Pushpa 2: ಮರಗಳ್ಳನಿಗೂ ಒಂದು ಆತ್ಮಾಭಿಮಾನವಿದೆ, ವಾಸ್ತವಕ್ಕಿಂತ ಸರಳವಾಗಿ ತೋರಿಸಿದ್ದು ನಿರ್ದೇಶಕರ ಜಾಣ್ಮೆ; ಬೇಳೂರು ಸುದರ್ಶನ
ಭಾರತದ ಸಿನೆಮಾ ರಂಗವು ಆಯಾ ಕಾಲದ ವಾಸ್ತವತೆಗಿಂತ ರಮ್ಯವಾದ ಸನ್ನಿವೇಶಗಳನ್ನು ಕಟ್ಟಿಕೊಡುತ್ತ ಬಂದಿದೆ. ಅರವತ್ತರ ದಶಕದ ಕನ್ನಡ ಚಿತ್ರಗಳು ಆ ಕಾಲದಲ್ಲಿ ಆಧುನಿಕವೂ, ಕಲ್ಪನೆಗೆ ಮೀರಿದ್ದೂ ಆಗಿದ್ದವು; ಈಗ ಅವನ್ನೇ ನೋಡಿದರೆ ಎಷ್ಟು ವಾಸ್ತವ ಚಿತ್ರಣ ಅನ್ನಿಸುತ್ತೆ ಅಲ್ವ? ಹಾಗೆಯೇ ಇವತ್ತಿನ ಪುಷ್ಪ 2 ಸಹ ಮುಂದೊಂದು ದಿನ ವಾಸ್ತವ ಚಿತ್ರಣದ ಸಿನೆಮಾ ಅನ್ನಿಸಿಕೊಳ್ಳಬಹುದು.
Pushpa 2: ಪುಷ್ಪ 2 ಸಿನಿಮಾ ಸದ್ಯ ಭಾರತೀಯ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಜೋಡಿಯ ಈ ಚಿತ್ರ ಮೊದಲ ದಿನವೇ ನೂರಾರು ಕೋಟಿ ಬಾಚಿಕೊಂಡಿದೆ. ಎಲ್ಲೆಡೆಯಿಂದ ಪಾಸಿಟಿವ್ ರೆಸ್ಪಾನ್ಸ್ ಪಡೆದ ಈ ಸಿನಿಮಾ, ಇನ್ನೇನು ಮುಂದಿನ ಹತ್ತು ದಿನಗಳಲ್ಲಿಯೇ ಸಾವಿರ ಕೋಟಿಯ ದಾಟುವ ಎಲ್ಲ ಮುನ್ಸೂಚನೆಗಳಿವೆ. ಇತ್ತ ಸೋಷಿಯಲ್ ಮೀಡಿಯಾದಲ್ಲಿಯೂ ಚಿತ್ರದ ಬಗ್ಗೆ ತರಹೇವಾರಿ ಬರಹಗಳು ಪ್ರಕಟವಾಗುತ್ತಿವೆ. ಸಿನಿಮಾ ಬಗ್ಗೆ ಮೆಚ್ಚುಗೆ ಮಾತುಗಳು ಪೋಸ್ಟ್‌ಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತಿವೆ. ಅ ಪೈಕಿ ಬೇಳೂರು ಸುದರ್ಶನ್, ಪುಷ್ಪ 2 ಚಿತ್ರದ ಬಗ್ಗೆ ಬರೆದ ಸಾಲುಗಳು ಇಲ್ಲಿವೆ.
ಬೇಳೂರು ಸುದರ್ಶನ್ ಬರಹ
ಪುಷ್ಪ 2 ನೋಡಿದೆ. ಇವತ್ತಿನ ಕಾಲಕ್ಕೆ ತಕ್ಕಂತೆ ಇದೆ. ಫೈಟಿಂಗ್ ದೃಶ್ಯಗಳು ಮಾಸ್ ಸಿನೆಮಾಗೆ ತಕ್ಕಂತೆ ವಾಸ್ತವಾತೀತವಾಗಿವೆ. ಪ್ರತಿಯೊಂದೂ ಫ್ರೇಮಿನಲ್ಲಿ ಬಣ್ಣ, ಮುಖ, ದೃಶ್ಯಗಳು ತುಂಬಿಕೊಂಡಿವೆ. ಅಲ್ಲು ಅರ್ಜುನ್ ನಟನೆ ಅದ್ಭುತವೇ.
