ನಟಿ ರುಕ್ಮಿಣಿ ವಿಜಯಕುಮಾರ್‌ ಅವರ ದುಬಾರಿ ವಸ್ತುಗಳ ಕಳ್ಳತನ, ಕಬ್ಬನ್‌ ಪಾರ್ಕ್‌ ಪೊಲೀಸರ ಕೈಗೆ ಸಿಕ್ಕಿಬಿದ್ದ ಕಳ್ಳ
ಕನ್ನಡ ಸುದ್ದಿ  /  ಮನರಂಜನೆ  /  ನಟಿ ರುಕ್ಮಿಣಿ ವಿಜಯಕುಮಾರ್‌ ಅವರ ದುಬಾರಿ ವಸ್ತುಗಳ ಕಳ್ಳತನ, ಕಬ್ಬನ್‌ ಪಾರ್ಕ್‌ ಪೊಲೀಸರ ಕೈಗೆ ಸಿಕ್ಕಿಬಿದ್ದ ಕಳ್ಳ

ನಟಿ ರುಕ್ಮಿಣಿ ವಿಜಯಕುಮಾರ್‌ ಅವರ ದುಬಾರಿ ವಸ್ತುಗಳ ಕಳ್ಳತನ, ಕಬ್ಬನ್‌ ಪಾರ್ಕ್‌ ಪೊಲೀಸರ ಕೈಗೆ ಸಿಕ್ಕಿಬಿದ್ದ ಕಳ್ಳ

ನಟಿ ರುಕ್ಮಿಣಿ ವಿಜಯಕುಮಾರ್‌ ಅವರು ಚಿನ್ನಸ್ವಾಮಿ ಸ್ಟೇಡಿಯಂ ಸಮೀಪದ ಗೇಟ್‌ ನಂಬರ್‌ 18ರ ಹತ್ತಿರ ಕಾರು ಪಾರ್ಕ್‌ ಮಾಡಿ ಕಬ್ಬನ್‌ ಪಾರ್ಕ್‌ಗೆ ವಾಕಿಂಗ್‌ಗೆ ತೆರಳಿದ್ದರು. ಕ್ಯಾಬ್‌ ಚಾಲಕನೊಬ್ಬ ಕಾರಿನಲ್ಲಿದ್ದ ನಟಿಯ ಬ್ಯಾಗ್‌ ಕಳ್ಳತನ ಮಾಡಿದ್ದ. ಕಬ್ಬನ್‌ ಪಾರ್ಕ್‌ ಪೊಲೀಸರು ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ನಟಿ ರುಕ್ಮಿಣಿ ವಿಜಯಕುಮಾರ್‌ ಅವರ ದುಬಾರಿ ವಸ್ತುಗಳ ಕಳ್ಳತನ
ನಟಿ ರುಕ್ಮಿಣಿ ವಿಜಯಕುಮಾರ್‌ ಅವರ ದುಬಾರಿ ವಸ್ತುಗಳ ಕಳ್ಳತನ

ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟಿ ರುಕ್ಮಿಣಿ ವಿಜಯಕುಮಾರ್‌ ಅವರ ಬ್ಯಾಗ್‌ನಲ್ಲಿದ್ದ ದುಬಾರಿ ಡೈಮಂಡ್‌ ರಿಂಗ್‌, ಪರ್ಸ್‌, ವಾಚ್‌ ಕಳ್ಳತನವಾಗಿದ್ದು, ಬ್ಯಾಗ್‌ ಕಳ್ಳನನ್ನು ಪೊಲೀಸರು ಹಿಡಿದಿದ್ದಾರೆ. ಬೆಂಗಳೂರಿನ ಕಬ್ಬನ್‌ ಪಾರ್ಕ್‌ಗೆ ನಟಿ ವಾಕಿಂಗ್‌ಗೆ ಬಂದಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ನಟಿ ಕಾರನ್ನು ಸರಿಯಾಗಿ ಲಾಕ್‌ ಮಾಡದೆ ವಾಕಿಂಗ್‌ಗೆ ತೆರಳಿದ್ದರು. ಅಲ್ಲೇ ಇದ್ದ ಕ್ಯಾಬ್‌ ಚಾಲಕನೊಬ್ಬ ಕಾರಿನಲ್ಲಿದ್ದ ನಟಿಯ ಬ್ಯಾಗ್‌ ಕಳ್ಳತನ ಮಾಡಿದ್ದ. ಈ ಘಟನೆ ಮೇ 11ರಂದು ನಡೆದಿತ್ತು.

ನಟಿ ರುಕ್ಮಿಣಿ ವಿಜಯಕುಮಾರ‌ ಅವರು ಚಿನ್ನಸ್ವಾಮಿ ಸ್ಟೇಡಿಯಂ ಸಮೀಪದ ಗೇಟ್‌ ನಂಬರ್‌ 18ರ ಹತ್ತಿರ ಕಾರು ಪಾರ್ಕ್‌ ಮಾಡಿ ಕಬ್ಬನ್‌ ಪಾರ್ಕ್‌ಗೆ ವಾಕಿಂಗ್‌ಗೆ ತೆರಳಿದ್ದರು. ಈ ಸಮಯದಲ್ಲಿ ಕಾರನ್ನು ಸರಿಯಾಗಿ ಲಾಕ್‌ ಮಾಡಿರಲಿಲ್ಲ. ಇವರ ಕಾರಿನೊಳಗೆ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಒಳಗೊಂಡ ಬ್ಯಾಗ್‌ ಇತ್ತು. ಇದನ್ನು ಕ್ಯಾಬ್‌ ಚಾಲಕ ಮಹಮ್ಮದ್‌ ಗಮನಿಸಿ ಎಗರಿಸಿದ್ದ. ಇದೀಗ ಆತ ಪೊಲೀಸರ ಅತಿಥಿಯಾಗಿದ್ದಾನೆ.

ವರದಿಗಳ ಪ್ರಕಾರ ನಟಿಯ ಬ್ಯಾಗ್‌ನಲ್ಲಿ ಹತ್ತು ಲಕ್ಷ ರೂಪಾಯಿ ಬೆಳೆಬಾಳುವ ಡೈಮಂಡ್‌ ರಿಂಗ್‌ ಇತ್ತು. 3 ಲಕ್ಷ ರೂ.ನ ರಿಂಗ್‌, ಒಂದೂವರೆ ಲಕ್ಷ ಬೆಳೆಬಾಳುವ ಹ್ಯಾಂಡ್‌ಬ್ಯಾಗ್‌, 75 ಸಾವಿರ ರೂನ ಪರ್ಸ್‌, ದುಬಾರಿ ವಾಚ್‌ ಸೇರಿದಂತೆ 23 ಲಕ್ಷ ರೂಪಾಯಿಯ ವಸ್ತುಗಳು ಕಳ್ಳತನವಾಗಿತ್ತು.

ಈ ಘಟನೆ ಕುರಿತು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ. ದಯಾನಂದ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಕಾರಿನ ಡೋರ್‌ ಸರಿಯಾಗಿ ಲಾಗ್‌ ಆಗಿರಲಿಲ್ಲ. ಇದನ್ನು ನೋಡಿದ ಕ್ಯಾಬ್‌ ಚಾಲಕ ನೋಡೇ ಬಿಡುವ ಎಂಬಂತೆ ಕಾರಿನ ಹ್ಯಾಂಡಲ್‌ ತಿರುಗಿಸಿದ್ದಾನೆ. ಕಾರಿನ ಬಾಗಿಲು ತೆರೆದುಕೊಂಡಿದೆ. ತಕ್ಷಣ ಕಾರಿನೊಳಗಿದ್ದ ಬ್ಯಾಗ್‌ ಹಿಡಿದುಕೊಂಡು ಪರಾರಿಯಾಗಿದ್ದ. ನಟಿ ದೂರು ನೀಡಿದ ಬಳಿಕ ಪೊಲೀಸರು ಕಳ್ಳನ ಜಾಡು ಪತ್ತೆ ಮಾಡಿ ಹಿಡಿದಿದ್ದಾರೆ.

ನೃತ್ಯ ಸಂಯೋಜಕಿ, ಭರತನಾಟ್ಯ ನರ್ತಕಿ ಮತ್ತು ನಟಿ ಆಗಿ ರುಕ್ಮಿಣಿ ಖ್ಯಾತಿ ಪಡೆದಿದ್ದಾರೆ. ಕನ್ನಡದ ಭಜರಂಗಿ ಸಿನಿಮಾದಲ್ಲಿ ಇವರ ನಂದನಂದನಾ ನೀನು ಶ್ರೀಕೃಷ್ಣ ಹಾಡಿಗೆ ಹೆಜ್ಜೆ ಹಾಕಿದ್ದರು. ಆನಂದ ತಾಂಡವಂ (2009), ಭಜರಂಗಿ (2013), ಕೊಚ್ಚಡೈಯಾನ್ (2014), ಫೈನಲ್ ಕಟ್ ಆಫ್ ಡೈರೆಕ್ಟರ್ (2016), ಕಾಟ್ರು ವೆಲಿಯಿಡೈ (2017), ಮತ್ತು ಸೀತಾ ರಾಮಂ (2022) ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಇವರು ರಾಧಾ ಕಲ್ಪ ಮೆಥಡ್‌ ಎಂಬ ನೃತ್ಯ ಸಂಸ್ಥೆಯನ್ನು ಹೊಂದಿದ್ದು, ತರಬೇತಿ ನೀಡುತ್ತಿದ್ದಾರೆ. ಇತ್ತೀಚೆಗೆ ಅವರು ಲಂಡನ್‌ನ ರಾಯಲ್ ಒಪೇರಾ ಹೌಸ್ ನಿರ್ಮಿಸಿದ 'ಸುಕನ್ಯಾ'ದಲ್ಲಿ ಗಾಡೆಸಸ್‌ ಆಫ್‌ ಲವ್‌ ಪಾತ್ರದಲ್ಲಿ ನರ್ತಿಸಿದ್ರು. ಜಾಕೋಬ್ಸ್ ಪಿಲ್ಲೋ ಉತ್ಸವ, ಡ್ರೈವ್ ಈಸ್ಟ್ ಎನ್‌ವೈಸಿ ಮತ್ತು ಕೊರ್ಜೊ ಥಿಯೇಟರ್‌ನಂತಹ ವಿವಿಧ ಸ್ಥಳಗಳಲ್ಲಿ ಏಕವ್ಯಕ್ತಿ ಪ್ರದರ್ಶನಗಳನ್ನ ನೀಡಿದ್ದಾರೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in