನಿರ್ಮಾಣವಾದ ಈ ಸಿನಿಮಾ, ಫೆ. 22ರಂದು ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.

Bagheera TV Premiere: ಶ್ರೀಮುರಳಿ ಮತ್ತು ಡಾಕ್ಟರ್ ಸೂರಿ ಕಾಂಬಿನೇಷನ್‌ನಲ್ಲಿ ಮೂಡಿಬಂದ ಬಘೀರ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಮಾಯಿ ಮಾಡುವುದರ ಜತೆಗೆ, ಪ್ರೇಕ್ಷಕರಿಗೂ ಹಿಡಿಸಿತ್ತು. ಅಕ್ಟೋಬರ್ 31ರಂದು ಬಿಡುಗಡೆ ಆಗಿದ್ದ ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಕಥೆ ಬರೆದಿದ್ದರೆ, ಹೊಂಬಾಳೆ ಫಿಲಂಸ್ ಈ ಸಿನಿಮಾವನ್ನು ಅಷ್ಟೇ ಅದ್ಧೂರಿಯಾಗಿಯೇ ನಿರ್ಮಾಣ ಮಾಡಿತ್ತು. ಹೀಗೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಒಟಿಟಿ ಬಳಿಕ ಇದೀಗ ಕಿರುತೆರೆಗೆ ಆಗಮಿಸುತ್ತಿದೆ.
ಮನರಂಜನೆಯ ಮಹಾರಾಜ ಎಂದು ಖ್ಯಾತಿ ಪಡೆದಿರುವ ಜೀ ಕನ್ನಡ, ಜನಪ್ರಿಯ ಧಾರಾವಾಹಿಗಳು, ರಿಯಾಲಿಟಿ ಶೋಗಳು ಮತ್ತು ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್‌ಗಳಿಂದ ಎಲ್ಲ ವಯೋಮಿತಿಯ ಪ್ರೇಕ್ಷಕರ ಮನಗೆದ್ದು ನಂ.1 ಪಟ್ಟಕ್ಕೇರಿದೆ. ಸದಾ ಹೊಸತನದಿಂದ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಜೀ ಕನ್ನಡ ಈಗ ಮತ್ತೊಂದು ಸರ್ಪ್ರೈಸ್ ಹೊತ್ತುತಂದಿದೆ. ಅದೇನೆಂದರೆ, ಚಿತ್ರಮಂದಿರ, ಒಟಿಟಿಯಲ್ಲಿ ಸದ್ದು ಮಾಡಿದ್ದ ಬಘೀರ ಸಿನಿಮಾ, ಜೀ ಕನ್ನಡ ವಾಹಿನಿಯಲ್ಲೂ ಪ್ರಸಾರವಾಗಲಿದೆ.
ಟಿವಿಯಲ್ಲಿ ಯಾವಾಗ?
ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಒಂದು ತಿಂಗಳಿಗೂ ಮೊದಲೇ ಅಂದರೆ, ನವೆಂಬರ್ 21ರಂದು ಒಟಿಟಿಗೆ ಆಗಮಿಸಿತ್ತು ಬಘೀರ ಸಿನಿಮಾ. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿತ್ತು. ಅಲ್ಲಿಯೂ ಟಾಪ್ ಟ್ರೆಂಡಿಂಗ್‌ನಲ್ಲಿತ್ತು ಈ ಸಿನಿಮಾ. ಇದೀಗ ಇದೇ ಸಿನಿಮಾ ಜೀ ಕನ್ನಡದಲ್ಲಿ ವರ್ಲ್ಡ್ ಪ್ರೀಮಿಯರ್ ಆಗಲಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ನಟಿಸಿರುವ 'ಬಘೀರ' ಕಿರುತೆರೆಯಲ್ಲಿ ಮೊಟ್ಟಮೊದಲ ಬಾರಿಗೆ ಜೀ ಕನ್ನಡ ವಾಹಿನಿಯಲ್ಲಿ ನಾಳೆ (ಫೆ. 22 ರಂದು) ಮಧ್ಯಾಹ್ನ 3 ಗಂಟೆಗೆ ಪ್ರಸಾರ ಆಗಲಿದೆ.
'ಬಘೀರ' ಚಿತ್ರದಲ್ಲಿ ಬ್ಯೂಟಿಫುಲ್ ಚೆಲುವೆ ರುಕ್ಮಿಣಿ ವಸಂತ್ ಅವರು ಶ್ರೀಮುರಳಿಗೆ ಜೋಡಿಯಾಗಿ ನಟಿಸಿದ್ದಾರೆ. ಕೆ.ಜಿ.ಎಫ್ ಖ್ಯಾತಿಯ ಪ್ರಶಾಂತ್ ನೀಲ್ ಅವರ ಈ ಕಥೆಗೆ ಡಾ. ಸೂರಿ ಆಕ್ಷನ್ ಕಟ್ ಹೇಳಿದ್ದಾರೆ. ಅಜನೀಶ್ ಲೋಕನಾಥ್ ಮ್ಯೂಸಿಕ್ ಈ ಸಿನಿಮಾದ ಮತ್ತೊಂದು ಪ್ಲಸ್ ಪಾಯಿಂಟ್. ಚೇತನ್ ಡಿಸೋಜ ಅವರ ಆಕ್ಷನ್ ಸೀಕ್ವೆನ್ಸ್ ಗಳು, ಶ್ರೀಮುರಳಿ ಅವರ ಅದ್ಭುತ ನಟನೆ, ಎ.ಜೆ ಶೆಟ್ಟಿ ಅವರ ಕ್ಯಾಮೆರಾ ವರ್ಕ್ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಲಿದೆ.
ಏನಿದು ಕಥೆ?
"ತನ್ನ ಜೀವದ ಹಂಗನ್ನು ತೊರೆದು ಸಮಾಜವನ್ನು ರಕ್ಷಿಸಲು ಹೋರಾಡುತ್ತಿರುವ ನಿಮ್ಮಪ್ಪನೂ ಒಬ್ಬ ಸೂಪರ್ ಹೀರೋ.." ಎಂದು ಪುಟ್ಟ ವೇದಾಂತ್‌ಗೆ (ಶ್ರೀಮುರಳಿ) ಅಮ್ಮ ಹೇಳಿದ ಮಾತನ್ನು ಕೇಳಿ, ಆತ ತಾನೂ ದೊಡ್ಡವನಾದ ಮೇಲೆ ಅಪ್ಪನಂತೆಯೇ ಪೊಲೀಸ್ ಆಗಬೇಕೆಂದು ಕನಸು ಕಾಣುತ್ತಾನೆ. ಕನಸಿನಂತೆಯೇ ದೊಡ್ಡವನಾಗಿ ಪೊಲೀಸ್ ಆಗುತ್ತಾನೆ. ಆದರೆ ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಅಷ್ಟು ಸುಲಭವಲ್ಲವೆಂದು, ತನ್ನ ಠಾಣೆಯ ಎದುರು ಆತ್ಮಹತ್ಯೆ ಮಾಡಿಕೊಂಡ ಮುಗ್ಧ ಹುಡುಗಿಯ ಸಾವನ್ನು ಕಣ್ಣಾರೆ ಕಂಡ ಆತನಿಗೆ ಅರಿವಾಗುತ್ತದೆ.
ಮುಂದೆ ತಾಯಿಯ ಕನಸನ್ನು ಆತ ನನಸು ಮಾಡುತ್ತಾನಾ? ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾನಾ? ಎಲ್ಲದಕ್ಕೂ ಉತ್ತರ ಸಿಗ್ಬೇಕು ಅಂದ್ರೆ ನೀವು ಬಘೀರ ಚಿತ್ರ ನೋಡ್ಬೇಕು. ವೇದಾಂತ್ ದುಷ್ಟ ಸಂಹಾರಕ, ಶಿಷ್ಟ ರಕ್ಷಕ ಆಗಿ ಬದಲಾಗೋದು ಹೇಗೆ? ಬಘೀರ ಯಾರು? ವೇದಾಂತ್‌ಗೂ ಬಘೀರನಿಗೂ ಏನು ಸಂಬಂಧ? ಈ ಎಲ್ಲಾ ಪ್ರಶ್ನೆಗಳಿಗೆ ಶನಿವಾರ ಸಂಜೆ 3 ಗಂಟೆಗೆ ಜೀ ಕನ್ನಡದಲ್ಲಿ ಉತ್ತರ ಸಿಗಲಿದೆ.