‘ಹೋಗಿ ಬಾ ಮಗಳೇ’ ಎಂದು ಐಶ್ವರ್ಯಾ ಶಿಂಧೋಗಿಗೆ ಭಾವುಕ ವಿದಾಯ ಹೇಳಿದ ಬಿಗ್ ಬಾಸ್, ಕಣ್ಣೀರಾಯ್ತು ಇಡೀ ಮನೆ
Bigg Boss Kannada 11 Elimination: ಬಿಗ್ ಬಾಸ್ ಕನ್ನಡ 11ರ 13ನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಗಿದಿದೆ. ಈ ವಾರ ಐಶ್ವರ್ಯಾ ಶಿಂಧೋಗಿ ಬಿಗ್ ಮನೆಗೆ ಭಾವುಕ ವಿದಾಯ ಹೇಳಿದ್ದಾರೆ. ವಿಶೇಷ ಏನೆಂದರೆ ಐಶ್ವರ್ಯಾಗೆ ವಿಶೇಷ ಪತ್ರದ ಮೂಲಕ ಮಗಳನ್ನು ಮನೆಯಿಂದ ಬೀಳ್ಕೊಟ್ಟಿದ್ದಾರೆ.
Bigg Boss Kannada 11: ಬಿಗ್‌ಬಾಸ್ ಕನ್ನಡ 11ರ ಸೀಸನ್‌ನಲ್ಲಿ 13ನೇ ವಾರ ಐಶ್ವರ್ಯಾ ಶಿಂಧೋಗಿ ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಿದ್ದಾರೆ. ಈ ವರೆಗಿನ ಎಲಿಮಿನೇಷನ್‌ಗಿಂತ ಕೊಂಚ ಭಾವುಕವಾಗಿ ಎಲ್ಲರ ಕಣ್ಣಲ್ಲೂ ನೀರು ಹಾಕಿಸಿತ್ತು ಈ ವಾರದ ಪ್ರಕ್ರಿಯೆ. ಸ್ವತಃ ಬಿಗ್ ಬಾಸ್, ಪತ್ರದ ಮೂಲಕ ಐಶ್ವರ್ಯಾಗೆ ಬೀಳ್ಕೊಟ್ಟರು. ಆ ಪತ್ರ ನೋಡಿ ಐಶ್ವರ್ಯಾ ಕಣ್ಣೀರಾದರು. ಅವರನ್ನು ನೋಡಿ ಮನೆಯ ಉಳಿದ ಸದಸ್ಯರ ಕಣ್ಣಲ್ಲಿ ನೀರು ಜಿನುಗಿತು.
ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲು ಒಟ್ಟು ಎಂಟು ಜನ ನಾಮಿನೇಷನ್ ಆಗಿದ್ದರು. ಆ ಪೈಕಿ ಶನಿವಾರದ ಸಂಚಿಕೆಯಲ್ಲಿ ಹನುಮಂತು ಮತ್ತು ಧನರಾಜ್ ಸೇವ್ ಆಗಿದ್ದರು. ಇನ್ನುಳಿದಂತೆ ಗೌತಮಿ ಜಾಧವ್, ಐಶ್ವರ್ಯಾ ಶಿಂಧೋಗಿ, ಚೈತ್ರಾ ಕುಂದಾಪುರ, ತ್ರಿವಿಕ್ರಮ್, ಮೋಕ್ಷಿತಾ ಪೈ, ಉಗ್ರಂ ಮಂಜು ಈ ಆರು ಜನರ ಪೈಕಿ ಐಶ್ವರ್ಯಾ ಆಟ ಕೊನೆಗೊಂಡಿದೆ.
ಮಗಳಿಗೆ ಬಿಗ್ ಬಾಸ್ ಪತ್ರ
ಇನ್ನು ಬಿಗ್ ಬಾಸ್ ಮನೆಯಿಂದ ಈ ವಾರ ಐಶ್ವರ್ಯಾ ಎಲಿಮಿನೇಟ್ ಆಗುತ್ತಿದ್ದಂತೆ, ಸ್ವತಃ ಬಿಗ್ ಬಾಸ್ ಭಾವುಕ ಪತ್ರದ ಮೂಲಕ ಮಗಳು ಐಶ್ವರ್ಯಾಗೆ ವಿದಾಯ ಹೇಳಿದ್ದಾರೆ. “ಪ್ರೀತಿಯ ಐಶ್ವರ್ಯಾ, 13 ವಾರಗಳ ಕಾಲ ಒಬ್ಬ ಪ್ರಬಲ ಸ್ಪರ್ಧಿಯಾಗಿ ಈ ಮನೆಯಲ್ಲಿ ಜೀವಿಸಿರುವುದು ಸಂತೋಷಕರ ವಿಷಯ. ತುಸು ಬೇಸರವಿದ್ದರೂ, ನಗು, ದುಃಖ, ಕೋಪ, ತುಂಟಾಟ ಹೀಗೆ ನಿಮ್ಮ ಭಾವನೆಗಳಿಗೆ ಸಾಕ್ಷಿಯಾಗಿರುವ ಈ ಮನೆಯಿಂದ ಈಗ ನಿಮ್ಮನ್ನು ಕಳಿಸಿಕೊಡಲೇಬೇಕಾಗಿದೆ. ತನ್ನವರು ಯಾರೂ ಇಲ್ಲ ಎಂಬ ಕೊರಗಿನೊಂದಿಗೆ ಈ ಮನೆಯನ್ನು ನೀವು ಪ್ರವೇಶ ಮಾಡಿದ್ರಿ. ಆದರೆ ಈಗ ಬಿಗ್ ಬಾಸ್ ಮನೆಯವರು, ಕರುನಾಡಿನ ಮನೆಮನೆಯವರ ಪ್ರೀತಿಯನ್ನು ಗಳಿಸಿದ್ದೀರಿ”
“ಈ ಮನೆಯಲ್ಲಿ ನಿಮ್ಮ ಪಯಣ ಮುಗಿದಿರಬಹುದು. ಆದರೆ, ನಮ್ಮ ನಿಮ್ಮ ನಂಟು ಎಂದಿಗೂ ಮುಗಿಯುವಂಥದ್ದಲ್ಲ. ಖಾಲಿ ಪತ್ರ ಪಡೆದೆ ಅಂದು, ಪದಗಳಿರುವ ಪತ್ರ ಪಡೆದೆ ಇಂದು. ಹಾಗೂ ಎಂದೆಂದಿಗೂ ಈ ಮನೆಯ ಹಾಗೂ ಬಿಗ್ ಬಾಸ್ ಕುಟುಂಬದವರಾಗಿಯೇ ಇರುತ್ತೀರಿ. ಇದು ನಿಮಗೆ ಬಿಗ್ ಬಾಸ್ ನೀಡುತ್ತಿರುವ ಅಭಿಮಾನದ ವಿದಾಯ. ಹೋಗಿ ಬನ್ನಿ ಐಶ್ವರ್ಯಾ ನಿಮಗೆ ಶುಭವಾಗಲಿ” ಎಂದು ಪತ್ರದಲ್ಲಿ ಬರೆಯಲಾಗಿದೆ.
