ಪೊಲೀಸರ ಕೈಗೆ ಸಿಗದೆ ನಿಗೂಢವಾಗಿಯೇ ಉಳಿದ ಅಸಲಿ ಮಚ್ಚು; ಮೂರು ದಿನ ಪೊಲೀಸ್ ಕಸ್ಟಡಿಗೆ ರಜತ್ ಕಿಶನ್, ವಿನಯ್ ಗೌಡ
ಮಚ್ಚು ಹಿಡಿದು ರೀಲ್ಸ್ ಮಾಡಿ, ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದ ಬಿಗ್ ಬಾಸ್ ಕನ್ನಡದ ಸ್ಪರ್ಧಿಗಳಾದ ವಿನಯ್ ಗೌಡ ಮತ್ತು ರಜತ್ ಕಿಶನ್‌ಗೆ, ಮುಂದಿನ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಬೆಂಗಳೂರು ನಗರ 24ನೇ ಎಸಿಜೆಎಂ ನ್ಯಾಯಾಲಯ ಆದೇಶಿಸಿದೆ.

ಬೆಂಗಳೂರು: ಅಸಲಿ ಮಚ್ಚು ಹಿಡಿದು ರೀಲ್ಸ್ ಮಾಡಿ, ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದ ಬಿಗ್ ಬಾಸ್ ಕನ್ನಡ ಸೀಸನ್ 10 ಮತ್ತು 11ರ ಸ್ಪರ್ಧಿಗಳಾದ ವಿನಯ್ ಗೌಡ ಮತ್ತು ರಜತ್ ಕಿಶನ್‌ಗೆ, ಮುಂದಿನ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಬೆಂಗಳೂರು ನಗರ 24ನೇ ಎಸಿಜೆಎಂ ನ್ಯಾಯಾಲಯ ಆದೇಶಿಸಿದೆ.
ಕೈಯಲ್ಲಿ ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದ್ದಲ್ಲದೆ, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರಿಂದ, ಬೆಂಗಳೂರಿನ ಬಸವೇಶ್ವರ ನಗರ ಠಾಣೆ ಪೊಲೀಸರು, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಅದರಂತೆ, ಸೋಮವಾರ ವಿಚಾರಣೆಯನ್ನೂ ನಡೆಸಲಾಗಿತ್ತು. ಅಚ್ಚರಿಯ ಬೆಳವಣಿಗೆಯಲ್ಲಿ ಮಂಗಳವಾರ ಬಂಧಿಸಿ ಇಂದು (ಮಾ. 26) ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.
ಇದೀಗ ಪ್ರಕರಣದ ಕುರಿತಂತೆ ವಿನಯ್ ಗೌಡ ಮತ್ತು ರಜತ್ ಕಿಶನ್ ಅವರಿಗೆ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ. ಈ ಆದೇಶಕ್ಕೂ ಮುನ್ನ ರೀಲ್ಸ್ ಮಾಡಿದ್ದ ಬೆಂಗಳೂರಿನ ನಾಗರಬಾವಿಯಲ್ಲಿನ ಅಕ್ಷಯ್ ಸ್ಟುಡಿಯೋಕ್ಕೆ ರಜತ್ ಮತ್ತು ವಿನಯ್ ಗೌಡ ಸಮ್ಮುಖದಲ್ಲಿ ಪೊಲೀಸರು ಒಂದು ಗಂಟೆಗಳ ಕಾಲ ಸ್ಥಳ ಮಹಜರು ನಡೆಸಿದರು.
ಸಿಗದ ಅಸಲಿ ಮಚ್ಚು
ರೀಲ್ಸ್‌ನಲ್ಲಿ ಅಸಲಿ ಮಚ್ಚು ಹಿಡಿದುಕೊಂಡು, ರಜತ್ ಮತ್ತು ವಿನಯ್ ಗೌಡ ವಿಡಿಯೋಕ್ಕೆ ಪೋಸ್ ಕೊಟ್ಟಿದ್ದರು. ಆದರೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ರಜತ್ ಪತ್ನಿ ಪೊಲೀಸ್ ಠಾಣೆಗೆ ಆಗಮಿಸಿ, ತನ್ನ ಪತಿ ರಜತ್ ಮತ್ತು ಸ್ನೇಹಿತ ವಿನಯ್ ಗೌಡ ಬಳಸಿದ್ದು ರಿಯಲ್ ಮಚ್ಚಲ್ಲ, ಫೈಬರ್ ಮಚ್ಚು ಎಂದು ಅದನ್ನು ತಂದು ಕೊಟ್ಟಿದ್ದರು. ಆದರೆ, ವಿಡಿಯೋದಲ್ಲಿ ಈ ಇಬ್ಬರೂ ಬಳಿಸಿದ್ದು ನಿಜವಾದ ಮಚ್ಚು ಎಂದು ಕ್ಲಿಯರ್ ಆಗಿ ಗೊತ್ತಾಗಿದೆ. ಇತ್ತ ಸ್ಥಳ ಮಹಜರು ವೇಳೆ ಒಂದು ಗಂಟೆ ಕಾಲ ಹುಡುಕಿದರೂ ನಿಜವಾದ ಮಚ್ಚು ಮಾತ್ರ ಸಿಕ್ಕಿಲ್ಲ.
ರಜತ್ ಮತ್ತು ವಿನಯ್ ಇಬ್ಬರಿಗೂ ಮೂರು ದಿನಗಳ ಕಾಲ ಕಸ್ಟಡಿಗೆ ನೀಡಲಾಗಿದ್ದು, ವಿಚಾರಣೆ ಮುಂದುವರಿಯಲಿದೆ. ಮೂರು ದಿನಗಳ ಬಳಿಕ ಮತ್ತೆ ಕೋರ್ಟ್‌ಗೆ ಇವರಿಬ್ಬರು ಹಾಜರಾಗಲಿದ್ದಾರೆ. ಅಲ್ಲಿ ಅದ್ಯಾವ ತೀರ್ಪು ಬರುತ್ತೋ ಕಾದು ನೋಡಬೇಕು.