ಈ ಚಿತ್ರವು ಮರಗಳ್ಳನನ್ನು ನಾಯಕನನ್ನಾಗಿ ತೋರಿಸಿ ವೈಭವೀಕರಿಸುತ್ತದೆ ಎಂಬ ಮಾತಿದೆ. ಕಳ್ಳನ ಕತೆಯನ್ನು ಒಂದು ಕತೆಯಾಗಿ ನೋಡಬೇಕು ಅಷ್ಟೆ. ಸಿನಿಮೀಯ ಎನ್ನಬಹುದಾದ ದೃಶ್ಯಗಳನ್ನು ಹೊರತುಪಡಿಸಿದರೆ, ಕಳ್ಳ - ರಾಜಕಾರಣಿ ಸಖ್ಯದ ವಾಸ್ತವವು ಈ ಸಿನೆಮಾದಲ್ಲಿ ಇರುವುದಕ್ಕಿಂತ ಭೀಕರವೇ!
ಐಟಂ ಸಾಂಗ್ ನಲ್ಲಿ ಬಂದು ಹೋದ ನಟಿ ಶ್ರೀಲೀಲಾ ನಿಜಜೀವನದಲ್ಲಿ ಇಬ್ಬರು ವಿಶಿಷ್ಟಚೇತನರನ್ನು ದತ್ತು ತೆಗೆದುಕೊಂಡಿದ್ದಾರೆಂದು ಓದಿದೆ. ಅವರು ಐಟಂ ಸಾಂಗನ್ನೂ ಮೀರಿದ ಉತ್ತಮ ನಟಿ ಅನ್ನಿಸಿತು.
ಭಾರತದ ಸಿನೆಮಾ ರಂಗವು ಆಯಾ ಕಾಲದ ವಾಸ್ತವತೆಗಿಂತ ರಮ್ಯವಾದ ಸನ್ನಿವೇಶಗಳನ್ನು ಕಟ್ಟಿಕೊಡುತ್ತ ಬಂದಿದೆ. ಅರವತ್ತರ ದಶಕದ ಕನ್ನಡ ಚಿತ್ರಗಳು ಆ ಕಾಲದಲ್ಲಿ ಆಧುನಿಕವೂ, ಕಲ್ಪನೆಗೆ ಮೀರಿದ್ದೂ ಆಗಿದ್ದವು; ಈಗ ಅವನ್ನೇ ನೋಡಿದರೆ ಎಷ್ಟು ವಾಸ್ತವ ಚಿತ್ರಣ ಅನ್ನಿಸುತ್ತೆ ಅಲ್ವ? ಹಾಗೆಯೇ ಇವತ್ತಿನ ಪುಷ್ಪ 2 ಸಹ ಮುಂದೊಂದು ದಿನ ವಾಸ್ತವ ಚಿತ್ರಣದ ಸಿನೆಮಾ ಅನ್ನಿಸಿಕೊಳ್ಳಬಹುದು.
ಮರಗಳ್ಳನಿಗೂ ಒಂದು ಆತ್ಮಾಭಿಮಾನವಿದೆ ಎಂದು ಪ್ರಭಾವಿಯಾಗಿ ತೋರಿಸುವ ಈ ಸಿನೆಮಾದಲ್ಲಿ ಅವನಿಗೆ ನ್ಯಾಯ - ಅನ್ಯಾಯದ ವಿವೇಚನೆ ಬರುವುದಿಲ್ಲವೇ ಎಂಬ ಅನುಮಾನ ಪ್ರೇಕ್ಷಕರಿಗೆ ಬರಬಹುದು. ಆದರೆ ಪೊಲೀಸರೂ ಅನ್ಯಾಯದಿಂದ ದುಡ್ಡು ಮಾಡಿದವರೇ ಎಂದು ಒಂದು ದೃಶ್ಯದಲ್ಲಿ ವಾಸ್ತವಕ್ಕಿಂತ ಸರಳವಾಗಿ ತೋರಿಸಿದ ನಿರ್ದೇಶಕರು ಜಾಣತನದಿಂದ ಈ ಅಂಶವನ್ನು ಬ್ಯಾಲೆನ್ಸ್ ಮಾಡಿದ್ದಾರೆ!
ಸಿನೆಮಾವನ್ನು ಸಿನೆಮಾ ಎಂದು ಪರಿಗಣಿಸಿ, ಜಡ್ಜ್‌ಮೆಂಟಲ್ ಆಗದೇ ನೋಡುವುದಿದ್ದರೆ ದೊಡ್ಡ ಪರದೆಯ ಮೇಲೇ ಇದನ್ನು ನೋಡಿ.