ಮಗಳಿಗೆ ಬೀಳ್ಕೊಟ್ಟ ಬಿಗ್ ಬಾಸ್..
ಬಳಿಕ ಎಲ್ಲರಿಗೂ ಬೈ ಹೇಳಿ ಮುಖ್ಯದ್ವಾರದ ಬಳಿ ಬರುತ್ತಿದ್ದಂತೆ, ಮತ್ತೆ ಮಾತನಾಡಿದ ಬಿಗ್ ಬಾಸ್, “ಐಶ್ವರ್ಯಾ, ಜೀವನದ ಪಯಣದಲ್ಲಿ ಒಂದು ದ್ವಾರ ಮುಚ್ಚಿಕೊಂಡರೇ, ಮತ್ತೊಂದು ತೆರೆದುಕೊಳ್ಳುತ್ತದೆ. ಕೆಲವನ್ನು ದಾಟಿ, ಬದುಕನ್ನು ಕಟ್ಟಿಕೊಳ್ಳುತ್ತೇವೆ. ಇನ್ನೂ ಕೆಲವನ್ನು ದಾಟಿ, ಅನುಭವವನ್ನು ಕಟ್ಟಿಕೊಳ್ಳುತ್ತೇವೆ”
“ಐಶ್ವರ್ಯಾ, ಈ ಮನೆಯಲ್ಲಿನ ನಿಮ್ಮ ಆಟ ಇಂದಿಗೆ ಮುಗಿದಿರಬಹುದು. ಆದರೆ ಮನೆಯ ದ್ವಾರ ತೆರೆದುಕೊಳ್ಳುವುದು ಆಟದಿಂದ ಹೊರಕಳಿಸಲ್ಪಟ್ಟ ಐಶ್ವರ್ಯಾಗೆ ಅಲ್ಲ, ತನ್ನ ತವರಿನಿಂದ ಹೊರಟು, ಹೊಸ ಜೀವನದತ್ತ ಹೆಜ್ಜೆ ಇಡುತ್ತಿರುವ ಈ ಮನೆಯ ಮಗಳು ಐಶ್ವರ್ಯಾಗೆ, ಶುಭವಾಗಲಿ.. ಐಶ್ವರ್ಯಾ, ಹೋಗಿ ಬಾ ಮಗಳೇ..” ಎಂದಿದ್ದಾರೆ ಬಿಗ್ ಬಾಸ್.
ಐಶ್ವರ್ಯಾ ಏನಂದ್ರು?
ಬಿಗ್ ಬಾಸ್ ಮಾತು ಕೇಳಿ ಭಾವುಕರಾದ ಐಶ್ವರ್ಯಾ, “ನನ್ನ ಪಾಲಿಗೆ ಇದು ಬರೀ ಬಿಗ್ ಬಾಸ್ ಮನೆ ಆಗಿರಲಿಲ್ಲ. ನನ್ನ ಮನೆ ಆಗಿತ್ತು. ಇವತ್ತು ನನ್ನ ಮನೆಯನ್ನು ಬಿಟ್ಟು ಹೋಗ್ತಿರಬಹುದು. ನನ್ನ ಮನಸ್ಸು ಇಲ್ಲೇ ಇರುತ್ತೆ. ಇಷ್ಟು ಒಳ್ಳೆಯ ಪತ್ರ, ನೀವು ಮಾತನಾಡಿದ್ದು ತುಂಬ ಖುಷಿಯಾಯ್ತು. ಇದಕ್ಕಿಂತ ಇನ್ನೇನು ಬೇಕು. ಹ್ಯಾಪಿ ನ್ಯೂ ಇಯರ್ ಬಿಗ್ ಬಾಸ್. ಎಲ್ಲರಿಗೂ ಒಳ್ಳೆಯದಾಗಲಿ”ಎಂದು ಹೇಳಿ ಮನೆಯಿಂದ ಹೊರ ಬಂದಿದ್ದಾರೆ.
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope